SOCIAL MEDIA

Newsletter

PARTNER SITES
Select Language Select State

ಇಲ್ಲಿ 10-20 ರೂಪಾಯಿ ನಡೆಯಲ್ಲ, ಲಕ್ಷ-ಕೋಟಿ ಲೆಕ್ಕ!": ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ನಾಯಕ ಅಮೃತ ದೇಸಾಯಿ

ಸೆಪ್ಟೆಂಬರ್ ಮುಗಿಯುತ್ತಾ ಬಂದರೂ ಧಾರವಾಡ ತಾಲೂಕಿನಲ್ಲಿ ತೀವ್ರ ಮಳೆ ಅಭಾವ ಕಂಡುಬಂದಿದೆ. ಜೂನ್‌ನಲ್ಲಿ ಎಕರೆಗೆ 20-25 ಸಾವಿರ ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ್ದ ರೈತರಿಗೆ ಈಗ ಕೈಗೆ ಬಂದ ಬೆಳೆ ಸಿಗಂದಂತಾಗಿದೆ. ಅಕ್ಕಪಕ್ಕದ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವ ಸರ್ಕಾರ, ಧಾರವಾಡ ತಾಲೂಕನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ.

Reported By Manjunath Naragund Written By Manjunath Naragund
Published: Sep 18, 2026, 05:07 PM IST | Updated: Sep 18, 2026, 05:18 PM IST
Image Credit: Amrit Desai
Join

ಧಾರವಾಡ: ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣವೇ ಧಾರವಾಡ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಹಾಗೂ ರೈತರಿಗೆ ಎಕರೆಗೆ 50 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಬಿಜೆಪಿ ಮಾಜಿ ಶಾಸಕ ಅಮೃತ ದೇಸಾಯಿ ಒತ್ತಾಯಿಸಿದ್ದಾರೆ. ನಗರದಲ್ಲಿ ಮಾಜಿ ಶಾಸಕಿ ಸೀಮಾ ಮಸೂತಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವೈಫಲ್ಯಗಳು ಮತ್ತು ಭ್ರಷ್ಟಾಚಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.

ಸೆಪ್ಟೆಂಬರ್ ಮುಗಿಯುತ್ತಾ ಬಂದರೂ ಧಾರವಾಡ ತಾಲೂಕಿನಲ್ಲಿ ತೀವ್ರ ಮಳೆ ಅಭಾವ ಕಂಡುಬಂದಿದೆ. ಜೂನ್‌ನಲ್ಲಿ ಎಕರೆಗೆ 20-25 ಸಾವಿರ ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ್ದ ರೈತರಿಗೆ ಈಗ ಕೈಗೆ ಬಂದ ಬೆಳೆ ಸಿಗಂದಂತಾಗಿದೆ. ಅಕ್ಕಪಕ್ಕದ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವ ಸರ್ಕಾರ, ಧಾರವಾಡ ತಾಲೂಕನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಇದರಿಂದಾಗಿ ರೈತರು ತೀವ್ರ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಇದೇ ವೇಳೆ, ಇತ್ತೀಚೆಗೆ 50 ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್ ಸಚ್ಚಿದಾನಂದ ಪ್ರಕರಣದ ಬಗ್ಗೆ ಉಲ್ಲೇಖಿಸಿದ ಅವರು, ಸರ್ಕಾರದ ವಿರುದ್ಧ ತೀವ್ರ ಭ್ರಷ್ಟಾಚಾರದ ಆರೋಪ ಮಾಡಿದರು. 'ಖರಾಬ್ ಭೂಮಿ'ಯನ್ನು 'ಶೇತ್ಕಿ' ಎಂದು ಬದಲಾಯಿಸಲು ಕೋಟಿಗಟ್ಟಲೆ ಲಂಚದ ವ್ಯವಹಾರ ನಡೆಯುತ್ತಿದೆ. 'ನಾನು ಬಹಳ ಹಣ ಕೊಟ್ಟು ಈ ಹುದ್ದೆಗೆ ಬಂದಿದ್ದೇನೆ' ಎಂದು ಆ ಅಧಿಕಾರಿ ಹೇಳುತ್ತಿದ್ದರೆಂದರೆ, ಅವರನ್ನು ಇಲ್ಲಿಗೆ ವರ್ಗಾವಣೆ ಮಾಡಲು ಶಿಫಾರಸು ಪತ್ರ ನೀಡಿದ ಪ್ರಭಾವಿ ನಾಯಕರು ಯಾರು? ಅವರನ್ನೂ ಸಹ ತನಿಖೆಗೆ ಒಳಪಡಿಸಬೇಕು ಎಂದು ದೇಸಾಯಿ ಆಗ್ರಹಿಸಿದರು.

ಧಾರವಾಡ ತಾಲೂಕಿನ ಹೊಸವಾಳು ಗ್ರಾಮದಲ್ಲಿ 270 ಎಕರೆ 'ಬಿ ಖರಾಬ್' ಜಮೀನನ್ನು 'ಉಳುವವನೇ ಒಡೆಯ' ಕಾಯ್ದೆಯಡಿ ರೈತರು ಮಂಜೂರು ಮಾಡಿಸಿಕೊಂಡು ಉಳುಮೆ ಮಾಡುತ್ತಿದ್ದರು. ಆದರೆ ಈಗ ಕೆಐಎಡಿಬಿ ಆ ಭೂಮಿ ಸ್ವಾಧೀನಪಡಿಸಿಕೊಂಡಿದ್ದರೂ ರೈತರಿಗೆ ಸೂಕ್ತ ಪರಿಹಾರ ನೀಡದೆ ಅಧಿಕಾರಿಗಳು ಗೂಂಡಾಗಿರಿ ಮಾಡುತ್ತಿದ್ದಾರೆ. ರೈತರಿಗೆ ಪೂರ್ಣ ಪರಿಹಾರ ಸಿಗುವವರೆಗೆ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದರು.

ಅಲ್ಲದೆ, ರಾಜ್ಯದಲ್ಲಿ ವೃದ್ಧರು, ವಿಧವೆಯರು ಮತ್ತು ಅಂಗವಿಕಲರಿಗೆ ನೀಡಲಾಗುವ ಪಿಂಚಣಿ ಹಣ ಹಲವು ತಿಂಗಳುಗಳಿಂದ ತಲುಪಿಲ್ಲ. ಇದರಿಂದಾಗಿ ಬಡವರು ಗಂಟು ಔಷಧಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 'ನಮ್ಮ ಸರ್ಕಾರದಲ್ಲಿ ಯಾರೂ ಹತ್ತು ರೂಪಾಯಿ ಲಂಚ ತಗೊಳ್ಳಲ್ಲ' ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಆದರೆ ಈಗ 10-20 ರೂಪಾಯಿ ನಡೆಯಲ್ಲ, ಲಕ್ಷ-ಕೋಟಿಗಳ ಲೆಕ್ಕದಲ್ಲೇ ಲಂಚ ತಗೋತಿದ್ದಾರೆ ಎಂಬುದು ಅಧಿಕಾರಿಗಳು ಟ್ರ್ಯಾಪ್ ಆದಾಗ ಗೊತ್ತಾಗುತ್ತಿದೆ. ಈ ಕೂಡಲೇ ಮುಖ್ಯಮಂತ್ರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ದೇಸಾಯಿ ಆಗ್ರಹಿಸಿದರು.

Add Zee News as a Preferred Source

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES