ಮತಪಟ್ಟಿಯಿಂದ ಶ್ರಮಿಕರ ಹೆಸರು ಕೈಬಿಡುವ ಸಂಚು: ಜಾಗೃತರಾಗಲು ಬಿ.ಕೆ. ಹರಿಪ್ರಸಾದ್ ಕರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ 'ಕಟ್ಟಡ ನಿರ್ಮಾಣ ಶ್ರಮಿಕರ ಸಂಕಲ್ಪ ಸಭೆ'ಯಲ್ಲಿ ಪಾಲ್ಗೊಂಡು ಕಾರ್ಯಕರ್ತರು ಹಾಗೂ ಶ್ರಮಿಕರನ್ನು ಉದ್ದೇಶಿಸಿ ಅವರು ಭಾವನಾತ್ಮಕ ಹಾಗೂ ಖಾರವಾಗಿ ಮಾತನಾಡಿದರು.
ಬೆಂಗಳೂರು: ಈ ದೇಶದ ಪ್ರಗತಿ ಮತ್ತು ವಿಕಾಸದ ಹಿಂದೆ ಕೋಟ್ಯಂತರ ಶ್ರಮಿಕರು ಹಾಗೂ ರೈತರ ಬೆವರು ಮತ್ತು ರಕ್ತದ ಹನಿಗಳಿವೆ. ರಾಷ್ಟ್ರ ನಿರ್ಮಾಣದಲ್ಲಿ ಈ ಶ್ರಮಿಕ ವರ್ಗದ ಕೊಡುಗೆಯನ್ನು ಅಳೆಯಲು ಯಾವುದೇ ಮಾನದಂಡವಿಲ್ಲ. ಆದರೆ ಪ್ರಸ್ತುತ ಆಡಳಿತ ನಡೆಸುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರ ಕಾರ್ಮಿಕರ ಶ್ರಮಕ್ಕೆ ಗೌರವ ಕೊಡುವುದನ್ನು ಬಿಟ್ಟು, ಅವರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ 'ಕಟ್ಟಡ ನಿರ್ಮಾಣ ಶ್ರಮಿಕರ ಸಂಕಲ್ಪ ಸಭೆ'ಯಲ್ಲಿ ಪಾಲ್ಗೊಂಡು ಕಾರ್ಯಕರ್ತರು ಹಾಗೂ ಶ್ರಮಿಕರನ್ನು ಉದ್ದೇಶಿಸಿ ಅವರು ಭಾವನಾತ್ಮಕ ಹಾಗೂ ಖಾರವಾಗಿ ಮಾತನಾಡಿದರು.
ಸಭೆಯಲ್ಲಿ ಅತ್ಯಂತ ಕಳಕಳಿಯಿಂದ ಮಾತನಾಡಿದ ಬಿ.ಕೆ. ಹರಿಪ್ರಸಾದ್, "ಹೊಟ್ಟೆಪಾಡಿಗಾಗಿ ನಾವು ಗಾರೆ ಕೆಲಸ ಅಥವಾ ಶ್ರಮದಾಯಕ ಕೆಲಸ ಮಾಡುತ್ತಿದ್ದೇವೆ ಎನ್ನುವ ಕೀಳರಿಮೆಯನ್ನು ಕಾರ್ಮಿಕರು ಮೊದಲು ಮನಸ್ಸಿನಿಂದ ತೆಗೆದುಹಾಕಬೇಕು. ನೀವು ಮಳೆ, ಗಾಳಿ, ಮೈಸುಡುವ ಬಿಸಿಲನ್ನು ಲೆಕ್ಕಿಸದೆ ನಿರಂತರವಾಗಿ ಶ್ರಮಿಸುವುದರಿಂದಲೇ ಇಂದು ಬೃಹತ್ ಕಟ್ಟಡಗಳು, ರಸ್ತೆಗಳು ಹಾಗೂ ಮೂಲಸೌಕರ್ಯಗಳು ತಲೆಎತ್ತುತ್ತಿವೆ. ನೀವು ಬೆವರು ಹರಿಸಿ ಕೆಲಸ ಮಾಡಿದಾಗ ಮಾತ್ರ ಸರ್ಕಾರಗಳ ಖಜಾನೆಗೆ ತೆರಿಗೆ ರೂಪದಲ್ಲಿ ಹಣ ತುಂಬುತ್ತದೆ. ಆದ್ದರಿಂದ ನೀವು ಆರಿಸಿ ಕಳಿಸುವ ಜನಪ್ರತಿನಿಧಿಗಳು ಆ ಖಜಾನೆಯ ಹಣವನ್ನು ನಿಮ್ಮದೇ ಕಲ್ಯಾಣಕ್ಕಾಗಿ ಬಳಸುವಂತೆ ಒತ್ತಡ ಹೇರಬೇಕು" ಎಂದು ಕರೆ ನೀಡಿದರು.
ಶ್ರೀ ನಾರಾಯಣ ಗುರುಗಳು ನೀಡಿದ 'ಶಿಕ್ಷಣದಿಂದ ಸ್ವತಂತ್ರರಾಗಿ, ಸ್ವತಂತ್ರದಿಂದ ಸಂಘಟಿತರಾಗಿ, ಸಂಘಟನೆಯಿಂದ ಹೋರಾಟ ಮಾಡಿ' ಎಂಬ ಸಂದೇಶವನ್ನು ಸ್ಮರಿಸಿದ ಅವರು, ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಗಾಂಧೀಜಿಯವರ ಸಿದ್ಧಾಂತಗಳನ್ನು ಪ್ರತಿಯೊಬ್ಬ ಶ್ರಮಿಕನೂ ಅಳವಡಿಸಿಕೊಳ್ಳಬೇಕು ಎಂದರು. ಬೇರೆ ಊರುಗಳಿಂದ ಗಾರೆ ಕೆಲಸಕ್ಕೆಂದು ನಗರಕ್ಕೆ ಬಂದವರು ಇಂದು ಕೋಟ್ಯಧಿಪತಿಗಳಾಗಿದ್ದಾರೆ. ಹಾಗಾಗಿ ಶ್ರಮಿಕರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸದಾ ಜಾಗೃತರಾಗಿ ಹೋರಾಟಕ್ಕೆ ಸಿದ್ಧರಿರಬೇಕು ಎಂದು ಅವರು ಪ್ರತಿಪಾದಿಸಿದರು.
ಕಾರ್ಮಿಕ ನಾಯಕರ ಸರಳತೆ ಮತ್ತು ಅಂಬೇಡ್ಕರ್ ಸಂದೇಶ:
ಹಿಂದಿನ ಕಾಲದ ಕಾರ್ಮಿಕ ನಾಯಕರನ್ನು ಸ್ಮರಿಸಿದ ಹರಿಪ್ರಸಾದ್, "ಆಸ್ಕರ್ ಫರ್ನಾಂಡಿಸ್ ಅವರು ಸಚಿವರಾಗಿದ್ದಾಗ ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತಂದಿದ್ದರು. ಎಂ.ಎಸ್. ಕೃಷ್ಣನ್, ಅನಂತ ಸುಬ್ಬರಾವ್, ಸೂರ್ಯನಾರಾಯಣ ರಾವ್ ಅವರಂತಹ ಹಿರಿಯ ನಾಯಕರು ಅತ್ಯಂತ ಸರಳ ಜೀವನ ನಡೆಸಿ ಶ್ರಮಿಕರ ಧ್ವನಿಯಾಗಿದ್ದರು. 'ಜೀವನ ನಡೆಸಲು ರಾಜಕಾರಣಕ್ಕೆ ಬರಬೇಡಿ, ಜನರ ಜೀವನ ಮಟ್ಟ ಬದಲಾಯಿಸಲು ರಾಜಕೀಯಕ್ಕೆ ಬನ್ನಿ' ಎಂಬ ಅಂಬೇಡ್ಕರ್ ಅವರ ಮಾತನ್ನು ಪ್ರತಿಯೊಬ್ಬ ಜನಪ್ರತಿನಿಧಿಯೂ ನೆನಪಿನಲ್ಲಿಟ್ಟುಕೊಳ್ಳಬೇಕು" ಎಂದರು.
"12 ವರ್ಷಗಳಲ್ಲಿ 12 ನಿಮಿಷವೂ ಕಾರ್ಮಿಕರ ಬಗ್ಗೆ ಮಾತನಾಡದ ಮೋದಿ!:
ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, "ತಮ್ಮನ್ನು ತಾವು 'ಮಹಾಮಾನವ' ಎಂದು ಕರೆದುಕೊಳ್ಳುವ ಪ್ರಧಾನಿ ಮೋದಿ ಅವರು ಕಳೆದ 12 ವರ್ಷಗಳಲ್ಲಿ ಸಾವಿರಾರು 'ಮನ್ ಕಿ ಬಾತ್' ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಆದರೆ ಅದರಲ್ಲಿ 12 ನಿಮಿಷವಾದರೂ ಈ ದೇಶದ ರೈತರು ಮತ್ತು ಕಾರ್ಮಿಕರ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರಾ?" ಎಂದು ಪ್ರಶ್ನಿಸಿದರು.
