Israel Politics: ಇಸ್ರೇಲ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ದೇಶದ ನೂತನ ಸರ್ಕಾರ ರಚಿಸುವಂತೆ ಯಾಶರ್ ಪಕ್ಷದ ಅಧ್ಯಕ್ಷ ಗಡಿ ಐಜೆನ್‌ಕೋಟ್ ಅವರಿಗೆ ಅಧ್ಯಕ್ಷ ಐಸಾಕ್ ಹೆರ್ಜಾಗ್ ಆಹ್ವಾನ ನೀಡಿದ್ದಾರೆ. ಸಂಸತ್ತಿನ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅಧ್ಯಕ್ಷರು ಈ ನಿರ್ಧಾರ ಕೈಗೊಂಡಿದ್ದಾರೆ. ಅಧಿಕಾರದಲ್ಲಿ ಮುಂದುವರಿಯಲು ಪ್ರಯತ್ನಿಸುತ್ತಿರುವ ಹಾಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಇದು ರಾಜಕೀಯ ಹಿನ್ನಡೆಯಾಗಿ ಪರಿಗಣಿಸಲಾಗಿದೆ.
ಇಸ್ರೇಲ್ ಸಂಸತ್ತಾದ ನೆಸ್ಸೆಟ್‌ನಲ್ಲಿರುವ ರಾಜಕೀಯ ಬಣಗಳ ಅಭಿಪ್ರಾಯಗಳನ್ನ ಆಲಿಸಿದ ನಂತರ ಐಜೆನ್‌ಕೋಟ್ ಅವರನ್ನ ಸರ್ಕಾರ ರಚಿಸಲು ಆಹ್ವಾನಿಸುವ ನಿರ್ಧಾರಕ್ಕೆ ಅಧ್ಯಕ್ಷರು ಬಂದಿದ್ದಾರೆ. ಭಾನುವಾರ ಸಂಜೆ ಸ್ಥಳೀಯ ಕಾಲಮಾನದಲ್ಲಿ ಅಧ್ಯಕ್ಷೀಯ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಐಜೆನ್‌ಕೋಟ್ ಅವರಿಗೆ ಅಧಿಕೃತ ಆಹ್ವಾನ ನೀಡಲಾಗುತ್ತದೆ. ಇದರೊಂದಿಗೆ ಇಸ್ರೇಲ್‌ನಲ್ಲಿ ಹೊಸ ಸರ್ಕಾರ ರಚನೆಯ ಪ್ರಕ್ರಿಯೆ ಆರಂಭವಾಗಲಿದೆ.
ಸರ್ಕಾರ ರಚಿಸಲು 28 ದಿನಗಳ ಕಾಲಾವಕಾಶ
ಅಧ್ಯಕ್ಷರಿಂದ ಅಧಿಕೃತ ಆಹ್ವಾನ ಸ್ವೀಕರಿಸಿದ ಬಳಿಕ ಗಡಿ ಐಜೆನ್‌ಕೋಟ್ ಅವರಿಗೆ ಸರ್ಕಾರ ರಚಿಸಲು 28 ದಿನಗಳ ಕಾಲಾವಕಾಶ ದೊರೆಯಲಿದೆ. ಈ ಅವಧಿಯಲ್ಲಿ ಅವರು ವಿವಿಧ ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ನಡೆಸಿ ಸಮ್ಮಿಶ್ರ ಸರ್ಕಾರ ರಚಿಸಲು ಅಗತ್ಯ ಬೆಂಬಲವನ್ನ ಪಡೆಯಬೇಕಿದೆ. ನಿಗದಿತ 28 ದಿನಗಳಲ್ಲಿ ಸರ್ಕಾರ ರಚಿಸಲು ಸಾಧ್ಯವಾಗದಿದ್ದರೆ ಅಧ್ಯಕ್ಷರು ಹೆಚ್ಚುವರಿಯಾಗಿ 14 ದಿನಗಳ ಕಾಲಾವಕಾಶ ನೀಡುವ ಅವಕಾಶವಿದೆ. ಹೀಗಾಗಿ ಐಜೆನ್‌ಕೋಟ್ ಅವರಿಗೆ ಒಟ್ಟು 42 ದಿನಗಳವರೆಗೆ ಸರ್ಕಾರ ರಚನೆಯ ಪ್ರಯತ್ನ ನಡೆಸಲು ಅವಕಾಶ ಸಿಗಬಹುದು.
ಐಜೆನ್‌ಕೋಟ್‌ಗೆ 67 ಸಂಸದರ ಬೆಂಬಲ
ಅಧ್ಯಕ್ಷರ ಕಚೇರಿ ನೀಡಿರುವ ಮಾಹಿತಿಯ ಪ್ರಕಾರ, ನೆಸ್ಸೆಟ್‌ನಲ್ಲಿರುವ 67 ಸಂಸದರು ಗಡಿ ಐಜೆನ್‌ಕೋಟ್ ಅವರನ್ನ ಸರ್ಕಾರ ರಚಿಸಲು ಶಿಫಾರಸು ಮಾಡಿದ್ದಾರೆ. ಮತ್ತೊಂದೆಡೆ 46 ಸಂಸದರು ಹಾಲಿ ಪ್ರಧಾನಿ ಹಾಗೂ ಲಿಕುಡ್ ಪಕ್ಷದ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಅವರನ್ನ ಬೆಂಬಲಿಸಿದ್ದಾರೆ. ಏಳು ಸಂಸದರು ಯಾವುದೇ ನಾಯಕನ ಹೆಸರನ್ನ ಶಿಫಾರಸು ಮಾಡಿಲ್ಲ. ಕಳೆದ ಕೆಲವು ದಿನಗಳಿಂದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೇರಿದಂತೆ ರಾಜಕೀಯ ವ್ಯವಸ್ಥೆಯ ಪ್ರಮುಖ ನಾಯಕರೊಂದಿಗೆ ಚರ್ಚೆ ನಡೆಸಿರುವುದಾಗಿ ಅಧ್ಯಕ್ಷ ಐಸಾಕ್ ಹೆರ್ಜಾಗ್ ತಿಳಿಸಿದ್ದಾರೆ. ಗಡಿ ಐಜೆನ್‌ಕೋಟ್ ಅವರೊಂದಿಗೂ ಸಮಾಲೋಚನೆ ನಡೆಸಿದ ಬಳಿಕ ತಮ್ಮ ನಿರ್ಧಾರವನ್ನ ಅವರಿಗೆ ತಿಳಿಸಿರುವುದಾಗಿ ಅಧ್ಯಕ್ಷರು ಹೇಳಿದ್ದಾರೆ.
ಬಹುಮತ ಸಾಬೀತುಪಡಿಸುವುದು ಐಜೆನ್‌ಕೋಟ್‌ಗೆ ಸವಾಲು
ಅಧ್ಯಕ್ಷರಿಂದ ಸರ್ಕಾರ ರಚಿಸಲು ಆಹ್ವಾನ ದೊರೆತಿರುವುದು ಸಂಸತ್ತಿನಲ್ಲಿ ಅಗತ್ಯ ಬಹುಮತ ಈಗಾಗಲೇ ಸಿಕ್ಕಿದೆ ಎಂದರ್ಥವಲ್ಲ. ಸರ್ಕಾರ ರಚಿಸಲು ಬೇಕಾದ ಸಂಸದರ ಬೆಂಬಲವನ್ನ ಐಜೆನ್‌ಕೋಟ್ ಇನ್ನೂ ಖಚಿತಪಡಿಸಿಕೊಳ್ಳಬೇಕಿದೆ. ವಿಭಿನ್ನ ರಾಜಕೀಯ ಸಿದ್ಧಾಂತಗಳನ್ನ ಹೊಂದಿರುವ ಪಕ್ಷಗಳನ್ನ ಒಂದೇ ವೇದಿಕೆಗೆ ತಂದು ಸಮ್ಮಿಶ್ರ ಸರ್ಕಾರ ರಚಿಸುವುದು ಅವರ ಮುಂದಿರುವ ಪ್ರಮುಖ ಸವಾಲಾಗಿದೆ. ವಿವಿಧ ಪಕ್ಷಗಳ ನಡುವೆ ಒಮ್ಮತ ಮೂಡಿಸಿ ಅಗತ್ಯ ಸಂಖ್ಯಾಬಲವನ್ನ ಒಗ್ಗೂಡಿಸಬೇಕಿದೆ.
ನೆತನ್ಯಾಹು ಅವರ ಲಿಕುಡ್ ಪಕ್ಷಕ್ಕೆ 27 ಸ್ಥಾನ
ಚುನಾವಣೆಯಲ್ಲಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಲಿಕುಡ್ ಪಕ್ಷ 27 ಸ್ಥಾನಗಳನ್ನ ಗೆದ್ದು ಸಂಸತ್ತಿನ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ನೆತನ್ಯಾಹು ನೇತೃತ್ವದ ಮೈತ್ರಿಕೂಟಕ್ಕೆ ಒಟ್ಟು 53 ಸ್ಥಾನಗಳು ಮಾತ್ರ ದೊರೆತಿವೆ. ಇಸ್ರೇಲ್ ಸಂಸತ್ತಿನಲ್ಲಿ ಬಹುಮತ ಪಡೆಯಲು 61 ಸ್ಥಾನಗಳ ಅಗತ್ಯವಿದ್ದು, ಈ ಸಂಖ್ಯೆಯನ್ನ ತಲುಪಲು ಮೈತ್ರಿಕೂಟಕ್ಕೆ ಇನ್ನೂ ಎಂಟು ಸ್ಥಾನಗಳ ಕೊರತೆಯಿದೆ. ಇನ್ನೊಂದೆಡೆ ಗಡಿ ಐಜೆನ್‌ಕೋಟ್ ನೇತೃತ್ವದ ಯಾಶರ್ ಪಕ್ಷ 21 ಸ್ಥಾನಗಳನ್ನ ಪಡೆದು ಎರಡನೇ ಸ್ಥಾನದಲ್ಲಿದೆ. ನಾಲ್ಕು ಪಕ್ಷಗಳನ್ನ ಒಳಗೊಂಡ ಯಹೂದಿ ಒಕ್ಕೂಟವು ಒಟ್ಟು 48 ಸ್ಥಾನಗಳನ್ನ ಹೊಂದಿದೆ. ಇಸ್ರೇಲ್‌ನ ಅರಬ್ ಅಲ್ಪಸಂಖ್ಯಾತ ಸಮುದಾಯವನ್ನ ಪ್ರತಿನಿಧಿಸುವ ಎರಡು ಪಕ್ಷಗಳು ಒಟ್ಟಾಗಿ 19 ಸ್ಥಾನಗಳನ್ನ ಪಡೆದಿವೆ.
ಅರಬ್ ಪಕ್ಷಗಳ ಬೆಂಬಲ ಐಜೆನ್‌ಕೋಟ್‌ಗೆ ಬಲ
ಇಸ್ರೇಲ್‌ನ ಅರಬ್ ರಾಜಕೀಯ ಗುಂಪುಗಳ ಮೈತ್ರಿಕೂಟವಾದ 'ಜಾಯಿಂಟ್ ಲಿಸ್ಟ್' ಹಾಗೂ ಅರಬ್ ನೇತೃತ್ವದ 'ರಾಮ್' ಪಕ್ಷವು ಯಾಶರ್ ಪಕ್ಷದ ಅಧ್ಯಕ್ಷ ಗಡಿ ಐಜೆನ್‌ಕೋಟ್ ಅವರನ್ನ ಮುಂದಿನ ಪ್ರಧಾನಿಯಾಗಿ ಬೆಂಬಲಿಸಿವೆ. ಈ ಬೆಂಬಲವು ಸರ್ಕಾರ ರಚನೆಯ ಪ್ರಯತ್ನದಲ್ಲಿ ಐಜೆನ್‌ಕೋಟ್ ಅವರಿಗೆ ಮಹತ್ವದ್ದಾಗಿದೆ. ಆದರೆ ವಿವಿಧ ಪಕ್ಷಗಳ ಸಂಖ್ಯಾಬಲ ಮತ್ತು ರಾಜಕೀಯ ನಿಲುವುಗಳನ್ನ ಪರಿಗಣಿಸಿದರೆ, ಬಹುಮತವನ್ನ ಖಚಿತಪಡಿಸಿಕೊಳ್ಳುವುದು ಇನ್ನೂ ಸವಾಲಿನ ಕೆಲಸವಾಗಿದೆ.
ಒಟ್ನಲ್ಲಿ ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರು ಗಡಿ ಐಜೆನ್‌ಕೋಟ್ ಅವರಿಗೆ ಸರ್ಕಾರ ರಚಿಸುವ ಜವಾಬ್ದಾರಿ ವಹಿಸಿರುವುದು ದೇಶದ ರಾಜಕೀಯದಲ್ಲಿ ಪ್ರಮುಖ ಬೆಳವಣಿಗೆಯಾಗಿದೆ. ನೆತನ್ಯಾಹು ಅವರ ಮೈತ್ರಿಕೂಟಕ್ಕೆ ಬಹುಮತದ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ನಡೆಯಲಿರುವ ರಾಜಕೀಯ ಮಾತುಕತೆಗಳು ಹೊಸ ಸರ್ಕಾರದ ರಚನೆಯನ್ನ ನಿರ್ಧರಿಸಲಿವೆ.