SOCIAL MEDIA

Newsletter

PARTNER SITES
Select Language Select State

ಬಿಜೆಪಿಯಲ್ಲೂ ಇದೆ ಸಿಡಿ ಫ್ಯಾಕ್ಟರಿ, ಶೀಘ್ರದಲ್ಲೇ ಸ್ಫೋಟವಾಗಲಿದೆ! ರಾಜಕೀಯ ಬ್ಲ್ಯಾಕ್‌ಮೇಲ್ ಕಥೆ ಬಿಚ್ಚಿಟ್ಟ ಯತ್ನಾಳ್

ಕರ್ನಾಟಕದಲ್ಲಿ ಎರಡು ಸಿಡಿ ಫ್ಯಾಕ್ಟರಿಗಳಿದ್ದು, ಅವುಗಳಲ್ಲಿ ಒಂದು ಬಿಜೆಪಿಯಲ್ಲೇ ಇದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಆರೋಪ ಮಾಡಿದ್ದಾರೆ. ರಾಜಕೀಯ ಎದುರಾಳಿಗಳನ್ನ ಬ್ಲ್ಯಾಕ್‌ಮೇಲ್ ಮಾಡಲು ಸ್ಟಿಂಗ್ ಆಪರೇಷನ್‌ಗಳನ್ನ ಬಳಸಲಾಗುತ್ತಿದೆ ಎಂದು ದೂರಿದ್ದಾರೆ. ಈ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ಬಿಜೆಪಿಗೆ ಮರಳಲು ಯಾರನ್ನೂ ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Written By Puttaraj K Alur
Published: Oct 24, 2026, 08:26 PM IST | Updated: Oct 24, 2026, 08:39 PM IST
Image Credit: Basanagouda Patil Yatnal
Join

Karnataka Sting Operation: ಕರ್ನಾಟಕ ರಾಜಕೀಯದಲ್ಲಿ ಸಿಡಿ ಹಾಗೂ ಸ್ಟಿಂಗ್ ಆಪರೇಷನ್ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ಎರಡು ಸಿಡಿ ಫ್ಯಾಕ್ಟರಿಗಳಿದ್ದು, ಅವುಗಳಲ್ಲಿ ಒಂದು ಬಿಜೆಪಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿರುವ ಅವರು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಿಡಿಗಳು ಹೊರಬರುವ ಸಾಧ್ಯತೆಯಿದೆ ಎಂಬ ಹೇಳಿಕೆ ನೀಡಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಯತ್ನಾಳ್, ಕರ್ನಾಟಕದಲ್ಲಿ ಎರಡು ಸಿಡಿ ಫ್ಯಾಕ್ಟರಿಗಳಿವೆ ಎಂಬ ವಿಚಾರವನ್ನ ತಾವು ಈ ಹಿಂದೆಯೇ ಪ್ರಸ್ತಾಪಿಸಿದ್ದಾಗಿ ತಿಳಿಸಿದ್ದಾರೆ. ಅವುಗಳಲ್ಲಿ ಒಂದು ಯಾವುದು ಎಂಬುದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಆದರೆ ಮತ್ತೊಂದು ಸಿಡಿ ಫ್ಯಾಕ್ಟರಿ ಬಿಜೆಪಿಯಲ್ಲೂ ಇದೆ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದಾರೆ.

ರಾಜಕೀಯ ಎದುರಾಳಿಗಳನ್ನ ಬ್ಲ್ಯಾಕ್‌ಮೇಲ್ ಮಾಡಲು ಸಿಡಿ ಬಳಕೆ?

ರಾಜಕೀಯದಲ್ಲಿ ತಮ್ಮ ಎದುರಾಳಿಗಳಾಗಿ ಗುರುತಿಸಿಕೊಂಡಿರುವವರು ಹಾಗೂ ಭವಿಷ್ಯದಲ್ಲಿ ತಮಗೆ ಅಡ್ಡಿಯಾಗಬಹುದು ಎಂದು ಭಾವಿಸುವ ವ್ಯಕ್ತಿಗಳನ್ನ ಗುರಿಯಾಗಿಸಿಕೊಂಡು ವಿಡಿಯೋಗಳನ್ನ ಬಳಸಲಾಗುತ್ತಿದೆ ಎಂದು ಯತ್ನಾಳ್ ಆರೋಪಿಸಿದ್ದಾರೆ. ಕರ್ನಾಟಕದಲ್ಲಿ ಸಿಡಿ ಹಾಗೂ ಸ್ಟಿಂಗ್ ಆಪರೇಷನ್ ಮೂಲಕ ಬ್ಲ್ಯಾಕ್‌ಮೇಲ್ ಮಾಡುವ ಚಟುವಟಿಕೆಗಳು ವ್ಯವಹಾರದ ಸ್ವರೂಪ ಪಡೆದುಕೊಂಡಿವೆ ಎಂದು ಅವರು ಹೇಳಿದ್ದಾರೆ. 

ಬೆಂಗಳೂರಿನಲ್ಲಿ ಇಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಹಲವು ತಂಡಗಳಿವೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ. ರಾಜಕೀಯ ಪ್ರವೇಶಕ್ಕೆ ವಿವಿಧ ಕಾರಣಗಳನ್ನ ಮುಂದಿಟ್ಟುಕೊಂಡು ಬರುವ ಕೆಲವರು, ನಂತರ ರಾಜಕಾರಣಿಗಳ ವಿಡಿಯೋಗಳನ್ನ ಸಿದ್ಧಪಡಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆಂದು ಯತ್ನಾಳ್ ದೂರಿದ್ದಾರೆ. ಶಾಸಕರನ್ನೇ ಗುರಿಯಾಗಿಸಿಕೊಂಡು ಇಂತಹ ಚಟುವಟಿಕೆಗಳು ನಡೆಯುತ್ತಿರುವುದಾಗಿ ಅವರು ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರ ಮೌನದ ಬಗ್ಗೆ ಪ್ರಶ್ನೆ

ಸ್ಟಿಂಗ್ ಆಪರೇಷನ್ ಪ್ರಕರಣದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷರು ಏಕೆ ಮಾತನಾಡುತ್ತಿಲ್ಲ ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ. ಈ ವಿಚಾರದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಿರಂತರವಾಗಿ ಪ್ರತಿಕ್ರಿಯಿಸುತ್ತಿದ್ದು, ಡಿ.ಕೆ.ಶಿವಕುಮಾರ್ ಅವರ ಹೆಸರನ್ನೂ ನೇರವಾಗಿ ಪ್ರಸ್ತಾಪಿಸಿದ್ದಾರೆ ಎಂದು ತಿಳಿಸಿದ್ದಾರೆ. ಸುದ್ದಿಗೋಷ್ಠಿಗಳಲ್ಲಿ ಕೆಲವರು ಬಹಿರಂಗವಾಗಿ ಆರೋಪ ಮಾಡುತ್ತಿದ್ದರೂ ಡಿ.ಕೆ.ಶಿವಕುಮಾರ್ ಅವರಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ. ಇಂತಹ ಬೆಳವಣಿಗೆಗಳು ರಾಜಕೀಯ ವ್ಯವಸ್ಥೆಗೆ ಕೆಟ್ಟ ಸಂದೇಶ ನೀಡುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಜಯೇಂದ್ರ, ಅಶೋಕ್ ಪಾತ್ರವಿಲ್ಲ ಎಂದ ಯತ್ನಾಳ್

ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ ಒಳಗೊಂಡಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಪ್ರಕರಣದ ಬಗ್ಗೆಯೂ ಯತ್ನಾಳ್ ಮಾತನಾಡಿದ್ದಾರೆ. ಈ ಪ್ರಕರಣದಲ್ಲಿ ಬಿಜೆಪಿ ನಾಯಕರಾದ ಬಿ.ವೈ.ವಿಜಯೇಂದ್ರ ಹಾಗೂ ಆರ್.ಅಶೋಕ್ ಸೇರಿದಂತೆ ಹಲವರ ಪಾತ್ರವಿಲ್ಲ ಎಂದು ಹೇಳಿದ್ದಾರೆ. ಅದೇ ರೀತಿ ಬೇರೆ ಪಕ್ಷದವರು ಅಥವಾ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಈ ಕೃತ್ಯ ನಡೆಸಿದ್ದಾರೆ ಎಂದು ತಾವು ಆರೋಪಿಸುತ್ತಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಇಬ್ಬರು ಉದಯೋನ್ಮುಖ ರಾಜಕಾರಣಿಗಳು ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಆರೋಪವನ್ನೂ ಯತ್ನಾಳ್ ಮಾಡಿದ್ದಾರೆ. ರಾಜಕಾರಣಿಗಳ ಖಾಸಗಿ ವಿಡಿಯೋಗಳನ್ನ ಬಳಸಿಕೊಂಡು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುವ ಪ್ರವೃತ್ತಿ ಹೊಸದಲ್ಲ ಎಂದು ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ ಪ್ರಕರಣ ಪ್ರಸ್ತಾಪ

ಈ ಹಿಂದಿನ ಸಿಡಿ ಪ್ರಕರಣಗಳ ಕುರಿತು ಮಾತನಾಡಿದ ಯತ್ನಾಳ್, ರಮೇಶ್ ಜಾರಕಿಹೊಳಿ ಅವರ ಪ್ರಕರಣವನ್ನ ನೆನಪಿಸಿದ್ದಾರೆ. ಇದಕ್ಕೂ ಮೊದಲು ಇಬ್ಬರು ಶಾಸಕರ ವಿಡಿಯೋಗಳು ಬಹಿರಂಗವಾಗಿದ್ದವು ಎಂದು ತಿಳಿಸಿದ್ದಾರೆ. ಹಣಕಾಸಿನ ವ್ಯವಹಾರದಲ್ಲಿ ಒಪ್ಪಂದವಾದರೆ ಇಂತಹ ಪ್ರಕರಣಗಳು ಮುಂದುವರಿಯುವುದಿಲ್ಲ ಎಂದು ಆರೋಪಿಸಿರುವ ಅವರು, ರಾಜಕೀಯ ನಾಯಕರನ್ನ ಬ್ಲ್ಯಾಕ್‌ಮೇಲ್ ಮಾಡುವ ಚಟುವಟಿಕೆಗಳಿಂದ ಕರ್ನಾಟಕದ ಪ್ರತಿಷ್ಠೆಗೆ ಧಕ್ಕೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ಟಿಂಗ್ ಪ್ರಕರಣ ಸಿಬಿಐ ತನಿಖೆಗೆ ವಹಿಸಲು ಆಗ್ರಹ

ಸ್ಟಿಂಗ್ ಆಪರೇಷನ್ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಾದರೆ ತನಿಖೆಯನ್ನ ಸಿಬಿಐಗೆ ವಹಿಸಬೇಕು ಎಂದು ಯತ್ನಾಳ್ ಒತ್ತಾಯಿಸಿದ್ದಾರೆ. ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಂಡು ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದ್ದಾರೆ. ಇಂತಹ ಘಟನೆಗಳಿಂದ ಕರ್ನಾಟಕದ ರಾಜಕೀಯ ನಾಯಕರ ಗೌರವಕ್ಕೆ ಧಕ್ಕೆಯಾಗುವುದರ ಜೊತೆಗೆ ರಾಜ್ಯದ ಹೆಸರು ದೇಶ ಮತ್ತು ವಿದೇಶಗಳಲ್ಲಿಯೂ ಹಾಳಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಬಿಜೆಪಿಗೆ ಮರಳುವ ಬಗ್ಗೆ ಯತ್ನಾಳ್ ಸ್ಪಷ್ಟನೆ

ಇದೇ ಸಂದರ್ಭದಲ್ಲಿ ಬಿಜೆಪಿಗೆ ಮರುಸೇರ್ಪಡೆಯಾಗುವ ವಿಚಾರವಾಗಿಯೂ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ. ಪಕ್ಷಕ್ಕೆ ಮರಳುವ ಸಂಬಂಧ ತಾವು ಯಾವುದೇ ರಾಜಕೀಯ ನಾಯಕರನ್ನ ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೆಲವರು ಮುಂದಿನ ವಾರ ಮತ್ತೆ ಭೇಟಿಯಾಗುವ ಬಗ್ಗೆ ಮಾತನಾಡಿದ್ದಾರೆ. ಆದರೆ ಬಿಜೆಪಿಗೆ ಮರಳಲು ಯಾರ ಬಳಿಯೂ ಮನವಿ ಮಾಡಿಕೊಂಡಿಲ್ಲ. ಪಕ್ಷಕ್ಕೆ ಸೇರ್ಪಡೆಯಾಗಲು ಅರ್ಜಿಯನ್ನೂ ಸಲ್ಲಿಸಿಲ್ಲ ಎಂದು ಹೇಳಿದ್ದಾರೆ. ತಾವು ಆರಾಮವಾಗಿದ್ದು, ನಿಯತ್ತು ಮತ್ತು ಸ್ವಾಭಿಮಾನದಿಂದ ಜೀವನ ನಡೆಸುತ್ತಿರುವುದಾಗಿ ಯತ್ನಾಳ್ ತಿಳಿಸಿದ್ದಾರೆ. ಈ ಮೂಲಕ ಬಿಜೆಪಿ ಮರುಸೇರ್ಪಡೆ ಕುರಿತ ಚರ್ಚೆಗಳಿಗೂ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES