SOCIAL MEDIA

Newsletter

PARTNER SITES
Select Language Select State

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಮತ್ತಷ್ಟು ಬಲ: 'V4 ಗ್ರೂಪ್ ದೇಶಗಳಿಂದ ಖಾಯಂ ಸದಸ್ಯತ್ವಕ್ಕೆ ಪೂರ್ಣ ಬೆಂಬಲ!

ಪೋಲೆಂಡ್, ಹಂಗೇರಿ, ಸ್ಲೋವಾಕಿಯಾ ಮತ್ತು ಜೆಕ್ ಗಣರಾಜ್ಯ ದೇಶಗಳನ್ನು ಒಳಗೊಂಡಿರುವ ವೈಸೆಗ್ರಾಡ್ ಒಕ್ಕೂಟವು, ವಿಶ್ವ ವೇದಿಕೆಯಲ್ಲಿ ಭಾರತದ ಸ್ಥಾನಮಾನವನ್ನು ಬಲವಾಗಿ ಪ್ರತಿಪಾದಿಸಿದೆ.

Reported By Manjunath Naragund Written By Manjunath Naragund
Published: Sep 22, 2026, 06:19 AM IST | Updated: Sep 22, 2026, 06:30 AM IST
Image Credit: Photo Courtsey: X
Join

ಜಾಗತಿಕ ಮಟ್ಟದಲ್ಲಿ ಭಾರತದ ರಾಜತಾಂತ್ರಿಕ ಪ್ರಭಾವ ದಿನದಿಂದ ದಿನಕ್ಕೆ ಹೊಸ ಎತ್ತರಕ್ಕೆ ಏರುತ್ತಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಭಾರತಕ್ಕೆ ರಾಜತಾಂತ್ರಿಕವಾಗಿ ಅತ್ಯಂತ ಮಹತ್ವದ ಮತ್ತು ಸಂತಸದ ಸುದ್ದಿಯೊಂದು ಸಿಕ್ಕಿದೆ. ವಿಶ್ವಸಂಸ್ಥೆಯ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ನೀಡಬೇಕು ಎಂಬ ಬಹುದಿನಗಳ ಒತ್ತಾಯಕ್ಕೆ ಯುರೋಪ್‌ನ ಪ್ರಭಾವಿ ‘ವೈಸೆಗ್ರಾಡ್’ (Visegrad Group - V4) ಒಕ್ಕೂಟದ ನಾಲ್ಕು ಸದಸ್ಯ ರಾಷ್ಟ್ರಗಳು ಬಹಿರಂಗವಾಗಿ ಪೂರ್ಣ ಬೆಂಬಲ ಘೋಷಿಸಿವೆ.

ವಿಶ್ವಸಂಸ್ಥೆಯ ಸಭೆಯ ನೇಪಥ್ಯದಲ್ಲಿ ನಡೆದ ಚಾರಿತ್ರಿಕ 'ಭಾರತ - V4' ವಿದೇಶಾಂಗ ಸಚಿವರ ಚೊಚ್ಚಲ ಶೃಂಗಸಭೆಯಲ್ಲಿ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ. ಪೋಲೆಂಡ್, ಹಂಗೇರಿ, ಸ್ಲೋವಾಕಿಯಾ ಮತ್ತು ಜೆಕ್ ಗಣರಾಜ್ಯ ದೇಶಗಳನ್ನು ಒಳಗೊಂಡಿರುವ ವೈಸೆಗ್ರಾಡ್ ಒಕ್ಕೂಟವು, ವಿಶ್ವ ವೇದಿಕೆಯಲ್ಲಿ ಭಾರತದ ಸ್ಥಾನಮಾನವನ್ನು ಬಲವಾಗಿ ಪ್ರತಿಪಾದಿಸಿದೆ.

ಭಾರತ ಸೂಪರ್ ಪವರ್; ಖಾಯಂ ಸ್ಥಾನ ಸಿಗಲೇಬೇಕು:

ಸಭೆಯ ಬಳಿಕ ಮಾತನಾಡಿದ ಸ್ಲೋವಾಕಿಯಾ ವಿದೇಶಾಂಗ ಸಚಿವ ಜುರಾಜ್ ಬ್ಲಾನರ್, "ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತವು ಶರವೇಗದಲ್ಲಿ ಬೆಳೆಯುತ್ತಿರುವ ಪ್ರಭಾವಿ ಜಾಗತಿಕ ಶಕ್ತಿಯಾಗಿದೆ. ಜಾಗತಿಕ ದಕ್ಷಿಣದ ಆಶಾಕಿರಣವಾಗಿರುವ ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವದ ಮೇಜಿನ ಬಳಿ ಪ್ರಮುಖ ಸ್ಥಾನ ಸಿಗಲೇಬೇಕು ಎಂಬುದನ್ನು V4 ದೇಶಗಳಾದ ನಾವೆಲ್ಲರೂ ಒಗ್ಗಟ್ಟಿನಿಂದ ಒಪ್ಪಿಕೊಳ್ಳುತ್ತೇವೆ" ಎಂದು ಗಟ್ಟಿ ಧ್ವನಿಯಲ್ಲಿ ಸ್ಪಷ್ಟಪಡಿಸಿದರು. ಮಧ್ಯ ಯುರೋಪಿಯನ್ ರಾಷ್ಟ್ರಗಳ ಈ ಬೆಂಬಲವು ಜಾಗತಿಕ ಮಟ್ಟದಲ್ಲಿ ಭಾರತದ ನಾಯಕತ್ವವನ್ನು ಜಗತ್ತು ಗುರುತಿಸುತ್ತಿರುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.

ಐತಿಹಾಸಿಕ ಜಂಟಿ ಸಭೆ: ಹೊಸ ಅಧ್ಯಾಯದ ಆರಂಭ:

ಈ ಐತಿಹಾಸಿಕ ಸಭೆಯ ನೇತೃತ್ವ ವಹಿಸಿದ್ದ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು, ಮೊದಲ V4-ಭಾರತ ವಿದೇಶಾಂಗ ಸಚಿವರ ಸಮಾವೇಶವನ್ನು ಭವಿಷ್ಯದ ದೃಷ್ಟಿಯಿಂದ ಅತ್ಯಂತ "ಮಹತ್ವದ ನೂತನ ಮೈಲಿಗಲ್ಲು" ಎಂದು ಬಣ್ಣಿಸಿದ್ದಾರೆ. ಭಾರತ ಮತ್ತು V4 ದೇಶಗಳ ನಡುವೆ ರಾಜಕೀಯ, ಆರ್ಥಿಕ, ತಂತ್ರಜ್ಞಾನ, ರಕ್ಷಣೆ ಹಾಗೂ ಸಾರ್ವಜನಿಕ ಸಂಬಂಧಗಳನ್ನು ಅತ್ಯಂತ ಗಟ್ಟಿಗೊಳಿಸಲು ಈ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಂಬಂಧಗಳನ್ನು ನಿರಂತರವಾಗಿ ಕಾಯ್ದುಕೊಳ್ಳಲು ಪ್ರತಿವರ್ಷ ವಿದೇಶಾಂಗ ಸಚಿವರ ಮಟ್ಟದ ಸಭೆಗಳನ್ನು ನಡೆಸುವುದು ಹಾಗೂ ವಾರ್ಷಿಕ ವ್ಯಾಪಾರ ವೇದಿಕೆಯನ್ನು ಸ್ಥಾಪಿಸಲು ಎಲ್ಲಾ ದೇಶಗಳು ಒಪ್ಪಿಗೆ ಸೂಚಿಸಿವೆ.

ರಕ್ಷಣಾ ಮತ್ತು ತಂತ್ರಜ್ಞಾನ ವಲಯದಲ್ಲಿ ಹೊಸ ಚೈತನ್ಯ:

ವಿಶೇಷವಾಗಿ ರಕ್ಷಣಾ ಮತ್ತು ತಂತ್ರಜ್ಞಾನ ರಂಗದಲ್ಲಿ ಭಾರತ ಹಾಗೂ V4 ಒಕ್ಕೂಟದ ನಡುವಿನ ಸಹಕಾರಕ್ಕೆ ಹೊಸ ಜೀವ ಬಂದಿದೆ. "ರಕ್ಷಣಾ ವಲಯದಲ್ಲಿ ವೈಸೆಗ್ರಾಡ್‌ನ ಎಲ್ಲಾ ನಾಲ್ಕು ದೇಶಗಳ ಜೊತೆಗೂ ಭಾರತಕ್ಕೆ ಸುದೀರ್ಘ ಹಾಗೂ ಬಲವಾದ ನಂಟು ಇದೆ. ಆ ಹಳೆಯ ಬಾಂಧವ್ಯವನ್ನು ನವೀಕರಿಸಿ, ಕಾಲಕ್ಕೆ ತಕ್ಕಂತೆ ಸುಧಾರಿತ ತಂತ್ರಜ್ಞಾನದೊಂದಿಗೆ ಮುನ್ನಡೆಸಲು ನಾವು ಉತ್ಸುಕರಾಗಿದ್ದೇವೆ" ಎಂದು ಸಚಿವ ಜೈಶಂಕರ್ ತಿಳಿಸಿದ್ದಾರೆ.

ಇದಷ್ಟೇ ಅಲ್ಲದೆ ಬಾಹ್ಯಾಕಾಶ, ಸಾರಿಗೆ ಸಂಪರ್ಕ, ಸಂಶೋಧನೆ, ಉನ್ನತ ಶಿಕ್ಷಣ ಹಾಗೂ ಸಾಂಸ್ಕೃತಿಕ ವಿನಿಮಯ ಕ್ಷೇತ್ರಗಳಲ್ಲಿಯೂ ವ್ಯಾಪಕ ಸಹಕಾರ ಅನ್ವೇಷಿಸಲು ನಿರ್ಧರಿಸಲಾಗಿದೆ. ಪ್ರಸ್ತುತ ಈ ನಾಲ್ಕೂ ಯುರೋಪಿಯನ್ ರಾಷ್ಟ್ರಗಳಲ್ಲಿ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಜನರ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಸಭೆಯಲ್ಲಿ ಬಲವಾದ ಒತ್ತು ನೀಡಲಾಯಿತು.

ಕೇವಲ ದ್ವಿಪಕ್ಷೀಯ ವಿಷಯಗಳಷ್ಟೇ ಅಲ್ಲದೆ, ಪ್ರಸ್ತುತ ಜಗತ್ತನ್ನು ಕಾಡುತ್ತಿರುವ ರಷ್ಯಾ-ಉಕ್ರೇನ್ ಸುದೀರ್ಘ ಸಂಘರ್ಷ ಹಾಗೂ ಮಧ್ಯಪ್ರಾಚ್ಯದ (ಕೊಲ್ಲಿ) ಪ್ರಸ್ತುತ ಉದ್ವಿಗ್ನ ಪರಿಸ್ಥಿತಿಗಳ ಕುರಿತು ಸಚಿವರು ಸುದೀರ್ಘ ಚರ್ಚೆ ನಡೆಸಿದರು.

ಬಳಿಕ ಸಾಮಾಜಿಕ ಜಾಲತಾಣ 'X' ನಲ್ಲಿ ಪೋಸ್ಟ್ ಹಂಚಿಕೊಂಡ ಸಚಿವ ಜೈಶಂಕರ್, "ನಾವು ನಿಕಟ ರಾಜಕೀಯ ಸಹಕಾರ, ಆಳವಾದ ಆರ್ಥಿಕ ಪಾಲುದಾರಿಕೆ, ತಂತ್ರಜ್ಞಾನ, ಸಂಶೋಧನೆ ಮತ್ತು ಶಿಕ್ಷಣದಲ್ಲಿ ಬಲವಾದ ಬಾಂಧವ್ಯಕ್ಕೆ ಕೈಜೋಡಿಸಿದ್ದೇವೆ. ರಕ್ಷಣಾ ಸಹಕಾರವನ್ನು ಪುನರುಜ್ಜೀವನಗೊಳಿಸುವುದರ ಜೊತೆಗೆ, ಜಾಗತಿಕ ಬಹುಪಕ್ಷೀಯತೆಯನ್ನು ಎತ್ತಿಹಿಡಿಯಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ" ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ಮಧ್ಯ ಯುರೋಪ್ ರಾಷ್ಟ್ರಗಳ ಈ ನಿಕಟ ಬಾಂಧವ್ಯವು ವಿಶ್ವಸಂಸ್ಥೆಯಲ್ಲಿ ಭಾರತದ ಧ್ವನಿಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

Add Zee News as a Preferred Source
TAGS:

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES