ದೇವನಹಳ್ಳಿ: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡುವಾಗ ಭಾರಿ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಗುವಾಹಟಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನವೊಂದು ಲ್ಯಾಂಡ್ ಆಗುವ ಸಂದರ್ಭದಲ್ಲಿ ಅದರ ರೆಕ್ಕೆ ರನ್‌ವೇಗೆ ತಗಲಿದ್ದು, ಪೈಲಟ್‌ನ ಸಮಯಪ್ರಜ್ಞೆಯಿಂದಾಗಿ ನೂರಾರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಧ್ಯಾಹ್ನ ಸುಮಾರು 1:34ರ ವೇಳೆಗೆ ಈ ಘಟನೆ ನಡೆದಿದೆ. ಗುವಾಹಟಿಯಿಂದ ಹೊರಟಿದ್ದ ಇಂಡಿಗೋ ಸಂಸ್ಥೆಯ '6E 6542' ವಿಮಾನವು ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಲ್ಯಾಂಡಿಂಗ್‌ಗೆ ಸಜ್ಜಾಗುತ್ತಿತ್ತು. ಈ ವೇಳೆ ಏಕಾಏಕಿ ಬೀಸಿದ ಜೋರಾದ ಗಾಳಿಯ ಒತ್ತಡಕ್ಕೆ ಸಿಲುಕಿ, ವಿಮಾನದ ರನ್‌ವೇ ಸಂಪರ್ಕದಲ್ಲಿ ಸಣ್ಣ ಮಟ್ಟದ ಎಡವಟ್ಟಾಯಿತು. ಲ್ಯಾಂಡಿಂಗ್ ಆಗುವ ಕ್ಷಣದಲ್ಲೇ ವಿಮಾನದ ರೆಕ್ಕೆ ರನ್‌ವೇ ಸ್ಪರ್ಶಿಸಿದೆ.
ಸ್ಥಿತಿ ಕೈತಪ್ಪುತ್ತಿದ್ದಂತೆ ತಕ್ಷಣವೇ ಕಾರ್ಯಪ್ರವೃತ್ತರಾದ ಪೈಲಟ್, ಪರಿಸ್ಥಿತಿಯನ್ನು ಅತ್ಯಂತ ಜಾಣಕ್ಷತೆಯಿಂದ ಹತೋಟಿಗೆ ತಂದರು. ಇದರಿಂದಾಗಿ ವಿಮಾನದಲ್ಲಿದ್ದ 200ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ ಸಿಬ್ಬಂದಿ ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ. ವಿಮಾನ ರನ್‌ವೇನಲ್ಲಿ ಸುರಕ್ಷಿತವಾಗಿ ನಿಂತ ತಕ್ಷಣವೇ ಸಿಬ್ಬಂದಿ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಪೈಲಟ್‌ನ ಸೂಕ್ತ ನಿರ್ಧಾರ ಹಾಗೂ ಸಮಯಪ್ರಜ್ಞೆಗೆ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಘಟನೆ ನಡೆದ ತಕ್ಷಣವೇ ನಿಯಮಾವಳಿಗಳ ಪ್ರಕಾರ (SOP) ಪೈಲಟ್‌ಗಳು ಇಂಡಿಗೋ ವಿಮಾನಯಾನ ಸಂಸ್ಥೆಯ ಉನ್ನತಾಧಿಕಾರಿಗಳಿಗೆ ಸಂಪೂರ್ಣ ವಿವರ ನೀಡಿದ್ದಾರೆ. ಪ್ರಸ್ತುತ ಈ ವಿಮಾನವನ್ನು ತಾಂತ್ರಿಕ ಪರಿಶೀಲನೆಗೆ ಒಳಪಡಿಸಲಾಗಿದ್ದು, ವಿಮಾನಕ್ಕಾದ ಹಾನಿ ಮತ್ತು ಘಟನೆಗೆ ನಿಖರ ಕಾರಣಗಳ ಕುರಿತು ಇಂಡಿಗೋ ಸಂಸ್ಥೆಯ ತಾಂತ್ರಿಕ ತಂಡ ತನಿಖೆ ಮುಂದುವರಿಸಿದೆ.