SOCIAL MEDIA

Newsletter

PARTNER SITES
Select Language Select State

ಬಲ್ಕ್‌ Form 7 ಅರ್ಜಿಗಳ ವಿವಾದ: FIR‌, ತನಿಖೆಗೆ ಸಿಎಂ ಡಿ.ಕೆ.ಶಿವಕುಮಾರ್ ಪಟ್ಟು!

ಕರ್ನಾಟಕದಲ್ಲಿ ಕಡಿಮೆ ಅವಧಿಯಲ್ಲಿ ಸಾವಿರಾರು Form 7 ಅರ್ಜಿಗಳು ಸಲ್ಲಿಕೆಯಾಗಿರುವ ಬಗ್ಗೆ ಸಿಎಂ ಡಿ.ಕೆ.ಶಿವಕುಮಾರ್‌ ಚುನಾವಣಾ ಆಯೋಗದ ಗಮನ ಸೆಳೆದಿದ್ದಾರೆ. ಬೆಳಗಾವಿ ಉತ್ತರ, ಮೂಡಿಗೆರೆ, ಬಬಲೇಶ್ವರ, ನರಸಿಂಹರಾಜ ಹಾಗೂ ಭಾಲ್ಕಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಲ್ಕ್‌ ಅರ್ಜಿಗಳು ಸಲ್ಲಿಕೆಯಾಗಿದ್ದು, ಅರ್ಹ ಮತದಾರರ ಹಕ್ಕು ರಕ್ಷಿಸಲು ತಕ್ಷಣ ತನಿಖೆ ನಡೆಸಿ, ತಪ್ಪು ಕಂಡುಬಂದರೆ FIR ದಾಖಲಿಸುವಂತೆ ಸಿಎಂ ಒತ್ತಾಯಿಸಿದ್ದಾರೆ. ಈ ಕುರಿತು ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ಸಿಎಂ ನಿಯೋಗದೊಂದಿಗೆ ಚರ್ಚೆ ನಡೆದಿದ್ದು, ಕ್ರಮದ ಭರವಸೆ ನೀಡಲಾಗಿದೆ.

Written By Puttaraj K Alur
Published: Oct 01, 2026, 05:17 PM IST | Updated: Oct 01, 2026, 05:34 PM IST
Image Credit: Karnataka SIR 2026
Join

Bulk Form 7 Row: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ನಡುವೆ ಬಲ್ಕ್‌ ಆಗಿ Form 7 ಅರ್ಜಿಗಳನ್ನ ಸಲ್ಲಿಸಿರುವ ಆರೋಪ ಇದೀಗ ರಾಜಕೀಯ ಹಾಗೂ ಚುನಾವಣಾ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಕಡಿಮೆ ಅವಧಿಯಲ್ಲಿ ಸಾವಿರಾರು Form 7 ಅರ್ಜಿಗಳು ಸಲ್ಲಿಕೆಯಾಗಿದ್ದು, ಅರ್ಹ ಮತದಾರರ ಹಕ್ಕುಗಳನ್ನ ರಕ್ಷಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

ಸಿಎಂ ಡಿ.ಕೆ.ಶಿವಕುಮಾರ್ ನೀಡಿರುವ ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 22, 23 ಮತ್ತು 24ರಂದು ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ Form 7 ಅರ್ಜಿಗಳನ್ನ ಸಲ್ಲಿಸಲಾಗಿದೆ. Form 7 ಮೂಲಕ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವಂತೆ ಆಕ್ಷೇಪಣೆ ಸಲ್ಲಿಸಲಾಗುತ್ತದೆ. ಈ ಅರ್ಜಿಗಳನ್ನ ಸಲ್ಲಿಸಿರುವವರ ಹಿನ್ನೆಲೆ ಹಾಗೂ ಅರ್ಜಿಗಳಲ್ಲಿರುವ ಮಾಹಿತಿಯ ಸತ್ಯಾಸತ್ಯತೆಯನ್ನ ಪರಿಶೀಲಿಸುವ ಅಗತ್ಯವಿದೆ ಎಂದು ಅವರು ಒತ್ತಾಯಿಸಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಸಾವಿರಾರು ಅರ್ಜಿ

ಸಿಎಂ ಡಿ.ಕೆ.ಶಿವಕುಮಾರ್‌ ಉಲ್ಲೇಖಿಸಿರುವ ಅಂಕಿ-ಅಂಶಗಳ ಪ್ರಕಾರ, ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಸುಮಾರು 3 ಸಾವಿರ Form 7 ಅರ್ಜಿಗಳನ್ನ ಸಲ್ಲಿಸಲಾಗಿದೆ. ಮೂಡಿಗೆರೆ ಕ್ಷೇತ್ರದಲ್ಲಿ 6,259, ಬಬಲೇಶ್ವರದಲ್ಲಿ 1,373, ನರಸಿಂಹರಾಜ ಕ್ಷೇತ್ರದಲ್ಲಿ 1,200 ಹಾಗೂ ಭಾಲ್ಕಿ ಕ್ಷೇತ್ರದಲ್ಲಿ 2,285 ಅರ್ಜಿಗಳನ್ನ ಸಲ್ಲಿಸಲಾಗಿದೆ ಎಂದು ತಿಳಿಸಲಾಗಿದೆ. ಇದಲ್ಲದೆ ರಾಜ್ಯದ ಇತರ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ Form 7 ಅರ್ಜಿಗಳು ಸಲ್ಲಿಕೆಯಾಗಿರುವ ಬಗ್ಗೆ ಗಮನ ಸೆಳೆಯಲಾಗಿದೆ. ಸೆಪ್ಟೆಂಬರ್ 22 ಮತ್ತು 23ರಂದು Form 7 ಅರ್ಜಿಗಳ ಸಲ್ಲಿಕೆಯಲ್ಲಿ ಏರಿಕೆ ಕಂಡುಬಂದಿರುವುದನ್ನ ವಿವಿಧ ವರದಿಗಳೂ ಉಲ್ಲೇಖಿಸಿವೆ. ಬಬಲೇಶ್ವರ ಹಾಗೂ ಭಾಲ್ಕಿ ಕ್ಷೇತ್ರಗಳಲ್ಲಿ ಕೆಲವೇ ವ್ಯಕ್ತಿಗಳಿಂದ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಸಲ್ಲಿಕೆಯಾಗಿರುವ ಅಂಕಿ-ಅಂಶಗಳು ವರದಿಯಾಗಿವೆ.  

ಅರ್ಹ ಮತದಾರರ ಹಕ್ಕು ರಕ್ಷಿಸಲು ಒತ್ತಾಯ

ಬಲ್ಕ್‌ Form 7 ಅರ್ಜಿಗಳ ಮೂಲಕ ಅಲ್ಪಸಂಖ್ಯಾತರು, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಮತದಾರರನ್ನ ಗುರಿಯಾಗಿಸಲಾಗಿದೆ ಎಂಬ ಆರೋಪಗಳನ್ನ ಸಿಎಂ ಡಿ.ಕೆ.ಶಿವಕುಮಾರ್ ಮುಂದಿಟ್ಟಿದ್ದಾರೆ. ಇಂತಹ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ನಿಜಾಂಶವನ್ನ ಹೊರತರಬೇಕೆಂದು ಅವರು ಚುನಾವಣಾ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಆದರೆ ಈ ಆರೋಪಗಳು ಇನ್ನೂ ತನಿಖೆಯ ಹಂತದಲ್ಲಿದ್ದು, ನಿರ್ದಿಷ್ಟ ವ್ಯಕ್ತಿಗಳು ಅಥವಾ ಸಂಘಟನೆಗಳು ಈ ಅರ್ಜಿಗಳನ್ನ ಸಲ್ಲಿಸಿರುವುದನ್ನ ಅಧಿಕೃತವಾಗಿ ದೃಢಪಡಿಸಲಾಗಿಲ್ಲ. ಬೆಳಗಾವಿ ಉತ್ತರ ಕ್ಷೇತ್ರದಲ್ಲಿಯೂ ಬಲ್ಕ್‌ Form 7 ಅರ್ಜಿಗಳ ಕುರಿತು ದೂರುಗಳು ಬಂದಿದ್ದು, ಅರ್ಜಿಗಳ ಆಧಾರದ ಮೇಲೆ ಯಾವುದೇ ಮತದಾರರ ಹೆಸರನ್ನ ತಕ್ಷಣವೇ ಅಳಿಸಲಾಗಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.  

FIR ದಾಖಲಿಸಲು ಸಿಎಂ ಒತ್ತಾಯ

ಬಲ್ಕ್‌ Form 7 ಅರ್ಜಿಗಳ ಹಿಂದೆ ನಿಯಮ ಉಲ್ಲಂಘನೆ ಅಥವಾ ಉದ್ದೇಶಪೂರ್ವಕ ಕ್ರಮ ಕಂಡುಬಂದರೆ, ಅಂತಹವರ ವಿರುದ್ಧ FIR ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಿಎಂ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ. ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಿಎಂ ಹಾಗೂ ಅವರ ನಿಯೋಗ ಚರ್ಚೆ ನಡೆಸಿದ್ದು, ಈ ಪ್ರಕರಣದಲ್ಲಿ ತನಿಖೆಗೆ ಆದ್ಯತೆ ನೀಡಬೇಕೆಂದು ಮನವಿ ಮಾಡಲಾಗಿದೆ. ತನಿಖೆ ನಡೆಸಿ ಎರಡು-ಮೂರು ದಿನಗಳಲ್ಲಿ ಕ್ರಮ ಕೈಗೊಳ್ಳುವ ಭರವಸೆ ಚುನಾವಣಾ ಅಧಿಕಾರಿಗಳಿಂದ ದೊರೆತಿದೆ ಎಂದು ಸಿಎಂ ಪರವಾಗಿ ತಿಳಿಸಲಾಗಿದೆ.

ಕಚೇರಿಯಲ್ಲೇ ಕುಳಿತ ಸಿಎಂ

ತನಿಖೆ ಮತ್ತು FIR ದಾಖಲಿಸುವ ವಿಚಾರದಲ್ಲಿ ಸ್ಪಷ್ಟ ಕ್ರಮ ಕೈಗೊಳ್ಳಬೇಕೆಂದು ಸಿಎಂ ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದಾರೆ. FIR ದಾಖಲಿಸುವವರೆಗೆ ಕಚೇರಿಯಿಂದ ತೆರಳುವುದಿಲ್ಲವೆಂದು ಹೇಳಿ, ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. FIR ಆಗುವವರೆಗೆ ನಿಮ್ಮ ಕಚೇರಿ ಬಿಟ್ಟು ಹೋಗಲ್ಲವೆಂದು ಪಟ್ಟು ಹಿಡಿದ ಸಿಎಂ, ಇಲ್ಲವಾದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

Form 7 ಅರ್ಜಿಗಳ ಪರಿಶೀಲನೆ ಹೇಗೆ?

ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು Form 7 ಸಲ್ಲಿಸಬಹುದು. ಆದರೆ ಕೇವಲ Form 7 ಅರ್ಜಿ ಸಲ್ಲಿಕೆಯ ಆಧಾರದ ಮೇಲೆ ಮತದಾರರ ಹೆಸರನ್ನ ಸ್ವಯಂಚಾಲಿತವಾಗಿ ಅಳಿಸುವುದಿಲ್ಲ. ಅರ್ಜಿಯಲ್ಲಿರುವ ಮಾಹಿತಿಯನ್ನ ಪರಿಶೀಲಿಸಿ, ಸಂಬಂಧಿಸಿದ ಚುನಾವಣಾ ಅಧಿಕಾರಿಗಳು ನಿಗದಿತ ಪ್ರಕ್ರಿಯೆಯಂತೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಬಿದರ್ ಜಿಲ್ಲಾಧಿಕಾರಿಯೂ Form 7 ಆಧಾರದ ಮೇಲೆ ಮಾತ್ರ ಯಾವುದೇ ಮತದಾರರ ಹೆಸರನ್ನ ತೆಗೆದುಹಾಕುವುದಿಲ್ಲ; ಪ್ರತಿ ಅರ್ಜಿಯೂ ಕ್ಷೇತ್ರ ಪರಿಶೀಲನೆ ಮತ್ತು ನಿಗದಿತ ಪ್ರಕ್ರಿಯೆಗೆ ಒಳಪಡುತ್ತದೆ ಎಂದು ತಿಳಿಸಿದ್ದಾರೆ. 

ಈ ಹಿನ್ನೆಲೆಯಲ್ಲಿ ಬಲ್ಕ್‌ Form 7 ಅರ್ಜಿಗಳ ಸಲ್ಲಿಕೆ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪು ಮಾಹಿತಿ ಅಥವಾ ಅಕ್ರಮ ಕಂಡುಬಂದರೆ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ. ಮುಂದಿನ ದಿನಗಳಲ್ಲಿ ಚುನಾವಣಾ ಅಧಿಕಾರಿಗಳ ತನಿಖೆ ಮತ್ತು ಕ್ರಮದ ಮೇಲೆ ಈ ವಿವಾದದ ಮುಂದಿನ ಬೆಳವಣಿಗೆ ಅವಲಂಬಿತವಾಗಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES