ಬೆಳಗಾವಿ: ಕಬ್ಬು ಬೆಳೆಗಾರರ ಸುದೀರ್ಘ ಮತ್ತು ಸತತ ಹೋರಾಟಕ್ಕೆ ಕೊನೆಗೂ ಐತಿಹಾಸಿಕ ಯಶಸ್ಸು ಸಿಕ್ಕಿದ್ದು, ಕಬ್ಬಿಗೆ ಪ್ರತಿ ಟನ್‌ಗೆ 3,600 ರೂಪಾಯಿ ದರ ನಿಗದಿಯಾಗುವುದರ ಜೊತೆಗೆ ಸಕ್ಕರೆ ಮಾರಾಟದ ಲಾಭದಲ್ಲಿ ರೈತರಿಗೆ ಶೇಕಡಾ 75ರಷ್ಟು ಪಾಲು ಸಿಗುವ ಒಪ್ಪಂದವಾಗುತ್ತಿದ್ದಂತೆ ಕಬ್ಬು ಬೆಳೆಗಾರರಲ್ಲಿ ಹರ್ಷೋದ್ಗಾರ ಮುಗಿಲು ಮುಟ್ಟಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ರೈತರು ಪಟಾಕಿ ಸಿಡಿಸಿ, ಪರಸ್ಪರ ಗುಲಾಲ್ ಎರಚಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದ್ದಾರೆ.
ಹೌದು.. ಕಳೆದ ಹನ್ನೆರಡು ದಿನಗಳಿಂದ ಗುರ್ಲಾಪುರ ವೇದಿಕೆಯಲ್ಲಿ ಕಬ್ಬಿನ ದರ ಹೆಚ್ಚಳಕ್ಕಾಗಿ ನಿರಂತರ ಹೋರಾಟ ನಡೆದಿತ್ತು. ಒಟ್ಟಾರೆಯಾಗಿ ಕಬ್ಬಿಗೆ ನ್ಯಾಯಯುತ ದರಕ್ಕಾಗಿ ರೈತರು ಕಳೆದ ಎರಡು ತಿಂಗಳಿನಿಂದ ವಿವಿಧ ಹಂತಗಳಲ್ಲಿ ಧ್ವನಿ ಎತ್ತಿದ್ದರು. ರೈತರ ಈ ಹೋರಾಟದ ಬಿಸಿಗೆ ಮಣಿದ ಕಾರ್ಖಾನೆ ಮಾಲೀಕರು ಅಂತಿಮವಾಗಿ ಮಹತ್ವದ ಒಪ್ಪಂದಕ್ಕೆ ಬಂದಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ರೈತ ಮುಖಂಡರು ಮತ್ತು ಕಾರ್ಖಾನೆ ಮಾಲೀಕರ ನಡುವೆ ಮಹತ್ವದ ಒಡಂಬಡಿಕೆ ಏರ್ಪಟ್ಟಿದೆ.
ಈ ಹೊಸ ಒಪ್ಪಂದದ ಪ್ರಕಾರ, ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಮುಖ 'ಪ್ರಾಫಿಟ್ ಶೇರಿಂಗ್' (ಲಾಭಾಂಶ ಹಂಚಿಕೆ) ಸೂತ್ರ ಜಾರಿಗೆ ಬಂದಿದೆ. ಈ ಹಿಂದೆ ಕಾರ್ಖಾನೆಗಳ ಒಟ್ಟು ಆದಾಯದ ಆಧಾರದಲ್ಲಿ ಲಾಭ ಹಂಚಿಕೆ ನಡೆಯುತ್ತಿತ್ತು. ಆದರೆ ಈ ಬಾರಿ ಸಕ್ಕರೆ ಮಾರಾಟದ ಸರಾಸರಿ ಲಾಭದ ಆಧಾರದ ಮೇಲೆ ಶೇಕಡಾ 75ರಷ್ಟು ಭಾಗವನ್ನು ರೈತರಿಗೆ ನೀಡಲು ಮತ್ತು ಉಳಿದ ಶೇಕಡಾ 25ರಷ್ಟು ಭಾಗವನ್ನು ಕಾರ್ಖಾನೆಗಳಿಗೆ ಇಟ್ಟುಕೊಳ್ಳಲು ಒಪ್ಪಿಗೆ ಸೂಚಿಸಲಾಗಿದೆ. ಇದರಿಂದ ಸಕ್ಕರೆ ಮಾರಾಟದ ಬೆಲೆ ಹೆಚ್ಚಾದಂತೆಲ್ಲಾ ರೈತರಿಗೂ ಕೂಡ ಹೆಚ್ಚುವರಿ ಲಾಭ ಸಿಗಲಿದೆ.
