SOCIAL MEDIA

Newsletter

PARTNER SITES
Select Language Select State

₹86ರ ಔಷಧಿಗೆ ₹4,528 ಬೆಲೆ!: 254 ಔಷಧ ಕಂಪನಿಗಳ ಬ್ರಹ್ಮಾಂಡ ಸುಲಿಗೆ ಬಯಲು ಮಾಡಿದ ಕರ್ನಾಟಕ FDA!

ಕರ್ನಾಟಕ ಎಫ್‌ಡಿಎ ಅಧಿಕಾರಿಗಳು ನಡೆಸಿದ ಪರಿಶೀಲನೆ ವೇಳೆ, ಔಷಧಗಳ ನಿಜವಾದ 'ಲ್ಯಾಂಡಿಂಗ್ ಕಾಸ್ಟ್' (ಉತ್ಪಾದನೆ ಮತ್ತು ಪೂರೈಕೆ ವೆಚ್ಚ) ಹಾಗೂ ಕಂಪನಿಗಳು ಮುದ್ರಿಸಿರುವ 'MRP' ನಡುವೆ ಬ್ರಹ್ಮಾಂಡ ಅಂತರವಿರುವುದು ಪತ್ತೆಯಾಗಿದೆ.

Reported By Manjunath Naragund Written By Manjunath Naragund
Published: Sep 27, 2026, 03:19 PM IST | Updated: Sep 27, 2026, 03:35 PM IST
Image Credit: Representation only
Join

ಬೆಂಗಳೂರು: ಖಾಸಗಿ ಆಸ್ಪತ್ರೆಗಳು ಹಾಗೂ ಔಷಧ ತಯಾರಿಕಾ ಕಂಪನಿಗಳು ಸೇರಿ ರೋಗಿಗಳಿಂದ ಕೋಟ್ಯಂತರ ರೂಪಾಯಿ ಸುಲಿಗೆ ಮಾಡುತ್ತಿರುವ ಭೀಕರ ಜಾಲವೊಂದನ್ನು ಕರ್ನಾಟಕ ಆಹಾರ ಮತ್ತು ಔಷಧ ನಿಯಂತ್ರಣ ಮಂಡಳಿ ಬಯಲಿಗೆಳೆದಿದೆ. ತೀರಾ ಕಡಿಮೆ ವೆಚ್ಚದಲ್ಲಿ ತಯಾರಾಗುವ ಔಷಧಗಳು, ಮೆಡಿಕಲ್ ಡಿವೈಸ್‌ಗಳು ಹಾಗೂ ಕನ್ಸ್ಯೂಮಬಲ್ಸ್‌ಗಳಿಗೆ ಕಲ್ಪನೆಗೂ ನಿಲುಕದ ಮಟ್ಟದಲ್ಲಿ ಗರಿಷ್ಠ ಚಿಲ್ಲರೆ ಮಾರಾಟ ಬೆಲೆ (MRP) ನಿಗದಿಪಡಿಸಿ, ರೋಗಿಗಳ ಜೇಬಿಗೆ ಕತ್ತರಿ ಹಾಕುತ್ತಿರುವ 254 ಫಾರ್ಮಾಸ್ಯುಟಿಕಲ್ ಕಂಪನಿಗಳ ಕರಾಳ ಮುಖವನ್ನು ಎಫ್‌ಡಿಎ ತನಿಖಾ ವರದಿ ಬಹಿರಂಗಪಡಿಸಿದೆ.

ಉತ್ಪಾದನಾ ವೆಚ್ಚಕ್ಕೂ ಎಂಆರ್‌ಪಿಗೂ ಆಕಾಶ-ಭೂಮಿ ಅಂತರ:

ಕರ್ನಾಟಕ ಎಫ್‌ಡಿಎ ಅಧಿಕಾರಿಗಳು ನಡೆಸಿದ ಪರಿಶೀಲನೆ ವೇಳೆ, ಔಷಧಗಳ ನಿಜವಾದ 'ಲ್ಯಾಂಡಿಂಗ್ ಕಾಸ್ಟ್' (ಉತ್ಪಾದನೆ ಮತ್ತು ಪೂರೈಕೆ ವೆಚ್ಚ) ಹಾಗೂ ಕಂಪನಿಗಳು ಮುದ್ರಿಸಿರುವ 'MRP' ನಡುವೆ ಬ್ರಹ್ಮಾಂಡ ಅಂತರವಿರುವುದು ಪತ್ತೆಯಾಗಿದೆ. ಕೆಲವು ಔಷಧಗಳ ಮೇಲಂತೂ ನಿಜವಾದ ತಯಾರಿಕಾ ವೆಚ್ಚಕ್ಕಿಂತ 60 ರಿಂದ 90 ಪಟ್ಟು ಹೆಚ್ಚು ಎಂಆರ್‌ಪಿ ನಿಗದಿಪಡಿಸಲಾಗಿದೆ. ಕಂಪನಿಗಳು ಆಸ್ಪತ್ರೆಗಳು ಹಾಗೂ ಮೆಡಿಕಲ್ ಸ್ಟೋರ್‌ಗಳಿಗೆ ತೀರಾ ಕಡಿಮೆ ಬೆಲೆಗೆ ಪೂರೈಸುತ್ತಿದ್ದರೂ, ರೋಗಿಗಳಿಗೆ ಮಾತ್ರ ದುಬಾರಿ ಎಂಆರ್‌ಪಿ ಆಧಾರದಲ್ಲೇ ಬಿಲ್ ಮಾಡಿ ಹಣ ದೋಚಲಾಗುತ್ತಿದೆ.

ಶಾಕಿಂಗ್ ಅಂಕಿ-ಅಂಶಗಳು:

₹86 ರ ಔಷಧಿಗೆ ₹4,528 MRP: ಮೂಲ ಪೂರೈಕೆ ವೆಚ್ಚ ಕೇವಲ ₹86 ಇರುವ ಔಷಧಿಗೆ ಬರೋಬ್ಬರಿ ₹4,528 ಎಂಆರ್‌ಪಿ ನಿಗದಿಪಡಿಸಲಾಗಿದೆ. ಅಂದರೆ ಅಸಲಿ ಬೆಲೆಗಿಂತ 52 ಪಟ್ಟು ಹೆಚ್ಚು!

₹160 ರ ಔಷಧಿಗೆ ₹7,110 MRP: ₹160 ರ ಲ್ಯಾಂಡಿಂಗ್ ಕಾಸ್ಟ್ ಹೊಂದಿರುವ ಮತ್ತೊಂದು ಔಷಧಿಯ ಎಂಆರ್‌ಪಿ ₹7,110 ನಿಗದಿಪಡಿಸಲಾಗಿದ್ದು, ಬರೋಬ್ಬರಿ 44 ಪಟ್ಟು ದರ ವ್ಯತ್ಯಾಸ ಕಂಡುಬಂದಿದೆ.

ಕ್ಯಾನ್ಸರ್ ಔಷಧಗಳ ಮೇಲೂ ಸಾವಿರ ಶೇಕಡಾ ಲಾಭ!

ಜೀವನ್ಮರಣ ಹೋರಾಟ ನಡೆಸುವ ಕ್ಯಾನ್ಸರ್ ರೋಗಿಗಳು ಬಳಸುವ ಇಂಜೆಕ್ಷನ್ ಹಾಗೂ ಔಷಧಗಳ ಮೇಲೆಯೂ ಈ ಕಂಪನಿಗಳು ಶೇ.1000ಕ್ಕೂ ಹೆಚ್ಚು ಲಾಭ ಮಾಡಿಕೊಳ್ಳುತ್ತಿರುವುದು ವರದಿಯಲ್ಲಿ ಉಲ್ಲೇಖವಾಗಿದೆ.

ಸೈಟ್ಯಾಕ್ಸ್ 100MG (Cytax 100MG): ಈ ಕ್ಯಾನ್ಸರ್ ಔಷಧದ ಲ್ಯಾಂಡಿಂಗ್ ಕಾಸ್ಟ್ ₹342 ಇದ್ದು, ಎಂಆರ್‌ಪಿ ₹3,836 ಇದೆ. ಅಂದರೆ ಬರೋಬ್ಬರಿ 1021% ಲಾಭ!

ನ್ಯೂಕೈನ್ 300MCG (Neukine 300MCG): ಲ್ಯಾಂಡಿಂಗ್ ಕಾಸ್ಟ್ ₹112 ಇದ್ದು, ಎಂಆರ್‌ಪಿ ₹1,239 ನಿಗದಿಪಡಿಸಲಾಗಿದೆ (1006% ಲಾಭ).

ಬಿವಾಟಾಸ್ 400MG (Bivatas 400MG Injection): ಈ ಇಂಜೆಕ್ಷನ್‌ಗೆ ಲ್ಯಾಂಡಿಂಗ್ ಕಾಸ್ಟ್ ₹5,850 ಇದ್ದರೆ, ಎಂಆರ್‌ಪಿ ಬರೋಬ್ಬರಿ ₹62,690 ಇದೆ (971% ಲಾಭ).

ಕೋಸೇಟ್ 3 MIU (Cosate 3 MIU Injection): ಇದರ ತಯಾರಿಕಾ ವೆಚ್ಚ ₹340 ಇದ್ದರೆ, ಎಂಆರ್‌ಪಿ ₹3,699 ನಿಗದಿಯಾಗಿದೆ (987% ಲಾಭ).

ಈ ಬ್ರಹ್ಮಾಂಡ ದರ ವ್ಯತ್ಯಾಸ ಹಾಗೂ ಸುಲಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಎಫ್‌ಡಿಎ ಆಯುಕ್ತ ಕೆ. ಶ್ರೀನಿವಾಸ್ ಅವರು, 254 ಕಂಪನಿಗಳ ಸಂಪೂರ್ಣ ಪಟ್ಟಿಯನ್ನು ರಾಷ್ಟ್ರೀಯ ಫಾರ್ಮಾಸ್ಯುಟಿಕಲ್ ಪ್ರೈಸಿಂಗ್ ಅಥಾರಿಟಿಗೆ (NPPA) ರವಾನಿಸಿದ್ದಾರೆ. ಆಸ್ಪತ್ರೆಗಳಲ್ಲಿ ರೋಗಿಗಳಿಗೆ ನೀಡಲಾಗುವ ಮೆಡಿಕಲ್ ಉಪಕರಣಗಳು, ಇಂಜೆಕ್ಷನ್‌ಗಳು ಹಾಗೂ ಕನ್ಸ್ಯೂಮಬಲ್ಸ್‌ಗಳ ದರ ಅಂತರದ ಬಗ್ಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ.

'ಔಷಧಗಳ ಬೆಲೆ ನಿಯಂತ್ರಣ ಆದೇಶ-2013' (DPCO 2013) ಅಡಿಯಲ್ಲಿ ತಕ್ಷಣವೇ ಕಾನೂನು ಕ್ರಮ ಕೈಗೊಂಡು ಈ ಅಸಹಜ ದರ ವ್ಯತ್ಯಾಸಕ್ಕೆ ಕಡಿವಾಣ ಹಾಕಬೇಕೆಂದು ಎಫ್‌ಡಿಎ ಆಯುಕ್ತರು NPPAಗೆ ಮನವಿ ಮಾಡಿದ್ದಾರೆ. ಜೊತೆಗೆ ಖಾಸಗಿ ಆಸ್ಪತ್ರೆಗಳು ಪಡೆದುಕೊಳ್ಳುವ 'ಟ್ರೇಡ್ ಮಾರ್ಜಿನ್' (Trade Margin) ಮೇಲೆಯೂ ಗರಿಷ್ಠ ಮಿತಿ ನಿಗದಿಪಡಿಸಬೇಕು, ಇಲ್ಲವಾದಲ್ಲಿ ರೋಗಿಗಳು ಚಿಕಿತ್ಸಾ ವೆಚ್ಚ ಭರಿಸಲಾಗದೆ ಬೀದಿಗೆ ಬೀಳುವಂತಾಗುತ್ತದೆ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
 

Add Zee News as a Preferred Source
TAGS:

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES