ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಕುಡಿತಿನಿ ಸಮೀಪದ ಬಳ್ಳಾರಿ ಥರ್ಮಲ್ ವಿದ್ಯುತ್ ಸ್ಥಾವರದಲ್ಲಿ (BTPS) ಭೀಕರ ಅವಘಡ ಸಂಭವಿಸಿದ್ದು, ವೆಲ್ಡಿಂಗ್ ಕೆಲಸ ಮಾಡುತ್ತಿದ್ದ 21 ವರ್ಷದ ಗುತ್ತಿಗೆ ಕಾರ್ಮಿಕನೊಬ್ಬ ದಾರುಣವಾಗಿ ಮೃತಪಟ್ಟಿದ್ದಾನೆ. CHP ವಿಭಾಗದ ಕನ್ವೇಯರ್ ಬೆಲ್ಟ್ ಬಳಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕನ್ವೇಯರ್ ಬೆಲ್ಟ್‌ಗೆ ಸಿಲುಕಿದ ಪರಿಣಾಮ ಕಾರ್ಮಿಕನ ದೇಹ ಛಿದ್ರಛಿದ್ರವಾಗಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಮೃತನನ್ನು ತಿಮ್ಮಲಾಪುರ ಗ್ರಾಮದ ಬಸವರಾಜು ಎಂದು ಗುರುತಿಸಲಾಗಿದೆ. ಕೇವಲ 21 ವರ್ಷದ ಯುವಕನಾಗಿದ್ದ ಬಸವರಾಜು ಕುಟುಂಬದ ಬದುಕಿಗೆ ಆಧಾರವಾಗಿದ್ದ ಎನ್ನಲಾಗಿದೆ. ಕೈತುಂಬಾ ಕನಸುಗಳನ್ನು ಕಟ್ಟಿಕೊಂಡು ದುಡಿಯುತ್ತಿದ್ದ ಯುವಕನ ಸಾವು ತಿಮ್ಮಲಾಪುರ ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕುಡಿತಿನಿಯ BTPS ವಿದ್ಯುತ್ ಸ್ಥಾವರದ CHP ವಿಭಾಗದಲ್ಲಿ ಕನ್ವೇಯರ್ ಬೆಲ್ಟ್ ಸಮೀಪ ಬಸವರಾಜು ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಕನ್ವೇಯರ್ ಬೆಲ್ಟ್‌ಗೆ ಸಿಲುಕಿ ಭೀಕರವಾಗಿ ಮೃತಪಟ್ಟಿದ್ದಾನೆ. ಕಾರ್ಮಿಕನ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತೇ? ಕೆಲಸದ ಸ್ಥಳದಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿತ್ತೇ? ಎಂಬ ಪ್ರಶ್ನೆಗಳು ಇದೀಗ ಎದ್ದಿವೆ.
ಅಪಘಾತಕ್ಕೆ ಸಂಬಂಧಿಸಿದಂತೆ BTPS ಹಾಗೂ KPCLನ ಸುರಕ್ಷತಾ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯವೇ ಕಾರಣ ಎಂದು ಕಾರ್ಮಿಕರ ಸಂಘಟನೆಗಳು ಗಂಭೀರ ಆರೋಪ ಮಾಡಿವೆ. ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿವೆ.
BTPSನ CHP ವಿಭಾಗದಲ್ಲಿ ಈ ಹಿಂದೆಯೂ ಕಾರ್ಮಿಕರ ಸಾವು ಸಂಭವಿಸಿತ್ತು ಎಂಬ ಆರೋಪ ಕೇಳಿಬಂದಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಸುರಕ್ಷತಾ ಕ್ರಮಗಳ ಕೊರತೆಯಿಂದ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ. ಪದೇಪದೆ ಇಂತಹ ದುರ್ಘಟನೆಗಳು ಸಂಭವಿಸುತ್ತಿದ್ದರೂ ಕಾರ್ಮಿಕರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲವೇ ಎಂಬ ಪ್ರಶ್ನೆಯನ್ನು ಸಂಘಟನೆಗಳು ಮುಂದಿಟ್ಟಿವೆ.
ಕಾರ್ಮಿಕರು ಪ್ರತಿದಿನ ಜೀವದ ಹಂಗು ತೊರೆದು ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲಸದ ಸ್ಥಳಗಳಲ್ಲಿ ಸೂಕ್ತ ಸುರಕ್ಷತಾ ವ್ಯವಸ್ಥೆ, ಮೇಲ್ವಿಚಾರಣೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ಕಾರ್ಮಿಕರ ಜೀವಕ್ಕೆ ಬೆಲೆ ನೀಡದಿದ್ದರೆ ಇಂತಹ ದುರಂತಗಳು ಮರುಕಳಿಸುವ ಆತಂಕವಿದೆ ಎಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಯುವ ಕಾರ್ಮಿಕ ಬಸವರಾಜು ಸಾವಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಗುತ್ತಿಗೆ ಕಾರ್ಮಿಕರ ಸಂಘಟನೆ ಪ್ರತಿಭಟನೆ ನಡೆಸಿದೆ. BTPSನ ನಾರ್ತ್ ಗೇಟ್ ಬಳಿ ಜಮಾಯಿಸಿದ ಕಾರ್ಮಿಕರು ಮೃತನ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕು ಹಾಗೂ ಕುಟುಂಬದ ಒಬ್ಬ ಸದಸ್ಯರಿಗೆ ಕಾಯಂ ಉದ್ಯೋಗ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ಮೃತ ಕಾರ್ಮಿಕನ ಕುಟುಂಬಕ್ಕೆ ತಕ್ಷಣ ಸೂಕ್ತ ಪರಿಹಾರ ಒದಗಿಸುವುದರ ಜತೆಗೆ, ಇಂತಹ ಘಟನೆಗಳು ಮರುಕಳಿಸದಂತೆ ಕಾರ್ಮಿಕರ ಸುರಕ್ಷತೆಗೆ ವಿಶೇಷ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಈ ಸಂಬಂಧ ಮೃತನ ಪತ್ನಿ ಜಯಲಕ್ಷ್ಮಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಗುತ್ತಿಗೆದಾರ ಸಾಗರ್ ಸೇರಿದಂತೆ ಐವರ ವಿರುದ್ಧ ಕುಡಿತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಗುತ್ತಿಗೆದಾರ ಸಾಗರ್ ಜೊತೆಗೆ ಎಸ್‌ಇ ಪರಮೇಶ್ವರಪ್ಪ, ಎಚ್‌ಆರ್‌ಡಿ ಅಧಿಕಾರಿ ರಾಜು, ಎಇಇ ಗಿರೀಶ್ ಹಾಗೂ ಸೈಟ್ ಸೂಪರ್‌ವೈಸರ್ ಲಕ್ಷ್ಮೀಕಾಂತ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.