ಮೈಸೂರು ಅರಮನೆಯಲ್ಲಿದೆ ಅಪರೂಪದ ಕನ್ನಡಾಂಬೆ ದೇಗುಲ.. 1951ರಲ್ಲಿ ನಿರ್ಮಾಣವಾದ ಈ ಆಲಯದ ಇತಿಹಾಸವೇ ರೋಚಕ!
ನವೆಂಬರ್ 1 ಬಂತೆಂದರೆ ಸಾಕು, ಎಲ್ಲೆಡೆ ಕನ್ನಡದ ಹಬ್ಬದ ಸಂಭ್ರಮ ಮನೆಮಾಡುತ್ತೆ. ಕನ್ನಡದ ಬಾವುಟ, ಕನ್ನಡದ ಹಾಡು, ಕನ್ನಡದ ಘೋಷಣೆಗಳ ಮೂಲಕ ನಾಡಿನ ಜನರು ರಾಜ್ಯೋತ್ಸವ ಆಚರಿಸ್ತಾರೆ. ಆದ್ರೆ ನಮ್ಮ ಕನ್ನಡ ನಾಡಿನ ಹೆಮ್ಮೆಯ ಸಂಕೇತವಾಗಿರುವ ಮೈಸೂರು ಅರಮನೆಯಲ್ಲೇ ಕನ್ನಡಾಂಬೆ ಭುವನೇಶ್ವರಿ ದೇವಿಯ ದೇವಸ್ಥಾನವಿದೆ ಅನ್ನೋದು ನಿಮಗೆ ಗೊತ್ತಾ?
ನವೆಂಬರ್ 1 ಬಂತೆಂದರೆ ಸಾಕು, ಎಲ್ಲೆಡೆ ಕನ್ನಡದ ಹಬ್ಬದ ಸಂಭ್ರಮ ಮನೆಮಾಡುತ್ತೆ. ಕನ್ನಡದ ಬಾವುಟ, ಕನ್ನಡದ ಹಾಡು, ಕನ್ನಡದ ಘೋಷಣೆಗಳ ಮೂಲಕ ನಾಡಿನ ಜನರು ರಾಜ್ಯೋತ್ಸವ ಆಚರಿಸ್ತಾರೆ. ಆದ್ರೆ ನಮ್ಮ ಕನ್ನಡ ನಾಡಿನ ಹೆಮ್ಮೆಯ ಸಂಕೇತವಾಗಿರುವ ಮೈಸೂರು ಅರಮನೆಯಲ್ಲೇ ಕನ್ನಡಾಂಬೆ ಭುವನೇಶ್ವರಿ ದೇವಿಯ ದೇವಸ್ಥಾನವಿದೆ ಅನ್ನೋದು ನಿಮಗೆ ಗೊತ್ತಾ? ರಾಜವೈಭವದ ನಡುವೆ ನೆಲೆಸಿರುವ ಈ ದೇಗುಲ ಕನ್ನಡದ ಸಾಂಸ್ಕೃತಿಕ ಪರಂಪರೆಯ ವಿಶೇಷತೆಯನ್ನೂ ಸಾರುತ್ತೆ. ಹಾಗಾದ್ರೆ ಈ ದೇವಸ್ಥಾನದ ವಿಶೇಷತೆ ಏನು? ಇಲ್ಲಿದೆ ಒಂದು ಕುತೂಹಲಕಾರಿ ವರದಿ.
ಕರ್ನಾಟಕ ಅಂದ್ರೆ ಕೇವಲ ಒಂದು ರಾಜ್ಯವಲ್ಲ.. ಅದು ಕನ್ನಡಿಗರ ಹೆಮ್ಮೆ, ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸದ ಪ್ರತೀಕ. ಇಂತಹ ಕನ್ನಡ ನಾಡಿನ ಹೆಮ್ಮೆಯ ಮೈಸೂರು ನಗರ ಅಂದ್ರೆ ಎಲ್ಲರಿಗೂ ನೆನಪಾಗೋದು ವಿಶ್ವವಿಖ್ಯಾತ ಅರಮನೆ. ಅರಮನೆಯ ರಾಜವೈಭವ, ಸುಂದರ ವಾಸ್ತುಶಿಲ್ಪ, ದಸರಾ ಸಂಭ್ರಮದ ನಡುವೆ ಮತ್ತೊಂದು ವಿಶೇಷ ಆಕರ್ಷಣೆ ಇಲ್ಲಿದೆ. ಅದುವೇ ಭುವನೇಶ್ವರಿ ದೇವಿಯ ದೇವಸ್ಥಾನ.
ಹೌದು, ಮೈಸೂರು ಅರಮನೆಯ ಆವರಣದಲ್ಲಿರುವ ಭುವನೇಶ್ವರಿ ದೇವಸ್ಥಾನ ಕನ್ನಡಿಗರ ಪಾಲಿಗೆ ವಿಶೇಷ ಮಹತ್ವ ಹೊಂದಿದೆ. ಗರ್ಭಗುಡಿಯಲ್ಲಿ ಭುವನೇಶ್ವರಿ ದೇವಿಯ ಸುಂದರ ವಿಗ್ರಹವಿದೆ. ಈ ವಿಗ್ರಹವನ್ನು ಮೈಸೂರಿನ ಪ್ರಸಿದ್ಧ ಶಿಲ್ಪಿ ಸಿದ್ದಲಿಂಗ ಸ್ವಾಮಿ ಅವರು ಕೆತ್ತಿದ್ದಾರೆ ಎನ್ನಲಾಗಿದೆ. ದೇವಾಲಯದಲ್ಲಿ ಸೂರ್ಯ ದೇವರು, ಮಹಾವಿಷ್ಣು, ಮಹೇಶ್ವರ, ರಾಜರಾಜೇಶ್ವರಿ, ಗಣಪತಿ ಹಾಗೂ ಚಾಮುಂಡೇಶ್ವರಿಯ ವಿಗ್ರಹಗಳೂ ಭಕ್ತರ ಗಮನ ಸೆಳೆಯುತ್ತವೆ.
ಮೈಸೂರು ಅರಮನೆ ಅಂದ್ರೆ ಕೇವಲ ರಾಜಮನೆತನದ ವೈಭವ ಮಾತ್ರವಲ್ಲ.. ಅದು ನಮ್ಮ ನಾಡಿನ ಕಲೆ, ಸಂಸ್ಕೃತಿ ಮತ್ತು ಧಾರ್ಮಿಕ ಪರಂಪರೆಯ ಪ್ರತಿಬಿಂಬವೂ ಹೌದು. ಅರಮನೆಯ ಆವರಣದಲ್ಲಿ ಹನ್ನೆರಡು ದೇವಾಲಯಗಳಿದ್ದು, ಅವುಗಳಲ್ಲಿ ಕೆಲವು ದೇವಾಲಯಗಳು ಮುಖ್ಯ ಅರಮನೆಗಿಂತಲೂ ಹಳೆಯ ಇತಿಹಾಸ ಹೊಂದಿವೆ. ಈ ಪೈಕಿ ಭುವನೇಶ್ವರಿ ದೇವಿಯ ಸನ್ನಿಧಿ ತನ್ನದೇ ಆದ ವಿಶೇಷತೆಯಿಂದ ಗಮನ ಸೆಳೆಯುತ್ತದೆ.
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಭುವನೇಶ್ವರಿ ದೇವಿಯ ನೆನಪು ಮತ್ತಷ್ಟು ವಿಶೇಷ. ಕನ್ನಡಿಗರ ಆರಾಧ್ಯ ದೇವತೆಯಾಗಿ ಭುವನೇಶ್ವರಿ ದೇವಿಯನ್ನು ಸ್ಮರಿಸಲಾಗುತ್ತದೆ. ಕನ್ನಡ ಭಾಷೆ, ನೆಲ, ಜಲ ಮತ್ತು ಸಂಸ್ಕೃತಿಯ ಉಳಿವಿಗಾಗಿ ಹೋರಾಡಿದ ಮಹನೀಯರ ತ್ಯಾಗವನ್ನು ನೆನಪಿಸಿಕೊಳ್ಳುವ ದಿನವೇ ಕನ್ನಡ ರಾಜ್ಯೋತ್ಸವ. ಇಂತಹ ಸಂದರ್ಭದಲ್ಲಿ ಮೈಸೂರು ಅರಮನೆಯಲ್ಲಿರುವ ಭುವನೇಶ್ವರಿ ದೇವಾಲಯದ ಪರಿಚಯವೂ ಕನ್ನಡಿಗರಿಗೆ ಹೆಮ್ಮೆಯ ಸಂಗತಿ.
ಒಟ್ಟಿನಲ್ಲಿ, ಮೈಸೂರು ಅರಮನೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರಿಗೆ ಈ ದೇವಾಲಯವೂ ಒಂದು ವಿಶೇಷ ಆಕರ್ಷಣೆ. ರಾಜವೈಭವದ ನಡುವೆ ಕನ್ನಡದ ಅಸ್ಮಿತೆಯನ್ನು ನೆನಪಿಸುವ ಭುವನೇಶ್ವರಿ ದೇವಿಯ ಸನ್ನಿಧಿ ನಮ್ಮ ನಾಡಿನ ಪರಂಪರೆಯ ಪ್ರತೀಕವಾಗಿದೆ. ಎಲ್ಲ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.