ದಾವಣಗೆರೆ ರೇವ್ ಪಾರ್ಟಿ ಆರೋಪ – ಜಗಳೂರು ಹಾಲಿ-ಮಾಜಿ ಶಾಸಕರ ನಡುವೆ ತಾರಕಕ್ಕೇರಿದ ಟಾಕ್ ಫೈಟ್!
ಇತ್ತೀಚೆಗೆ ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ತೆರಳಿದ್ದ ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಅವರು, ಪ್ರವಾಸ ಮುಗಿಸಿ ಬೆಂಗಳೂರಿಗೆ ಮರಳಿದ್ದರು. ಈ ವೇಳೆ ಅವರನ್ನು ಸ್ವಾಗತಿಸಲು ಜಗಳೂರಿನಿಂದ ಅಪಾರ ಸಂಖ್ಯೆಯ ಬೆಂಬಲಿಗರು ಬೆಂಗಳೂರಿಗೆ ಆಗಮಿಸಿದ್ದರು.
ದಾವಣಗೆರೆ: ಜಗಳೂರು ಕ್ಷೇತ್ರದ ರಾಜಕೀಯ ಅಖಾಡದಲ್ಲಿ ಹಾಲಿ ಮತ್ತು ಮಾಜಿ ಶಾಸಕರ ನಡುವಿನ ವಾಕ್ಸಮರ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಶಾಸಕ B. ದೇವೇಂದ್ರಪ್ಪ ಹಾಗೂ ಮಾಜಿ ಶಾಸಕ H.P. ರಾಜೇಶ್ ನಡುವೆ 'ರೇವ್ ಪಾರ್ಟಿ' ಆರೋಪದ ವಿಷಯವಾಗಿ ಮಾತಿನ ಚಕಮಕಿ ಮುಗಿಲು ಮುಟ್ಟಿದ್ದು, ಕ್ಷೇತ್ರದ ರಾಜಕೀಯ ಬಿಸಿಯನ್ನು ಮತ್ತಷ್ಟು ಏರಿಸಿದೆ.
ಇತ್ತೀಚೆಗೆ ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ತೆರಳಿದ್ದ ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಅವರು, ಪ್ರವಾಸ ಮುಗಿಸಿ ಬೆಂಗಳೂರಿಗೆ ಮರಳಿದ್ದರು. ಈ ವೇಳೆ ಅವರನ್ನು ಸ್ವಾಗತಿಸಲು ಜಗಳೂರಿನಿಂದ ಅಪಾರ ಸಂಖ್ಯೆಯ ಬೆಂಬಲಿಗರು ಬೆಂಗಳೂರಿಗೆ ಆಗಮಿಸಿದ್ದರು. ಬೆಂಬಲಿಗರು ದಾಬಸ್‌ಪೇಟೆ ಮಾರ್ಗವಾಗಿ ಬೆಂಗಳೂರಿಗೆ ತಲುಪಿ ಶಾಸಕರನ್ನು ಬರಮಾಡಿಕೊಂಡಿದ್ದರು.
ಆದರೆ, ಈ ಸ್ವಾಗತ ಕಾರ್ಯಕ್ರಮದ ಬೆನ್ನಲ್ಲೇ ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಗಂಭೀರ ಆರೋಪ ಒಂದನ್ನು ಮಾಡಿದ್ದರು. ಶಾಸಕ ದೇವೇಂದ್ರಪ್ಪ ಅವರು ತಮ್ಮ ಬೆಂಬಲಿಗರಿಗಾಗಿ ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಸುಮಾರು 10 ಲಕ್ಷ ರೂಪಾಯಿ ಖರ್ಚು ಮಾಡಿ 'ರೇವ್ ಪಾರ್ಟಿ' ಆಯೋಜಿಸಿದ್ದರು ಎಂದು ಹೆಚ್.ಪಿ. ರಾಜೇಶ್ ಆರೋಪಿಸಿದ್ದರು. "ಕ್ಷೇತ್ರದಲ್ಲಿ ಜನರು ಭೀಕರ ಬರದ ಬೇಗೆಯಿಂದ ಬಳಲುತ್ತಿರುವಾಗ, ಈ ರೀತಿಯ ದುಬಾರಿ ಪಾರ್ಟಿಯ ಅಗತ್ಯವಿತ್ತೇ?" ಎಂದು ಅವರು ಪ್ರಶ್ನಿಸಿದ್ದರು.
ರಕ್ತ ಪರೀಕ್ಷೆಗೆ ಸವಾಲು ಹಾಕಿದ ಶಾಸಕ ದೇವೇಂದ್ರಪ್ಪ
ಮಾಜಿ ಶಾಸಕರ ಈ ಆರೋಪಕ್ಕೆ ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಅತ್ಯಂತ ಖಾರವಾಗಿ ಹಾಗೂ ವಿಶಿಷ್ಟ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ. ಹೆಚ್.ಪಿ. ರಾಜೇಶ್ ಅವರ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಅವರು, ಬಹಿರಂಗ ಸವಾಲೊಂದನ್ನು ಎಸೆದಿದ್ದಾರೆ.
"ನಾನು ಮದ್ಯಪಾನ ತೊರೆದು ಈಗಾಗಲೇ ನಾಲ್ಕು ವರ್ಷಗಳಾಗಿವೆ. ಪೊಲೀಸರು ರಸ್ತೆಯಲ್ಲಿ 'ಡ್ರಂಕ್ ಅಂಡ್ ಡ್ರೈವ್' ತಪಾಸಣೆ ಮಾಡುವಂತೆ, ನಮ್ಮ ರಕ್ತ ಪರೀಕ್ಷೆ ಮಾಡಿಸೋಣ ಬನ್ನಿ. ನಾನು, ಹೆಚ್.ಪಿ. ರಾಜೇಶ್ ಹಾಗೂ ಎಸ್.ವಿ. ರಾಮಚಂದ್ರ ಮೂವರೂ ಸೇರಿ ರಕ್ತ ಪರೀಕ್ಷೆಗೆ ಒಳಗಾಗೋಣ. ಯಾರು ಮದ್ಯ ಸೇವಿಸುತ್ತಾರೆ, ಯಾರು ಇಲ್ಲ ಎಂಬುದು ಆಗ ಸ್ಪಷ್ಟವಾಗುತ್ತದೆ. ಇದಕ್ಕೆ ನೀವು ರೆಡಿ ಇದ್ದೀರಾ?" ಎಂದು ಶಾಸಕ ದೇವೇಂದ್ರಪ್ಪ ನೇರ ಸವಾಲು ಹಾಕಿದ್ದಾರೆ.
"ನನ್ನ ದುಡ್ಡು, ನನ್ನ ಜನ - ಕೇಳಲು ನೀವ್ಯಾರು?
ತಮ್ಮ ಬೆಂಬಲಿಗರ ಪರ ಗಟ್ಟಿಯಾಗಿ ನಿಂತ ಶಾಸಕ ದೇವೇಂದ್ರಪ್ಪ, "ನನ್ನ ಕ್ಷೇತ್ರದ ಜನ ಅತ್ಯಂತ ಸ್ವಾಭಿಮಾನಿಗಳು. ಅವರು ತಮ್ಮ ಸ್ವಂತ ಇಷ್ಟದಿಂದ, ಪ್ರೀತಿಯಿಂದ ನನ್ನನ್ನು ಸ್ವಾಗತಿಸಲು ಬೆಂಗಳೂರಿಗೆ ಬಂದಿದ್ದರು. ನನ್ನ ದುಡ್ಡು, ನನ್ನ ಜನ - ಅವರಿಗೆ ಏನು ಬೇಕಾದರೂ ಕೊಡುವ ಹಕ್ಕು ನನಗಿದೆ. ಹಾಗೆಯೇ ಅವರು ನನಗೆ ನೀಡುತ್ತಾರೆ. ಇದರಲ್ಲಿ ಮೂಗು ತೂರಿಸಲು ಮತ್ತು ನನ್ನ ಖಾಸಗಿ ಬದುಕಿನ ಬಗ್ಗೆ ಮಾತನಾಡಲು ನಿಮಗ್ಯಾರು ಹಕ್ಕು ಕೊಟ್ಟವರು?" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದುವರಿದು ಮಾತನಾಡಿದ ಅವರು, "ಸ್ವಾಭಿಮಾನದಿಂದ ಬಂದಿರುವ ಕ್ಷೇತ್ರದ ಜನರನ್ನು ನಿಂದಿಸಿದರೆ, ನಾಳೆ ಅವರೇ ನಿಮ್ಮನ್ನು ಪ್ರಶ್ನಿಸಿದರೆ ಏನು ಉತ್ತರ ನೀಡುತ್ತೀರಿ? ಒಬ್ಬ ಡಿ-ದರ್ಜೆ ನೌಕರನಾಗಿದ್ದವನು ಶಾಸಕನಾಗಬಾರದಾ? ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಅವಕಾಶವಿದೆ. ಆದರೆ ನೀವು ಪ್ರತಿಯೊಂದಕ್ಕೂ ಅತ್ತೆ ಸೊಸೆಗೆ ಕಾಟ ಕೊಟ್ಟಂತೆ ಪೀಡಿಸುತ್ತಿದ್ದೀರಿ," ಎಂದು ತಮ್ಮ ಕಟು ನುಡಿಗಳಿಂದ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಸ್ತುತ ಜಗಳೂರು ಕ್ಷೇತ್ರದಲ್ಲಿ ಈ 'ರೇವ್ ಪಾರ್ಟಿ' ವಿವಾದ ಮತ್ತು ಹಾಲಿ-ಮಾಜಿ ಶಾಸಕರ ಸವಾಲು-ಪ್ರತಿಸವಾಲುಗಳ ರಾಜಕೀಯ ಹೈಡ್ರಾಮಾ ತೀವ್ರ ಕುತೂಹಲ ಮೂಡಿಸಿದ್ದು, ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.