ಬಾಗಲಕೋಟೆ: ತಮಗೆ ಅಕ್ಷರ ಕಲಿಸಿ, ಸನ್ಮಾರ್ಗ ತೋರಿದ ನೆಚ್ಚಿನ ಶಿಕ್ಷಕ ಇನ್ಮುಂದೆ ಶಾಲೆಗೆ ಬರುವುದಿಲ್ಲ, ತರಗತಿಯಲ್ಲಿ ಪಾಠ ಮಾಡುವುದಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲಾಗದೆ ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು ಕಣ್ಣೀರಿಟ್ಟ ಹೃದಯವಿದ್ರಾವಕ ಘಟನೆ ಬಾಗಲಕೋಟೆ ತಾಲೂಕಿನ ನೀಲಾನಗರ ತಾಂಡಾದಲ್ಲಿ ನಡೆದಿದೆ. ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾದರಿ ಶಿಕ್ಷಕ ಬಸವರಾಜ ರಾಮಪ್ಪ ಶೆಟ್ಟಿ (53) ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದು, ಅವರ ಪಾರ್ಥಿವ ಶರೀರಕ್ಕೆ ಶಾಲಾ ಮಕ್ಕಳು ಪುಷ್ಪವೃಷ್ಟಿ ಮಾಡಿ ನೋವಿನ ವಿದಾಯ ಹೇಳಿದ್ದಾರೆ.
ಬಾಗಲಕೋಟೆ ತಾಲೂಕಿನ ನೀಲಾನಗರ ತಾಂಡಾದ ಸರ್ಕಾರಿ ಹೆಣ್ಣುಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ ಬಸವರಾಜ ರಾಮಪ್ಪ ಶೆಟ್ಟಿ ಅವರು ಕೆಲ ದಿನಗಳ ಹಿಂದೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಬಾಗಲಕೋಟೆ ಜಿಲ್ಲೆಯ ಶಿರೂರ ಸಮೀಪ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಇವರ ಬೈಕ್‌ಗೆ ಭೀಕರವಾಗಿ ಡಿಕ್ಕಿ ಹೊಡೆದಿತ್ತು. ಅಪಘಾತದ ರಭಸಕ್ಕೆ ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಬಸವರಾಜ ಅವರನ್ನು ತಕ್ಷಣವೇ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ವಾರಗಳಿಂದ ಐಸಿಯುನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಶುಕ್ರವಾರ ಬೆಳಗಾವಿಯಿಂದ ಶಿಕ್ಷಕ ಬಸವರಾಜ ಶೆಟ್ಟಿ ಅವರ ಪಾರ್ಥಿವ ಶರೀರವನ್ನು ನೀಲಾನಗರ ತಾಂಡಾಗೆ ತರಲಾಯಿತು. ಶವವಾಹನ (ಅಂಬುಲೆನ್ಸ್) ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಇಡೀ ಊರಿನಲ್ಲಿ ಶೋಕಸಾಗರವೇ ಮುಸುಕಿತ್ತು. ತಾಂಡಾದಲ್ಲಿ ಅಂತಿಮ ಯಾತ್ರೆ ಮೆರವಣಿಗೆಯ ರೂಪದಲ್ಲಿ ಸಾಗುವಾಗ, ತಾವೂ ಪ್ರೀತಿಸುತ್ತಿದ್ದ ಮುಖ್ಯಗುರುಗಳನ್ನು ಕೊನೆಯ ಬಾರಿಗೆ ನೋಡಲು ಶಾಲಾ ಮಕ್ಕಳು ರಸ್ತೆಯ ಇಕ್ಕೆಲಗಳಲ್ಲಿ ಸಾಲಾಗಿ ನಿಂತಿದ್ದರು. ಅಂಬುಲೆನ್ಸ್ ಶಾಲಾ ಆವರಣದ ಹತ್ತಿರ ಬರುತ್ತಿದ್ದಂತೆ ಮಕ್ಕಳು ಕಣ್ಣೀರು ಹಾಕುತ್ತಾ ಪಾರ್ಥಿವ ಶರೀರದ ಮೇಲೆ ಹೂಮಳೆ ಗರೆದು (ಪುಷ್ಪಾರ್ಚನೆ ಮಾಡಿ) ತಮ್ಮ ನೆಚ್ಚಿನ ಗುರುವಿಗೆ ಭಕ್ತಿಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದರು.
ಬಸವರಾಜ ಶೆಟ್ಟಿ ಅವರು ಕೇವಲ ಶಾಲೆಯ ಮುಖ್ಯಶಿಕ್ಷಕರಾಗಿರಲಿಲ್ಲ, ಬದಲಿಗೆ ಪ್ರತಿಯೊಬ್ಬ ಮಗುವಿನ ಮೇಲೂ ಅಪಾರ ಪ್ರೀತಿ ಇಟ್ಟುಕೊಂಡು, ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ ಗುಣಸಂಪನ್ನರಾಗಿದ್ದರು. ಅವರ ಆಡಳಿತ ವೈಖರಿ ಮತ್ತು ವಿದ್ಯಾರ್ಥಿಗಳ ಮೇಲಿದ್ದ ಕಾಳಜಿಯಿಂದಾಗಿ ಅವರು ಇಡೀ ಗ್ರಾಮಕ್ಕೆ ನೆಚ್ಚಿನ ಶಿಕ್ಷಕರಾಗಿದ್ದರು. ಶಾಲಾ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದಾಗ, ಶಿಕ್ಷಣ ಇಲಾಖೆಯ ಹಿರಿಯ ಮೇಲಾಧಿಕಾರಿಗಳು, ಸಹೋದ್ಯೋಗಿ ಶಿಕ್ಷಕರು, ಗ್ರಾಮಸ್ಥರು ಹಾಗೂ ನೂರಾರು ವಿದ್ಯಾರ್ಥಿಗಳು ಅಂತಿಮ ನಮನ ಸಲ್ಲಿಸಿದರು. ಮೃತರ ಕುಟುಂಬಸ್ಥರ ಹಾಗೂ ಶಾಲಾ ಮಕ್ಕಳ ರೋದನ ಮುಗಿಲು ಮುಟ್ಟಿದ್ದು, ನೆರೆದಿದ್ದವರ ಕಣ್ಣಾಲಿಗಳನ್ನು ಒದ್ದೆಯಾಗಿಸಿತು.
ಬಳಿಕ ನೀಲಾನಗರ ತಾಂಡಾದಲ್ಲಿಯೇ ಸಕಲ ಗೌರವಗಳೊಂದಿಗೆ ಬಸವರಾಜ ರಾಮಪ್ಪ ಶೆಟ್ಟಿ ಅವರ ಅಂತ್ಯಕ್ರಿಯೆ ನೆರವೇರಿತು. ಒಬ್ಬ ಉತ್ತಮ ಶಿಕ್ಷಕನನ್ನು ಕಳೆದುಕೊಂಡು ಶಾಲೆಯ ಆವರಣ ಮತ್ತು ನೀಲಾನಗರ ತಾಂಡಾ ಬಿಕೋ ಎನ್ನುತ್ತಿದೆ.