SOCIAL MEDIA

Newsletter

PARTNER SITES
Select Language Select State

ರಾಜ್ಯ ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರ ರಣಕಹಳೆ: ₹15 ಸಾವಿರ ಗೌರವಧನಕ್ಕಾಗಿ ಪಟ್ಟು!

ಮಾಸಿಕ ಗೌರವಧನವನ್ನ 5,000 ರೂ.ಗಳಿಂದ 15,000 ರೂ.ಗೆ ಹೆಚ್ಚಿಸುವುದು ಸೇರಿದಂತೆ ಏಳು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಸಾವಿರಾರು ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಬಾಕಿ ಪ್ರೋತ್ಸಾಹಧನ ಬಿಡುಗಡೆ, 5 ಲಕ್ಷ ರೂ. ನಿವೃತ್ತಿ ಇಡಿಗಂಟು ಹಾಗೂ ಹೆರಿಗೆ ರಜೆ ಸೇರಿದಂತೆ ಹಲವು ಸೌಲಭ್ಯಗಳಿಗೆ ಆಗ್ರಹಿಸಿದ್ದಾರೆ. ಸರ್ಕಾರದಿಂದ ಲಿಖಿತ ಆದೇಶ ಹೊರಬೀಳುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

Written By Puttaraj K Alur
Published: Nov 18, 2026, 12:01 IST | Updated: Nov 18, 2026, 13:14 IST
Image Credit: ASHA Workers Protest:
Join

ASHA Workers Protest: ಮಾಸಿಕ ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ರಾಜ್ಯದ ಸಾವಿರಾರು ಆಶಾ ಕಾರ್ಯಕರ್ತೆಯರು ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. ತಮ್ಮ ಬೇಡಿಕೆಗಳಿಗೆ ಸರ್ಕಾರದಿಂದ ಸೂಕ್ತ ಸ್ಪಂದನೆ ದೊರೆಯುವವರೆಗೆ ಹೋರಾಟ ಮುಂದುವರಿಸುವುದಾಗಿ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.

8 ಸಾವಿರ ರೂ. ಗೌರವಧನಕ್ಕೆ ಅಸಮಾಧಾನ

ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಭಾಗವಾಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ಜನರು ಮತ್ತು ಆರೋಗ್ಯ ಇಲಾಖೆಯ ನಡುವಿನ ಪ್ರಮುಖ ಸಂಪರ್ಕ ಸೇತುವೆಯಾಗಿದ್ದಾರೆ. ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳ ಆರೈಕೆ, ಲಸಿಕಾ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಸಾಂಕ್ರಾಮಿಕ ರೋಗಗಳ ನಿಯಂತ್ರಣದಂತಹ ಜವಾಬ್ದಾರಿಗಳನ್ನ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳನ್ನ ಜನರಿಗೆ ತಲುಪಿಸುವಲ್ಲಿಯೂ ಇವರ ಸೇವೆ ಮಹತ್ವದ್ದಾಗಿದೆ.

ಇಷ್ಟೆಲ್ಲಾ ಕೆಲಸಗಳನ್ನ ನಿರ್ವಹಿಸುತ್ತಿದ್ದರೂ ತಮ್ಮ ಸೇವೆಗೆ ತಕ್ಕಂತಹ ವೇತನ ಅಥವಾ ಗೌರವಧನ ದೊರೆಯುತ್ತಿಲ್ಲ ಎಂಬುದು ಪ್ರತಿಭಟನಾಕಾರರ ಪ್ರಮುಖ ಅಸಮಾಧಾನವಾಗಿದೆ. ಪ್ರಸ್ತುತ ತಿಂಗಳಿಗೆ 3,000 ರೂ. ಹಾಗೂ 5,000 ರೂ.ಗಳ ಎರಡು ಭಾಗಗಳ ಗೌರವಧನ ಸೇರಿ ಒಟ್ಟು 8,000 ರೂ. ದೊರೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈ ಮೊತ್ತವನ್ನ ಹೆಚ್ಚಿಸಿ ಗೌರವಯುತ ಜೀವನ ನಡೆಸಲು ಅನುಕೂಲವಾಗುವಂತಹ ನಿಶ್ಚಿತ ಮಾಸಿಕ ಪಾವತಿ ವ್ಯವಸ್ಥೆ ಜಾರಿಗೆ ತರಬೇಕೆಂದು ಆಗ್ರಹಿಸಿದ್ದಾರೆ.

ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಾಸಿಕ 10,000 ರೂ. ಗೌರವಧನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಆ ಭರವಸೆ ಇನ್ನೂ ಸಂಪೂರ್ಣವಾಗಿ ಈಡೇರಿಲ್ಲ ಎಂಬುದು ಸಂಘಟನೆಯ ಅಳಲಾಗಿದೆ. ಮತ್ತೊಂದೆಡೆ ಕೇಂದ್ರ ಸರ್ಕಾರದಿಂದ ದೊರೆಯಬೇಕಾದ ಪ್ರೋತ್ಸಾಹಧನ ಕೂಡ ನಿಗದಿತ ಸಮಯಕ್ಕೆ ಬಿಡುಗಡೆಯಾಗದೆ ಮೂರು ಅಥವಾ ನಾಲ್ಕು ತಿಂಗಳಿಗೊಮ್ಮೆ ಪಾವತಿಯಾಗುತ್ತಿದೆ. ಇದರಿಂದ ಆರ್ಥಿಕ ಸಮಸ್ಯೆ ಎದುರಿಸುವಂತಾಗಿದೆ ಎಂದು ಕಾರ್ಯಕರ್ತೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

15 ಸಾವಿರ ರೂ. ನಿಶ್ಚಿತ ಗೌರವಧನಕ್ಕೆ ಆಗ್ರಹ

ಪ್ರಸ್ತುತ ನೀಡಲಾಗುತ್ತಿರುವ 5,000 ರೂ. ಗೌರವಧನವನ್ನ ಕನಿಷ್ಠ 15,000 ರೂ. ನಿಶ್ಚಿತ ಮಾಸಿಕ ಗೌರವಧನವನ್ನಾಗಿ ಹೆಚ್ಚಿಸಬೇಕು ಎಂಬುದು ಹೋರಾಟಗಾರ್ತಿಯರ ಪ್ರಮುಖ ಬೇಡಿಕೆಯಾಗಿದೆ. ಇದರ ಜೊತೆಗೆ ಹಲವು ತಿಂಗಳುಗಳಿಂದ ಬಾಕಿ ಉಳಿದಿರುವ ಪ್ರೋತ್ಸಾಹಧನ ಹಾಗೂ ಇತರ ಪಾವತಿಗಳನ್ನ ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಸೇವೆಯಿಂದ ನಿವೃತ್ತಿಯಾಗುವವರಿಗೆ 5 ಲಕ್ಷ ರೂ. ನಿವೃತ್ತಿ ಇಡಿಗಂಟು ನೀಡಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ. ಉತ್ತಮ ಗುಣಮಟ್ಟದ ಮೊಬೈಲ್ ಫೋನ್‌ಗಳನ್ನ ಒದಗಿಸುವುದರೊಂದಿಗೆ ಅವುಗಳ ಬಳಕೆಗೆ ಪ್ರತ್ಯೇಕ ರೀಚಾರ್ಜ್ ಭತ್ಯೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಆಶಾ ಕಾರ್ಯಕರ್ತೆಯರ ಪ್ರಮುಖ ಏಳು ಬೇಡಿಕೆಗಳು

ಪ್ರತಿಭಟನೆಯಲ್ಲಿ ಸಂಘಟನೆಯ ವತಿಯಿಂದ ಹಲವು ಪ್ರಮುಖ ಬೇಡಿಕೆಗಳನ್ನ ಸರ್ಕಾರದ ಮುಂದಿಡಲಾಗಿದೆ.

1. ಪ್ರಸ್ತುತ ಇರುವ ಗೌರವಧನವನ್ನ ಹೆಚ್ಚಿಸಿ ಪ್ರತಿ ತಿಂಗಳು 15,000 ರೂ. ನಿಶ್ಚಿತ ಮಾಸಿಕ ಗೌರವಧನ ನೀಡಬೇಕು.
2. ಉತ್ತಮ ಗುಣಮಟ್ಟದ ಮೊಬೈಲ್ ಫೋನ್‌ಗಳನ್ನ ಒದಗಿಸುವುದರ ಜೊತೆಗೆ ರೀಚಾರ್ಜ್‌ಗಾಗಿ ಪ್ರತ್ಯೇಕ ಭತ್ಯೆ ನೀಡಬೇಕು.
3. ಆರು ತಿಂಗಳ ವೇತನ ಸಹಿತ ಹೆರಿಗೆ ರಜೆಯನ್ನ ಮಂಜೂರು ಮಾಡಬೇಕು.
4. ಆರೋಗ್ಯ ಇಲಾಖೆಗೆ ಸಂಬಂಧಪಡದ ಕೆಲಸಗಳನ್ನ ಇವರ ಮೇಲೆ ಹೇರಬಾರದು. ಇಲಾಖೆಯ ವ್ಯಾಪ್ತಿಗೆ ಬಾರದ ಕಾರ್ಯಗಳಿಂದ ಮುಕ್ತಗೊಳಿಸಬೇಕು.
5. 2025ರ ಫೆಬ್ರವರಿ 25ರಿಂದ ಸೇವೆಯಿಂದ ಕೈಬಿಡಲಾಗಿರುವ ಆಶಾ ಕಾರ್ಯಕರ್ತೆಯರ ಫೆಸಿಲಿಟೇಟರ್‌ಗಳನ್ನ ಸೂಕ್ತ ಗೌರವಧನದೊಂದಿಗೆ ಪುನಃ ನೇಮಕ ಮಾಡಿಕೊಳ್ಳಬೇಕು.
6. ಹಲವು ತಿಂಗಳುಗಳಿಂದ ಬಾಕಿ ಉಳಿದಿರುವ ಗೌರವಧನ ಮತ್ತು ಇತರ ಪಾವತಿಗಳನ್ನ ತಕ್ಷಣ ಬಿಡುಗಡೆ ಮಾಡಬೇಕು.
7. 2024-25ನೇ ಸಾಲಿನ ಹೆಚ್ಚುವರಿ ಮಾಸಿಕ 1,500 ರೂ. ಪ್ರೋತ್ಸಾಹಧನ ಸೇರಿದಂತೆ ಬಾಕಿ ಇರುವ ಎಲ್ಲಾ ಮೊತ್ತಗಳನ್ನೂ ಪಾವತಿಸಬೇಕು.

ಮಕ್ಕಳೊಂದಿಗೆ ಬೆಂಗಳೂರಿಗೆ ಆಗಮಿಸಿದ ಪ್ರತಿಭಟನಾಕಾರರು

ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಗ್ರಾಮೀಣ ಪ್ರದೇಶಗಳಿಂದ ಸಾವಿರಾರು ಮಂದಿ ತಮ್ಮ ಪುಟ್ಟ ಮಕ್ಕಳೊಂದಿಗೆ, ಅಗತ್ಯ ವಸ್ತುಗಳು ಮತ್ತು ಲಗೇಜ್‌ಗಳನ್ನ ಹೊತ್ತುಕೊಂಡು ಬೆಂಗಳೂರಿಗೆ ಆಗಮಿಸಿದ್ದಾರೆ. ಫ್ರೀಡಂ ಪಾರ್ಕ್‌ನಲ್ಲಿ ಟೆಂಟ್‌ಗಳನ್ನ ನಿರ್ಮಿಸಿಕೊಂಡು ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಕೊರೆಯುವ ಚಳಿಯನ್ನೂ ಲೆಕ್ಕಿಸದೆ ರಸ್ತೆ ಬದಿಯಲ್ಲಿ ರಾತ್ರಿ ಕಳೆಯುತ್ತಾ ತಮ್ಮ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸಿದ್ದಾರೆ.

ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗವಹಿಸಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಪ್ರಾಥಮಿಕ ಆರೋಗ್ಯ ಸೇವೆಗಳ ಮೇಲೆ ವ್ಯತ್ಯಯ ಉಂಟಾಗಿದೆ. ಸಾಮಾನ್ಯವಾಗಿ ಜನರ ಆರೋಗ್ಯ ಸಂಬಂಧಿತ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುತ್ತಿದ್ದವರು ಇದೀಗ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ರಾಜಧಾನಿಯಲ್ಲಿ ಬೀಡುಬಿಟ್ಟಿದ್ದಾರೆ.

ಲಿಖಿತ ಆದೇಶ ಬರುವವರೆಗೂ ಹೋರಾಟ ನಿಲ್ಲದು

ಪ್ರತಿಭಟನಾ ಸ್ಥಳಕ್ಕೆ ಆರೋಗ್ಯ ಸಚಿವರು ಭೇಟಿ ನೀಡಿ ಕಾರ್ಯಕರ್ತೆಯರ ಸಮಸ್ಯೆ ಹಾಗೂ ಬೇಡಿಕೆಗಳನ್ನ ಆಲಿಸಿದ್ದಾರೆ. ಈ ವಿಷಯಗಳನ್ನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ಕೇವಲ ಮೌಖಿಕ ಭರವಸೆಯಿಂದ ಹೋರಾಟವನ್ನ ಅಂತ್ಯಗೊಳಿಸಲು ಸಂಘಟನೆ ಸಿದ್ಧವಿಲ್ಲ.

ಸರ್ಕಾರದಿಂದ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸ್ಪಷ್ಟವಾದ ಲಿಖಿತ ಆದೇಶ ಹೊರಬರುವವರೆಗೂ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿಯನ್ನ ಹಿಂಪಡೆಯುವುದಿಲ್ಲವೆಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಗೌರವಧನ ಹೆಚ್ಚಳ, ಬಾಕಿ ಪಾವತಿ, ನಿವೃತ್ತಿ ಸೌಲಭ್ಯ ಸೇರಿದಂತೆ ಆಶಾ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಗಳಿಗೆ ಸರ್ಕಾರ ಯಾವ ರೀತಿಯ ನಿರ್ಧಾರ ಕೈಗೊಳ್ಳಲಿದೆ ಎಂಬುದರ ಮೇಲೆ ಮುಂದಿನ ಬೆಳವಣಿಗೆಗಳು ಅವಲಂಬಿತವಾಗಿವೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES