SOCIAL MEDIA

Newsletter

PARTNER SITES
Select Language Select State

ಕಸ್ತೂರಿ ರಂಗನ್ ವರದಿ ವಿರುದ್ಧ ಸರ್ವಪಕ್ಷ ನಿಯೋಗ : ಅಧಿವೇಶನದ ಬಳಿಕ ಪಿಎಂ ಭೇಟಿಗೆ ಸಿಎಂ ನಿರ್ಧಾರ

ಕಸ್ತೂರಿ ರಂಗನ್ ವರದಿ ಕುರಿತು ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಸುದೀರ್ಘ ಚರ್ಚೆ ನಡೆಸಿ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗುವುದು. ಆ ಬಳಿಕ ಶಾಸಕರು ಮತ್ತು ಸಂಸದರನ್ನೊಳಗೊಂಡ ಸರ್ವಪಕ್ಷ ನಿಯೋಗವನ್ನು ಪ್ರಧಾನಮಂತ್ರಿ ಹಾಗೂ ಕೇಂದ್ರ ಸಚಿವರ ಬಳಿಗೆ ಕರೆದೊಯ್ದು ಮಲೆನಾಡಿನ ಜನರ ಧ್ವನಿ ಮತ್ತು ರಾಜ್ಯದ ಸ್ಪಷ್ಟ ನಿಲುವನ್ನು ತಲುಪಿಸುವುದಾಗಿ ಸಿಎಂ ಡಿ.ಕೆ. ಶಿವಕುಮಾರ್‌ ಅವರು ಭರವಸೆ ನೀಡಿದರು.

Reported By Krishna NK Written By Krishna NK
Published: Sep 20, 2026, 10:44 PM IST | Updated: Sep 20, 2026, 10:45 PM IST
Image Credit: CM DKS
Join

ಸಕಲೇಶಪುರ: ಕಸ್ತೂರಿ ರಂಗನ್ ವರದಿ ವಿಚಾರವಾಗಿ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಸುದೀರ್ಘ ಚರ್ಚೆ ನಡೆಸಿ, ಸರ್ವಾನುಮತದ ತೀರ್ಮಾನ ಕೈಗೊಂಡ ಬಳಿಕ ಶಾಸಕರು ಹಾಗೂ ಸಂಸದರನ್ನು ಒಳಗೊಂಡ ಸರ್ವಪಕ್ಷ ನಿಯೋಗವನ್ನು ಪ್ರಧಾನಮಂತ್ರಿ ಹಾಗೂ ಕೇಂದ್ರ ಸಚಿವರ ಬಳಿಗೆ ಕರೆದೊಯ್ದು ರಾಜ್ಯದ ಅಭಿಪ್ರಾಯವನ್ನು ತಲುಪಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಎಪಿಎಂಸಿ ಯಾರ್ಡ್ ಆವರಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕಸ್ತೂರಿ ರಂಗನ್ ವರದಿ ಕುರಿತ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೇಂದ್ರದ ಗಡುವು ಹಾಗೂ ಸರ್ಕಾರದ ನಿಲುವು
ಕೇಂದ್ರ ಸರ್ಕಾರವು ಕಸ್ತೂರಿ ರಂಗನ್ ವರದಿ ಕುರಿತು ಅಧಿಸೂಚನೆ ಹೊರಡಿಸಿದ್ದು, ಸೆಪ್ಟೆಂಬರ್ 27ರ ಒಳಗೆ ಉತ್ತರ ನೀಡಲು ಸೂಚಿಸಿದೆ. ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಈ ವರದಿಯನ್ನು ತಿರಸ್ಕರಿಸಲಾಗಿತ್ತು. ನೆರೆ ರಾಜ್ಯಗಳು ಕೆಲವು ತಿದ್ದುಪಡಿ ತಂದಿರುವ ಹಿನ್ನೆಲೆಯಲ್ಲಿ, ಮಲೆನಾಡು ಭಾಗದ ಜನರ ಧ್ವನಿಯಾಗಿ ನಿಲ್ಲಲು ಸರ್ಕಾರ ನೇರವಾಗಿ ಜನರ ಬಳಿಗೆ ಬಂದಿದೆ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

ರೈತರಿಗೆ ಕಿರುಕುಳ ನೀಡದಂತೆ ಸೂಚನೆ
ಅರಣ್ಯ ಅಧಿಕಾರಿಗಳು ರೈತರಿಗೆ ನೋಟೀಸ್ ನೀಡಿ ಭಯದ ವಾತಾವರಣ ನಿರ್ಮಿಸಬಾರದು ಎಂದು ಸೂಚನೆ ನೀಡಲಾಗಿದೆ. ಅರಣ್ಯ ಹಕ್ಕು ಕಾಯ್ದೆಯಡಿ ಎಲ್ಲರಿಗೂ 25 ವರ್ಷಗಳ ಕಾಲಮಿತಿ ನಿಗದಿಗೆ ಪ್ರಸ್ತಾವನೆ ಸಿದ್ಧಪಡಿಸಿ ಕೇಂದ್ರಕ್ಕೆ ಕಳುಹಿಸಲಾಗುವುದು.

ವಿಶೇಷ ಯೋಜನೆಗಳು ಹಾಗೂ ಪ್ರವಾಸೋದ್ಯಮ
ರಸ್ತೆ ಬದಿಯಲ್ಲಿ ತೇಗದ ಮರ ಬೆಳೆಸಲು ರೈತರಿಗೆ ನೀಡುವ 'ತೇಗದ ಸಿರಿ' ಯೋಜನೆ ತರಲಾಗಿದ್ದು, ಕಟಾವಿನ ಆದಾಯದಲ್ಲಿ 70% ರೈತರಿಗೆ ಹಾಗೂ 30% ಸರ್ಕಾರಕ್ಕೆ ಸಿಗಲಿದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಯುವಕರ ವಲಸೆ ತಡೆಯಲು ಮತ್ತು ಉದ್ಯೋಗ ಸೃಷ್ಟಿಸಲು ಪ್ರವಾಸೋದ್ಯಮ ನೀತಿ ರೂಪಿಸಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಲಾಗುವುದು.

ಅಕ್ರಮ ಬಂದೂಕು ಒಪ್ಪಿಸಲು ಗಡುವು
ಪರವಾನಗಿ ಇಲ್ಲದೆ ಬಂದೂಕು ಇಟ್ಟುಕೊಂಡಿರುವವರು ನವೆಂಬರ್ 1ರ ಒಳಗೆ ಸರ್ಕಾರಕ್ಕೆ ಒಪ್ಪಿಸಬೇಕು. ಅಗತ್ಯವಿದ್ದರೆ ಕಾನೂನುಬದ್ಧ ಪರವಾನಗಿ ನೀಡಲಾಗುವುದು, ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಲಂಚಮುಕ್ತ ಆಡಳಿತದ ಸಂಕಲ್ಪ
ಬಗರ್ ಹುಕ್ಕುಂ, 94c ಹಾಗೂ ಖಾತಾ ಸಮಸ್ಯೆಗಳನ್ನು ಪರಿಹರಿಸಿ ರೈತರಿಗೆ ಸೂಕ್ತ ದಾಖಲೆ ನೀಡಲು ಸರ್ಕಾರ ಆದ್ಯತೆ ನೀಡಿದ್ದು, ಲಂಚಮುಕ್ತ ಕರ್ನಾಟಕ ನಿರ್ಮಾಣ ಸರ್ಕಾರದ ದೃಢ ಸಂಕಲ್ಪವಾಗಿದೆ ಎಂದರು.

ಉಪಗ್ರಹ ಸಮೀಕ್ಷೆಗೆ ಜನರ ತೀವ್ರ ಆಕ್ಷೇಪ
ಸಂವಾದದಲ್ಲಿ ಭಾಗವಹಿಸಿದ್ದ ಸ್ಥಳೀಯ ರೈತರು, ಮಾಜಿ ಜನಪ್ರತಿನಿಧಿಗಳು ಹಾಗೂ ಕಾಫಿ ಬೆಳೆಗಾರರ ಸಂಘದ ಪ್ರಮುಖರು ಕಸ್ತೂರಿ ರಂಗನ್ ವರದಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕಸ್ತೂರಿ ರಂಗನ್ ಸಮಿತಿಯು ಸ್ಥಳಕ್ಕೆ ಭೇಟಿ ನೀಡದೆ ಕೇವಲ ಉಪಗ್ರಹ (ಸ್ಯಾಟಲೈಟ್) ಸಮೀಕ್ಷೆ ನಡೆಸಿ ಅವೈಜ್ಞಾನಿಕ ವರದಿ ಸಿದ್ಧಪಡಿಸಿದೆ ಎಂದು ಆರೋಪಿಸಿದರು.

ವರದಿ ಸಾರಾಸಗಟು ತಿರಸ್ಕರಿಸಲು ಆಗ್ರಹ
ಈಗಾಗಲೇ ಡೀಮ್ಡ್ ಫಾರೆಸ್ಟ್, ಮೀಸಲು ಅರಣ್ಯ ಹಾಗೂ ಮಾನವ-ಆನೆ ಸಂಘರ್ಷದಿಂದ ನಲುಗಿರುವ ಸಕಲೇಶಪುರದ 8 ಗ್ರಾಮ ಪಂಚಾಯಿತಿ ವ್ಯಾಪ್ತಿಯ 30 ಹಳ್ಳಿಗಳ ಜನರಿಗೆ ಈ ವರದಿ ಜಾರಿಯಾದರೆ 'ಮರಣ ಶಾಸನ'ವಾಗಲಿದೆ. ಈ ಭಾಗದಲ್ಲಿ ಪ್ರವಾಸೋದ್ಯಮ ಹಾಗೂ ಕೃಷಿಗೆ ಮಾರಕವಾಗಿರುವ ಈ ವರದಿಯನ್ನು ಸರ್ಕಾರ ಅಧಿವೇಶನದಲ್ಲಿ ಸಾರಾಸಗಟಾಗಿ ತಿರಸ್ಕರಿಸಿ ನಿರ್ಣಯ ಅಂಗೀಕರಿಸಬೇಕು ಮತ್ತು ಪ್ರತಿ ಜಮೀನಿನ ಭೌತಿಕ ಸಮೀಕ್ಷೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES