SOCIAL MEDIA

Newsletter

PARTNER SITES
Select Language Select State

ಬಳ್ಳಾರಿ ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾಗಿದ್ದ ಗಣಿ ಕಂಪನಿಗಳಿಗೆ ಕೇಂದ್ರ ಸರ್ಕಾರ ಶಾಕ್..!

ಕೇಂದ್ರ ಗಣಿ ಸಚಿವಾಲಯದಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಈ ಕುರಿತು ಅಧಿಕೃತ ಪತ್ರ ಬಂದಿದ್ದು, ಪತ್ರ ತಲುಪಿದ ಬೆನ್ನಲ್ಲೇ ರಾಜ್ಯ ಅರಣ್ಯ ಇಲಾಖೆಗೆ ಪರಿಶೀಲನೆ ನಡೆಸುವಂತೆ ಸೂಚನೆ ನೀಡಲಾಗಿದೆ.

Reported By Manjunath Naragund Written By Manjunath Naragund
Published: Oct 01, 2026, 12:09 PM IST | Updated: Oct 01, 2026, 12:14 PM IST
Image Credit: Ballari Mine
Join

ಬಳ್ಳಾರಿ: ಬಳ್ಳಾರಿಯ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈಗ ಭಾರಿ ಮಹತ್ವದ ಹೆಜ್ಜೆ ಇಟ್ಟಿದ್ದು, ಜನಾರ್ದನ ರೆಡ್ಡಿ ಅವರ ರಾಜಕೀಯ ಹಾಗೂ ವೃತ್ತಿಪರ ವಲಯದಲ್ಲಿ ಸಂಚಲನ ಮೂಡಿಸಿದೆ. ಜಿ. ಜನಾರ್ದನ ರೆಡ್ಡಿ ಒಡೆತನದ ಓಬುಳಾಪುರಂ ಮೈನಿಂಗ್ ಕಂಪನಿ ಸುತ್ತಮುತ್ತಲಿರುವ ಮೂರು ಪ್ರಮುಖ ಗಣಿ ಕಂಪನಿಗಳ ಲೈಸೆನ್ಸ್ ಹಾಗೂ ಗಡಿ ರೇಖೆಗಳನ್ನು ತಕ್ಷಣವೇ ಮರು ಪರಾಮರ್ಶೆ ನಡೆಸುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಿದೆ.

ಕೇಂದ್ರ ಗಣಿ ಸಚಿವಾಲಯದಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಈ ಕುರಿತು ಅಧಿಕೃತ ಪತ್ರ ಬಂದಿದ್ದು, ಪತ್ರ ತಲುಪಿದ ಬೆನ್ನಲ್ಲೇ ರಾಜ್ಯ ಅರಣ್ಯ ಇಲಾಖೆಗೆ ಪರಿಶೀಲನೆ ನಡೆಸುವಂತೆ ಸೂಚನೆ ನೀಡಲಾಗಿದೆ. ಈ ಪ್ರಕ್ರಿಯೆಯಿಂದಾಗಿ ದಶಕಗಳ ಹಿಂದಿನ ಬಳ್ಳಾರಿ ಗಣಿ ಅಕ್ರಮದ ಧೂಳು ಮತ್ತೆ ಏಳುವಂತಾಗಿದೆ.

ಏನಿದು ಪ್ರಕರಣ? ಪರಾಮರ್ಶೆಗೆ ಕೇಂದ್ರ ಸೂಚಿಸಿದ್ದೇಕೆ?

ಆರೋಪಗಳ ಪ್ರಕಾರ, MBT, HT ಹಾಗೂ NR ಎಂಬ ಮೂರು ಪ್ರಮುಖ ಗಣಿ ಸಂಸ್ಥೆಗಳು ಗಣಿ ಗುತ್ತಿಗೆಯನ್ನು ನವೀಕರಣ ಮಾಡಿಕೊಳ್ಳುವ ಸಂದರ್ಭದಲ್ಲಿ ಬರೋಬ್ಬರಿ 800 ಎಕರೆ ಸರ್ಕಾರಿ ಮತ್ತು ಅರಣ್ಯ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿವೆ.

ಗಡಿ ರೇಖೆಗಳ ಬದಲಾವಣೆ: 2008ರಲ್ಲಿ ಈ ಮೂರು ಕಂಪನಿಗಳ ಗುತ್ತಿಗೆ ನವೀಕರಣ ಪ್ರಕ್ರಿಯೆ ನಡೆಯುತ್ತಿದ್ದಾಗ ಮೂಲ ಗಣಿ ಗಡಿಗಳನ್ನು ಬೇಕಾಬಿಟ್ಟಿಯಾಗಿ ಬದಲಾಯಿಸಲಾಗಿತ್ತು.

ಭೂ ಕಬಳಿಕೆ: ಕಂದಾಯ ಗ್ರಾಮಗಳ ನೈಜ ಗಡಿಗುರುತುಗಳನ್ನು ಅಳಿಸಿಹಾಕಿ, ಕೇವಲ ಸ್ಟ್ರಿಪ್ ಮ್ಯಾಪ್ ಚಿತ್ರಗಳನ್ನು ಆಧರಿಸಿ ಹೊಸದಾಗಿ ಗಡಿಗಳನ್ನು ಗುರುತಿಸಲಾಗಿತ್ತು. ಈ ತಂತ್ರದ ಮೂಲಕ 800 ಎಕರೆ ಹೆಚ್ಚುವರಿ ಭೂಮಿಯನ್ನು ಅಕ್ರಮವಾಗಿ ಈ ಸಂಸ್ಥೆಗಳ ಕೈಗೆ ಸಿಗುವಂತೆ ಮಾಡಲಾಗಿತ್ತು.

ಸಿಬಿಐ ಕೋರ್ಟ್ ತೀರ್ಪು: 2025ರ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿನಲ್ಲಿಯೂ ಸಹ ಈ ಮೂರು ಗಣಿ ಪ್ರದೇಶಗಳ ಗಡಿಗಳನ್ನು ಅಕ್ರಮವಾಗಿ ಬದಲಾಯಿಸಲಾಗಿದೆ ಎಂಬ ಅಂಶ ಸ್ಪಷ್ಟವಾಗಿ ಉಲ್ಲೇಖವಾಗಿತ್ತು.

ಈ 800 ಎಕರೆ ಹೆಚ್ಚುವರಿ ಪ್ರದೇಶದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅದಿರು ಲೂಟಿ ಮಾಡಲಾಗಿದ್ದು, ಈ ಸಂಸ್ಥೆಗಳು ಜನಾರ್ದನ ರೆಡ್ಡಿ ಅವರ ಸಂಸ್ಥೆಯೊಂದಿಗೆ ಶಾಮೀಲಾಗಿ ಬೃಹತ್ ಮಟ್ಟದ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದವು ಎನ್ನಲಾಗಿದೆ.

ಟಪಾಲ್ ಗಣೇಶ್ ದೂರಿಗೆ ಸಿಕ್ಕ ಜಯ

ಕೋಟ್ಯಂತರ ರೂಪಾಯಿ ಮೌಲ್ಯದ ರಾಜ್ಯದ ಆಸ್ತಿ ಮತ್ತು 800 ಎಕರೆ ಭೂಮಿ ಒತ್ತುವರಿಯಾಗಿದ್ದರೂ ರಾಜ್ಯ ಸರ್ಕಾರ ಮೌನ ವಹಿಸಿದೆ ಎಂದು ಅಕ್ರಮ ಗಣಿಗಾರಿಕೆ ವಿರುದ್ಧ ಸತತ ಹೋರಾಟ ನಡೆಸುತ್ತಿರುವ ದೂರುದಾರ ಟಪಾಲ್ ಗಣೇಶ್ ಆರೋಪಿಸಿದ್ದರು. ಈ ಕುರಿತು ಸಮಗ್ರ ದಾಖಲೆಗಳೊಂದಿಗೆ ಅವರು ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಿ, ತಕ್ಷಣವೇ ಗಡಿಗಳನ್ನು ಸರಿಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.

ಟಪಾಲ್ ಗಣೇಶ್ ಅವರ ದೂರಿನ ತೀವ್ರತೆಯನ್ನು ಪರಿಗಣಿಸಿದ ಕೇಂದ್ರ ಸರ್ಕಾರ, ಇದೀಗ ತನಿಖೆಗೆ ಆದೇಶಿಸಿದ್ದು, ಶೀಘ್ರದಲ್ಲೇ ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ತಂಡ ಈ ಮೂರು ಗಣಿ ಪ್ರದೇಶಗಳಲ್ಲಿ ಸರ್ವೇ ನಡೆಸಿ ವರದಿ ಸಲ್ಲಿಸಲಿದೆ. ಇದರಿಂದಾಗಿ ಗಣಿ ಮಾಲೀಕರು ಮತ್ತು ಅವರೊಂದಿಗೆ ಭಾಗಿಯಾಗಿದ್ದ ಪ್ರಭಾವಿಗಳಿಗೆ ಕಾನೂನಿನ ಸಿಕ್ಕು ಬಿಗಿಯಾಗುವ ಸಾಧ್ಯತೆ ದಟ್ಟವಾಗಿದೆ.
 

Add Zee News as a Preferred Source
TAGS:

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES