ಸಾಲದ ಸಂಕಷ್ಟಕ್ಕೆ ತಾಯಿ ಮಕ್ಕಳು ಆತ್ಮಹ*ತ್ಯೆ ಯತ್ನ..! ಮಗಳು ಸಾ*ವು, ಮೂವರ ಸ್ಥಿತಿ ಗಂಭೀರ
ಸಾಲದ ಸುಳಿಗೆ ಸಿಲುಕಿ ನೊಂದಿದ್ದ ತಾಯಿಯೊಬ್ಬರು ತನ್ನ ಮೂವರು ಮಕ್ಕಳೊಂದಿಗೆ ಸಾಮೂಹಿಕವಾಗಿ ಆತ್ಮಹತ್ಯೆಗೆ ಯತ್ನಿಸಿರುವ ಅತ್ಯಂತ ದಾರುಣ ಘಟನೆ ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ನಡೆದಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..
ಧಾರವಾಡ: ಸಾಲದ ಸಂಕಷ್ಟಕ್ಕೆ ಸಿಲುಕಿ ನೊಂದಿದ್ದ ತಾಯಿಯೊಬ್ಬರು ತನ್ನ ಮೂವರು ಮಕ್ಕಳೊಂದಿಗೆ ಸಾಮೂಹಿಕವಾಗಿ ಆತ್ಮಹತ್ಯೆಗೆ ಯತ್ನಿಸಿರುವ ಅತ್ಯಂತ ದಾರುಣ ಹಾಗೂ ಮನಕಲಕುವ ಘಟನೆ ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ನಡೆದಿದೆ. ಈ ಘಟನೆಯಲ್ಲಿ ಓರ್ವ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದು, ತಾಯಿ ಹಾಗೂ ಉಳಿದ ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿದೆ.
ಗ್ರಾಮದ ನಿವಾಸಿ 42 ವರ್ಷದ ಸವಿತಾ ಎಂಬುವವರೇ ಈ ದುರಂತ ಕೃತ್ಯಕ್ಕೆ ಮುಂದಾದ ದುರ್ದೈವಿ ತಾಯಿ. ಸವಿತಾ ಅವರು ಕುಟುಂಬದ ಸಂಕಷ್ಟ ನಿವಾರಣೆಗಾಗಿ ಗ್ರಾಮದ ವಿವಿಧ ಸಂಘ-ಸಂಸ್ಥೆಗಳು ಹಾಗೂ ಇತರೆಡೆಗಳಲ್ಲಿ ಸುಮಾರು ಮೂರು ಲಕ್ಷ ರೂಪಾಯಿಗೂ ಅಧಿಕ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ನಡೆದಿದ್ದೇನು?
ದಿನೇ ದಿನೇ ಹೆಚ್ಚುತ್ತಿದ್ದ ಸಾಲದ ಹೊರೆ ಮತ್ತು ಅದನ್ನು ಮರುಪಾವತಿಸುವಂತೆ ಸಾಲ ನೀಡಿದವರಿಂದ ಬರುತ್ತಿದ್ದ ನಿರಂತರ ಒತ್ತಡವನ್ನು ತಾಳಲಾರದೆ ಸವಿತಾ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಘಟನೆ ನಡೆದ ದಿನ ಪತಿ ಎಂದಿನಂತೆ ಕೆಲಸಕ್ಕೆಂದು ಮನೆಯಿಂದ ಹೊರಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಸವಿತಾ, ಈ ಕರಳುಬಳ್ಳಿಯ ಕೃತ್ಯಕ್ಕೆ ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ, ಆತ್ಮಹತ್ಯೆ ಮಾಡಿಕೊಳ್ಳಲು ಮನೆಯಿಂದ ತೆರಳುವ ಮುನ್ನ ಸವಿತಾ ತಮ್ಮ ಮಕ್ಕಳ ಬಳಿ ಕೊನೆಯ ಮಾತುಗಳನ್ನು ಆಡಿದ್ದರು ಎಂದು ತಿಳಿದುಬಂದಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಕೆ
ಈ ಆಘಾತಕಾರಿ ಘಟನೆಯಲ್ಲಿ ನಿವೇದಿತಾ ಎಂಬ ಬಾಲಕಿ ಮೃತಪಟ್ಟಿದ್ದಾಳೆ. ಇನ್ನುಳಿದಂತೆ ಮಕ್ಕಳಾದ ಹರ್ಷಿತ್, ಭಾಗ್ಯಶ್ರೀ ಹಾಗೂ ತಾಯಿ ಸವಿತಾ ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಕೂಡಲೇ ಅವರನ್ನು ಸ್ಥಳೀಯರ ಸಹಾಯದಿಂದ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರ ತಂಡವು ಚಿಕಿತ್ಸೆ ನೀಡುತ್ತಿದೆ.
ಸಣ್ಣಪುಟ್ಟ ಸಾಲದ ಸುಳಿಗೆ ಸಿಲುಕಿ ಒಂದು ಇಡೀ ಕುಟುಂಬವೇ ಅಧೋಗತಿಗೆ ಇಳಿದಿರುವ ಈ ಹೃದಯ ವಿದ್ರಾವಕ ಘಟನೆಯು ಕರಡಿಗುಡ್ಡ ಗ್ರಾಮಸ್ಥರಷ್ಟೇ ಅಲ್ಲದೆ, ಇಡೀ ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದೆ. ಆರ್ಥಿಕ ಸಂಕಷ್ಟಗಳು ಜೀವನದಲ್ಲಿ ಎದುರಾಗುವುದು ಸಹಜ, ಆದರೆ ಅದಕ್ಕೆ ಆತ್ಮಹತ್ಯೆಯೇ ಪರಿಹಾರವಲ್ಲ ಎಂಬ ಕಟುಸತ್ಯವನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.
ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಒಂಟಿತನ ಅಥವಾ ತೀವ್ರ ಸಾಲದ ಬಾಧೆಯಿಂದ ಬಳಲುತ್ತಿರುವವರು ಯಾವುದೇ ಕಠಿಣ ನಿರ್ಧಾರ ಕೈಗೊಳ್ಳುವ ಮುನ್ನ ಕುಟುಂಬದವರು, ಹಿತೈಷಿಗಳು, ಆಪ್ತ ಸ್ನೇಹಿತರು ಅಥವಾ ಸರ್ಕಾರದ ಮಾನಸಿಕ ಆರೋಗ್ಯ ಸಹಾಯವಾಣಿಗಳನ್ನು ಸಂಪರ್ಕಿಸಿ ಸೂಕ್ತ ಸಲಹೆ ಹಾಗೂ ನೆರವು ಪಡೆದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.
ಕೆಎಂಸಿಆರ್ ಆಸ್ಪತ್ರೆ ಅಧೀಕ್ಷಕ ಡಾ.ಈಶ್ವರ ಹಸಬಿ ಘಟನೆ ಕುರಿತು ಮಾಹಿತಿ
ತಾಯಿ ತನ್ನ ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ನಡೆದ ಘಟನೆ ಕುರಿತು ಕೆಎಂಸಿಆರ್ ಆಸ್ಪತ್ರೆ ಅಧೀಕ್ಷಕ ಡಾ.ಈಶ್ವರ ಹಸಬಿ ಘಟನೆ ಕುರಿತು ಮಾಹಿತಿ ನೀಡಿದರು. ಸ್ವಸಹಾಯ ಸಂಘಗಳಲ್ಲಿ ಸುಮಾರು ಮೂರು ಲಕ್ಷ ರೂಪಾಯಿ ಸಾಲ ಮಾಡಿದ್ದ ಸವಿತಾ, ಸಾಲ ಮರುಪಾವತಿಸಲಾಗದೆ ಪರದಾಡುತ್ತಿದ್ದರು ಎನ್ನಲಾಗಿದೆ. ಈ ಘಟನೆಯಲ್ಲಿ ನಿವೇದಿತಾ ಎಂಬ ಬಾಲಕಿ ಮೃತಪಟ್ಟಿದ್ದು, ತಾಯಿ ಸೇರಿದಂತೆ ಉಳಿದ ಮೂವರಿಗೂ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದರು.