ಬಿ.ಕೆ. ಹರಿಪ್ರಸಾದ್ ಜೀವನದಲ್ಲಿ ಒಂದು ಬಾರಿಯೂ ಚುನಾವಣೆಯಲ್ಲಿ ನಿಂತು ಗೆದ್ದಿಲ್ಲ-ಬಿ.ವೈ. ವಿಜಯೇಂದ್ರ ಲೇವಡಿ
ನಾನು ಎಲ್‌ಕೆಜಿ ಅಥವಾ ಮೊದಲ ಬಾರಿಯ ಶಾಸಕನೇ ಇರಬಹುದು, ಆದರೆ ಬಿ.ಕೆ. ಹರಿಪ್ರಸಾದ್ ಅವರು ಜೀವನದಲ್ಲಿ ಒಂದೇ ಒಂದು ಬಾರಿಯೂ ಚುನಾವಣೆಯಲ್ಲಿ ನಿಂತು ಗೆದ್ದಿಲ್ಲ.
ಚಿತ್ರದುರ್ಗ: ಇಲ್ಲಿನ ಪ್ರಸಿದ್ಧ 'ಹಿಂದೂ ಮಹಾ ಗಣಪತಿ' ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ, ಮಾಜಿ ಸಚಿವ ಜಿ.ಎಚ್. ತಿಪ್ಪಾರೆಡ್ಡಿ ಹಾಗೂ ಸಂಸದ ಗೋವಿಂದ ಕಾರಜೋಳ ಸೇರಿದಂತೆ ಹಲವು ಹಿರಿಯ ನಾಯಕರು ವಿಜಯೇಂದ್ರ ಅವರಿಗೆ ಸಾಥ್ ನೀಡಿದರು.
ದರ್ಶನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ವೈ. ವಿಜಯೇಂದ್ರ, ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. "ನಾವು ನಡೆಸಿದ 'ಬಳ್ಳಾರಿ ಚಲೋ' ಪಾದಯಾತ್ರೆ ಅತ್ಯಂತ ಯಶಸ್ವಿಯಾಗಿದೆ. ನಮ್ಮ ಈ ಪಾದಯಾತ್ರೆಯಿಂದ ಪ್ರೇರೇಪಣೆಗೊಂಡು ಕೆಪಿಸಿಸಿ ಅಧ್ಯಕ್ಷರು ಈಗ ನನ್ನ ಸ್ವಕ್ಷೇತ್ರ ಶಿಕಾರಿಪುರದಿಂದಲೇ ಪಾದಯಾತ್ರೆ ಪ್ರಾರಂಭಿಸಿದ್ದಾರೆ. ಇಡೀ ರಾಜ್ಯಕ್ಕೆ ಹೋರಾಟದ ಕಿಚ್ಚು ಹಚ್ಚಿದ ಕೀರ್ತಿ ಶಿಕಾರಿಪುರಕ್ಕೆ ಸಲ್ಲುತ್ತದೆ. ಅಂತಹ ಪುಣ್ಯಭೂಮಿಯಿಂದ ಅವರು ಪಾದಯಾತ್ರೆ ಶುರು ಮಾಡಿದ್ದಾರೆ, ಅವರಿಗೆ ಒಳ್ಳೆಯದಾಗಲಿ" ಎಂದು ವ್ಯಂಗ್ಯವಾಡಿದರು.
ಇದೇ ವೇಳೆ, ತಮ್ಮನ್ನು 'ಎಲ್‌ಕೆಜಿ' ಎಂದು ಕರೆದಿದ್ದ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದ ವಿಜಯೇಂದ್ರ, "ನಾನು ಎಲ್‌ಕೆಜಿ ಅಥವಾ ಮೊದಲ ಬಾರಿಯ ಶಾಸಕನೇ ಇರಬಹುದು, ಆದರೆ ಬಿ.ಕೆ. ಹರಿಪ್ರಸಾದ್ ಅವರು ಜೀವನದಲ್ಲಿ ಒಂದೇ ಒಂದು ಬಾರಿಯೂ ಚುನಾವಣೆಯಲ್ಲಿ ನಿಂತು ಗೆದ್ದಿಲ್ಲ. ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸರ್ಕಾರ 100 ದಿನ ಪೂರೈಸಿದ ಕಾರ್ಯಕ್ರಮಕ್ಕೂ ಇವರನ್ನು ಕರೆಯಲಿಲ್ಲ. ಇದರಿಂದ ಸಂಪೂರ್ಣ ಹತಾಶರಾಗಿರುವ ಹರಿಪ್ರಸಾದ್, ಅನುಕಂಪ ಗಿಟ್ಟಿಸಲು ಪಾದಯಾತ್ರೆ ಮಾಡುತ್ತಿದ್ದಾರೆ" ಎಂದರು.
ತಮ್ಮ ಬ್ಯಾನರ್ ಹರಿದು ಹಾಕಿರುವ ಆರೋಪದ ಕುರಿತು ಮಾತನಾಡಿ, "ನಾವು ಬ್ಯಾನರ್ ಹರಿಯುವಂತಹ ಕೀಳುಮಟ್ಟದ ರಾಜಕಾರಣ ಮಾಡುವುದಿಲ್ಲ. ಮಾಧ್ಯಮಗಳ ಪ್ರಚಾರಕ್ಕಾಗಿ ಅವರ ಕಾರ್ಯಕರ್ತರೇ ಬ್ಯಾನರ್ ಹರಿದುಕೊಂಡಿದ್ದಾರೆ" ಎಂದು ಆರೋಪಿಸಿದರು. ಇನ್ನು ಆರ್‌ಟಿಜಿಎಸ್ (RTGS) ಮೂಲಕ ಲಂಚ ಪಡೆದಿದ್ದಾರೆ ಎಂಬ ಆರೋಪಕ್ಕೆ ಕಿಡಿಕಾರಿದ ಅವರು, "ಹರಿಪ್ರಸಾದ್ ನಾಲಿಗೆ ಬಿಗಿ ಹಿಡಿದು ಮಾತನಾಡಲಿ. ಆ ಪ್ರಕರಣ ಕೋರ್ಟ್‌ನಲ್ಲಿ ಈಗಾಗಲೇ ಇತ್ಯರ್ಥವಾಗಿದ್ದು, ನಾನು ನಿರಪರಾಧಿ ಎಂದು ತೀರ್ಪು ಬಂದಿದೆ" ಎಂದು ಸ್ಪಷ್ಟಪಡಿಸಿದರು.
"ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಕಾಂಗ್ರೆಸ್ ಸರ್ಕಾರ ಸೂಕ್ತ ಪರಿಹಾರ ನೀಡದೆ ರೈತರನ್ನು ನಿರ್ಲಕ್ಷಿಸಿದೆ. ಆಡಳಿತ ವೈಫಲ್ಯದಿಂದ ಜನತೆ ಸರ್ಕಾರದ ವಿರುದ್ಧ ಛೀ, ತೂ ಎನ್ನುತ್ತಿದ್ದಾರೆ" ಎಂದು ಟೀಕಿಸಿದ ಅವರು, ಹಿರಿಯೂರು ಉಪಚುನಾವಣೆ ವಿಚಾರವಾಗಿ ಮುಂದೆ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.