ಬೆಂಗಳೂರು: ಶೀಘ್ರದಲ್ಲೇ ಪೌರ ಕಾರ್ಮಿಕರ ಭತ್ಯೆ, ಉಪಹಾರ ಭತ್ಯೆಗಳನ್ನು 35ರಿಂದ 70 ರೂ.ಗಳಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಘೋಷಿಸಿದ್ದಾರೆ.
ಪೌರಕಾರ್ಮಿಕರಿಲ್ಲದೆ ನಾವು ಆರೋಗ್ಯವಾಗಿರಲು ಸಾಧ್ಯವಿಲ್ಲ!
ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ (ಸೆ. 25) ಆಯೋಜಿಸಲಾಗಿದ್ದ ಪೌರ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, “ಪೌರ ಕಾರ್ಮಿಕರು ಎಂದಿಗೂ ಜೀವನದಲ್ಲಿ ಕೀಳರಿಮೆಯಿಂದ ಕುಗ್ಗಬಾರದು. ನೀವು ದೇಶಸೇವೆ ಮಾಡುತ್ತಿರುವುದಾಗಿ ಸ್ವಾಭಿಮಾನದಿಂದ ಬದುಕಿ. ಪೌರಕಾರ್ಮಿಕರಿಲ್ಲದೆ ನಾವು ಆರೋಗ್ಯವಾಗಿರಲು ಸಾಧ್ಯವಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಸಾವಿರಾರು ಪೌರ ಕಾರ್ಮಿಕರನ್ನು ಖಾಯಂ ಮಾಡಿದ್ದೇವೆ, ಇನ್ನುಳಿದ ಪೌರ ಕಾರ್ಮಿಕರನ್ನೂ ಸಹ ಶೀಘ್ರದಲ್ಲೇ ಖಾಯಂ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಬಿಡ್ಲ್ಯೂಎಸ್ ಎಸ್ ಬಿ, ನೀರು ಸರಬರಾಜು ಇಲಾಖೆಗಳಲ್ಲಿ ಖಾಯಂ ಆಗಿ ಸ್ವಾಭಿಮಾನದ ಬದುಕು ನೀಡಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ನೀವಿಲ್ಲ ಎಂದರೆ ಮಹಾನಗರ, ಪಟ್ಟಣಗಳು ಸ್ವಚ್ಛವಾಗಿರುವುದಿಲ್ಲ” ಎಂದು ಭರವಸೆ ನೀಡಿದರು.
ಪೌರ ಕಾರ್ಮಿಕರ ಸಂಘಟನೆಗಳಲ್ಲಿ ಯಾವೆಲ್ಲಾ ಸಮಸ್ಯೆಗಳೀವೆ ಎಂಬ ಬಗ್ಗೆ ನಮ್ಮ ಬಳಿ ಹಂಚಿಕೊಳ್ಳುವಂತೆ ಬಸವಂತಪ್ಪ ಅವರನ್ನು ಕೇಳಿದ್ದೆ. ಈ ಸಂದರ್ಭದಲ್ಲಿ ನಿಮ್ಮ ಅಧ್ಯಕ್ಷರುಗಳೇ ಪೌರ ಕಾರ್ಮಿಕರ ಕೆಲಸಗಳನ್ನು ಖಾಯಂ ಪಡಿಸಲು ಅಡ್ಡಿಯಾಗುತ್ತಿದ್ದಾರೆ ಎಂಬ ಅಂಶವನ್ನು ಅವರು ನಮ್ಮ ಗಮನಕ್ಕೆ ತಂದಿದ್ದಾರೆ. ಈ ವಿಚಾರವನ್ನು ಜನರ ಮುಂದೆಯೇ ಪ್ರಸ್ತಾಪಿಸಿ ಎಂದು ನಾನು ಸೂಚಿಸಿದೆ. ಕಾರಣ ನೀವು ಜಾಗೃತರಾಗಬೇಕು. ನಾನು ಇಲ್ಲಿಂದಲೇ ಅಧಿಕಾರಿಗಳಿಗೆ ಆದೇಶ ನೀಡುತ್ತಿದ್ದೇನೆ” ಎಂದು ಆತ್ಮಸ್ಥೈರ್ಯ ತುಂಬಿದರು.
ಪ್ರಜಾಸೇವೆ ಇಲಾಖೆ ಸ್ಥಾಪನೆ:
ಪೌರ ಕಾರ್ಮಿಕರೂ ಸೇರಿದಂತೆ ಸಮಾಜದಲ್ಲಿ ಎಲ್ಲಾ ವರ್ಗಗಳಲ್ಲೂ ಇರುವ ಇಂತಹ ಸಮಸ್ಯೆಗಳನ್ನು ಬಗೆಹರಿಸಲೆಂದೇ ನಮ್ಮ ಸರ್ಕಾರ ʼಪ್ರಜಾಸೇವೆ ಇಲಾಖೆʼ ಅನ್ನು ಪ್ರಾರಂಭಿಸಿದೆ. ಈ ಇಲಾಖೆಯಲ್ಲಿ ಯಾವುದೇ ಸಂಘಟನೆಯ ಮಧ್ಯವರ್ತಿಗಳ ಅಗತ್ಯವಿಲ್ಲದೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದಾಗಿದೆ ಎಂದು ಸಿಎಂ ಭರವಸೆ ನೀಡಿದರು.
ನಿಮ್ಮಲ್ಲಿ ಶೇ. 60 ರಷ್ಟು ಜನ ಪ್ರಾಮಾಣಿಕರಿದ್ದೀರಿ...!
ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರು ಪ್ರಾಮಾಣಿಕವಾಗಿ ನಿಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೀರಿ. ನಿಮ್ಮಲ್ಲಿ ಶೇ. 60 ರಷ್ಟು ಜನ ಪ್ರಾಮಾಣಿಕವಾಗಿಯೇ ಕೆಲಸ ಮಾಡುತ್ತಿದ್ದೀರಿ. ಉಳಿದವರಲ್ಲಿ ಕೆಲವರು ಮೈಗಳ್ಳರು, ಇನ್ನೂ ಕೆಲವರು ಸ್ತ್ರೀಯರ ಮೇಲೆ ದರ್ಪ ತೋರಿಸಿಕೊಂಡು ಇರುವವರೂ ಇದ್ದಾರೆ. ನೀವಿಲ್ಲದಿದ್ದರೆ ನಗರಗಳೆಲ್ಲಾ ತಿಪ್ಪೆಗುಂಡಿಗಳಾಗುತ್ತಿದ್ದವು ಎಂದ ಜ್ಞಾನ ಎಲ್ಲರಿಗೂ ಇದೆ. ಪೌರ ಕಾರ್ಮಿಕರು ಇದ್ದರೆ ಮಾತ್ರವೇ ರಸ್ತೆಗಳು, ನಗರಗಳು ಸುಂದರವಾಗಿ ಕಾಣುತ್ತವೆ. ಹಾಗಾಗಿ, ಪೌರ ಕಾರ್ಮಿಕರನ್ನು ಸ್ವಚ್ಛತೆಯ ರಾಯಭಾರಿಗಳು ಎಂದು ಗೌರವದಿಂದ ಕಾಣಬೇಕು. ನೀವುಗಳಿಲ್ಲದೆ ನಾವು ಆರೋಗ್ಯವಾಗಿ ಇರಲು ಸಾಧ್ಯವಿಲ್ಲ. ಹಾಗಾಗಿ, ನಮ್ಮೆಲ್ಲರ ಆರೋಗ್ಯಕಕೆ ಸೂಕ್ತ ರಕ್ಷಣೆ ಒದಗಿಸುವುದು ನಮ್ಮ ಬದ್ಧತೆ ಆಗಿದೆ ಎಂದು ಸಿಎಂ ತಿಳಿಸಿದರು.