ಡ್ರೋನ್ ದಾಳಿಗೆ 153 ಬಲಿ! ಮಾರುಕಟ್ಟೆಯಲ್ಲಿ ಸಾ*ವು-ನೋವಿನ ಆಕ್ರಂದನ, ಹೊತ್ತಿ ಉರಿದ ಇಂಧನ ಡಿಪೋ
ಸುಡಾನ್‌ನಲ್ಲಿ 2023ರ ಏಪ್ರಿಲ್‌ನಿಂದ ಸುಡಾನ್ ಸೇನೆ ಮತ್ತು ಆರ್‌ಎಸ್‌ಎಫ್ ನಡುವೆ ಸಂಘರ್ಷ ನಡೆಯುತ್ತಿದೆ. ಈ ಯುದ್ಧದಿಂದ ದೇಶದ ಹಲವು ಭಾಗಗಳಲ್ಲಿ ಅಪಾರ ಹಾನಿ ಸಂಭವಿಸಿದ್ದು, ಜನರು ಮನೆಗಳನ್ನ ತೊರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಘರ್ಷದ ಪರಿಣಾಮ ನೆರೆಯ ಪ್ರದೇಶಗಳ ಸ್ಥಿರತೆಯ ಮೇಲೂ ಆತಂಕ ಹೆಚ್ಚಾಗಿದೆ.
Sudan Drone Attack: ಆಫ್ರಿಕಾದ ಸುಡಾನ್ ಮತ್ತು ದಕ್ಷಿಣ ಸುಡಾನ್ ನಡುವಿನ ವಿವಾದಿತ ಅಬಿಯೆ ಪ್ರದೇಶದಲ್ಲಿ ನಡೆದ ಭೀಕರ ಡ್ರೋನ್ ದಾಳಿಯಲ್ಲಿ ಕನಿಷ್ಠ 153 ಮಂದಿ ಮೃತಪಟ್ಟಿದ್ದಾರೆ. ಜನನಿಬಿಡ ಮಾರುಕಟ್ಟೆಯನ್ನ ಗುರಿಯಾಗಿಸಿಕೊಂಡು ನಡೆದ ದಾಳಿಯಿಂದ ಭಾರೀ ಪ್ರಮಾಣದ ಪ್ರಾಣಹಾನಿ ಸಂಭವಿಸಿದ್ದು, ಇಂಧನ ಡಿಪೋಗೆ ಬೆಂಕಿ ತಗುಲಿ ಪರಿಸ್ಥಿತಿ ಮತ್ತಷ್ಟು ಭೀಕರವಾಗಿದೆ. ಸ್ಥಳೀಯ ಅಧಿಕಾರಿಗಳ ಪ್ರಕಾರ, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕವಿದೆ. ಈ ದಾಳಿ ಸುಡಾನ್‌ನಲ್ಲಿ ಮುಂದುವರಿದಿರುವ ಸಂಘರ್ಷದ ಭೀಕರತೆಯನ್ನ ಮತ್ತೊಮ್ಮೆ ಜಗತ್ತಿನ ಗಮನಕ್ಕೆ ತಂದಿದೆ.
ಮಾರುಕಟ್ಟೆಯಲ್ಲಿ ಭೀಕರ ಸ್ಫೋಟ
ಅಕ್ಟೋಬರ್ 19ರಂದು ಅಬಿಯೆ ಪಟ್ಟಣದ ಉತ್ತರ ಭಾಗದಲ್ಲಿರುವ ಅಮಿಯೆಟ್ (Amiet) ಮಾರುಕಟ್ಟೆಯ ಬಳಿ ಡ್ರೋನ್ ದಾಳಿ ನಡೆದಿದೆ. ಈ ಮಾರುಕಟ್ಟೆ ಸ್ಥಳೀಯ ಜನರಿಗೆ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದು, ದಿನನಿತ್ಯದ ಅಗತ್ಯ ವಸ್ತುಗಳ ಖರೀದಿ ಮತ್ತು ಮಾರಾಟಕ್ಕಾಗಿ ಜನರು ಇಲ್ಲಿ ಸೇರುತ್ತಾರೆ. ದಾಳಿಯ ವೇಳೆ ಸಮೀಪದಲ್ಲಿದ್ದ ಇಂಧನ ಡಿಪೋ ಕೂಡ ಹಾನಿಗೊಳಗಾಗಿದೆ. ಇದರಿಂದ ಬೆಂಕಿ ವ್ಯಾಪಿಸಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
ಅಬಿಯೆ ಆಡಳಿತದ ಹಂಗಾಮಿ ಮಾಹಿತಿ ಸಚಿವ ಯೊಹಾನಾ ಅಕೋಲ್ ನ್ಗೋರ್ ಅವರ ಪ್ರಕಾರ, ಆರಂಭದಲ್ಲಿ 73 ಮಂದಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿತ್ತು. ಬಳಿಕ ಸಾವಿನ ಸಂಖ್ಯೆ ಕನಿಷ್ಠ 153ಕ್ಕೆ ಏರಿಕೆಯಾಗಿದೆ. ಬೆಂಕಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಾರದ ಕಾರಣ ಮೃತದೇಹಗಳನ್ನ ಹೊರತೆಗೆಯುವ ಕಾರ್ಯಕ್ಕೂ ತೊಂದರೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ದಾಳಿಯ ಹಿಂದೆ ಸುಡಾನ್ ಸೇನೆ?
ಈ ದಾಳಿಯ ಹಿಂದೆ ಸುಡಾನ್ ಸೇನೆಯ ಕೈವಾಡವಿದೆ ಎಂದು ದಕ್ಷಿಣ ಸುಡಾನ್‌ನ ಅಧಿಕಾರಿಗಳು ಆರೋಪಿಸಿದ್ದಾರೆ. ಆದರೆ ದಾಳಿಯ ಹೊಣೆಗಾರಿಕೆ ಮತ್ತು ಅದರ ನಿಖರ ಉದ್ದೇಶದ ಕುರಿತು ದೃಢೀಕೃತ ಮಾಹಿತಿ ಸಿಕ್ಕಿಲ್ಲ. ಇನ್ನೊಂದೆಡೆ ಸುಡಾನ್ ಸೇನೆಯ ಹಿರಿಯ ಅಧಿಕಾರಿಯೊಬ್ಬರು ಡ್ರೋನ್ ಕಾರ್ಯಾಚರಣೆ ನಡೆದಿರುವುದನ್ನ ಒಪ್ಪಿಕೊಂಡಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ದಕ್ಷಿಣ ಸುಡಾನ್‌ನಿಂದ ಬಂದಿದ್ದ ಇಂಧನ ಟ್ಯಾಂಕರ್‌ಗಳು ಅರೆಸೇನಾ ಪಡೆ ರ್ಯಾಪಿಡ್ ಸಪೋರ್ಟ್ ಫೋರ್ಸಸ್ (RSF)ಗೆ ಇಂಧನ ಪೂರೈಸಲು ಉದ್ದೇಶಿಸಿದ್ದವು ಎಂಬ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ದಾಳಿಯಲ್ಲಿ ಮೃತಪಟ್ಟವರು ಆರ್‌ಎಸ್‌ಎಫ್ ಸದಸ್ಯರು ಮತ್ತು ಇಂಧನ ಕಳ್ಳಸಾಗಣೆಯಲ್ಲಿ ತೊಡಗಿದ್ದವರು ಎಂದು ಸುಡಾನ್ ಸೇನೆಯ ಅಧಿಕಾರಿ ಹೇಳಿಕೊಂಡಿದ್ದಾರೆ. ಆದರೆ ನಾಗರಿಕರು ಮೃತಪಟ್ಟಿಲ್ಲ ಎಂಬ ಸೇನೆಯ ಹೇಳಿಕೆ ಸೇರಿದಂತೆ, ಸಾವಿಗೀಡಾದವರ ಗುರುತು ಮತ್ತು ದಾಳಿಯ ನಿಖರ ಗುರಿಗಳನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲವೆಂದು ವರದಿಯಾಗಿದೆ.
ಗಾಯಾಳುಗಳಿಗೆ ಚಿಕಿತ್ಸೆ, ಸಾವಿರಾರು ಜನರ ಸ್ಥಳಾಂತರ
ದಾಳಿಯ ಪರಿಣಾಮ ಅನೇಕರು ಗಾಯಗೊಂಡಿದ್ದು, ಸಮೀಪದ ಅಮೆತ್ ಬೆಕ್ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರಿಲ್ಲದಿರುವುದು ಅಥವಾ ವೈದ್ಯಕೀಯ ಸೌಲಭ್ಯಗಳ ಕೊರತೆಯಂತಹ ಸವಾಲುಗಳ ನಡುವೆ ಗಾಯಾಳುಗಳಿಗೆ ಚಿಕಿತ್ಸೆ ಒದಗಿಸುವುದು ಆರೋಗ್ಯ ಸಿಬ್ಬಂದಿಗೆ ದೊಡ್ಡ ಸವಾಲಾಗಿದೆ. ವೈದ್ಯರು ಮತ್ತು ಮೆಡಿಸಿನ್ಸ್ ಸಾನ್ಸ್ ಫ್ರಾಂಟಿಯರ್ಸ್ (MSF) ಸಂಸ್ಥೆಯ ಸಿಬ್ಬಂದಿ ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. 20ಕ್ಕೂ ಹೆಚ್ಚು ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. ಸುಟ್ಟ ಗಾಯಗಳಿಂದ ಬಳಲುತ್ತಿರುವವರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ. ದಾಳಿಯ ಬಳಿಕ ಸುಮಾರು 8,000 ಜನರು ತಮ್ಮ ವಾಸಸ್ಥಳಗಳನ್ನ ತೊರೆದು ಬೇರೆಡೆಗೆ ತೆರಳಿದ್ದಾರೆ ಎಂದು ಸ್ಥಳೀಯ ಅಧಿಕಾರಿ ತಿಳಿಸಿದ್ದಾರೆ. ಇದರಿಂದ ಪ್ರದೇಶದಲ್ಲಿ ಮಾನವೀಯ ಬಿಕ್ಕಟ್ಟು ಮತ್ತಷ್ಟು ತೀವ್ರಗೊಳ್ಳುವ ಆತಂಕ ಎದುರಾಗಿದೆ.
ದಕ್ಷಿಣ ಸುಡಾನ್‌ನಿಂದ ತೀವ್ರ ಖಂಡನೆ
ದಾಳಿಯನ್ನ ಖಂಡಿಸಿರುವ ದಕ್ಷಿಣ ಸುಡಾನ್‌ನ ವಿದೇಶಾಂಗ ಸಚಿವಾಲಯ, ಸುಡಾನ್‌ನ ರಾಯಭಾರಿಯನ್ನ ಕರೆಸಿ ಆಕ್ಷೇಪ ವ್ಯಕ್ತಪಡಿಸಿದೆ. ನಾಗರಿಕರ ಜೀವ ಮತ್ತು ಆಸ್ತಿಗೆ ಅಪಾಯ ಉಂಟುಮಾಡುವ ಕ್ರಮಗಳಿಂದ ದೂರವಿರಬೇಕು ಎಂದು ಸುಡಾನ್‌ಗೆ ಸೂಚಿಸಿರುವುದಾಗಿ ವರದಿಯಾಗಿದೆ. ಅಬಿಯೆ ಪ್ರದೇಶಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನ ರಾಜತಾಂತ್ರಿಕ ಮಾತುಕತೆಯ ಮೂಲಕ ಬಗೆಹರಿಸಬೇಕು ಎಂಬುದನ್ನೂ ದಕ್ಷಿಣ ಸುಡಾನ್ ಒತ್ತಿಹೇಳಿದೆ. ನಾಗರಿಕರು ಮತ್ತು ನಾಗರಿಕ ಮೂಲಸೌಕರ್ಯಗಳ ರಕ್ಷಣೆಗೆ ಎಲ್ಲಾ ಕಡೆಯವರೂ ಆದ್ಯತೆ ನೀಡಬೇಕು ಎಂದು ಎಂಎಸ್‌ಎಫ್ ಆಗ್ರಹಿಸಿದೆ.
ದೀರ್ಘಕಾಲದ ಸಂಘರ್ಷದ ನೆರಳು
ಸುಡಾನ್‌ನಲ್ಲಿ 2023ರ ಏಪ್ರಿಲ್‌ನಿಂದ ಸುಡಾನ್ ಸೇನೆ ಮತ್ತು ಆರ್‌ಎಸ್‌ಎಫ್ ನಡುವೆ ಸಂಘರ್ಷ ನಡೆಯುತ್ತಿದೆ. ಈ ಯುದ್ಧದಿಂದ ದೇಶದ ಹಲವು ಭಾಗಗಳಲ್ಲಿ ಅಪಾರ ಹಾನಿ ಸಂಭವಿಸಿದ್ದು, ಜನರು ಮನೆಗಳನ್ನ ತೊರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಘರ್ಷದ ಪರಿಣಾಮ ನೆರೆಯ ಪ್ರದೇಶಗಳ ಸ್ಥಿರತೆಯ ಮೇಲೂ ಆತಂಕ ಹೆಚ್ಚಾಗಿದೆ. ತೈಲ ಸಂಪತ್ತಿನಿಂದ ಮಹತ್ವ ಪಡೆದಿರುವ ಅಬಿಯೆ ಪ್ರದೇಶದ ರಾಜಕೀಯ ಸ್ಥಾನಮಾನವೂ ದೀರ್ಘಕಾಲದಿಂದ ವಿವಾದದಲ್ಲಿದೆ. 2005ರ ಶಾಂತಿ ಒಪ್ಪಂದದ ಬಳಿಕವೂ ಈ ಪ್ರದೇಶದ ಭವಿಷ್ಯ ನಿರ್ಧಾರವಾಗಿಲ್ಲ. 2011ರಲ್ಲಿ ದಕ್ಷಿಣ ಸುಡಾನ್ ಸ್ವತಂತ್ರ ರಾಷ್ಟ್ರವಾದ ನಂತರವೂ ಈ ಸಮಸ್ಯೆ ಬಗೆಹರಿದಿಲ್ಲ.
ಒಟ್ನಲ್ಲಿ ಅಬಿಯೆ ಮಾರುಕಟ್ಟೆಯ ಮೇಲಿನ ಡ್ರೋನ್ ದಾಳಿಯು ನಾಗರಿಕರ ಸುರಕ್ಷತೆ ಮತ್ತು ಮಾನವೀಯ ನೆರವಿನ ಅಗತ್ಯವನ್ನ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ದಾಳಿಯ ಸಂಪೂರ್ಣ ವಿವರಗಳು ಮತ್ತು ಹೊಣೆಗಾರಿಕೆಯ ಕುರಿತು ಹೆಚ್ಚಿನ ತನಿಖೆ ಹಾಗೂ ಸ್ಪಷ್ಟೀಕರಣದ ಅಗತ್ಯವಿದೆ.