SOCIAL MEDIA

Newsletter

PARTNER SITES
Select Language Select State

ಕರಾವಳಿ ಅಭಿವೃದ್ಧಿಗೆ ಹಣ ಎಲ್ಲಿಂದ ತರ್ತೀರಾ?: ರಾಜ್ಯ ಸರ್ಕಾರಕ್ಕೆ MLC ಎನ್. ರವಿಕುಮಾರ್ ಪ್ರಶ್ನೆ

ಕರಾವಳಿ ಅಭಿವೃದ್ಧಿಗೆ ₹36,000 ಕೋಟಿ ಘೋಷಿಸಿರುವುದನ್ನು ಬಿಜೆಪಿ ಸ್ವಾಗತಿಸುತ್ತದೆ, ಆದರೆ ತೀವ್ರ ರಾಜಸ್ವ ಹಾಗೂ ವಿತ್ತೀಯ ಕೊರತೆ ಎದುರಿಸುತ್ತಿರುವ ಸರ್ಕಾರ ಈ ಹಣವನ್ನು ಎಲ್ಲಿಂದ ತರುತ್ತದೆ ಎಂದು ಎಂಎಲ್‌ಸಿ ಎನ್. ರವಿಕುಮಾರ್ ಪ್ರಶ್ನಿಸಿದ್ದಾರೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Reported By Krishna NK Written By Krishna NK
Published: Sep 19, 2026, 04:23 PM IST | Updated: Sep 19, 2026, 04:32 PM IST
Image Credit: N Ravikumar On DKS
Join

ಬೆಂಗಳೂರು: ರಾಜ್ಯ ಸರ್ಕಾರದ ಆಡಳಿತ ವೈಫಲ್ಯ, ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಮಾಡುತ್ತಿರುವೊಳ್ಳೆ ಘೋಷಣೆಗಳು, ಆರ್ಥಿಕ ಶಿಸ್ತಿನ ಕೊರತೆ, ರೈತರ ಕಷ್ಟಗಳು ಹಾಗೂ ಕೆಪಿಎಸ್ಸಿ ನೇಮಕಾತಿ ಅಕ್ರಮಗಳನ್ನು ಉಲ್ಲೇಖಿಸಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್‌ಸಿ ಎನ್. ರವಿಕುಮಾರ್ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಅಭಿವೃದ್ಧಿ ಘೋಷಣೆ ಬರಿ ಮಾತಷ್ಟೇ; ಹಣ ಎಲ್ಲಿಂದ ತರುತ್ತೀರಿ?
ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸಿ ಕರಾವಳಿ ಜಿಲ್ಲೆಗಳ ಅಭಿವೃದ್ಧಿಗಾಗಿ ರಸ್ತೆ, ಪುತ್ತೂರು ಮೆಡಿಕಲ್ ಕಾಲೇಜು, ಬಂದರು ಅಭಿವೃದ್ಧಿ, ಮೀನುಗಾರಿಕೆ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಿಗೆ ₹36,000 ಕೋಟಿ ಅನುದಾನ ಘೋಷಣೆ ಮಾಡಿರುವುದನ್ನು ಬಿಜೆಪಿ ಸ್ವಾಗತಿಸುತ್ತದೆ. ಆದರೆ, ಈ ಬೃಹತ್ ಮೊತ್ತದ ಅನುದಾನಕ್ಕೆ ಬಜೆಟ್‌ನಲ್ಲಿ ಸೂಕ್ತ ಅಲೋಕೇಷನ್ (ಹಂಚಿಕೆ) ಮಾಡಿದ್ದೀರಾ? ಈ ಯೋಜನೆಗಳಿಗೆ ಹಣ ಎಲ್ಲಿಂದ ತರುತ್ತೀರಿ ಎಂದು ರವಿಕುಮಾರ್ ಪ್ರಶ್ನಿಸಿದ್ದಾರೆ.

ಪ್ರಸ್ತುತ ರಾಜ್ಯ ಸರ್ಕಾರ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ₹25,449 ಕೋಟಿ ರಾಜಸ್ವ ಕೊರತೆ ಎದುರಿಸುತ್ತಿದೆ. ದಿನನಿತ್ಯದ ಆಡಳಿತಾತ್ಮಕ ವೆಚ್ಚಗಳೇ ಆದಾಯಕ್ಕಿಂತ ಹೆಚ್ಚಾಗಿವೆ. ವಿತ್ತೀಯ ಕೊರತೆಯು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದ್ದು, ₹97,448 ಕೋಟಿಗೆ ತಲುಪಿದೆ. ಎಫ್‌ಆರ್‌ಬಿಎಂ (FRBM) ಕಾಯ್ದೆಯ ನಿಯಮಗಳ ಪ್ರಕಾರ ವಿತ್ತೀಯ ಕೊರತೆಯು ಶೇ. 3 ಮೀರಬಾರದು. ಆದರೆ, ಈಗಾಗಲೇ ಈ ಸರ್ಕಾರದಲ್ಲಿ ಡಿಫಿಸಿಟ್ ಶೇ. 3ರ ಮಿತಿಯನ್ನು ದಾಟಿದೆ. ಇಂತಹ ಪರಿಸ್ಥಿತಿಯಲ್ಲಿ ₹32,612 ಕೋಟಿಯಂತಹ ದೊಡ್ಡ ಪ್ರಮಾಣದ ಯೋಜನೆಗಳನ್ನು ಯಾವಾಗ ಜಾರಿಗೆ ತರುತ್ತೀರಿ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರೈತರ ಸಂಕಷ್ಟ ಮತ್ತು ಸಾಮಾಜಿಕ ಭದ್ರತಾ ಪಿಂಚಣಿ ಬಾಕಿ
ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದು, ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ದನ-ಕರುಗಳಿಗೆ ಕುಡಿಯಲು ನೀರು ಮತ್ತು ಮೇವಿನ ತೀವ್ರ ಅಭಾವ ಸೃಷ್ಟಿಯಾಗಿದೆ. ಆದರೆ, ಸರ್ಕಾರ ರೈತರಿಗೆ ಇದುವರೆಗೂ ಒಂದು ಪೈಸೆ ಬರ ಪರಿಹಾರವನ್ನೂ ನೀಡಿಲ್ಲ. ರೈತರನ್ನು ಸರ್ಕಾರ ಸಂಪೂರ್ಣವಾಗಿ ಮರೆತಿದ್ದು, ಕಂಗಾಲಾಗಿರುವ ರೈತರಿಗೆ ತಕ್ಷಣವೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಸೋಮವಾರದಿಂದ ಪ್ರಾರಂಭವಾಗುವ ಸದನದಲ್ಲಾದರೂ ಸರ್ಕಾರ ಬರ ಪರಿಹಾರ ನೀಡುವ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇಷ್ಟೇ ಅಲ್ಲದೆ, ರಾಜ್ಯದಲ್ಲಿರುವ ಸುಮಾರು 23 ಲಕ್ಷ ಅಂಗವಿಕಲರು, ವಿಧವೆಯರು ಹಾಗೂ ವೃದ್ಧಾಪ್ಯ ವೇತನ ನಂಬಿಕೊಂಡಿರುವ ಅಸಹಾಯಕ ಫಲಾನುಭವಿಗಳಿಗೆ ಕಳೆದ ಐದು ತಿಂಗಳಿಂದ ಪಿಂಚಣಿ ಹಣ ಬಿಡುಗಡೆಯಾಗಿಲ್ಲ. ಕಂಟ್ರಾಕ್ಟರ್‌ಗಳಿಗೆ ಮೂಲಸೌಕರ್ಯ ಕಾಮಗಾರಿಗಳ ಕೋಟ್ಯಂತರ ರೂಪಾಯಿ ಬಾಕಿ ಹಣ ಪಾವತಿಸದ ಕಾರಣ ಅವರು ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ಇಡೀ ಕರ್ನಾಟಕದಾದ್ಯಂತ ರಸ್ತೆಗಳು ಗುಂಡಿಮಯವಾಗಿದ್ದು, ಯಾವುದೇ ಮೂಲಸೌಕರ್ಯ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ಕಿಡಿಕಾರಿದರು.

ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಪಟ್ಟು
ಕೆಪಿಎಸ್ಸಿ ನೇಮಕಾತಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ಪ್ರಸ್ತಾಪಿಸಿದ ರವಿಕುಮಾರ್, ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಹಣ ನೀಡಿ ನೇಮಕಾತಿ ಪಡೆದುಕೊಂಡಿರುವುದಾಗಿ ಹತ್ತು ಅಭ್ಯರ್ಥಿಗಳು ಒಪ್ಪಿಕೊಂಡಿದ್ದಾರೆ. ಈ ಇಲಾಖೆಯ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಅವರು ಇದರ ನೈತಿಕ ಹೊಣೆ ಹೊರಬೇಕು. ಇಲಾಖೆಯಲ್ಲಿ ಸಾಲು ಸಾಲು ಭ್ರಷ್ಟಾಚಾರದ ಪ್ರಕರಣಗಳು ಹೊರಬರುತ್ತಿದ್ದು, ಸ್ವತಃ ಸಚಿವರೇ ಜೈಲಿನಲ್ಲಿರುವ ಆರೋಪಿಗಳ ಜೊತೆ ಫೋನ್‌ನಲ್ಲಿ ಮಾತನಾಡಿದ್ದಾರೆ ಎಂಬ ವರದಿಗಳೂ ಬಂದಿವೆ.

ಈ ಹಿಂದೆ ಬಿಜೆಪಿ ಸರ್ಕಾರದ ಮೇಲೆ '40% ಕಮಿಷನ್ ಸರ್ಕಾರ' ಎಂದು ಆರೋಪ ಮಾಡುತ್ತಿದ್ದ ಕಾಂಗ್ರೆಸ್ ಆಡಳಿತದಲ್ಲಿ ಈಗಾಗಲೇ ಇಬ್ಬರು ಸಚಿವರು ರಾಜೀನಾಮೆ ನೀಡಬೇಕಾಯಿತು. ಮುಖ್ಯಮಂತ್ರಿಗಳು ಅವರ ರಾಜೀನಾಮೆ ಅಂಗೀಕರಿಸಿದ್ದರು. ಈಗ ಪ್ರಿಯಾಂಕ್ ಖರ್ಗೆ ಅವರ ಸರದಿಯಾಗಿದೆ. ಅವರು ತಕ್ಷಣವೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ಮಾತನಾಡಲಿ ಎಂದು ಆಗ್ರಹಿಸಿದರು.

'ವಂದೇ ಮಾತರಂ' ವಿಷಯದಲ್ಲಿ ಕಾಂಗ್ರೆಸ್‌ನ ದ್ವಂದ್ವ ನಿಲುವು
ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡದಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಉಗ್ರವಾಗಿ ಖಂಡಿಸಿದ ಎನ್. ರವಿಕುಮಾರ್, ಗೀತೆಯ ಎಲ್ಲಾ ಆರು ಪ್ಯಾರಾಗಳನ್ನೂ ಕಡ್ಡಾಯವಾಗಿ ಹಾಡಬೇಕು ಎಂದು ಒತ್ತಾಯಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಅವರಂತಹ ನಾಯಕರು 'ಇಂಕ್ವಿಲಾಬ್ ಜಿಂದಾಬಾದ್' ಜೊತೆಗೆ 'ವಂದೇ ಮಾತರಂ' ಎನ್ನುತ್ತಲೇ ಹೋರಾಟಕ್ಕೆ ಧುಮುಕಿದ್ದರು. ಸ್ವಾತಂತ್ರ್ಯ ಚಳವಳಿಗೆ ಆಂದೋಲನದ ಸ್ವರೂಪ ನೀಡಿದ ಈ ರಾಷ್ಟ್ರೀಯ ಗೀತೆಗೆ ಕತ್ತರಿ ಹಾಕುವುದು ದೇಶವಿರೋಧಿ ನಡವಳಿಕೆಯಾಗಿದೆ.

ರಾಜ್ಯಪಾಲರು, ಪ್ರಧಾನಿ ಅಥವಾ ರಾಷ್ಟ್ರಪತಿಗಳು ಇದ್ದಾಗ ಮಾತ್ರ ಪೂರ್ಣ ಹಾಡುವುದು, ಇಲ್ಲದಿದ್ದಾಗ ಕಟಾಫ್ ಮಾಡುವುದು ಕಾಂಗ್ರೆಸ್‌ನ ದ್ವಂದ್ವ ನಿಲುವನ್ನು (Double standard) ತೋರಿಸುತ್ತದೆ. ಬಿಜೆಪಿ ನಾಯಕರ ಮನೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಇದ್ದರೋ ಇಲ್ಲವೋ ಎಂದು ಪ್ರಶ್ನಿಸುವ ಕಾಂಗ್ರೆಸ್‌ಗೆ ಇತಿಹಾಸದ ಅರಿವಿಲ್ಲ. ಆರ್‌ಎಸ್‌ಎಸ್ (RSS) ಸಂಸ್ಥಾಪಕರು ಕೂಡ ದೇಶಕ್ಕಾಗಿ ಪಕ್ಷಾತೀತವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಆದ್ದರಿಂದ ರಾಜ್ಯ ಸರ್ಕಾರ ತಕ್ಷಣವೇ ತನ್ನ ಆದೇಶವನ್ನು ವಾಪಸ್ ಪಡೆದು, ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಸ್ತೂರಿ ರಂಗನ್ ವರದಿ ಹಾಗೂ ಬರ ಪರಿಸ್ಥಿತಿ ಚರ್ಚೆ
ಬರ ಪರಿಸ್ಥಿತಿಯ ಅಧ್ಯಯನಕ್ಕಾಗಿ ಬಿಜೆಪಿ ಆರು ತಂಡಗಳನ್ನು ರಚಿಸಿ ರಾಜ್ಯದಾದ್ಯಂತ ಪ್ರವಾಸ ಮಾಡಿದೆ. ಕೇಂದ್ರಕ್ಕೆ ನಿಯೋಗ ಕರೆದುಕೊಂಡು ಹೋಗುವುದಾಗಿ ಸರ್ಕಾರ ಹೇಳುತ್ತಿದೆ; ಅದನ್ನು ಮಾಡಲಿ, ಆದರೆ ಅದಕ್ಕೂ ಮೊದಲು ರಾಜ್ಯ ಸರ್ಕಾರ ತನ್ನ ಪಾಲಿನ ಮೊದಲ ಕಂತಿನ ಪರಿಹಾರವನ್ನು ಬಿಡುಗಡೆ ಮಾಡಬೇಕು. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಒಣಭೂಮಿ ಕೃಷಿಗೆ ಹೆಕ್ಟೇರ್‌ಗೆ ₹17,600 ಹಾಗೂ ನೀರಾವರಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಭಾರಿ ಪ್ರಮಾಣದ ಪರಿಹಾರ ಬಿಡುಗಡೆ ಮಾಡಿದ್ದರು.

ಇನ್ನು ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಮಾತನಾಡುತ್ತಾ, ಮಲೆನಾಡು ಹಾಗೂ ಕಾಡಿನ ಮಧ್ಯ ಭಾಗದಲ್ಲಿ ತಲೆತಲಾಂತರಗಳಿಂದ ವಾಸಿಸುತ್ತಿರುವ ಜನರನ್ನು ಒಕ್ಕಲೆಬ್ಬಿಸುವುದಕ್ಕೆ ಬಿಜೆಪಿ ಎಂದಿಗೂ ಬಿಡುವುದಿಲ್ಲ. ಕಾಡನ್ನು ಉಳಿಸುವಲ್ಲಿ ಹಾಗೂ ಪರಿಸರ ರಕ್ಷಣೆಯಲ್ಲಿ ಕಾಡಿನಲ್ಲೇ ವಾಸಿಸುವ ಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಈ ಹಿಂದೆ ಮನ್ಮೋಹನ್ ಸಿಂಗ್ ಸರ್ಕಾರದಲ್ಲಿ ಕಸ್ತೂರಿ ರಂಗನ್ ಸಮಿತಿ ರಚನೆಯಾಗಿತ್ತು. ಅದಕ್ಕಿಂತ ಮೊದಲು ಬಂದ ಗಾಡ್ಗಿಲ್ ವರದಿಯನ್ನು ಎಲ್ಲಾ ರಾಜ್ಯಗಳೂ ವಿರೋಧಿಸಿದ್ದವು. ಮಲೆನಾಡು ಹಾಗೂ ಪಶ್ಚಿಮ ಘಟ್ಟದ ಭಾಗದ ಜನರಿಗೆ ತೊಂದರೆಯಾಗದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಬಿಜೆಪಿ ಅವರ ಪರವಾಗಿ ನಿಲ್ಲಲಿದೆ ಎಂದು ಸ್ಪಷ್ಟಪಡಿಸಿದರು.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES