SOCIAL MEDIA

Newsletter

PARTNER SITES
Select Language Select State

ಕುಡಿದಿದ್ದು ಒಂದು ಕಪ್ ಟೀ.. ಕಳೆದುಕೊಂಡಿದ್ದು ₹4 ಲಕ್ಷದ ಚಿನ್ನ..!

Bangalore old lady Gold theft: ಬೆಂಗಳೂರಿನಲ್ಲಿ ಸರಗಳ್ಳರ ಹಾವಳಿ ಒಂದೆಡೆಯಾದ್ರೆ, ಮತ್ತೊಂದೆಡೆ ಟೀ ಕುಡಿಸಿ ವೃದ್ಧೆಯ ಚಿನ್ನಾಭರಣ ದೋಚಿರುವ ಆರೋಪ ಕೇಳಿಬಂದಿದೆ.

Written By Ramya. R. Gowda
Published: Oct 01, 2026, 06:12 PM IST | Updated: Oct 01, 2026, 06:18 PM IST
Join

Gold theft: ಬೆಂಗಳೂರಿನಲ್ಲಿ ಸರಗಳ್ಳರ ಹಾವಳಿ ಒಂದೆಡೆಯಾದ್ರೆ, ಮತ್ತೊಂದೆಡೆ ಟೀ ಕುಡಿಸಿ ವೃದ್ಧೆಯ ಚಿನ್ನಾಭರಣ ದೋಚಿರುವ ಆರೋಪ ಕೇಳಿಬಂದಿದೆ. ಬ್ಯಾಟರಾಯನಪುರದ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿ ನೀಡಿದ ಟೀ ಕುಡಿದ ಬಳಿಕ ವೃದ್ಧೆ ಪ್ರಜ್ಞೆ ಕಳೆದುಕೊಂಡಿದ್ದಾರೆ. ಎಚ್ಚರವಾದಾಗ ಬರೋಬ್ಬರಿ ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳುವಾಗಿತ್ತು. ಇತ್ತ ಯಲಹಂಕ ನ್ಯೂ ಟೌನ್‌ನಲ್ಲಿ ವಾಕಿಂಗ್‌ಗೆ ತೆರಳಿದ್ದ ವೃದ್ಧೆಯ ಚಿನ್ನದ ಸರ ಕಿತ್ತು ಇಬ್ಬರು ಕಳ್ಳರು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.

ಮಕ್ಕಳನ್ನು ನೋಡಲು ಮೈಸೂರಿಗೆ ತೆರಳಿದ್ದ ವೃದ್ಧೆ ಚೆನ್ನಮ್ಮಗೆ ಅಪರಿಚಿತ ವ್ಯಕ್ತಿಯೊಬ್ಬ ಟೀ ಕೊಡಿಸಿ ವಂಚಿಸಿರುವ ಆರೋಪ ಕೇಳಿಬಂದಿದೆ. ಸೆಪ್ಟೆಂಬರ್ 26ರಂದು ಬೆಳಗ್ಗೆ ದೊಡ್ಡಬಳ್ಳಾಪುರದಿಂದ ಬಂದಿದ್ದ ಚೆನ್ನಮ್ಮ, ಬ್ಯಾಟರಾಯನಪುರದ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಟಿಕೆಟ್ ಪಡೆದು ಬಸ್‌ನಲ್ಲಿ ಕುಳಿತಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಪಕ್ಕದಲ್ಲಿ ಬ್ಯಾಗ್ ಇಟ್ಟುಕೊಳ್ಳುವಂತೆ ಹೇಳಿ ಅಲ್ಲಿಂದ ತೆರಳಿದ್ದಾನೆ. ಬಳಿಕ ಎರಡು ಕಪ್ ಟೀ ತಂದು ಚೆನ್ನಮ್ಮ ಅವರಿಗೆ ಕುಡಿಯಲು ನೀಡಿದ್ದಾನೆ. ಮೊದಲು ನಿರಾಕರಿಸಿದರೂ ಪುಸಲಾಯಿಸಿ ಟೀ ಕುಡಿಸಿದ್ದಾನೆ ಎನ್ನಲಾಗಿದೆ. ಟೀ ಕುಡಿದ ಬಳಿಕ ಚೆನ್ನಮ್ಮ ಪ್ರಜ್ಞೆ ಕಳೆದುಕೊಂಡಿದ್ದಾರೆ.


ಸುಮಾರು ಮೂರು ಗಂಟೆಗಳ ಬಳಿಕ ಎಚ್ಚರವಾದಾಗ ಬಸ್ ನಿಲ್ದಾಣದ ಚೇರ್ ಮೇಲೆ ಕುಳಿತಿದ್ದ ಚೆನ್ನಮ್ಮಗೆ ತಾವು ಮೋಸ ಹೋಗಿರುವುದು ಗೊತ್ತಾಗಿದೆ. ಮೈಮೇಲಿದ್ದ ಸುಮಾರು ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಾಣೆಯಾಗಿತ್ತು. ಗಾಬರಿಗೊಂಡು ಕುಸಿದು ಬಿದ್ದ ವೃದ್ಧೆಯನ್ನು ಸ್ಥಳೀಯರು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಮಗನಿಗೆ ಮಾಹಿತಿ ನೀಡಲಾಗಿದ್ದು, ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಅಪರಿಚಿತ ವ್ಯಕ್ತಿಯ ಓಡಾಟ ಕಂಡುಬಂದಿದೆ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇತ್ತ ಬೆಂಗಳೂರಿನ ಯಲಹಂಕ ನ್ಯೂ ಟೌನ್‌ನಲ್ಲೂ ವೃದ್ಧೆಯೊಬ್ಬರಿಗೆ ಸರಗಳ್ಳರು ಶಾಕ್ ನೀಡಿದ್ದಾರೆ. ಎರಡು ದಿನಗಳ ಹಿಂದೆ ಬೆಳಗಿನ ಜಾವ ಸುಮಾರು ಐದು ಗಂಟೆ ವೇಳೆಗೆ 75 ವರ್ಷದ ಚನ್ನಮ್ಮ ವಾಕಿಂಗ್‌ಗೆ ತೆರಳಿದ್ದರು. ಈ ವೇಳೆ ಬೈಕ್‌ನಲ್ಲಿ ಸುತ್ತಾಡುತ್ತಿದ್ದ ಇಬ್ಬರು ಸರಗಳ್ಳರು ಒಂಟಿಯಾಗಿ ತೆರಳುತ್ತಿದ್ದ ವೃದ್ಧೆಯನ್ನು ಟಾರ್ಗೆಟ್ ಮಾಡಿದ್ದಾರೆ. ಮುಂದೆ ಹೋಗಿ ಬೈಕ್ ನಿಲ್ಲಿಸಿ, ಕ್ಷಣಾರ್ಧದಲ್ಲೇ ಸುಮಾರು 30 ಗ್ರಾಂ ತೂಕದ ಚಿನ್ನದ ಸರ ಕಿತ್ತು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.


ಬೆಂಗಳೂರಿನಲ್ಲಿ ಒಂದೆಡೆ ಅಪರಿಚಿತರು ನೀಡುವ ಆಹಾರ, ಪಾನೀಯ ಸ್ವೀಕರಿಸುವಾಗ ಎಚ್ಚರಿಕೆ ವಹಿಸುವ ಅಗತ್ಯವಿದ್ದರೆ, ಮತ್ತೊಂದೆಡೆ ಬೆಳಗಿನ ಜಾವ ಒಂಟಿಯಾಗಿ ತೆರಳುವ ವೃದ್ಧರು ಸರಗಳ್ಳರ ಟಾರ್ಗೆಟ್ ಆಗುತ್ತಿದ್ದಾರೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಎರಡೂ ಪ್ರಕರಣಗಳ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES