ಬೆಂಗಳೂರಿನ ಮೆಟ್ರೋ 100 ಕಿ.ಮೀ. ದಾಟಿದೆ, ಅಭಿವೃದ್ಧಿಯಲ್ಲಿ ಸೆಂಚುರಿ ಬಾರಿಸುತ್ತಿದ್ದೇವೆ: ಪ್ರಧಾನಿ ಮೋದಿ
ಪಿಂಕ್ ಲೈನ್‌ನ ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ. ಉದ್ದದ ಎತ್ತರಿಸಿದ ಮಾರ್ಗವನ್ನ ಸುಮಾರು ₹3,470 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ರಧಾನಿ ಮೋದಿ ಅವರು ಈ ಮಾರ್ಗಕ್ಕೆ ಚಾಲನೆ ನೀಡಿದ ಬಳಿಕ ತಾವರೆಕೆರೆ ನಿಲ್ದಾಣದಿಂದ ಐಐಎಂ ಬೆಂಗಳೂರು ನಿಲ್ದಾಣದವರೆಗೆ ಮೆಟ್ರೋದಲ್ಲಿ ಪ್ರಯಾಣಿಸಿದರು.
Namma Metro Pink Line: ನಮ್ಮ ಮೆಟ್ರೋ ಪಿಂಕ್ ಲೈನ್‌ಗೆ ಚಾಲನೆ ನೀಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ಮೆಟ್ರೋ ವಿಸ್ತರಣೆ ಸೇರಿದಂತೆ ಕರ್ನಾಟಕದ ಅಭಿವೃದ್ಧಿ ಯೋಜನೆಗಳ ಕುರಿತು ಮಾತನಾಡಿದ್ದಾರೆ. 2014ರಲ್ಲಿ ಬೆಂಗಳೂರಿನ ಮೆಟ್ರೋ ಜಾಲ ಕೇವಲ 17 ಕಿ.ಮೀ. ಇತ್ತು. ಇದೀಗ ಅದು 100 ಕಿ.ಮೀ. ಗಡಿ ದಾಟಿದೆ ಎಂದು ಉಲ್ಲೇಖಿಸಿದ ಅವರು, ದೇಶದ ಅಭಿವೃದ್ಧಿಯಲ್ಲಿ ನಾವು ಒಂದರ ಹಿಂದೆ ಒಂದರಂತೆ ಸೆಂಚುರಿ ಬಾರಿಸುತ್ತಿದ್ದೇವೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.
ನವೆಂಬರ್ 13ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ನಗರದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ವಿಸ್ತರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿದರು. ಪಿಂಕ್ ಲೈನ್ ಉದ್ಘಾಟನೆಯಿಂದ ಬೆಂಗಳೂರಿನ ಮೆಟ್ರೋ ಜಾಲ 100 ಕಿ.ಮೀ. ಗಡಿ ದಾಟಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದು ಭಾಷಣದಲ್ಲಿ ಪ್ರಸ್ತಾಪಿಸಿದರು.
17 ಕಿ.ಮೀ.ನಿಂದ 100 ಕಿ.ಮೀ.ಗೂ ಹೆಚ್ಚು ವಿಸ್ತರಣೆ
ಬೆಂಗಳೂರಿನ ಮೆಟ್ರೋ ಅಭಿವೃದ್ಧಿಯನ್ನ ಪ್ರಸ್ತಾಪಿಸಿದ ಮೋದಿ, 2014ರಲ್ಲಿ ನಗರದ ಮೆಟ್ರೋ ಮಾರ್ಗದ ಉದ್ದ 17 ಕಿ.ಮೀ. ಮಾತ್ರವಿತ್ತು. ಆದರೆ ಇದೀಗ ಅದು 100 ಕಿ.ಮೀ.ಗೂ ಅಧಿಕವಾಗಿದೆ ಎಂದು ಹೇಳಿದರು. ಪಿಂಕ್ ಲೈನ್‌ನ ಹೊಸ ಮಾರ್ಗ ಸೇರ್ಪಡೆಯಿಂದ ಬೆಂಗಳೂರಿನ ಮೆಟ್ರೋ ಜಾಲ ಮತ್ತಷ್ಟು ವಿಸ್ತಾರಗೊಂಡಿದೆ. ಈ ಮೂಲಕ ದೆಹಲಿ ಬಳಿಕ ದೇಶದ ಎರಡನೇ ಅತಿದೊಡ್ಡ ಕಾರ್ಯಾಚರಣೆಯಲ್ಲಿರುವ ಮೆಟ್ರೋ ಜಾಲ ಎಂಬ ಸ್ಥಾನವನ್ನ ಬೆಂಗಳೂರು ಪಡೆದುಕೊಂಡಿದೆ.
ಪಿಂಕ್ ಲೈನ್‌ನ ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ. ಉದ್ದದ ಎತ್ತರಿಸಿದ ಮಾರ್ಗವನ್ನ ಸುಮಾರು ₹3,470 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ರಧಾನಿ ಮೋದಿ ಅವರು ಈ ಮಾರ್ಗಕ್ಕೆ ಚಾಲನೆ ನೀಡಿದ ಬಳಿಕ ತಾವರೆಕೆರೆ ನಿಲ್ದಾಣದಿಂದ ಐಐಎಂ ಬೆಂಗಳೂರು ನಿಲ್ದಾಣದವರೆಗೆ ಮೆಟ್ರೋದಲ್ಲಿ ಪ್ರಯಾಣಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಕರ್ನಾಟಕದಲ್ಲಿ ಅಭಿವೃದ್ಧಿ ಯೋಜನೆಗಳ ಪ್ರಸ್ತಾಪ
ತಮ್ಮ ಭಾಷಣದಲ್ಲಿ ಕರ್ನಾಟಕದಲ್ಲಿ ಕೈಗೊಳ್ಳಲಾಗುತ್ತಿರುವ ವಿವಿಧ ಮೂಲಸೌಕರ್ಯ ಯೋಜನೆಗಳ ಬಗ್ಗೆಯೂ ಪ್ರಧಾನಿ ಮೋದಿ ಮಾತನಾಡಿದರು. ರಾಜ್ಯದಲ್ಲಿ ರೈಲ್ವೆ ಸಂಪರ್ಕ ವ್ಯವಸ್ಥೆಯ ಸುಧಾರಣೆ, ವಿದ್ಯುತ್ ಪ್ರಸರಣ, ನವೀಕರಿಸಬಹುದಾದ ಇಂಧನ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನ ಉಲ್ಲೇಖಿಸಿದರು. ಕರ್ನಾಟಕದಲ್ಲಿ ಒಟ್ಟಾರೆ ₹1.15 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಮೂಲಸೌಕರ್ಯ ಯೋಜನೆಗಳ ಕುರಿತು ಪ್ರಧಾನಿ ಪ್ರಸ್ತಾಪಿಸಿರುವುದಾಗಿ ವರದಿಯಾಗಿದೆ.
ರೈಲ್ವೆ ಕ್ಷೇತ್ರದಲ್ಲಿ ಬಜೆಟ್ ಹಂಚಿಕೆ ಹೆಚ್ಚಳ, ಅಮೃತ್ ಭಾರತ್ ರೈಲು ನಿಲ್ದಾಣಗಳ ಅಭಿವೃದ್ಧಿ, ರೈಲು ಮಾರ್ಗಗಳ ದ್ವಿಪಥ ಕಾಮಗಾರಿ ಹಾಗೂ ಹೊಸ ವಂದೇ ಭಾರತ್ ರೈಲು ಸೇವೆಗಳ ಬಗ್ಗೆಯೂ ಮಾತನಾಡಿದ್ದಾರೆ. ಬೆಂಗಳೂರು-ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಕರಾವಳಿ ಕರ್ನಾಟಕ ಮತ್ತು ಗೋವಾ ನಡುವಿನ ಸಂಪರ್ಕಕ್ಕೆ ಹೊಸ ಆಯಾಮ ನೀಡಲಿದೆ ಎಂಬುದು ಕಾರ್ಯಕ್ರಮದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.
ಇಂಧನ ಭದ್ರತೆ ಮತ್ತು ನವೀಕರಿಸಬಹುದಾದ ಇಂಧನಕ್ಕೆ ಒತ್ತು
ಇಂಧನ ಕ್ಷೇತ್ರದ ಬಗ್ಗೆಯೂ ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ನವೀಕರಿಸಬಹುದಾದ ಇಂಧನ ಉತ್ಪಾದನೆ ಮತ್ತು ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನ ಬಲಪಡಿಸುವ ಅಗತ್ಯವನ್ನ ವಿವರಿಸಿದ್ದಾರೆ. ಕೊಪ್ಪಳ, ಗದಗ ಮತ್ತು ಬೀದರ್ ಪ್ರದೇಶಗಳ ಸೌರ ಹಾಗೂ ನವೀಕರಿಸಬಹುದಾದ ಇಂಧನ ಯೋಜನೆಗಳು ಈ ನಿಟ್ಟಿನಲ್ಲಿ ಮಹತ್ವ ಪಡೆದಿವೆ.
ಇರಾನ್ ಮತ್ತು ಗಲ್ಫ್ ರಾಷ್ಟ್ರಗಳ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ಪರಿಸ್ಥಿತಿಯನ್ನೂ ಅವರು ಉಲ್ಲೇಖಿಸಿದ್ದಾರೆ. ಇಂತಹ ಸನ್ನಿವೇಶದಲ್ಲಿ ದೇಶದ ಇಂಧನ ಭದ್ರತೆಯನ್ನ ಬಲಪಡಿಸುವುದು ಅಗತ್ಯವೆಂಬ ಸಂದೇಶವನ್ನ ನೀಡಿದ್ದಾರೆ. ಸೌರಶಕ್ತಿ ಸೇರಿದಂತೆ ಪರ್ಯಾಯ ಇಂಧನ ಮೂಲಗಳ ಅಭಿವೃದ್ಧಿಯ ಮಹತ್ವವನ್ನ ಪ್ರಸ್ತಾಪಿಸಿದ್ದಾರೆ.
ಮಧ್ಯಮ ವರ್ಗದವರಿಗೂ ಪ್ರಸ್ತಾಪ
ಭಾಷಣದಲ್ಲಿ ಮಧ್ಯಮ ವರ್ಗದ ಜನರಿಗೆ ಸಂಬಂಧಿಸಿದ ವಿಚಾರಗಳನ್ನೂ ಪ್ರಧಾನಿ ಪ್ರಸ್ತಾಪಿಸಿದ್ದಾರೆ. ತೆರಿಗೆ ವಿನಾಯಿತಿ ಮತ್ತು ಜಿಎಸ್‌ಟಿ ವ್ಯವಸ್ಥೆಯ ಸರಳೀಕರಣದಂತಹ ಕ್ರಮಗಳನ್ನ ಉಲ್ಲೇಖಿಸಿದ್ದಾರೆ. ದೇಶದ ಅಭಿವೃದ್ಧಿಯ ಜೊತೆಗೆ ಜನರ ಜೀವನಮಟ್ಟ ಸುಧಾರಿಸುವ ಪ್ರಯತ್ನಗಳ ಬಗ್ಗೆಯೂ ಮಾತನಾಡಿದ್ದಾರೆ. ಒಟ್ನಲ್ಲಿ ಪಿಂಕ್ ಲೈನ್ ಉದ್ಘಾಟನೆಯ ಬಳಿಕದ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಬೆಂಗಳೂರಿನ ಮೆಟ್ರೋ ಜಾಲದ ವಿಸ್ತರಣೆ, ಕರ್ನಾಟಕದ ರೈಲ್ವೆ ಮತ್ತು ಇಂಧನ ಯೋಜನೆಗಳು, ದೇಶದ ಇಂಧನ ಭದ್ರತೆ ಹಾಗೂ ಮಧ್ಯಮ ವರ್ಗಕ್ಕೆ ಸಂಬಂಧಿಸಿದ ಕ್ರಮಗಳನ್ನ ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.