ಗೃಹಲಕ್ಷ್ಮಿ ಯೋಜನೆ ಮಹತ್ವದ ಅಪ್‌ಡೇಟ್: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ʼಗೃಹಲಕ್ಷ್ಮಿ ಯೋಜನೆʼ ಅಡಿಯಲ್ಲಿ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಜಮೆ ಆಗುತ್ತಿರುವ 2,000 ರೂಪಾಯಿ ಹಣವನ್ನು ಯಾವುದೇ ರೀತಿಯ ಸಾಲಕ್ಕೆ ಕಡಿತ ಮಾಡಿಕೊಳ್ಳದಂತೆ ಎಲ್ಲಾ ಬ್ಯಾಂಕ್‌ಗಳಿಗೆ ಮತ್ತು ಹಣಕಾಸು ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಆದೇಶ ಜಾರಿ ಮಾಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಹಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಶಾಸಕ ಹಾಗೂ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರೂ ಆದ ದಿನೇಶ್ ಗೂಳಿಗೌಡರು ಸಲ್ಲಿಸಲಿದ್ದ ಮನವಿ ಪತ್ರಕ್ಕೆ ಕೂಡಲೇ ಧನಾತ್ಮಕವಾಗಿ ಸ್ಪಂಧಿಸಿದ ಸಿಎಂ ಡಿ.ಕೆ. ಶಿವಕುಮಾರ್, ಈ ಸಂಬಂಧ ಎಲ್ಲಾ ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳಿಗೆ ಪತ್ರ ಬೆರದು ಕಟ್ಟುನಿಟ್ಟಿನ ಸೂಚನೆ ರವಾನಿಸುವಂತೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾಗ ಡಾ. ಶಾಲಿನಿ ರಜನೀಶ್ ಅವರಿಗೆ ಆದೇಶಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಹಣಕ್ಕೆ ಸಂಬಂಧಿಸಿದಂತೆ ಎಲ್ಲಾ ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳಿಗೆ ಪತ್ರ ಬರೆದು, ಯಾವುದೇ ರೀತಿಯ ಸಾಲದ ಕಂತುಗಳಿಗೆ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಯಿಂದ ಹಣ ಕಡಿತಗೊಳಿಸಬಾರದು ಎಂದು ಸ್ಪಷ್ಟ ಸೂಚನೆ ನೀಡಿ" ಎಂದು ಸಿಎಂ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.
ದಿನೇಶ್ ಗೂಳಿಗೌಡ ಬರೆದ ಪತ್ರದಲ್ಲಿ ಏನಿದೆ?
ಗೃಹಲಕ್ಷ್ಮಿ ಯೋಜನೆ ಹಣ ಕಡಿತಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಪತ್ರವೊಂದನ್ನು ಬರೆದಿದು, ಆ ಪತ್ರದಲ್ಲಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವ ಗೃಹಲಕ್ಷ್ಮಿ ಹಣವನ್ನು ಸಾಲದ ಕಂತುಗಳಿಗೆ ಕಡಿತಗೊಳಿಸುವುದರಿಂದ ಬಡ ಮಹಿಳೆಯರು ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಲು ಕೈಗೊಳ್ಳಬೇಕಾದ ಕಟ್ಟುನಿಟ್ಟಿನ ಕ್ರಮಗಳ ಕುರಿತು ವಿಸ್ತೃತವಾಗಿ ಮಾಹಿತಿ ನೀಡಿದ್ದಾರೆ.
1. ಮೂಲ ಆಶಯಕ್ಕೆ ಧಕ್ಕೆ:
ಪ್ರತಿ ತಿಂಗಳು 1 ಕೋಟಿ 24 ಲಕ್ಷದ 48 ಸಾವಿರ ಕುಟುಂಬದ ಯಜಮಾನಿಯರ ಖಾತೆಗೆ ಜಮೆಯಾಗುತ್ತಿರುವ ₹2,000 ಹಣವು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ನಿತ್ಯದ ಅಗತ್ಯಗಳು, ಮಕ್ಕಳ ಶಿಕ್ಷಣ ಹಾಗೂ ಮಹಿಳೆಯರ ಸ್ವಾವಲಂಬನೆಗೆ ದೊಡ್ಡ ಆಸರೆಯಾಗಿದೆ. ಆದರೆ, ವಾಣಿಜ್ಯ ಬ್ಯಾಂಕುಗಳು, ಖಾಸಗಿ ಫೈನಾನ್ಸ್ ಕಂಪನಿಗಳು ಹಾಗೂ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಣ ಜಮೆಯಾದ ತಕ್ಷಣವೇ ಹಳೆಯ ಸಾಲದ ಬಾಕಿ ಅಥವಾ ಬಡ್ಡಿಯ ನೆಪವೊಡ್ಡಿ ಹಣ ಕಡಿತಗೊಳಿಸುತ್ತಿವೆ. ಫಲಾನುಭವಿಗಳ ಗಮನಕ್ಕೂ ತರದೆ ಕಡಿತ ಮಾಡಿಕೊಳ್ಳುತ್ತಿರುವುದರಿಂದ ಯೋಜನೆಯ ಮೂಲ ಆಶಯಕ್ಕೇ ಧಕ್ಕೆ ಉಂಟಾಗುತ್ತಿದೆ.
2. ಡಿಎಲ್‌ಆರ್‌ಸಿ ಸಭೆಗಳ ನಿರ್ಣಯ:
ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಬ್ಯಾಂಕರ್‌ಗಳ ಪರಿಶೀಲನಾ ಸಮಿತಿ (DLRC) ಸಭೆಗಳಲ್ಲೂ ಜಿಲ್ಲಾಡಳಿತಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, "ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ ಹಣವನ್ನು ಸಾಲದ ಕಂತು ಅಥವಾ ಬಡ್ಡಿಗೆ ಮುಟ್ಟುಗೋಲು ಹಾಕಿಕೊಳ್ಳಬಾರದು" ಎಂದು ಈಗಾಗಲೇ ಸ್ಪಷ್ಟಪಡಿಸಿವೆ.
3. ಬ್ಯಾಂಕುಗಳಿಗೆ ಸರ್ಕಾರದ ಕಠಿಣ ಆದೇಶ ಅಗತ್ಯ:
ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಬ್ಯಾಂಕುಗಳು ಗೃಹಲಕ್ಷ್ಮಿ ಅನುದಾನವನ್ನು ಫಲಾನುಭವಿಯ ಹಳೆಯ ಸಾಲ, ಕೃಷಿಯೇತರ ಸಾಲ ಅಥವಾ ಬಡ್ಡಿಗೆ ಜಮೆ ಮಾಡಿಕೊಳ್ಳದಂತೆ ಮತ್ತು ಮಹಿಳೆಯರು ಕುಟುಂಬ ನಿರ್ವಹಣೆಗೆ ಹಣವನ್ನು ಮುಕ್ತವಾಗಿ ಡ್ರಾ ಮಾಡಲು ಅವಕಾಶ ನೀಡುವಂತೆ ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿ (SLBC) ಮೂಲಕ ಕಠಿಣ ಸುತ್ತೋಲೆ ಹೊರಡಿಸಬೇಕು.
4. ಮೈಕ್ರೋ ಫೈನಾನ್ಸ್ ಹಾವಳಿಗೆ ಬ್ರೇಕ್:
ಫಲಾನುಭವಿಗಳ ಖಾತೆಗೆ ಹಣ ಬರುತ್ತಿದ್ದಂತೆ ಸ್ಥಳದಲ್ಲೇ ಬಲವಂತವಾಗಿ ವಸೂಲಿ ಮಾಡುವ ಅಥವಾ ಬೆದರಿಕೆ ಒಡ್ಡುವ ಖಾಸಗಿ ಫೈನಾನ್ಸ್ ಕಂಪನಿಗಳು ಮತ್ತು ಏಜೆಂಟರ ವಿರುದ್ಧ ಸುಲಿಗೆ ಪ್ರಕರಣ ದಾಖಲಿಸಿ, ಅವರ ಪರವಾನಗಿ ರದ್ದುಪಡಿಸುವಂತಹ ಕಠಿಣ ಎಚ್ಚರಿಕೆ ನೀಡಬೇಕು.
5. ಕಡಿತವಾದ ಹಣ ತಕ್ಷಣ ಮರುಪಾವತಿ:
ಮಹಿಳೆಯರ ಸ್ಪಷ್ಟ ಲಿಖಿತ ಒಪ್ಪಿಗೆಯಿಲ್ಲದೆ ಈಗಾಗಲೇ ಸಾಲದ ಬಾಕಿಗೆ ಕಡಿತಗೊಳಿಸಲಾಗಿರುವ ಹಣವನ್ನು ತಕ್ಷಣವೇ ಆಯಾ ಮಹಿಳೆಯರ ಖಾತೆಗೆ ಮರುಜಮೆ ಮಾಡಿಸಲು ಬ್ಯಾಂಕುಗಳಿಗೆ ತಾಕೀತು ಮಾಡುವಂತೆ ಜಿಲ್ಲಾ ಪಂಚಾಯಿತಿಗಳ ಸಿಇಒಗಳಿಗೆ ಸೂಚನೆ ನೀಡಬೇಕು.
6. ಜಿಲ್ಲಾಡಳಿತದಿಂದ ಮೇಲುಸ್ತುವಾರಿ ಹಾಗೂ ಪರಿಶೀಲನೆ:
ಅಕ್ರಮ ಹಣ ಕಡಿತ ಪ್ರಕರಣಗಳ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ನಿರಂತರ ಮೇಲುಸ್ತುವಾರಿ ವಹಿಸಬೇಕು. ಜೊತೆಗೆ, ವಿವಿಧ ಇಲಾಖೆಗಳು ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳು ನಡೆಸುವ ನಿಯಮಿತ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಈ ವಿಷಯವನ್ನು ಕಡ್ಡಾಯವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ.