ಬೆಂಗಳೂರು: ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಏಳನೇ ಕರಡು ಅಧಿಸೂಚನೆ ಕೇವಲ ಪರಿಸರದ ವಿಚಾರವಲ್ಲ. ಈ ಅಧಿಸೂಚನೆಯು ಮಲೆನಾಡು ಭಾಗದ ರೈತರು, ಸಾವಿರಾರು ಕುಟುಂಬಗಳ ಜೀವನೋಪಾಯದ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ ಮಲೆನಾಡಿನ ಜನರ ಪರವಾಗಿ ರಾಜ್ಯ ವಿಧಾನಮಂಡಲದ ನಿರ್ಧಾರ ಇರಬೇಕು ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಮನವಿ ಮಾಡಿದರು.
ಮಲೆನಾಡು ಜನತೆಯನ್ನು ಸಂಕಷ್ಟಕ್ಕೆ ಸಿಲುಕಿಸುವ ಕ್ರಮ ಒಪ್ಪಲು ಸಾಧ್ಯವಿಲ್ಲ!
ಕಸ್ತೂರಿ ರಂಗನ್ ವರದಿ ವಿರೋಧಿಸಿ ರಾಜ್ಯ ಸರ್ಕಾರ ಕರೆದಿರುವ ವಿಶೇಷ ಅಧಿವೇಶನದ ಹಿನ್ನೆಲೆಯಲ್ಲಿ ವಿಧಾನ ಪರಿಷತ್‌ನಲ್ಲಿ ಸೋಮವಾರ (ಸೆ. 21) ಮಾತನಾಡಿದ ಸಚಿವ ಮಧು ಬಂಗಾರಪ್ಪ ಅವರು, ಪಶ್ಚಿಮ ಘಟ್ಟದ ಸಂರಕ್ಷಣೆಯ ಅಗತ್ಯವನ್ನು ಯಾರೂ ಪ್ರಶ್ನಿಸುತ್ತಿಲ್ಲ. ಆದರೆ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ತಲೆತಲಾಂತರಗಳಿಂದ ಮಲೆನಾಡಿನಲ್ಲಿ ಬದುಕು ಕಟ್ಟಿಕೊಂಡಿರುವ ರೈತರು ಹಾಗೂ ಅಲ್ಲಿನ ಜನರ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸುವ ಯಾವುದೇ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ ಎಂದರು.
ಕರ್ನಾಟಕವನ್ನು ಬೇರೆ ರಾಜ್ಯಗಳೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ:
ವಿರೋಧ ಪಕ್ಷದವರು ಬೇರೆ ಬೇರೆ ರಾಜ್ಯಗಳ ಉದಾಹರಣೆಗಳನ್ನು ನೀಡುತ್ತಿದ್ದಾರೆ. ಆದರೆ ಕರ್ನಾಟಕದ ಪರಿಸ್ಥಿತಿಯನ್ನು ಬೇರೆ ರಾಜ್ಯಗಳೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಕರ್ನಾಟಕದ ಮಲೆನಾಡಿನ ಸಾಮಾಜಿಕ, ಆರ್ಥಿಕ ಮತ್ತು ಕೃಷಿ ಹಿನ್ನೆಲೆ ವಿಭಿನ್ನವಾಗಿದೆ ಎಂದು ಸಚಿವರು ಹೇಳಿದರು.
ನಾವು ಇಂದು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರನ್ನು ಏಕೆ ನೆನಪಿಸಿಕೊಳ್ಳುತ್ತೇವೆ? ದೇವರಾಜ ಅರಸು ಅವರು ಭೂಮಿ ನೀಡಿದರು. ಎಸ್. ಬಂಗಾರಪ್ಪ ಅವರು ಬಗರ್ ಹುಕುಂ ಹಕ್ಕುಪತ್ರ ನೀಡಿದರು. ಈ ಸೌಲಭ್ಯಗಳನ್ನು ಯಾರಿಗೆ ನೀಡಲಾಯಿತು? ನೆಲಮೂಲ ಸಂಸ್ಕೃತಿಯೊಂದಿಗೆ ಬದುಕು ಕಟ್ಟಿಕೊಂಡಿದ್ದ ಬಡವರು, ಶ್ರಮಿಕರು ಹಾಗೂ ಭೂಮಿಯನ್ನು ಅವಲಂಬಿಸಿದ್ದ ಜನರಿಗೆ ನೀಡಲಾಯಿತು. ಇದೀಗ ಕಸ್ತೂರಿ ರಂಗನ್ ವರದಿಯಿಂದಾಗಿ ಅಂತಹ ಜನರನ್ನು ಒಕ್ಕಲೆಬ್ಬಿಸುವ ಪರಿಸ್ಥಿತಿ ನಿರ್ಮಾಣವಾಗಬೇಕೇ ಎಂದು ಸಚಿವರು ಪ್ರಶ್ನಿಸಿದರು.
ಉಚಿತ ಪಂಪ್‌ಸೆಟ್‌ಗಳಿಂದ ಮಲೆನಾಡಿನ ಕೃಷಿಗೆ ಹೊಸ ಶಕ್ತಿ!
ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನೀಡಿದ ಉಚಿತ ಪಂಪ್‌ಸೆಟ್ ಯೋಜನೆಯ ಪರಿಣಾಮವಾಗಿ ಶಿವಮೊಗ್ಗ ಜಿಲ್ಲೆಯ ಕೃಷಿ ಮತ್ತು ಅಡಕೆ ಬೆಳೆಯಲ್ಲಿ ದೊಡ್ಡ ಬದಲಾವಣೆ ಸಂಭವಿಸಿದೆ ಎಂದು ಸಚಿವರು ಹೇಳಿದರು.
ಗಮನಾರ್ಹವಾಗಿ 90ರ ದಶಕದಲ್ಲಿ ಶಿವಮೊಗ್ಗ ಜಿಲ್ಲಾ ಭಾಗದಲ್ಲಿ ಸರಿ ಸುಮಾರು 14 ಸಾವಿರ ಹೆಕ್ಟೇರ್ ಪ್ರದೇಶದಲ್ಲಷ್ಟೇ ಅಡಕೆ ಬೆಳೆಯನ್ನು ಬೆಳೆಯಲಾಗುತ್ತಿತ್ತು. ಆದರೆ, 1990ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಎಸ್. ಬಂಗಾರಪ್ಪನವರು ʼಉಚಿತ ಪಂಪ್‌ಸೆಟ್ ಯೋಜನೆʼ ಘೋಷಿಸಿದ ಬಳಿಕ ಪ್ರಸ್ತುತ ಈ ಭಾಗದಲ್ಲಿ ಸುಮಾರು 1.48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯನ್ನು ಬೆಳೆಯಲಾಗುತ್ತಿದೆ. ಈ ಬೆಳವಣಿಗೆಯ ಹಿಂದೆ ಸಾವಿರಾರು ರೈತರ ಪರಿಶ್ರಮವಿದೆ. ಇವರಲ್ಲಿ ಅನೇಕ ರೈತರು ಕಸ್ತೂರಿ ರಂಗನ್ ವರದಿ ವ್ಯಾಪ್ತಿಯಲ್ಲಿ ಬರುತ್ತಾರೆ ಎಂದು ಉಲ್ಲೇಖಿಸುವ ಮೂಲಕ ಸದನದ ಗಮನ ಸೆಳೆದ ಸಚಿವ ಮಧು ಬಂಗಾರಪ್ಪ, “ಅವರಿಗೆ ಬದುಕು ಕಟ್ಟಿಕೊಟ್ಟಿದ್ದು ನಾವೇ. ಈಗ ಕಸ್ತೂರಿ ರಂಗನ್ ವರದಿ ಮುಂದಿಟ್ಟುಕೊಂಡು ಅವರ ಬದುಕನ್ನೇ ಮತ್ತೆ ಕಿತ್ತುಕೊಳ್ಳಬೇಕಾ?” ಎಂದು ಪ್ರಶ್ನಿಸಿದರು.
ಪಶ್ಚಿಮ ಘಟ್ಟವನ್ನು ಕಾಪಾಡುತ್ತಿರುವವರು ಮಲೆನಾಡಿನ ರೈತರು!
ಪಶ್ಚಿಮ ಘಟ್ಟ ದಕ್ಷಿಣ ಭಾರತದ ಶ್ವಾಸಕೋಶ ಎಂದು ವಿರೋಧ ಪಕ್ಷದವರು ಹೇಳುತ್ತಾರೆ. ಪಶ್ಚಿಮ ಘಟ್ಟವನ್ನು ಸಂರಕ್ಷಿಸಬೇಕೆಂಬುದರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ ಪಶ್ಚಿಮ ಘಟ್ಟವನ್ನು ಹಾಳು ಮಾಡುತ್ತಿರುವವರು ಮಲೆನಾಡಿನ ರೈತರು ಎಂಬ ರೀತಿಯಲ್ಲಿ ನೋಡುವುದು ಸರಿಯಲ್ಲ. ತಲೆತಲಾಂತರಗಳಿಂದಲೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಾಡು, ಪರಿಸರ, ಪ್ರಕೃತಿಯೊಂದಿಗೆ ಇಲ್ಲಿನ ಜನರು ಅವಿನಾಭಾವ ಸಂಬಂಧ ಹೊಂದಿದ್ದಾರೆ. ಕಾಡಿನ ಅಣಬೆಯಿರಲಿ, ಬಿದಿರಿನ ಭತ್ತವೇ ಇರಲಿ ಈ ಎಲ್ಲಾ ರೀತಿ ಪ್ರಾಕೃತಿಕ ಸಂಪರ್ನೂಲಗಳನ್ನು ಅವಲಂಬಿಸಿಯೇ ಇಲ್ಲಿನ ಜನ ಬದುಕುತ್ತಿದ್ದಾರೆ. ಆದರೆ, ಇದೀಗ ಪಶ್ಚಿಮ ಘಟ್ಟದ ಪರಿಸರವನ್ನು ಕಾಪಾಡಿಕೊಂಡು ಬಂದಿರುವ, ಅದರಿಂದಲೇ ಜೀವನ ಕಟ್ಟಿಕೊಂಡಿರುವ ಇದೇ ಜನರನ್ನು ಕಸ್ತೂರಿ ರಂಗನ್ ವರದಿಯ ಹೆಸರಿನಲ್ಲಿ ಸಂಕಷ್ಟಕ್ಕೆ ಸಿಲುಕಿಸುವುದು ನ್ಯಾಯಸಮ್ಮತವಲ್ಲ ಎಂದು ಸಚಿವ ಮಧು ಬಂಗಾರಪ್ಪ ಒತ್ತಿ ಹೇಳಿದರು.
“ನನ್ನ ಕ್ಷೇತ್ರ ಸೊರಬ ವ್ಯಾಪ್ತಿಗೆ ಬರುವುದಿಲ್ಲ; ಆದರೂ ನಾನು ರೈತರ ಜೊತೆ ನಿಂತಿದ್ದೇನೆ”:
ತಾವು ಪಾದಯಾತ್ರೆಯಲ್ಲಿ ಭಾಗವಹಿಸಿದ್ದನ್ನು ವಿಧಾನಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪ್ರಶ್ನಿಸಿ ಮಾತನಾಡಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ತಮ್ಮ ವಿಧಾನಸಭಾ ಕ್ಷೇತ್ರವಾದ ಸೊರಬ ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಬರುವುದಿಲ್ಲ. ಆದರೂ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ತೀರ್ಥಹಳ್ಳಿ ಮತ್ತು ಶಿಕಾರಿಪುರದಲ್ಲಿ ನಡೆದ ಬೃಹತ್ ಪಾದಯಾತ್ರೆಗಳಲ್ಲಿ ತಾವು ಭಾಗವಹಿಸಿದ್ದಾಗಿ ತಿಳಿಸಿದರು. “ಶಿವಮೊಗ್ಗ ಜಿಲ್ಲೆಯ ಜನ ನನ್ನ ಜನ. ಅವರಿಗೆ ತೊಂದರೆಯಾದಾಗ ನಾನು ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳಬೇಕಾ?” ಎಂದು ಪ್ರಶ್ನಿಸಿದರು.
ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಬರುವ ರಾಜ್ಯದ ಪ್ರತಿಯೊಂದು ಹಳ್ಳಿಯಲ್ಲೂ ಸ್ಥಳೀಯ ರೈತರು, ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಸಂಬಂಧಪಟ್ಟ ತಜ್ಞರೊಂದಿಗೆ ಸಭೆ ನಡೆಸಿ, ಅಲ್ಲಿನ ವಾಸ್ತವ ಪರಿಸ್ಥಿತಿಯನ್ನು ಅರಿತುಕೊಂಡು ತೀರ್ಮಾನ ಕೈಗೊಳ್ಳಬೇಕು ಎಂದು ಮಧು ಬಂಗಾರಪ್ಪ ಒತ್ತಾಯಿಸಿದರು.
ವಿರೋಧ ಪಕ್ಷಗಳು ಕೇವಲ ಟೀಕೆ ಮಾಡುವ ಬದಲು ಮಲೆನಾಡಿನ ರೈತರ ಬದುಕು ಮತ್ತು ಪರಿಸರ ಸಂರಕ್ಷಣೆ ಎರಡನ್ನೂ ಕಾಪಾಡುವ ನಿಟ್ಟಿನಲ್ಲಿ ಸಕಾರಾತ್ಮಕ ಸಲಹೆಗಳನ್ನು ನೀಡಬೇಕು. ಈ ಉದ್ದೇಶದಿಂದಲೇ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಅಧಿವೇಶನವನ್ನು ಕರೆದಿದ್ದಾರೆ. ಇದಕ್ಕಾಗಿ ಸಿಎಂ ಡಿ. ಕೆ. ಶಿವಕುಮಾರ್ ಅವರಿಗೆ ಧನ್ಯವಾದಗಳು ಎಂದರು.
“ಪರಿಸರವನ್ನೂ ಉಳಿಸಬೇಕು, ಮಲೆನಾಡಿನ ರೈತರ ಬದುಕನ್ನೂ ಉಳಿಸಬೇಕು. ಈ ಎರಡನ್ನೂ ಸಮನ್ವಯಗೊಳಿಸುವ ಪರಿಹಾರವೇ ನಮ್ಮ ಗುರಿಯಾಗಬೇಕು” ಎಂಬ ಸಂದೇಶವನ್ನು ಸಚಿವರು ಕಲಾಪದಲ್ಲಿ ಮುಂದಿಟ್ಟರು.