ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ 'ಜೀ ಕನ್ನಡ ನ್ಯೂಸ್' ವತಿಯಿಂದ ಆಯೋಜಿಸಲಾಗಿದ್ದ ಪ್ರತಿಷ್ಠಿತ ‘ಜೀ ಕನ್ನಡ ನ್ಯೂಸ್ ವೀರ ಕನ್ನಡಿಗ ಪ್ರಶಸ್ತಿ’ ಪ್ರದಾನ ಸಮಾರಂಭವು ನವೆಂಬರ್ 17ರಂದು ಸಂಜೆ ಬೆಂಗಳೂರಿನ ಪ್ರಸಿದ್ಧ ದಿ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಸಮಾಜ ಸೇವೆ, ಕಲೆ, ಸಾಹಿತ್ಯ, ಸಿನಿಮಾ, ಕ್ರೀಡೆ, ಶಿಕ್ಷಣ, ವೈದ್ಯಕೀಯ, ಉದ್ಯಮ, ಪೊಲೀಸ್ ಹಾಗೂ ಸಾರ್ವಜನಿಕ ಸೇವೆ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶಿಷ್ಠ ಕೊಡುಗೆಯನ್ನು ನೀಡಿರುವ ರಾಜ್ಯದ ಮುಂಚೂಣಿಯ ಸಾಧಕರನ್ನು ಈ ವೇದಿಕೆಯಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಸಾಧಕರಿಗೆ ಜೀವಮಾನ ಸಾಧನೆ ಪ್ರಶಸ್ತಿ ಗರಿಮೆ
ಈ ಭವ್ಯ ಸಮಾರಂಭದಲ್ಲಿ ಕಲೆ ಹಾಗೂ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಪ್ರಮುಖರಿಗೆ 'ಜೀವಮಾನ ಸಾಧನೆ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಚಲನಚಿತ್ರ ನಿರ್ದೇಶಕ, ಚಿತ್ರಕಥೆಗಾರ ಹಾಗೂ ನಟ ಡಾ. ನಾಗತಿಹಳ್ಳಿ ಚಂದ್ರಶೇಖರ್, ಹಿರಿಯ ನಟಿ ಹಾಗೂ ವಿಧಾನ ಪರಿಷತ್ ಉಪಸಭಾಪತಿ ಶ್ರೀಮತಿ ಉಮಾಶ್ರೀ, ಹಿರಿಯ ನಟ ಹಾಗೂ ಮಾಜಿ ಸಂಸದ ಶ್ರೀ ಶಶಿ ಕುಮಾರ್, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಶ್ರೀ ಪಿ. ಹರಿಶೇಖರನ್, ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಶ್ರೀ ತ್ಯಾಗರಾಜ್ ಪಿ. ಹಾಗೂ ಹಿರಿಯ ಕಬಡ್ಡಿ ಕೋಚ್ ಶ್ರೀ ಬಿ.ಸಿ. ರಮೇಶ್ ಅವರು ಈ ಗಿಡ ಗೌರವಕ್ಕೆ ಭಾಜನರಾದರು.
ಇದೆ ವೇಳೆ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ನಟಿ ಹಾಗೂ ಉಪಸಭಾಪತಿ ಉಮಾಶ್ರೀ ಅವರು, ಜೀ ಕನ್ನಡ ನ್ಯೂಸ್ ಸಂಸ್ಥೆಯ ಈ ಕಾರ್ಯಕ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಪ್ರಶಸ್ತಿಗಳು ಸಾಧಕರಿಗೆ ದೊಡ್ಡ ಮಟ್ಟದ ಪ್ರೋತ್ಸಾಹ ನೀಡುತ್ತವೆ ಎಂದ ಅವರು, ಇಂದಿನ ಚಲನಚಿತ್ರ ರಂಗದಲ್ಲಿ ಮಹಿಳೆಯರು ನಿರ್ಮಾಣ ಮತ್ತು ನಿರ್ದೇಶನ ಕ್ಷೇತ್ರಕ್ಕೆ ಧೈರ್ಯವಾಗಿ ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದು ಪ್ರಶಂಸಿಸಿದರು.
ಇದೇ ವೇಳೆ ಇಂದಿನ ಆಧುನಿಕ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ (AI) ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಅವರು, "ತಂತ್ರಜ್ಞಾನ ಬೆಳೆಯುತ್ತಿರುವುದು ಒಳ್ಳೆಯದೇ, ಸೆಟ್‌ಗಳು, ಹಿಮಾಲಯದ ಸೃಷ್ಟಿ, ಫೈಟ್ಸ್ ಎಲ್ಲವನ್ನೂ ಕಂಪ್ಯೂಟರ್ ಅಥವಾ ಎಐ ಮೂಲಕ ಸುಲಭವಾಗಿ ಮಾಡಬಹುದು. ಆದರೆ, ತೆರೆಮೇಲೆ ಕಾಣುವ ಜೀವಂತ ಕಲಾವಿದರನ್ನು ಹೊರತುಪಡಿಸಿ, ತಂತ್ರಜ್ಞಾನವನ್ನೇ ನಂಬಿಕೊಂಡರೆ ನಿಜವಾದ ಕಲಾವಿದರ ಹೊಟ್ಟೆಪಾಡಿಗೆ ದೊಡ್ಡ ಪೆಟ್ಟು ಬೀಳುತ್ತದೆ. ಕಲಾವಿದರ ಬದುಕಿಗೆ ಇದು ಮಾರಕವಾಗಬಾರದು. ನಿರ್ಮಾಪಕರು ಹಾಗೂ ತಂತ್ರಜ್ಞರು ದಯವಿಟ್ಟು ಕಲಾವಿದರನ್ನು ಇಟ್ಟುಕೊಂಡೇ ಸಿನಿಮಾಗಳನ್ನು ನಿರ್ಮಿಸಬೇಕು" ಎಂದು ಮನವಿ ಮಾಡಿದರು.
ಒಟ್ಟಾರೆಯಾಗಿ ಹಿರಿಯ ನಟಿ ಉಮಾಶ್ರೀ ಅವರು ಎಐ (AI) ಮತ್ತು ಆಧುನಿಕ ತಂತ್ರಜ್ಞಾನದಿಂದ ತೆರೆಮರೆಯ ಕಲಾವಿದರಿಗೆ ಹಾಗೂ ಕಾರ್ಮಿಕರಿಗೆ ಎದುರಾಗಬಹುದಾದ ಆತಂಕವನ್ನು ಮುಕ್ತವಾಗಿ ಹಂಚಿಕೊಳ್ಳುವ ಮೂಲಕ ಇಂದಿನ AI ಸಿನಿಮಾ ನಿರ್ಮಾಪಕರಿಗೆ ಹಾಗೂ ನೂತನ ಚಿತ್ರ ನಿರ್ಮಾಪಕರು ಗಂಭೀರವಾಗಿ ಆಲೋಚಿಸುವಂತೆ ಮಾಡಿದ್ದಾರೆ. ತಂತ್ರಜ್ಞಾನ ಎಷ್ಟೇ ಬೆಳೆದರೂ ಜೀವಂತ ಕಲಾವಿದರ ಶ್ರಮವನ್ನು ಮರೆಯಬಾರದು ಎಂಬ ಅವರ ಮಾತು ನಿಜಕ್ಕೂ ಅಕ್ಷರಶಃ ಸತ್ಯ ಎನ್ನುವುದು ಕಲಾವಿದರ ಮಾತುಗಳು..