ಬೆಂಗಳೂರು: ಅಪರಿಚಿತರ ಅತಿ ಆತ್ಮೀಯತೆ ಮತ್ತು ನೀಡುವ ತಿಂಡಿ-ತಿನಿಸುಗಳನ್ನು ನಂಬಿದರೆ ಎಂತಹ ಅಪಾಯ ಕಾದಿರುತ್ತದೆ ಎಂಬುದಕ್ಕೆ ಸಾಕ್ಷಿಯಾಗುವಂತಹ ಬೆಚ್ಚಿಬೀಳಿಸುವ ಘಟನೆಯೊಂದು ರಾಜಧಾನಿಯ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ನಡೆದಿದೆ. ವೃದ್ಧೆಯೊಬ್ಬರಿಗೆ ಕೇವಲ ಒಂದು ಕಪ್ ಟೀನಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಟ್ಟು, ಅವರ ಮೈಮೇಲಿದ್ದ ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಖತರ್ನಾಕ್ ಕಳ್ಳನೊಬ್ಬ ಪರಾರಿಯಾಗಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ವೃದ್ಧೆ ನೀಡಿರುವ ದೂರಿನನ್ವಯ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
ದೊಡ್ಡಬಳ್ಳಾಪುರದ ನಿವಾಸಿಯಾಗಿರುವ ಚೆನ್ನಮ್ಮ (66) ಎಂಬ ವೃದ್ಧೆ ಸೆಪ್ಟೆಂಬರ್ 25ರಂದು ಮೈಸೂರಿನಲ್ಲಿರುವ ತಮ್ಮ ಮಗಳ ಮನೆಗೆ ತೆರಳಲು ನಿರ್ಧರಿಸಿದ್ದರು. ಅದರಂತೆ ದೊಡ್ಡಬಳ್ಳಾಪುರದಿಂದ ಹೊರಟು ಮೈಸೂರು ರಸ್ತೆಯಲ್ಲಿರುವ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಬಂದು ತಲುಪಿದ್ದರು.ಅಲ್ಲಿಂದ ಮೈಸೂರಿಗೆ ಹೋಗುವ ಬಸ್ ಹತ್ತಿ ಕುಳಿತಿದ್ದ ಚೆನ್ನಮ್ಮ ಅವರನ್ನು ಒಬ್ಬರೇ ಇರುವುದನ್ನು ಗಮನಿಸಿದ ಖತರ್ನಾಕ್ ಕಳ್ಳನೊಬ್ಬ, ಪಕ್ಕದಲ್ಲೇ ಬಂದು ಸೀಟ್ ಹಿಡಿದು ಕುಳಿತಿದ್ದಾನೆ.
ಸಲ್ಲದ ಆತ್ಮೀಯತೆ ಪ್ರದರ್ಶಿಸಿದ ಆ ಅಪರಿಚಿತ, "ಅಜ್ಜಿ, ನನ್ನ ಬ್ಯಾಗ್ ಸ್ವಲ್ಪ ನೋಡ್ಕೋತಿರಿ, ಒಂದು ನಿಮಿಷದಲ್ಲಿ ಬಂದೇ" ಎಂದು ನಂಬಿಸಿ ಬಸ್ಸಿನಿಂದ ಕೆಳಗಿಳಿದಿದ್ದಾನೆ.ಕೆಲವೇ ನಿಮಿಷಗಳಲ್ಲಿ ಕೈಯಲ್ಲಿ ಎರಡು ಕಪ್ ಬಿಸಿ ಟೀ ಹಿಡಿದುಕೊಂಡು ವಾಪಸ್ ಬಂದಿದ್ದಾನೆ.
ನೀವು ನಮ್ಮ ತಾಯಿ ಇದ್ದಂತೆ’ ಎಂದು ಡ್ರಾಮಾ!
ತಾನು ತಂದಿದ್ದ ಟೀಯನ್ನು ಚೆನ್ನಮ್ಮ ಅವರಿಗೆ ಕುಡಿಯಲು ನೀಡಿದ್ದಾನೆ. ಆದರೆ, ಅಪರಿಚಿತ ವ್ಯಕ್ತಿ ಕೊಟ್ಟ ಟೀ ಕುಡಿಯಲು ಚೆನ್ನಮ್ಮ ಆರಂಭದಲ್ಲಿ ತೀವ್ರ ಹಿಂದೇಟು ಹಾಕಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ಆ ಚಾಲಾಕಿ ಕಳ್ಳ, "ಅಜ್ಜಿ, ಜೀವನದಲ್ಲಿ ಏನಿದೆ ಹೇಳಿ? ನಿಮ್ಮನ್ನು ನೋಡಿದರೆ ನಂಗೆ ನಮ್ಮ ಅಮ್ಮ ನೆನಪಾಗ್ತಾರೆ, ನೀವು ನಮ್ ತಾಯಿ ಇದ್ದ ಹಾಗೆ, ಕುಡಿಯಿರಿ" ಎಂದು ಕಣ್ಣೀರಿಡುವಂತೆ ನಟಿಸಿ ಡ್ರಾಮಾ ಮಾಡಿದ್ದಾನೆ. ಆತನ ಮಾತುಗಳನ್ನು ನಿಜವೆಂದು ನಂಬಿದ ಅಜ್ಜಿ, ಬೆಳಿಗ್ಗೆ 8 ಗಂಟೆಗೆ ಆತ ಕೊಟ್ಟ ಟೀಯನ್ನು ಕುಡಿದಿದ್ದಾರೆ.
ಟೀ ಕುಡಿದ ಐದೇ ನಿಮಿಷದಲ್ಲಿ ಅದರಲ್ಲಿ ಬೆರೆಸಲಾಗಿದ್ದ ತೀವ್ರ ಮಾದಕ/ನಿದ್ರೆ ಮಾತ್ರೆಯ ಪ್ರಭಾವದಿಂದ ಚೆನ್ನಮ್ಮ ಅರೆಪ್ರಜ್ಞಾವಸ್ಥೆಗೆ ಜಾರಿದ್ದಾರೆ.ವೃದ್ಧೆ ಸಂಪೂರ್ಣವಾಗಿ ಎಚ್ಚರ ತಪ್ಪಿದ್ದನ್ನೇ ಕಾಯುತ್ತಿದ್ದ ಕಳ್ಳ, ಅವರ ಕುತ್ತಿಗೆಯಲ್ಲಿದ್ದ 29 ಗ್ರಾಂ ತೂಕದ ಚಿನ್ನದ ಡಾಲರ್ ಮತ್ತು ಗುಂಡುಗಳಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಸರವನ್ನು ಎಗರಿಸಿ ನೈಸಾಗಿ ಕಾಲ್ಸೀಕಿದ್ದಾನೆ.
ಬೆಳಿಗ್ಗೆ 8 ಗಂಟೆಗೆ ಎಚ್ಚರ ತಪ್ಪಿದ ಚೆನ್ನಮ್ಮ, ಸಂಜೆ 4 ಗಂಟೆಯವರೆಗೂ ಬಸ್ಸಿನಲ್ಲೇ ಅರೆಪ್ರಜ್ಞಾವಸ್ಥೆಯಲ್ಲಿದ್ದರು. ಇದನ್ನು ಗಮನಿಸಿದ ಸ್ಯಾಟಲೈಟ್ ಬಸ್ ನಿಲ್ದಾಣದ ಸಿಬ್ಬಂದಿ ಕೂಡಲೇ ಅವರ ನೆರವಿಗೆ ಬಂದಿದ್ದಾರೆ. ಅಷ್ಟರಲ್ಲಿ ಮೈಮೇಲಿದ್ದ ಚಿನ್ನದ ಸರ ಕಳುವಾಗಿರುವುದು ತಿಳಿದು ವೃದ್ಧೆ ಆಘಾತಕ್ಕೊಳಗಾಗಿದ್ದಾರೆ. ಮೈಸೂರಿಗೆ ಹೋಗಲಾಗದೆ ಅಸಹಾಯಕರಾದ ಅವರು, ಸಿಬ್ಬಂದಿ ನೆರವಿನಿಂದ ಮಗನಿಗೆ ಕರೆ ಮಾಡಿ ವಿಷಯ ತಿಳಿಸಿ ವಾಪಸ್ ದೊಡ್ಡಬಳ್ಳಾಪುರಕ್ಕೆ ತೆರಳಿದ್ದಾರೆ.
ಬಳಿಕ ಘಟನೆ ನಡೆದ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಸ್ಯಾಟಲೈಟ್ ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿರುವ ಪೊಲೀಸರು, ತಾಯಿ ಸಮಾನ ಎಂದು ನಂಬಿಸಿ ವಂಚಿಸಿದ ಖತರ್ನಾಕ್ ಕಳ್ಳನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.