ಮುಂದುವರಿದು, "ನೆಹರೂ ಅವರ ಕಾಲದಲ್ಲಿ ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸಿ ದೇಶದ ಕೋಟ್ಯಂತರ ಯುವಕರಿಗೆ ಉದ್ಯೋಗ ನೀಡಲಾಗಿತ್ತು. ಆದರೆ 60 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುವ ಮೋದಿಯವರು, ದೇಶದಲ್ಲಿದ್ದ ಸುಮಾರು 26 ಸಾವಿರ ಸಾರ್ವಜನಿಕ ಉದ್ಯಮಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿದ್ದಾರೆ. ನಾನು ನಾಲ್ಕೂವರೆ ವರ್ಷ ಗುಜರಾತ್ ಉಸ್ತುವಾರಿಯಾಗಿದ್ದಾಗ ಗಮನಿಸಿದ್ದೇನೆ, ಅಲ್ಲಿ ಒಂದೇ ಒಂದು ಸಾರ್ವಜನಿಕ ಉದ್ದಿಮೆ ಉಳಿದಿಲ್ಲ; ಇಡೀ ರಾಜ್ಯವನ್ನು ಅದಾನಿ ಮತ್ತು ಕೆಲವೇ ಕೆಲವು ಬಂಡವಾಳಶಾಹಿಗಳ ಕೈಗೆ ಒಪ್ಪಿಸಲಾಗಿದೆ" ಎಂದು ನೇರವಾಗಿ ಆರೋಪಿಸಿದರು.
ಧರ್ಮ ಆಧಾರಿತ ರಾಜಕಾರಣ ಮತ್ತು ಯುವಕರ ದುರ್ಬಳಕೆ:
ಕೇಂದ್ರ ಸರ್ಕಾರವು ದೇಶದ ಜ್ವಲಂತ ಸಮಸ್ಯೆಗಳನ್ನು ಮರೆಮಾಚಲು ಧರ್ಮದ ಆಧಾರದ ಮೇಲೆ ರಾಜಕೀಯ ಮಾಡುತ್ತಿದೆ ಎಂದು ಹರಿಪ್ರಸಾದ್ ಖಂಡಿಸಿದರು. "ನಾವು ಪ್ರತಿಯೊಬ್ಬರೂ ಮನೆಯಲ್ಲಿ ನಿತ್ಯ ಪೂಜೆ, ಪ್ರಾರ್ಥನೆ ಮಾಡುತ್ತೇವೆ. ಅದು ನಮ್ಮ ವೈಯಕ್ತಿಕ ನಂಬಿಕೆ. ಆದರೆ ಧರ್ಮವನ್ನು ರಾಜಕಾರಣಕ್ಕೆ ಎಳೆದು ತಂದು, ಸಮಾಜದಲ್ಲಿ ದ್ವೇಷ ಬಿತ್ತಿ ಬಡವರ ಹಾಗೂ ಕಾರ್ಮಿಕರ ಮಕ್ಕಳನ್ನು ಜೈಲಿಗೆ ಕಳುಹಿಸಲಾಗುತ್ತಿದೆ. ಬಡತನ, ಉದ್ಯೋಗ ಅಥವಾ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿ ಯಾರೂ ಜೈಲಿಗೆ ಹೋಗುತ್ತಿಲ್ಲ. ಮಸೀದಿಗಳ ಮುಂದೆ ಡಿಜೆ ಹಾಕಿ ಕುಣಿಯುವುದು ಭಕ್ತಿಯಲ್ಲ. ಯಾವ ಧರ್ಮವೂ ಇಂತಹ ಕೃತ್ಯವನ್ನು ಬೋಧಿಸುವುದಿಲ್ಲ" ಎಂದು ವಿಷಾದ ವ್ಯಕ್ತಪಡಿಸಿದರು.
'ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಕಾರ್ಮಿಕರ ಹಿತದೃಷ್ಟಿಯಿಂದ ದಿನಕ್ಕೆ 8 ಗಂಟೆಗಳ ಕೆಲಸದ ಅವಧಿಯನ್ನು ನಿಗದಿಪಡಿಸಿತ್ತು. ಆದರೆ ಪ್ರಸ್ತುತ ಕೇಂದ್ರ ಸರ್ಕಾರವು ಕಾರ್ಮಿಕ ನೀತಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ಶ್ರಮಿಕರು ದಿನಕ್ಕೆ 12 ಗಂಟೆಗಳ ಕಾಲ ದುಡಿಯುವಂತೆ ಮಾಡಲು ಹೊರಟಿದೆ. ಪ್ರಸ್ತುತ ದೇಶದಲ್ಲಿ 72% ನಷ್ಟು ಪದವೀಧರರು ಉದ್ಯೋಗವಿಲ್ಲದೆ ಬೀದಿಯಲ್ಲಿದ್ದಾರೆ. ಬಸವಣ್ಣನವರ 'ಕಾಯಕವೇ ಕೈಲಾಸ' ಎಂಬ ತತ್ವವೇ ನಮ್ಮ ಧರ್ಮ. ಸಂವಿಧಾನ ನಮಗೆ ನೀಡಿರುವ ಮತದಾನದ ಹಕ್ಕನ್ನು ಸರಿಯಾಗಿ ಬಳಸಿಕೊಂಡು ಶ್ರಮಿಕರ ಪರ ಇರುವ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು" ಎಂದು ಅವರು ಪ್ರತಿಪಾದಿಸಿದರು.
ಮತಪಟ್ಟಿಯಿಂದ ಹೆಸರು ತೆಗೆಯುವ ಸಂಚು – ಜಾಗೃತಿ ಅಗತ್ಯ:
ಇದೇ ವೇಳೆ ಅತ್ಯಂತ ಗಂಭೀರ ಆರೋಪ ಮಾಡಿದ ಹರಿಪ್ರಸಾದ್, "ಪ್ರಸ್ತುತ ಎಸ್‌ಐಆರ್ (SIR) ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಬಡವರು, ಶ್ರಮಿಕರು, ಅಲ್ಪಸಂಖ್ಯಾತರು ಹಾಗೂ ಪರಿಶಿಷ್ಟ ಜಾತಿ/ಪಂಗಡದ ಜನರ ಹೆಸರುಗಳನ್ನು ವ್ಯವಸ್ಥಿತವಾಗಿ ತೆಗೆದುಹಾಕಲಾಗುತ್ತಿದೆ. ಕಾರ್ಮಿಕರು ತಕ್ಷಣವೇ ಜಾಗೃತರಾಗಿ ತಮ್ಮ ಹೆಸರುಗಳು ಮತದಾರರ ಪಟ್ಟಿಯಲ್ಲಿಿವೆಯೇ ಎಂಬುದನ್ನು ಪರಿಶೀಲಿಸಿಕೊಂಡು ಹೆಸರು ಸೇರ್ಪಡೆ ಮಾಡಿಕೊಳ್ಳಬೇಕು. ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ ನೀಡಿದ ಶಕ್ತಿಯನ್ನು ಬಳಸಿ" ಎಂದು ಕಿವಿಮಾತು ಹೇಳಿದರು.
ಕರ್ನಾಟಕದ ಜಲಸಂಪನ್ಮೂಲ ಹಾಗೂ ಅಭಿವೃದ್ಧಿಯ ಬಗ್ಗೆ ಮಾತನಾಡಿದ ಅವರು, "ಕರ್ನಾಟಕದಲ್ಲಿ ಪ್ರಸ್ತುತ 26 ಪ್ರಮುಖ ಅಣೆಕಟ್ಟುಗಳಿವೆ. ಇವುಗಳಲ್ಲಿ ಒಂದನ್ನು ಮೈಸೂರು ಮಹಾರಾಜರು ಹಾಗೂ ಮೂರನ್ನು ಬ್ರಿಟಿಷರು ನಿರ್ಮಿಸಿದರೆ, ಉಳಿದ ಎಲ್ಲಾ ಅಣೆಕಟ್ಟುಗಳನ್ನು ನಿರ್ಮಿಸಿದ್ದು ಕಾಂಗ್ರೆಸ್ ಸರ್ಕಾರ ಎಂದು ನಾನು ಎದೆತಟ್ಟಿ ಹೇಳುತ್ತೇನೆ. ಬಿಜೆಪಿ ಒಂದೇ ಒಂದು ಅಣೆಕಟ್ಟನ್ನಾದರೂ ಕಟ್ಟಿದೆಯೇ?" ಎಂದು ಖಾರವಾಗಿ ಪ್ರಶ್ನಿಸಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.