SOCIAL MEDIA

Newsletter

PARTNER SITES
Select Language Select State

ಬುದ್ಧ, ಬಸವ, ಅಂಬೇಡ್ಕರ್ ವಿಚಾರಗಳೇ ನಮ್ಮ ಸಮಾಜದ ಅಡಿಪಾಯ : ಸಿಎಂ

ಚಾಮರಾಜನಗರದಲ್ಲಿ ಅದ್ದೂರಿಯಾಗಿ ಜರುಗಿದ 'ಅಂತರಾಷ್ಟ್ರೀಯ ಬೌದ್ಧ ಸಮ್ಮೇಳನ-2026' ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು, ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದ ಬೌದ್ಧ ಧರ್ಮದ ಆಶಯಗಳು ಮತ್ತು ಸರ್ಕಾರದ ಜನಪರ ಚಿಂತನೆಗಳ ಕುರಿತು ವಿಶೇಷವಾಗಿ ಮಾತನಾಡಿದರು.

Written By Krishna NK
Published: Oct 25, 2026, 05:02 PM IST | Updated: Oct 25, 2026, 05:04 PM IST
Image Credit: CM DK Shivakumar
Join

ಚಾಮರಾಜನಗರ: ಎಲ್ಲ ಜೀವಿಗಳು ಸುಖವಾಗಿರಲಿ ಎಂಬುದೇ ಬುದ್ಧನ ಮುಖ್ಯ ಮಾರ್ಗದರ್ಶನವಾಗಿದೆ. ಬುದ್ಧ, ಬಸವ ಮತ್ತು ಅಂಬೇಡ್ಕರ್ ಎಂಬ ಮೂರು ಜ್ಯೋತಿಗಳು ಬೆಳಗಿದರೆ ಇಡೀ ದೇಶವೇ ಬೆಳಗುತ್ತದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಚಾಮರಾಜನಗರದಲ್ಲಿ ನಡೆದ ಅಂತರಾಷ್ಟ್ರೀಯ ಬೌದ್ಧ ಸಮ್ಮೇಳನ 2026ರ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ವಿಶ್ವಕ್ಕೆ ಶಾಂತಿಯ ಸಂದೇಶ ಹಾಗೂ ಸಮಾಜಕ್ಕೆ ಸಮಾನತೆಯ ಸಂಕಲ್ಪವೇ ಬೌದ್ಧ ಧರ್ಮದ ಮೂಲ ಆಶಯವಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇಡೀ ಪ್ರಪಂಚವನ್ನು ಸುತ್ತಿ, ಆಳವಾಗಿ ಅಧ್ಯಯನ ಮಾಡಿದ ಬಳಿಕವೇ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದರು ಎಂದು ಅವರು ತಿಳಿಸಿದರು.

ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆಯೂ ಅಷ್ಟೇ ಮುಖ್ಯ. ಸಂವಿಧಾನ ಮತ್ತು ಬೌದ್ಧ ಧರ್ಮವೇ ನಮ್ಮ ಸಮಾಜಕ್ಕೆ ನಿಜವಾದ ಅಡಿಪಾಯ. ನಮಗೆ ಯಾರೂ ಜಾತಿ ಕೇಳುವ ಸಮಾಜ ಬೇಡ, ಬದಲಿಗೆ ಜ್ಞಾನವನ್ನು ಕೇಳುವ ಸಮಾಜ ಬೇಕು. ಪ್ರತಿಯೊಬ್ಬರ ಬದುಕಿಗೂ ಅವರೇ ದೀಪವಾಗಬೇಕು ಮತ್ತು ಸಮಾನತೆಯ ಸಮಾಜ ನಿರ್ಮಾಣವಾಗಬೇಕು ಎಂದು ಕರೆ ನೀಡಿದರು.

ಮುಂದಿನ ವರ್ಷದ ವಿಶ್ವ ಬೌದ್ಧ ಸಮ್ಮೇಳನವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಅಥವಾ ರಾಮನಗರದಲ್ಲಿ ನಡೆಸಬೇಕು ಎಂದು ತಮ್ಮ ಆಶಯ ವ್ಯಕ್ತಪಡಿಸಿದ ಅವರು, ಸಚಿವ ಸತೀಶ್ ಜಾರಕಿಹೊಳಿ ಅವರು ಬೆಳಗಾವಿಯಲ್ಲೂ ಸಮ್ಮೇಳನ ನಡೆಸಬೇಕೆಂದು ಕೋರಿದ್ದಾರೆ. ಅದಕ್ಕೆ ನಮ್ಮ ತಕರಾರಿಲ್ಲ, ಬೇಕಿದ್ದರೆ ವರ್ಷಕ್ಕೆ ಒಂದಲ್ಲ, ಎರಡು ಬಾರಿ ಇಂತಹ ಸಮ್ಮೇಳನಗಳನ್ನು ಮಾಡೋಣ ಎಂದು ಹೇಳಿದರು.

ಅಧಿಕಾರ ಎನ್ನುವುದು ಜನರಿಗೆ ಸೇವೆ ಮಾಡಲು ಇರಬೇಕೇ ಹೊರತು ಅಹಂಕಾರಕ್ಕಲ್ಲ. ನಮ್ಮ ಕಾಂಗ್ರೆಸ್ ಸರ್ಕಾರ ಕೂಡ ಇದೇ ಹಾದಿಯಲ್ಲಿ ಸಾಗುತ್ತಿದೆ. ಮಾಜಿ ರಾಜ್ಯಪಾಲರಾದ ದಿವಂಗತ ರಾಚಯ್ಯನವರು ಭೂಮಿ ನೀಡಿದ್ದರೂ ಹಲವರಿಗೆ ಇನ್ನೂ ಸಾಗುವಳಿ ಚೀಟಿ ಸಿಕ್ಕಿರಲಿಲ್ಲ. ನಮ್ಮ ಸರ್ಕಾರ ಪ್ರತಿಯೊಬ್ಬರಿಗೂ ವಸತಿ, ಹಕ್ಕುಪತ್ರ ಹಾಗೂ ಪೋಡು ಮಾಡಿಸಿ ದಾಖಲೆಗಳನ್ನು ನೀಡುವ ಕೆಲಸ ಮಾಡುತ್ತಿದೆ. ಬಡವರಿಗೆ ಒಟ್ಟು 10 ಲಕ್ಷ ಸೈಟ್‌ಗಳನ್ನು ಹಂಚಿಕೆ ಮಾಡುವ ಕಾರ್ಯ ಭರಾಟೆಯಿಂದ ಸಾಗುತ್ತಿದೆ ಎಂದರು.

ಭೂಮಿ ಕೊಟ್ಟಿದ್ದು, ವಿದ್ಯುತ್ ನೀಡಿದ್ದು ಹಾಗೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿದ್ದು ಯಾರು ಎಂದು ಪ್ರಶ್ನಿಸಿದ ಡಿ.ಕೆ. ಶಿವಕುಮಾರ್, ಇದು ಕೇವಲ ಕಾಂಗ್ರೆಸ್ ಸರ್ಕಾರ ಮಾತ್ರವಲ್ಲ, ಇದು ಸಂಪೂರ್ಣವಾಗಿ ಜನರ ಸರ್ಕಾರ ಎಂದು ಬಣ್ಣಿಸಿದರು. ತಾವು ಕೆಪಿಸಿಸಿ ಅಧ್ಯಕ್ಷರಾದ ಸಂದರ್ಭದಲ್ಲಿ ರೆಹಮಾನ್ ಅವರ ಕೈಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪೀಠಿಕೆಯನ್ನು ಓದಿಸಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಈ ವೇಳೆ ಅವರು ಸ್ಮರಿಸಿಕೊಂಡರು.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES