SOCIAL MEDIA

Newsletter

PARTNER SITES
Select Language Select State

ಬಾರದ ಮಳೆಗೆ ಕತ್ತೆಗಳ ಮದುವೆ, ಮೆರವಣಿಗೆ, ಮಳೆಗಾಗಿ ಗ್ರಾಮಸ್ಥರ ವಿಶೇಷ ಆಚರಣೆ, ಕತ್ತೆಗಳ ಕಾಲು ಮುಟ್ಟಿ ಪ್ರಾರ್ಥನೆ!

ಮಳೆಗಾಗಿ ಗ್ರಾಮಸ್ಥರ ವಿಶೇಷ ಆಚರಣೆ, ಕತ್ತೆಗಳ ಕಾಲು ಮುಟ್ಟಿ ಪ್ರಾರ್ಥನೆ!

Reported By Manjunath Naragund Written By Manjunath Naragund
Published: Sep 26, 2026, 05:02 PM IST | Updated: Sep 26, 2026, 05:15 PM IST
Image Credit: Vijayapura
Join

ವಿಜಯಪುರ: ಬರಗಾಲ ಎಂಬುದು ಈ ಜಿಲ್ಲೆಯ ರೈತರನ್ನು ಸಂಕಷ್ಟಕ್ಕೆ ಈಡು ಮಾಡಿದೆ, ಬರದಿಂದ ಕಂಗೆಟ್ಟ ರೈತರು ಹಲವು ಆಚರಣೆ ನಡೆಸುತ್ತಿದ್ದಾರೆ. ಇನ್ನೂ ಬರಗಾಲದ ಈ ಸಂದರ್ಭದಲ್ಲಿ ಕತ್ತೆಗಳ ಮದುವೆ ಮಾಡಿದರೆ ಮಳೆಯಾಗತ್ತೆ ಎಂಬ ನಂಬಿಕೆ ಹಿನ್ನಲೆಯಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ವಿಜೃಂಬಣೆಯಿಂದ ಕತ್ತೆಗಳ ಮದುವೆ ಮಾಡಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...

ಮಳೆಯ ನಿರೀಕ್ಷೆಯಲ್ಲಿ ಆಕಾಶದತ್ತ ಮುಖ ಮಾಡಿರುವ ರೈತರು, ವರುಣನ ಕೃಪೆಗಾಗಿ ವಿವಿಧ ರೀತಿಯ ಸಾಂಪ್ರದಾಯಿಕ ಆಚರಣೆಗಳ ಮೊರೆ ಹೋಗಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದಲ್ಲಿ ನಡೆದಿದೆ. ಮಳೆ ಸುರಿಯಲಿ, ಬರದ ಛಾಯೆ ದೂರವಾಗಲಿ, ರೈತರ ಹೊಲಗಳಲ್ಲಿ ಹಸಿರು ಚಿಗುರಲಿ ಎಂಬ ಆಶಯದೊಂದಿಗೆ ಗ್ರಾಮಸ್ಥರು ಕತ್ತೆಗಳ ಮದುವೆ ನೆರವೇರಿಸಿ, ಗ್ರಾಮದಲ್ಲಿ ಅದ್ದೂರಿ ಮೆರವಣಿಗೆ ನಡೆಸಿದರು. ಕತ್ತೆಗಳ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ ಗ್ರಾಮಸ್ಥರು ಹಾಗೂ ಸುತ್ತ ಮುತ್ತಲಿನವರು ಮಳೆಗಾಗಿ ಸಾಮೂಹಿಕವಾಗಿ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಗ್ರಾಮಸ್ಥರು ಊಟದ ವ್ಯವಸ್ಥೆಯನ್ನು ಮಾಡಿದ್ದರು.

ವಿಜಯಪುರ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದ್ದು, ರೈತರು ಆತಂಕಕ್ಕೊಳಗಾಗಿದ್ದಾರೆ. ಬಿತ್ತನೆ ಮಾಡಿದ ಬೆಳೆಗಳಿಗೆ ಸಮರ್ಪಕವಾಗಿ ನೀರು ದೊರೆಯದೆ ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಾನುವಾರುಗಳಿಗೂ ನೀರು ಮತ್ತು ಮೇವಿನ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಬರದ ಬಿಸಿ ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ಕಳ್ಳಕವಟಗಿ ಗ್ರಾಮದ ಶ್ರೀ ಸಂಗಮನಾಥ ದೇವಾಲಯದ ಆವರಣದಲ್ಲಿ ಗ್ರಾಮಸ್ಥರು ಸಾಂಪ್ರದಾಯಿಕವಾಗಿ ಕತ್ತೆಗಳ ಮದುವೆ ಕಾರ್ಯಕ್ರಮ ಆಯೋಜಿಸಿದ್ದರು. ಕತ್ತೆಗಳನ್ನು ಅಲಂಕರಿಸಿ, ಮದುವೆ ಸಂಪ್ರದಾಯದಂತೆ ವಿವಿಧ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಬಳಿಕ ಗ್ರಾಮಸ್ಥರು ಕತ್ತೆಗಳ ಕಾಲು ಮುಟ್ಟಿ, ಮಳೆ ಸುರಿದು ನಾಡು ಸುಭೀಕ್ಷವಾಗುವಂತೆ ಪ್ರಾರ್ಥಿಸಿದರು.

ಮದುವೆ ಕಾರ್ಯಕ್ರಮದ ಬಳಿಕ ಕತ್ತೆಗಳನ್ನು ಗ್ರಾಮದ ಅಗಸಿಯ ಮೂಲಕ ಗ್ರಾಮಕ್ಕೆ ಬರ ಮಾಡಿಕೊಳ್ಳಲಾಯಿತು. ನಂತರ ಪ್ರಮುಖ ಬೀದಿಗಳಲ್ಲಿ ವಾದ್ಯ ಮೇಳದೊಂದಿಗೆ ಮೆರವಣಿಗೆ ನಡೆಸಿದರು. ಮಹಿಳೆಯರು ತಮ್ಮ ಮನೆಗಳ ಮುಂದೆ ಉಡಿಯಕ್ಕಿ ಇಟ್ಟು, ಆರತಿ ಬೆಳಗಿ, ಕತ್ತೆಗಳಿಗೆ ಪೂಜೆ ಸಲ್ಲಿಸಿದರು. ಮಳೆ ಬಂದು ರೈತರ ಹೊಲಗಳು ಹಸಿರಾಗಲಿ, ಗ್ರಾಮದಲ್ಲಿ ನೀರಿನ ಸಮಸ್ಯೆ ದೂರವಾಗಲಿ ಎಂದು ಪ್ರಾರ್ಥಿಸಿದರು. ವಾದ್ಯಮೇಳದ ಸದ್ದು, ಗ್ರಾಮಸ್ಥರ ಸಂಭ್ರಮ ಹಾಗೂ ಮಳೆಗಾಗಿ ಮೊಳಗಿದ ಪ್ರಾರ್ಥನೆಯೊಂದಿಗೆ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿತು. ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಗ್ರಾಮದ ಹಲವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಕತ್ತೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಹಿರಿಯರ ಕಾಲದಿಂದಲೂ ಗ್ರಾಮೀಣ ಪ್ರದೇಶಗಳಲ್ಲಿ ನಡೆದುಕೊಂಡು ಬಂದಿದೆ. ಇದೇ ನಂಬಿಕೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರು ಒಗ್ಗೂಡಿ ಈ ಆಚರಣೆ ನಡೆಸಿದ್ದಾರೆ. ವೈಜ್ಞಾನಿಕವಾಗಿ ಮಳೆಯೊಂದಿಗೆ ಈ ಆಚರಣೆಗೆ ಸಂಬಂಧ ಇಲ್ಲದಿದ್ದರೂ, ಮಳೆಯ ನಿರೀಕ್ಷೆಯಲ್ಲಿ ಜನರು ತಮ್ಮ ಸಾಂಪ್ರದಾಯಿಕ ನಂಬಿಕೆಯಂತೆ ಆಚರಣೆ ನಡೆಸುತ್ತಿರುವುದು ಗಮನ ಸೆಳೆಯಿತು.

Add Zee News as a Preferred Source
TAGS:

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES