ಬೇಲಿಯೇ ಹೊಲ ಮೇಯ್ದ ಕಥೆ: 40 ಲಕ್ಷ ಲೂಟಿ ಮಾಡಿ ಸಿಕ್ಕಿಬಿದ್ದ ಟ್ರಸ್ಟ್ ಸಿಬ್ಬಂದಿ!
ಬೆಂಗಳೂರಿನ ಪ್ರತಿಷ್ಠಿತ ಟ್ರಸ್ಟ್ ಒಂದರಲ್ಲಿ 17 ವರ್ಷಗಳಿಂದ ನಂಬಿಕಸ್ಥನಾಗಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೇ ಲಾಕರ್ ಕೀ ಬಳಸಿ ಬರೋಬ್ಬರಿ 40 ಲಕ್ಷ ರೂಪಾಯಿ ಹಣವನ್ನು ಹಂತ ಹಂತವಾಗಿ ಕಳ್ಳತನ ಮಾಡಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ..
ಬೆಂಗಳೂರು : ಅದು ಬೆಂಗಳೂರಿನ ಪ್ರತಿಷ್ಠಿತ ಟ್ರಸ್ಟ್. ಅದೇ ಟ್ರಸ್ಟ್‌ನಲ್ಲಿ ಈಗ ಬೇಲಿಯೇ ಎದ್ದು ಹೊಲ ಮೇಯ್ದಿರುವ ಪ್ರಸಂಗ ಬೆಳಕಿಗೆ ಬಂದಿದೆ. ಬರೋಬ್ಬರಿ 40 ಲಕ್ಷ ರೂಪಾಯಿ ಹಣ ಕಳ್ಳತನ ಮಾಡಿ ಟ್ರಸ್ಟ್ ಸದಸ್ಯನೊಬ್ಬ ಸಿಕ್ಕಿಬಿದ್ದಿದ್ದಾನೆ. ಕಳೆದ 17 ವರ್ಷಗಳಿಂದ ನಂಬಿಕಸ್ಥನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಕಳ್ಳತನದ ಹಾದಿ ಹಿಡಿದಿದ್ದಾನೆ. ಅಷ್ಟಕ್ಕೂ ನಕಲಿ ಕೀ ಬಳಸಿ ಲಕ್ಷಾಂತರ ರೂಪಾಯಿ ಎಗರಿಸುತ್ತಿದ್ದ ಆಸಾಮಿಯ ಅಸಲಿಯತ್ತು ಹೇಗೆ ಬಯಲಾಯ್ತು, ಕದ್ದ ಹಣವನ್ನೆಲ್ಲ ಏನು ಮಾಡಿದ, ಈ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
ಯೆಸ್.... ಬರೋಬ್ಬರಿ 17 ವರ್ಷಗಳಿಂದ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಪ್ರತಿಷ್ಠಿತ ಟ್ರಸ್ಟ್‌ನಲ್ಲಿ ಲಕ್ಷಾಂತರ ರೂಪಾಯಿ ಕಳ್ಳತನ ಮಾಡಿರುವ ಆರೋಪ ಕೇಳಿಬಂದಿದೆ. ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿರುವ ಶ್ರೀ ಸಾಯಿ ದರ್ಶನಂ ಟ್ರಸ್ಟ್‌ನಲ್ಲಿ ಈ ಕಳ್ಳತನ ನಡೆದಿದೆ. ಶ್ರೀನಿವಾಸ ನಾಡಗೌಡ ಎಂಬಾತನೇ ಕಳ್ಳತನದ ಆರೋಪ ಎದುರಿಸುತ್ತಿರುವ ವ್ಯಕ್ತಿ. ಇಷ್ಟು ವರ್ಷಗಳ ಕಾಲ ಟ್ರಸ್ಟ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಶ್ರೀನಿವಾಸ, ಅಲ್ಲಿನ ಸದಸ್ಯರ ವಿಶ್ವಾಸವನ್ನೂ ಗಳಿಸಿದ್ದ. ಇದೇ ನಂಬಿಕೆಯನ್ನು ಬಂಡವಾಳ ಮಾಡಿಕೊಂಡು ಹಣ ದೋಚಲು ಪಕ್ಕಾ ಪ್ಲಾನ್ ರೂಪಿಸಿದ್ದ.
ಟ್ರಸ್ಟ್‌ನ ಕೆಲಸ ಕಾರ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದ ಆರೋಪಿಗೆ ಹಣ ಎಲ್ಲಿ ಇಡಲಾಗುತ್ತದೆ.. ಲಾಕರ್ ಎಲ್ಲಿದೆ.. ಅದರ ಕೀ ಯಾರ ಬಳಿ ಇರುತ್ತೆ ಎಂಬ ವಿಚಾರಗಳೆಲ್ಲ ಚೆನ್ನಾಗಿಯೇ ಗೊತ್ತಿತ್ತು. ಇದೇ ಮಾಹಿತಿಯನ್ನು ಬಳಸಿಕೊಂಡು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಕಳ್ಳತನಕ್ಕೆ ಕೈ ಹಾಕಿದ್ದಾನೆ. ವರ್ಷಗಳ ಕಾಲ ಯಾರಿಗೂ ಸಣ್ಣ ಸುಳಿವೂ ಸಿಗದಂತೆ ಹಣ ಎಗರಿಸುತ್ತಿದ್ದ ಆರೋಪಿಯ ಕೃತ್ಯ ಕೊನೆಗೂ ಬಯಲಾಗಿದೆ.
ಅಷ್ಟಕ್ಕೂ ಈ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ ಅನ್ನೋದನ್ನ ನೋಡೋದಾದ್ರೆ, ಶ್ರೀ ಗುರುಮೂರ್ತಿ ಅವರಿಗೆ ಸೇರಿದ ಶ್ರೀ ಸಾಯಿ ದರ್ಶನಂ ಟ್ರಸ್ಟ್‌ನಲ್ಲಿ ಯಶೋಧ ಎಂಬುವವರು ಕೂಡ ಟ್ರಸ್ಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಶೋಧ ಅವರಿಗೆ ಸೇರಿದ ಲಾಕರ್‌ನಲ್ಲಿ ಹಣವನ್ನು ಇಡಲಾಗುತ್ತಿತ್ತು. ಆದ್ರೆ ಕಳೆದ ನಾಲ್ಕು ವರ್ಷಗಳಿಂದ ಈ ಲಾಕರ್‌ನಲ್ಲಿದ್ದ ಹಣ ಹಂತ ಹಂತವಾಗಿ ನಾಪತ್ತೆಯಾಗುತ್ತಿತ್ತು.
ಮೊದಲಿಗೆ ಹಣದ ಲೆಕ್ಕಾಚಾರದಲ್ಲಿ ಏನಾದರೂ ವ್ಯತ್ಯಾಸವಾಗಿರಬಹುದು ಎಂದು ಭಾವಿಸಿದ್ದ ಟ್ರಸ್ಟ್ ಸದಸ್ಯರಿಗೆ, ಇತ್ತೀಚೆಗೆ ಲಾಕರ್ ಪರಿಶೀಲನೆ ನಡೆಸಿದಾಗ ಹಣ ಕಳ್ಳತನವಾಗಿರುವ ಬಗ್ಗೆ ಅನುಮಾನ ಗಟ್ಟಿಯಾಗಿದೆ. ಲಾಕರ್‌ನಲ್ಲಿದ್ದ ಹಣ ನಿರಂತರವಾಗಿ ಕಡಿಮೆಯಾಗುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆ ಪರಿಶೀಲನೆ ನಡೆಸಲಾಗಿದೆ.
ಈ ವೇಳೆ ಟ್ರಸ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ ನಾಡಗೌಡನ ಮೇಲೆ ಅನುಮಾನ ವ್ಯಕ್ತವಾಗಿದೆ. ಬಳಿಕ ಆತನ ಚಲನವಲನ ಹಾಗೂ ಇತರ ವಿಚಾರಗಳ ಬಗ್ಗೆ ಪರಿಶೀಲನೆ ನಡೆಸಿದಾಗ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಲಾಕರ್ ತೆರೆಯಲು ಬಳಸುತ್ತಿದ್ದ ಕೀ ಆತನ ಪರ್ಸ್‌ನಲ್ಲೇ ಪತ್ತೆಯಾಗಿದೆ. ಹೀಗೆ ಕಳ್ಳತನಕ್ಕೆ ಬಳಸುತ್ತಿದ್ದ ಕೀ ಸಿಕ್ಕಿಬಿದ್ದಿದ್ದೇ ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ. ವರ್ಷಗಳಿಂದ ನಡೆಯುತ್ತಿದ್ದ ಹಣ ಕಳ್ಳತನದ ಹಿಂದೆ ಇದ್ದ ವ್ಯಕ್ತಿ ಯಾರು ಅನ್ನೋದು ಬಯಲಾಗಿದೆ.
ಇನ್ನು ಟ್ರಸ್ಟ್‌ನಲ್ಲಿ ಬರೋಬ್ಬರಿ 17 ವರ್ಷಗಳ ಕಾಲ ಕೆಲಸ ಮಾಡಿಕೊಂಡಿದ್ದ ಶ್ರೀನಿವಾಸ, ನಂಬಿಕೆಗೆ ದ್ರೋಹ ಬಗೆದು ಬರೋಬ್ಬರಿ 40 ಲಕ್ಷ ರೂಪಾಯಿ ಹಣವನ್ನು ಕದ್ದಿರುವ ಆರೋಪ ಎದುರಿಸುತ್ತಿದ್ದಾನೆ. ಅಷ್ಟೇ ಅಲ್ಲ, ಹೀಗೆ ಕದ್ದ ಹಣವನ್ನು ತನ್ನ ವೈಯಕ್ತಿಕ ಆಸೆಗಳಿಗೆ ಬಳಸಿಕೊಂಡಿದ್ದಾನೆ.ಅದರಲ್ಲೂ ಐಪಿಎಲ್ ಬೆಟ್ಟಿಂಗ್ ಹಾಗೂ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಹಣ ಹೂಡಿಕೆ ಮಾಡಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಸುಲಭವಾಗಿ ಹಣ ಸಂಪಾದನೆ ಮಾಡಬೇಕು ಅನ್ನೋ ಆಸೆಗೆ ಬಿದ್ದು, ವರ್ಷಗಳ ಕಾಲ ತನ್ನ ಮೇಲೆ ಇಟ್ಟಿದ್ದ ನಂಬಿಕೆಯನ್ನೇ ದುರುಪಯೋಗಪಡಿಸಿಕೊಂಡಿದ್ದಾನೆ. ಲಾಕರ್‌ನಿಂದ ಹಂತ ಹಂತವಾಗಿ ಹಣ ಎಗರಿಸಿ ಬೆಟ್ಟಿಂಗ್‌ನಲ್ಲಿ ಸುರಿದಿದ್ದ ಆರೋಪಿಯ ಕೃತ್ಯ ಕೊನೆಗೂ ಗಮನಕ್ಕೆ ಬಂದಿದೆ. ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಆರೋಪಿ ಶ್ರೀನಿವಾಸ ನಾಡಗೌಡನನ್ನು ಬಂಧಿಸಿದ್ದಾರೆ. ಒಟ್ಟಿನಲ್ಲಿ 17 ವರ್ಷಗಳ ಕಾಲ ನಂಬಿಕಸ್ಥನಂತೆ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೇ ಕಳ್ಳತನದ ಆರೋಪದಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ.