ಆಕಾಶದಲ್ಲಿ ಎದುರಾದ ಭೀಕರ ದುರಂತ ತಪ್ಪಿಸಿದ ಇಸ್ರೇಲಿ ಪ್ರಯಾಣಿಕರು: ನಾಲ್ವರಿಗೆ ಅಧ್ಯಕ್ಷೀಯ ಶೌರ್ಯ ಪದಕ
ಈ ಸಾಹಸ ಮೆರೆದ ನಾಲ್ವರು ನಾಗರಿಕರಿಗೆ ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ನಾಗರಿಕ ಶೌರ್ಯಕ್ಕಾಗಿ ನೀಡಲಾಗುವ ಅತ್ಯುನ್ನತ ‘ಅಧ್ಯಕ್ಷೀಯ ಪದಕ’ ಗೌರವವನ್ನು ಶಿಫಾರಸು ಮಾಡುವುದಾಗಿ ಗುರುವಾರ ಘೋಷಿಸಿದ್ದಾರೆ.
ಟೆಲ್ ಅವೀವ್: ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ FZ1073 ವಿಮಾನದಲ್ಲಿ ಮಧ್ಯ ಆಕಾಶದಲ್ಲೇ ಸಂಭವಿಸಬಹುದಾಗಿದ್ದ ಭೀಕರ ವಿಮಾನ ದುರಂತವೊಂದು ಪ್ರಯಾಣಿಕರ ಸಮಯಪ್ರಜ್ಞೆಯಿಂದ ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ವಿಮಾನದ ಸಹ-ಪೈಲಟ್ ಇದ್ದಕ್ಕಿದ್ದಂತೆ ಕ್ಯಾಪ್ಟನ್ ಮೇಲೆ ಚಾಕುವಿನಿಂದ ಮಾರಣಾಂತಿಕ ದಾಳಿ ನಡೆಸಿದ ಪರಿಣಾಮ, ನಿಯಂತ್ರಣ ತಪ್ಪಿದ ವಿಮಾನ ಕ್ಷಣಾರ್ಧದಲ್ಲಿ ಸಾವಿರಾರು ಅಡಿ ಕೆಳಕ್ಕೆ ಕುಸಿದು ಭೀತಿ ಹುಟ್ಟಿಸಿತ್ತು. ಆದರೆ ತಕ್ಷಣವೇ ಕಾರ್ಯಪ್ರವೃತ್ತರಾದ ನಾಲ್ವರು ಇಸ್ರೇಲಿ ಪ್ರಯಾಣಿಕರು ಸಹ-ಪೈಲಟ್‌ನನ್ನು ನಿಗ್ರಹಿಸಿ, ನೂರಾರು ಜನರ ಜೀವ ಉಳಿಸಿದ್ದಾರೆ.
ಈ ಸಾಹಸ ಮೆರೆದ ನಾಲ್ವರು ನಾಗರಿಕರಿಗೆ ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ನಾಗರಿಕ ಶೌರ್ಯಕ್ಕಾಗಿ ನೀಡಲಾಗುವ ಅತ್ಯುನ್ನತ ‘ಅಧ್ಯಕ್ಷೀಯ ಪದಕ’ ಗೌರವವನ್ನು ಶಿಫಾರಸು ಮಾಡುವುದಾಗಿ ಗುರುವಾರ ಘೋಷಿಸಿದ್ದಾರೆ.
ಮಧ್ಯ ಆಕಾಶದಲ್ಲಿ ಘೋರ ಘಟನೆ
ಬುಧವಾರ ದುಬೈನಿಂದ ಟೆಲ್ ಅವೀವ್‌ಗೆ ಪ್ರಯಾಣಿಸುತ್ತಿದ್ದ ವಿಮಾನ ಆಕಾಶದಲ್ಲಿ ಹಾರಾಟ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ಕಾಕ್‌ಪಿಟ್‌ನಲ್ಲಿದ್ದ ಸಹ-ಪೈಲಟ್ ದಿಢೀರನೆ ಮುಖ್ಯ ಕ್ಯಾಪ್ಟನ್ ಮೇಲೆ ಚಾಕುವಿನಿಂದ ಭೀಕರ ದಾಳಿ ನಡೆಸಿದ್ದಾನೆ. ದಾಳಿಯಿಂದಾಗಿ ಕ್ಯಾಪ್ಟನ್ ಗಂಭೀರವಾಗಿ ಗಾಯಗೊಂಡು ವಿಮಾನದ ನಿಯಂತ್ರಣ ಕೈತಪ್ಪಿದೆ. ಪರಿಣಾಮವಾಗಿ, ಕೇವಲ ಎರಡು ನಿಮಿಷಗಳ ಅವಧಿಯಲ್ಲಿ ವಿಮಾನವು ಆಕಾಶದಿಂದ ಸುಮಾರು 15,000 ಅಡಿಗಳಷ್ಟು ಕೆಳಗೆ ಬಿದ್ದಿದೆ. ಈ ಸಂದರ್ಭದಲ್ಲಿ ವಿಮಾನದಿಂದ ನಿರಂತರ ಆಪಾಯದ ತುರ್ತು ಸಂಕೇತಗಳು ರವಾನೆಯಾಗುತ್ತಿದ್ದವು.
ಆತಂಕದ ಸನ್ನಿವೇಶ ಸೃಷ್ಟಿಯಾಗುತ್ತಿದ್ದಂತೆ, ವಿಮಾನದಲ್ಲಿದ್ದ ಇಸ್ರೇಲ್ ನಾಗರಿಕರಾದ ಯಾನಿವ್ ಹಯುನ್, ಡಾ. ಶೋಟಾ ಮುಸಾಯೆವ್, ತ್ವಿಕಾ ಮಾನ್ಸ್ ಮತ್ತು ಅಸಫ್ ರೆಜ್ವಾನ್ ಅವರು ತಕ್ಷಣವೇ ಕಾಕ್‌ಪಿಟ್‌ಗೆ ಧಾವಿಸಿದರು. ಗಾಯಗೊಂಡ ಕ್ಯಾಪ್ಟನ್ ಹಾಗೂ ಕ್ಯಾಬಿನ್ ಸಿಬ್ಬಂದಿಯ ನೆರವಿನೊಂದಿಗೆ ಈ ನಾಲ್ವರು ಅಪಾಯಕಾರಿ ಸಹ-ಪೈಲಟ್‌ನನ್ನು ಹಿಡಿದು ನಿಗ್ರಹಿಸುವಲ್ಲಿ ಯಶಸ್ವಿಯಾದರು. ನಂತರ ಗಾಯಗೊಂಡ ಪೈಲಟ್ ಸಹಾಯದಿಂದ ವಿಮಾನದ ನಿಯಂತ್ರಣವನ್ನು ಮರಳಿ ಪಡೆಯಲಾಯಿತು.
ತಕ್ಷಣವೇ ವಿಮಾನದ ಮಾರ್ಗವನ್ನು ಬದಲಾಯಿಸಿ ಸೌದಿ ಅರೇಬಿಯಾದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು. ಇದರಿಂದಾಗಿ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಯಾವುದೇ ಜೀವಹಾನಿಯಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಧ್ಯಕ್ಷ ಹೆರ್ಜಾಗ್ ಅಭಿನಂದನೆ
ಸಮಯಪ್ರಜ್ಞೆ ಮೆರೆದು ನೂರಾರು ಜನರ ಜೀವ ಉಳಿಸಿದ ಯಾನಿವ್ ಹಯುನ್, ಡಾ. ಶೋಟಾ ಮುಸಾಯೆವ್, ತ್ವಿಕಾ ಮಾನ್ಸ್ ಮತ್ತು ಅಸಫ್ ರೆಜ್ವಾನ್ ಅವರನ್ನು ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರು ವೈಯಕ್ತಿಕವಾಗಿ ಫೋನ್ ಮೂಲಕ ಸಂಪರ್ಕಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.
"ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ನೀವು ಮೆರೆದ ಅಸಾಧಾರಣ ಶೌರ್ಯ ನಿಜಕ್ಕೂ ಪ್ರಶಂಸನೀಯ. ಯಾವುದೇ ವೃತ್ತಿಪರ ತರಬೇತಿಯಿಲ್ಲದೆ, ಸಾಮಾನ್ಯ ನಾಗರಿಕರಾಗಿ ನೀವು ತೋರಿದ ಈ ಧೈರ್ಯ ಬೃಹತ್ ವಾಯುಯಾನ ದುರಂತವನ್ನು ತಪ್ಪಿಸಿದೆ" ಎಂದು ಅಧ್ಯಕ್ಷ ಹೆರ್ಜಾಗ್ ಬಣ್ಣಿಸಿದ್ದಾರೆ. ಸಾಮಾನ್ಯ ನಾಗರಿಕರು ಕ್ಲಿಷ್ಟ ಸಮಯದಲ್ಲಿ ತೋರಿದ ಈ ಶೌರ್ಯವನ್ನು ಗೌರವಿಸಲು ಅವರನ್ನು ಅತ್ಯುನ್ನತ ರಾಷ್ಟ್ರೀಯ ಪದಕಕ್ಕೆ ಶಿಫಾರಸು ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.