ರೈತ ಮುಖಂಡರಾದ ಚೂನಪ್ಪ ಪೂಜಾರಿ ಹಾಗೂ ಶಶಿಕಾಂತ ಗುರೂಜಿ ನೇತೃತ್ವದಲ್ಲಿ ನಡೆದ ಸಭೆಯ ನಂತರ, ಹೋರಾಟದ ಸ್ಥಳದಲ್ಲೇ ರೈತರು ಜಯಘೋಷಗಳನ್ನು ಮೊಳಗಿಸಿದರು. "ರೈತ ಹೋರಾಟಕ್ಕೆ ಜಯವಾಗಲಿ" ಎಂಬ ಘೋಷಣೆಗಳೊಂದಿಗೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕಬ್ಬಿನ ದರ ನಿಗದಿ ಹಾಗೂ ಲಾಭಾಂಶ ಹಂಚಿಕೆಯ ಈ ಒಪ್ಪಂದದ ಬೆನ್ನಲ್ಲೇ ಕಾರ್ಖಾನೆಗಳು ಇಂದಿನಿಂದಲೇ ಕಬ್ಬು ನುರಿಸುವ ಕಾರ್ಯವನ್ನು ಆರಂಭಿಸಲಿವೆ.
ಆದರೂ, ರೈತರ ಸಂಪೂರ್ಣ ಹೋರಾಟ ಇನ್ನೂ ಅಂತ್ಯಗೊಂಡಿಲ್ಲ. ಕಬ್ಬು ಬೆಳೆಗಾರರ ಮತ್ತೊಂದು ಪ್ರಮುಖ ಬೇಡಿಕೆಯಾದ ರಾಜ್ಯ ಸರ್ಕಾರದಿಂದ ಸಿಗಬೇಕಿರುವ ಒಂದು ಸಾವಿರ ರೂಪಾಯಿ ಪ್ರೋತ್ಸಾಹ ಧನದ ವಿಚಾರ ಇನ್ನೂ ಈಡೇರಿಲ್ಲ. ಈ ಹಿನ್ನೆಲೆಯಲ್ಲಿ ರೈತರು ಸರ್ಕಾರದ ವಿರುದ್ಧ ತಮ್ಮ ಧ್ವನಿಯನ್ನು ಮುಂದುವರಿಸಿದ್ದಾರೆ. ಬೆಳಗಾವಿಯಲ್ಲಿ ನಡೆಯಲಿರುವ ಮುಂಬರುವ ಚಳಿಗಾಲದ ಅಧಿವೇಶನದ ಒಳಗಾಗಿ ಸರ್ಕಾರ ಈ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಬೇಕು ಎಂದು ರೈತರು ಕಟ್ಟುನಿಟ್ಟಿನ ಆಗ್ರಹ ಮಾಡಿದ್ದಾರೆ. ಒಂದು ವೇಳೆ ಸರ್ಕಾರ ಈ ಬೇಡಿಕೆಗೆ ಸ್ಪಂದಿಸದಿದ್ದರೆ, ಅಧಿವೇಶನವೇ ನಡೆಯಲು ಬಿಡುವುದಿಲ್ಲ ಎಂದು ತೀವ್ರವಾದ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.
ಒಟ್ಟಾರೆಯಾಗಿ, ಕಬ್ಬಿನ ದರ ಮತ್ತು ಲಾಭಾಂಶದ ಒಪ್ಪಂದದಿಂದ ರೈತರಿಗೆ ಮೊದಲ ಹಂತದ ಜಯ ಸಿಕ್ಕಿದ್ದರೂ, ಸರ್ಕಾರದ ಪ್ರೋತ್ಸಾಹ ಧನದ ಬೇಡಿಕೆ ಈಡೇರುವವರೆಗೂ ಹೋರಾಟದ ಕಾವು ಸಂಪೂರ್ಣವಾಗಿ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಮುಂದಿನ ದಿನ ಇದು ಯಾರ ರೂಪ ಪಡೆಯುತ್ತೆ ಅಂತ ಕಾದು ನೋಡಬೇಕಿದೆ..