SOCIAL MEDIA

Newsletter

PARTNER SITES
Select Language Select State

ಕೆಪಿಎಸ್‌ಸಿ ಮುಚ್ಚುವೆ ಎಂದ ಮುಖ್ಯಮಂತ್ರಿಗೆ ಹೆಚ್.ಡಿ. ಕುಮಾರಸ್ವಾಮಿ ತರಾಟೆ

ಕರ್ನಾಟಕ ಲೋಕಸೇವಾ ಆಯೋಗವನ್ನೇ ಮುಚ್ಚುವ ಮಾತುಗಳನ್ನಾಡಿರುವ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಅವರನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

Written By Yashaswini V
Published: Sep 23, 2026, 12:42 PM IST | Updated: Sep 23, 2026, 12:46 PM IST
Join

ಕೆಪಿಎಸ್‌ಸಿಯನ್ನು ಮುಚ್ಚಲು ಕಾನೂನು ತಜ್ಞರ ಜತೆ ಚರ್ಚೆ ನಡೆಸುತ್ತಿದ್ದೇವೆ ಎಂದು ಹೇಳಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಹರಿಹಾಯ್ದಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಮುಖ್ಯಮಂತ್ರಿಗೆ ಶಾಸನದ ಮಹತ್ವವೇ ಗೊತ್ತಿಲ್ಲದಂತಿದೆ ಎಂದು ಟೀಕಿಸಿದ್ದಾರೆ.

ಕೆಪಿಎಸ್‌ಸಿ ಮುಚ್ಚುತ್ತೇವೆ ಎನ್ನುವ ಸಿಎಂ ಹೇಳಿಕೆ ಹತಾಶೆಯಷ್ಟೇ ಅಲ್ಲ, ಅದು ಬುದ್ಧಿಗೇಡತನ!
ಕೆಪಿಎಸ್‌ಸಿ ಮುಚ್ಚಲು ಚಿಂತನೆ ಹಾಗೂ ಪರ್ಯಾಯ ವ್ಯವಸ್ಥೆ ಜಾರಿಗೆ ಸಿಎಂ ಸಿದ್ದತೆ ಕುರಿತಂತೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವ ಹೆಚ್.‌ ಡಿ. ಕುಮಾರಸ್ವಾಮಿ, ಕರ್ನಾಟಕ ಲೋಕಸೇವಾ ಆಯೋಗ (KPSC) ವನ್ನು ಶಾಸನಬದ್ಧವಾಗಿ ಮುಚ್ಚುತ್ತೇವೆ ಎನ್ನುವ ಮುಖ್ಯಮಂತ್ರಿ ಹೇಳಿಕೆ ಕೇವಲ ಹತಾಶೆಯಿಂದಷ್ಟೇ ಕೂಡಿಲ್ಲ, ಅದು ಬುದ್ಧಿಗೇಡಿತನ, ಹೊಣೆಗೇಡಿತನ ಮತ್ತು ಅಜ್ಞಾನದ ಪರಮಾವಧಿ. ಇವರ ವರಸೆ ಹೇಗಿದೆ ಎಂದರೆ 'ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ!'; 'ನೆಗಡಿ ಬಂದರೆ ಮೂಗಿಗೇ ಕತ್ತರಿ ಹಾಕಿದಂತೆ!!' ಎಂದು ಲೇವಡಿ ಮಾಡಿದ್ದಾರೆ.

ಕೆಪಿಎಸ್‌ಸಿ ಚೆನ್ನಾಗಿಯೇ ಇದೆ... ಆದರೆ ಅಲ್ಲಿರುವವರು ಸರಿ ಇಲ್ಲ ಅಷ್ಟೇ!
ಕೆಪಿಎಸ್‌ಸಿ ಸಂಸ್ಥೆ ಚೆನ್ನಾಗಿಯೇ ಇದೆ, ಕೆಟ್ಟ ಜನ ಬಂದು ಕೂತಿದ್ದಾರಷ್ಟೇ. ಬೇಲಿಯೇ ಹೊಲ ಮೇಯುತ್ತಿದೆ. ಅಲ್ಲಿಗೆ ಖದೀಮರನ್ನು ನೇಮಕ ಮಾಡಿದ್ದು ಯಾರು? ವಸೂಲಿಗೆ ಅಂಗಡಿ ತೆರೆಯಲು ಅವಕಾಶ ಕೊಟ್ಟಿದ್ದು ಯಾರು? ವಿಧಾನಸೌಧದ 3ನೇ ಮಹಡಿಯಲ್ಲಿ ಕೂತವರೇ ಎಸಗಿದ ಪಾಪವಲ್ಲವೇ ಇದು? ಆ ಲೆಕ್ಕಕ್ಕೆ ಬಂದರೆ ವಿಧಾನಸೌಧವನ್ನೇ ಮುಚ್ಚಬೇಕು. ನಿಮ್ಮ ಸಾರಥ್ಯದಲ್ಲಿ ಅದೂ ನಡೆದುಹೋಗಲಿ ಎಂದು ಮುಖ್ಯಮಂತ್ರಿಗೆ ಕೇಂದ್ರ ಸಚಿವರು ಟಾಂಗ್ ನೀಡಿದ್ದಾರೆ.

 

ಕೆಪಿಎಸ್‌ಸಿ ಎಂದರೆ ಏನು ಎಂದು ಮೊದಲು ತಿಳಿಯಿರಿ!
ಬೇಜವಾಬ್ದಾರಿಯಿಂದ ಚಪಲಕ್ಕೆ ನಾಲಿಗೆ ಜಾರುವ ಮೊದಲು ಕೆಪಿಎಸ್‌ಸಿ ಎಂದರೆ ಏನು? ಅದರ ಸಂರಚನೆ, ಸ್ವರೂಪ ಹೇಗಿರುತ್ತದೆ? ಸಾಂವಿಧಾನಿಕವಾಗಿ ಅದಕ್ಕಿರುವ ರಕ್ಷಣೆ ಏನು? ಆ ಸಂಸ್ಥೆ ನಡೆದುಬಂದ ಹಾದಿ, ಹೆಗ್ಗಳಿಕೆ ಬಗ್ಗೆ ತಿಳಿದುಕೊಳ್ಳಿ. ಹೊಲಕ್ಕೆ ಕಳೆ ಬಿದ್ದರೆ ಅದನ್ನು ಕಿತ್ತೆಸೆಯಬೇಕು, ಹೊಲಕ್ಕೇ ವಿಷವುಣಿಸುವ ಕೆಲಸ ಆಗಬಾರದು ಎಂದು ಕಿವಿಮಾತು ಹೇಳಿದ್ದಾರೆ.

ಕೆಪಿಎಸ್‌ಸಿ ಕುರಿತಂತೆ ಸಿಎಂ ಡಿ ಕೆ ಶಿವಕುಮಾರ್‌ ಹೇಳಿರುವುದೇನು?
ಬೆಂಗಳೂರು: ಕೆಎಎಸ್ ಪರೀಕ್ಷೆಗಳಲ್ಲಿನ ಅಕ್ರಮಗಳು ಮತ್ತು ಪಶುವೈದ್ಯಕೀಯ ಅಧಿಕಾರಿಗಳ ನೇಮಕಾತಿ ಹಗರಣದ ಬಗ್ಗೆ ಟೀಕೆಗೆ ಗುರಿಯಾಗಿರುವ ಕರ್ನಾಟಕ ಲೋಕಸೇವಾ ಆಯೋಗವನ್ನು (ಕೆಪಿಎಸ್‌ಸಿ) ಮುಚ್ಚುವ ಬಗ್ಗೆ ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ. ಈ ವಿಷಯದ ಬಗ್ಗೆ ಸರ್ಕಾರ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಹೇಳಿದ್ದಾರೆ.

ಕೆಪಿಎಸ್‌ಸಿ ಸುಧಾರಣೆಗೆ ಸರ್ಕಾರದ ಕ್ರಮ:
ಮಾಜಿ ವಿಧಾನ ಪರಿಷತ್ತಿನ ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ನೇತೃತ್ವದ ಹಿರಿಯ ಕಾಂಗ್ರೆಸ್ ನಾಯಕರ ನಿಯೋಗ ಇತ್ತೀಚೆಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ಅಕ್ರಮಗಳು ಮತ್ತು ಹಗರಣಗಳ ಆರೋಪಗಳಲ್ಲಿ ಸಿಲುಕಿರುವ ಕೆಪಿಎಸ್‌ಸಿಯನ್ನು ಸುಧಾರಿಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದ ನಂತರ ಈ ಬೆಳವಣಿಗೆ ನಡೆದಿದೆ.
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES