Dubai Tel Aviv Flight Incident: ದುಬೈಯಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಸಂಭವಿಸಿದ ಭೀಕರ ಕಾಕ್‌ಪಿಟ್ ಘಟನೆಯೊಂದು ನೂರಾರು ಪ್ರಯಾಣಿಕರನ್ನ ಆತಂಕಕ್ಕೆ ದೂಡಿತ್ತು. ವಿಮಾನ ಹಾರಾಟದಲ್ಲಿದ್ದ ವೇಳೆ ಪೈಲಟ್ ಹಾಗೂ ಸಹ ಪೈಲಟ್ ನಡುವೆ ದೊಡ್ಡ ಫೈಟ್ ನಡೆದಿದ್ದು, ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ತೀವ್ರ ಗಾಯಗಳ ನಡುವೆಯೂ ಕಾಕ್‌ಪಿಟ್ ಬಾಗಿಲು ತೆರೆಯಲು ಅವರು ನೆರವಾದ ಪರಿಣಾಮ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಒಳನುಗ್ಗಿ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಯಿತು ಎಂದು ವರದಿಯಾಗಿದೆ.
34 ಸಾವಿರ ಅಡಿ ಎತ್ತರದಲ್ಲಿ ಏನಾಯಿತು?
ಸೆಪ್ಟೆಂಬರ್ 30ರಂದು ಫ್ಲೈದುಬೈಯ FZ1073 ವಿಮಾನ ದುಬೈನಿಂದ ಟೆಲ್ ಅವೀವ್‌ಗೆ ಹೊರಟಿತ್ತು. ವಿಮಾನದಲ್ಲಿ 174 ಮಂದಿ ಇದ್ದರು. ವರದಿಗಳ ಪ್ರಕಾರ, ಹಾರಾಟದ ವೇಳೆ ಕಾಕ್‌ಪಿಟ್‌ನಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮತ್ತು ಸಹ ಪೈಲಟ್ ನಡುವೆ ಗಂಭೀರ ಸಂಘರ್ಷ ಸಂಭವಿಸಿದೆ. ಸ್ವತಃ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೀಡಿರುವ ಮಾಹಿತಿಯ ಪ್ರಕಾರ, ಸಹ ಪೈಲಟ್ ಸ್ಮಿತ್ ಮಚ್ಚರ್ ಅವರಿಗೆ ಚೂರಿಯಿಂದ ಇರಿದ ಬಳಿಕ ವಿಮಾನವನ್ನ ನಿಯಂತ್ರಣಕ್ಕೆ ಪಡೆದು ಪತನಗೊಳಿಸಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.
ಆದರೆ ಈ ಘಟನೆಯ ನಿಖರ ಉದ್ದೇಶ ಇನ್ನೂ ತನಿಖೆಯಲ್ಲಿದ್ದು, ಫ್ಲೈದುಬೈ ಕೂಡ ಊಹಾಪೋಹಗಳಿಗೆ ಅವಕಾಶ ನೀಡದಂತೆ ಮನವಿ ಮಾಡಿದೆ. ಘಟನೆ ನಡೆದ ಸಂದರ್ಭದಲ್ಲಿ ವಿಮಾನವು ಸುಮಾರು 34,000 ಅಡಿ ಎತ್ತರದಲ್ಲಿ ಹಾರುತ್ತಿತ್ತು. ಫ್ಲೈಟ್ ಟ್ರ್ಯಾಕಿಂಗ್ ಮಾಹಿತಿಯ ಪ್ರಕಾರ, ವಿಮಾನ ಕೆಲವೇ ಸಮಯದಲ್ಲಿ ಸುಮಾರು 14,000 ಅಡಿ ಎತ್ತರ ಕಳೆದುಕೊಂಡಿತ್ತು. ಬಳಿಕ ತುರ್ತು ಸಂಕೇತಗಳನ್ನ ರವಾನಿಸಲಾಯಿತು.
ಗಾಯಗೊಂಡಿದ್ದರೂ ಕಾಕ್‌ಪಿಟ್ ಬಾಗಿಲು ತೆರೆದ ಪೈಲಟ್
Captain Smit Machchhar is a HERO.
In the face of the gravest danger and despite being seriously injured, he showed immense courage and an unwavering resolve to protect the lives of others.
His valour helped save hundreds of lives and avert a great tragedy.
India is proud of…— Narendra Modi (@narendramodi) October 1, 2026
ಸಹ ಪೈಲಟ್‌ನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಕ್ಯಾಪ್ಟನ್ ಮಚ್ಚರ್ ಸಂಕಷ್ಟ ಪರಿಸ್ಥಿತಿಯಲ್ಲೂ ಪ್ರತಿರೋಧ ತೋರಿದರು ಎಂದು ವರದಿಯಾಗಿದೆ. ಅವರು ಕಾಕ್‌ಪಿಟ್ ಬಾಗಿಲು ತೆರೆಯಲು ಸಾಧ್ಯವಾಗಿದ್ದರಿಂದ ಪ್ರಯಾಣಿಕರು ಹಾಗೂ ಸಿಬ್ಬಂದಿ ಒಳಗೆ ಪ್ರವೇಶಿಸಿದರು. ಬಳಿಕ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ ಸಹ ಪೈಲಟ್‌ನನ್ನ ನಿಯಂತ್ರಣಕ್ಕೆ ತೆಗೆದುಕೊಂಡರು. ವಿಮಾನದಲ್ಲೇ ಪ್ರಯಾಣಿಸುತ್ತಿದ್ದ ಕರ್ತವ್ಯದಲ್ಲಿರದ ಇತರ ಇಬ್ಬರು ಫ್ಲೈದುಬೈ ಪೈಲಟ್‌ಗಳು ಕೂಡ ವಿಮಾನದ ನಿಯಂತ್ರಣವನ್ನ ಮರಳಿ ಪಡೆಯಲು ನೆರವಾದರು ಎಂದು ವರದಿಯಾಗಿದೆ.
ಈ ಬೆಳವಣಿಗೆಯ ಬಳಿಕ ವಿಮಾನವನ್ನ ಸೌದಿ ಅರೇಬಿಯಾದ ತಬೂಕ್‌ನಲ್ಲಿರುವ ಪ್ರಿನ್ಸ್ ಸುಲ್ತಾನ್ ಬಿನ್ ಅಬ್ದುಲಅಜೀಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತಿರುಗಿಸಲಾಯಿತು. ಅಲ್ಲಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಪ್ರಯಾಣಿಕರನ್ನ ಬಳಿಕ ಮತ್ತೊಂದು ಫ್ಲೈದುಬೈ ವಿಮಾನದ ಮೂಲಕ ಟೆಲ್ ಅವೀವ್‌ಗೆ ಕರೆದೊಯ್ಯಲಾಯಿತು.
ಹೀರೋ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಯಾರು?
ಈ ಘಟನೆಯ ಬಳಿಕ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ವೃತ್ತಿಜೀವನದ ಬಗ್ಗೆಯೂ ಹೆಚ್ಚಿನ ಮಾಹಿತಿ ಹೊರಬಂದಿದೆ. ಅವರು ಮುಂಬೈ ಮೂಲದ ಭಾರತೀಯರಾಗಿದ್ದು, ಬೋಯಿಂಗ್ 737 ವಿಮಾನಗಳ ಹಾರಾಟದಲ್ಲಿ ಹಲವು ವರ್ಷಗಳ ಅನುಭವ ಹೊಂದಿದ್ದಾರೆ. ಮಚ್ಚರ್ ಅವರು ಜೂನ್ 2022ರಲ್ಲಿ ಫ್ಲೈದುಬೈಗೆ ಕ್ಯಾಪ್ಟನ್ ಆಗಿ ಸೇರ್ಪಡೆಯಾಗಿದ್ದರು. ಅದಕ್ಕೂ ಮೊದಲು ಅವರು ಸುಮಾರು 11 ವರ್ಷಗಳ ಕಾಲ ಸ್ಪೈಸ್‌ಜೆಟ್‌ನಲ್ಲಿ ಕೆಲಸ ಮಾಡಿದ್ದರು. ಅಲ್ಲಿ ಸೀನಿಯರ್ ಕಮಾಂಡರ್ ಹಾಗೂ ಲೈನ್ ಟ್ರೈನಿಂಗ್ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ್ದರು.
ಅವರ ವೃತ್ತಿಪರ ಪ್ರೊಫೈಲ್ ಪ್ರಕಾರ, ಬೋಯಿಂಗ್ 737-800 ಮತ್ತು 737 MAX 8/9 ವಿಮಾನಗಳಲ್ಲಿ ಒಟ್ಟು ಸುಮಾರು 9,750 ಗಂಟೆಗಳ ಹಾರಾಟದ ಅನುಭವ ಹೊಂದಿದ್ದಾರೆ. ಸ್ಪೈಸ್‌ಜೆಟ್‌ನಲ್ಲಿದ್ದ ಅವಧಿಯಲ್ಲಿ 6,400ಕ್ಕೂ ಹೆಚ್ಚು ಗಂಟೆಗಳನ್ನ ಪೈಲಟ್-ಇನ್-ಕಮಾಂಡ್ ಆಗಿ ಹಾರಿಸಿದ್ದರು ಎಂದು ವರದಿಯಾಗಿದೆ.
ಪ್ರಧಾನಿ ಮೋದಿ, ನೆತನ್ಯಾಹು ಶ್ಲಾಘನೆ
ಘಟನೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಧೈರ್ಯವನ್ನ ಶ್ಲಾಘಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದರೂ ಇತರರ ಜೀವ ಉಳಿಸಲು ಅವರು ತೋರಿದ ಧೈರ್ಯ ನೂರಾರು ಜನರ ಜೀವ ಉಳಿಸಲು ನೆರವಾಗಿದೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮಚ್ಚರ್ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಮಚ್ಚರ್ ಅವರನ್ನ "ರಿಯಲ್ ಹೀರೋ" ಎಂದು ಬಣ್ಣಿಸಿದ್ದಾರೆ. ಗಾಯಗೊಂಡಿದ್ದರೂ ಅವರು ಪ್ರತಿರೋಧ ತೋರಿಸಿ ಕಾಕ್‌ಪಿಟ್ ಬಾಗಿಲು ತೆರೆಯಲು ನೆರವಾದರು; ಇದರಿಂದ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ದಾಳಿಕೋರನನ್ನ ನಿಯಂತ್ರಿಸಲು ಸಾಧ್ಯವಾಯಿತು ಎಂದು ನೆತನ್ಯಾಹು ಹೇಳಿದ್ದಾರೆ.
ಸಹ ಪೈಲಟ್ ಬಂಧನ, ತನಿಖೆ ಮುಂದುವರಿಕೆ
ವರದಿಗಳ ಪ್ರಕಾರ, ಸಹ ಪೈಲಟ್ ಒಮಾನ್‌ನ ಪ್ರಜೆಯಾಗಿದ್ದು, ವಿಮಾನ ತಬೂಕ್‌ನಲ್ಲಿ ಇಳಿದ ಬಳಿಕ ಸೌದಿ ಅಧಿಕಾರಿಗಳು ಆತನನ್ನ ಬಂಧಿಸಿದ್ದಾರೆ. ಆದರೆ ಘಟನೆಗೆ ಕಾರಣವಾದ ಉದ್ದೇಶವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಆರಂಭದಲ್ಲಿ ವಿಮಾನದಲ್ಲಿ ಅಪಹರಣದಂತಹ ಆತಂಕ ಮೂಡಿದ್ದರೂ, ಘಟನೆಗೆ ಸಂಬಂಧಿಸಿದ ನಿಖರ ಹಿನ್ನೆಲೆ ಮತ್ತು ಉದ್ದೇಶದ ಬಗ್ಗೆ ಅಂತಿಮ ತನಿಖಾ ವರದಿ ಇನ್ನೂ ಹೊರಬಂದಿಲ್ಲ. ಫ್ಲೈದುಬೈ ಕೂಡ ಘಟನೆಯನ್ನ “incident” ಎಂದು ವಿವರಿಸಿದ್ದು, ತನಿಖೆ ಪೂರ್ಣಗೊಳ್ಳುವ ಮೊದಲು ಊಹಾಪೋಹಗಳಿಗೆ ಅವಕಾಶ ನೀಡದಂತೆ ಮನವಿ ಮಾಡಿದೆ.
ಒಟ್ನಲ್ಲಿ 174 ಮಂದಿಯನ್ನ ಹೊತ್ತ ವಿಮಾನದಲ್ಲಿ ಸಂಭವಿಸಿದ ಈ ಗಂಭೀರ ಘಟನೆಯ ನಡುವೆ ಕ್ಯಾಪ್ಟನ್ ಸ್ಮಿತ್ ಮಚ್ಚರ್, ಪ್ರಯಾಣಿಕರು, ಸಿಬ್ಬಂದಿ ಮತ್ತು ವಿಮಾನದಲ್ಲಿದ್ದ ಇತರ ಪೈಲಟ್‌ಗಳ ತ್ವರಿತ ಕ್ರಮದಿಂದ ದೊಡ್ಡದೊಂದು ಅಪಾಯ ತಪ್ಪಿದಂತಾಗಿದೆ. ಘಟನೆಯ ಸಂಪೂರ್ಣ ಸತ್ಯ ಮತ್ತು ಸಹ ಪೈಲಟ್‌ನ ಉದ್ದೇಶ ತನಿಖೆ ಪೂರ್ಣಗೊಂಡ ಬಳಿಕವೇ ಸ್ಪಷ್ಟವಾಗಲಿದೆ.