ಬೆಂಗಳೂರು : ಪರಿಷತ್ ಚುನಾವಣೆಯ ಭರ್ಜರಿ ಯಶಸ್ಸಿನ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಬೆಳವಣಿಗೆಗಳು ಆರಂಭವಾಗಿವೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರನ್ನು ಪದ್ಮನಾಭನಗರದ ಅವರ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಪರಿಷತ್ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ರಾಜ್ಯದ ದೋಸ್ತಿ ದಿಗ್ಗಜರು ಒಂದಾಗಿದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ನಿವಾಸಕ್ಕೆ ತೆರಳಿ ಸೌಹಾರ್ದಯುತ ಭೇಟಿ ನಡೆಸಿದರು. ಮುಂಬರುವ ಪ್ರತಿಯೊಂದು ಚುನಾವಣೆಯಲ್ಲೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಒಟ್ಟಾಗಿ ಸಾಗುವ ಕುರಿತು ಉಭಯ ನಾಯಕರು ಗಂಭೀರ ಚರ್ಚೆ ನಡೆಸಿದ್ದಾರೆ. ಪ್ರಮುಖವಾಗಿ 2028ರ ವಿಧಾನಸಭಾ ಚುನಾವಣೆಯನ್ನೇ ಫೋಕಸ್‌ನಲ್ಲಿಟ್ಟುಕೊಂಡು ಈ ಮಾತುಕತೆ ನಡೆದಿದ್ದು, ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ದೇವೇಗೌಡರ ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ಪ್ರಚಲಿತ ರಾಜಕೀಯ ವಿದ್ಯಮಾನಗಳ ಕುರಿತು ಗೌಡರು ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ ಎಂದರು. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಮಾತ್ರ ಜನ ನೆಮ್ಮದಿಯಿಂದ ಇರಲು ಸಾಧ್ಯ. ಆ ನಿಟ್ಟಿನಲ್ಲಿ ನಾವಿಬ್ಬರೂ ಶ್ರಮಿಸಬೇಕು ಎಂದು ದೇವೇಗೌಡರು ಹೇಳಿದ್ದಾರೆ. ರಾಜ್ಯದ ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಬಗ್ಗೆ ದೇವೇಗೌಡರಿಗೆ ಸಮಾಧಾನವಿಲ್ಲ, ಎಂದು ಬಿಎಸ್‌ವೈ ತಿಳಿಸಿದರು. ಅಲ್ಲದೆ, ಮೈತ್ರಿಯ ಅಂತಿಮ ತೀರ್ಮಾನವನ್ನು ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಹಾಗೂ ದೇವೇಗೌಡರು ಒಟ್ಟಾಗಿ ಕೈಗೊಳ್ಳಲಿದ್ದು, ನಾವೆಲ್ಲರೂ ಅದಕ್ಕೆ ಬದ್ಧರಾಗಿದ್ದೇವೆ ಎಂದರು.
ಇದೇ ವೇಳೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಯಡಿಯೂರಪ್ಪ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ನಾಯಕರ ಆಂತರಿಕ ಕಚ್ಚಾಟ ತಾರಕಕ್ಕೇರಿದ್ದು, ರಾಜ್ಯದಲ್ಲಿ ಯಾವ ಕ್ಷಣದಲ್ಲಾದರೂ ಏನೂ ಬೇಕಾದರೂ ಆಗಬಹುದು ಎಂದು ಎಚ್ಚರಿಸಿದರು. ಜನರು ಕಟ್ಟಿದ ತೆರಿಗೆ ಹಣ ಎಲ್ಲಿಗೆ ಹೋಗುತ್ತಿದೆಯೋ ಗೊತ್ತಿಲ್ಲ, ಕೆಎಸ್‌ಆರ್‌ಟಿಸಿ ಬಸ್‌ಗಳ ಡೀಸೆಲ್‌ಗೂ ಹಣವಿಲ್ಲ ಎನ್ನುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಇಂತಹ ಕಷ್ಟದ ಪರಿಸ್ಥಿತಿಯನ್ನು ರಾಜ್ಯ ಎಂದೂ ಕಂಡಿರಲಿಲ್ಲ, ಎಂದು ಕಿಡಿಕಾರಿದರು.
ಸ್ಟಿಂಗ್ ಆಪರೇಷನ್ ಚರ್ಚೆಗಳ ಕುರಿತು ಕೇಳಿದ ಪ್ರಶ್ನೆಗೆ, ನೀವೇ ನೋಡುತ್ತಿದ್ದೀರಲ್ಲಾ ಎನ್ನುವ ಮೂಲಕ ಬಿಎಸ್‌ವೈ ಕಾಂಗ್ರೆಸ್ ಸರ್ಕಾರದ ತಲ್ಲಣಗಳನ್ನು ಸಾರ್ವಜನಿಕರೆದುರು ತೆರೆದಿಟ್ಟರು. ದಿಗ್ಗಜರ ಭೇಟಿ ಮುಂಬರುವ 2028ರ ವಿಧಾನಸಭೆ ಚುನಾವಣೆ ಹಾಗೂ ಪ್ರಚಲಿತ ರಾಜಕೀಯ ವಿದ್ಯಾಮಾನಗಳ ದೃಷ್ಟಿಯಿಂದ ತೀವ್ರ ಕುತೂಹಲ ಮೂಡಿಸಿದೆ. ಬಿಜೆಪಿ-ಜೆಡಿಎಸ್ ದೋಸ್ತಿ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗಳಿಸುವ ಹಿನ್ನೆಲೆಯಲ್ಲಿ ಈ ಇಬ್ಬರು ನಾಯಕರ ಮಾತುಕತೆ ಮಹತ್ವ ಪಡೆದುಕೊಂಡಿದೆ.
ಒಟ್ಟಾರೆಯಾಗಿ... ಪರಿಷತ್ ಚುನಾವಣೆಯ ಭರ್ಜರಿ ಯಶಸ್ಸಿನ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ಗರಿಗೆದರಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಭೇಟಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಮುಂಬರುವ 2028ರ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಜನಾಂದೋಲನ ರೂಪಿಸುವ ಕುರಿತು ಉಭಯ ನಾಯಕರು ವಿಸ್ತೃತ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.