ಚಿರಂಜೀವಿ ಬಿಟ್ಟು ಟಾಲಿವುಡ್‌ನ ಎಲ್ಲಾ ಸ್ಟಾರ್ ನಟರೊಂದಿಗೆ ನಟಿಸಿದ್ದೇಕೆ ಅನುಷ್ಕಾ ಶೆಟ್ಟಿ..?! ಅದಕ್ಕೆ ಕಾರಣವೂ ಇದೆ
ಬಹುತೇಕ ಟಾಲಿವುಡ್‌ನಲ್ಲಿ ಹಿರಿಯ ಹಾಗೂ ಯುವ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಕೋಟ್ಯಂತರ ಅಭಿಮಾನಿಗಳ ಮನಸ್ಸು ಗೆದ್ದಿರುವ ಜನಪ್ರಿಯ ನಟಿ ಅನುಷ್ಕಾ ಶೆಟ್ಟಿ ಕುರಿತ ಆಸಕ್ತಿದಾಯಕ ಮತ್ತು ಅಚ್ಚರಿಯ ವಿಷಯ ಒಂದು ಈಗ ಚರ್ಚೆಯಲ್ಲಿದೆ. ಅನುಷ್ಕಾ, ಮೆಗಾಸ್ಟಾರ್ ಚಿರಂಜೀವಿ ಎದುರು ಮಾತ್ರ ಇದುವರೆಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಂಡಿಲ್ಲ.. ಅಸಲಿಗೆ ಇದಕ್ಕೆ ಕಾರಣವೇನು..? ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ..
Anushka Shetty Chiranjeevi movie : ಚಿತ್ರರಂಗದಲ್ಲಿ ನಾಯಕ ಮತ್ತು ನಾಯಕಿಯರ ಜೋಡಿಗಳಿಗೆ ಎಂದಿಗೂ ವಿಶೇಷವಾದ ಕ್ರೇಜ್ ಇರುತ್ತದೆ. ತೆಲುಗು ಸಿನಿಮಾರಂಗದಲ್ಲಿ ಹಲವು ಸ್ಟಾರ್ ನಾಯಕರು ಹಾಗೂ ನಾಯಕಿಯರು ತಮ್ಮದೇ ಆದ ವಿಭಿನ್ನ ಶೈಲಿಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ. ಕೆಲ ನಟಿಯರು ನಿರ್ದಿಷ್ಟ ವಯಸ್ಸಿನ ನಾಯಕರಿಗೆ ಮಾತ್ರ ಸೀಮಿತವಾಗದೆ, ಹಿರಿಯ ಹಾಗೂ ಯುವ ನಟರು ಎಂಬ ಯಾವುದೇ ಭೇದವಿಲ್ಲದೆ ಎಲ್ಲಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳುವ ಮೂಲಕ ತಮ್ಮ ಸಾಮರ್ಥ್ಯ ತೋರಿದ್ದಾರೆ. ಇನ್ನು ಕೆಲವರು ತಮ್ಮ ಅಭಿನಯದ ಮೂಲಕವೇ ವಿಶೇಷ ಛಾಪು ಮೂಡಿಸಿ ತಮ್ಮದೆಯಾದ ಪ್ರತ್ಯೇಕ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುತ್ತಾರೆ. ಟಾಲಿವುಡ್‌ನಲ್ಲಿ ಅಂತಹ ಅಪರೂಪದ ಜನಪ್ರಿಯತೆಯನ್ನು ಗಳಿಸಿರುವ ಪ್ರಮುಖ ನಾಯಕಿಯರಲ್ಲಿ ಅನುಷ್ಕಾ ಶೆಟ್ಟಿ ಕೂಡ ಒಬ್ಬರು.
ಅನುಷ್ಕಾ ಶೆಟ್ಟಿ ಸಿನಿ ಪಯಣ, ದಿಗ್ಗಜ ನಟರೊಂದಿಗೆ ನಟನೆ
ಅನುಷ್ಕಾ ಶೆಟ್ಟಿ ಕನ್ನಡ ಸಿನಿಮಾ ಮಾಡಿಲ್ಲವೆಂದರೂ ಪ್ರೇಕ್ಷಕರಿಗೆ ಅವರ ಪರಿಚಯದ ಅಗತ್ಯವಿಲ್ಲ.. ಟಾಲಿವುಡ್ ಸ್ಟಾರ್ ನಾಗಾರ್ಜುನ ನಾಯಕನಾಗಿ ನಟಿಸಿದ 'ಸೂಪರ್' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಈ ಸುಂದರಿ, ನಂತರದ ದಿನಗಳಲ್ಲಿ ತಮ್ಮ ಸೌಂದರ್ಯ ಹಾಗೂ ನಟನಾ ಕೌಶಲ್ಯದಿಂದ ಸಾಲು ಸಾಲು ಅವಕಾಶಗಳನ್ನು ಗಿಟ್ಟಿಸಿಕೊಂಡರು. ನಾಗಾರ್ಜುನ ಅವರೊಂದಿಗೆ 'ಡಾನ್', 'ರಗಡ' ಮತ್ತು 'ಡಮರುಗಂ' ಮುಂತಾದ ಯಶಸ್ವಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ವಿಕ್ಟರಿ ವೆಂಕಟೇಶ್ ಅವರೊಂದಿಗೆ 'ಚಿಂತಕಾಯಲ ರವಿ' ಚಿತ್ರದಲ್ಲಿ ಹಾಗೂ ನಂದಮೂರಿ ಬಾಲಕೃಷ್ಣ ಅವರೊಂದಿಗೆ 'ಒಕ್ಕ ಮಗಾಡು' ಚಿತ್ರದಲ್ಲಿ ನಾಯಕಿಯಾಗಿ ತೆರೆ ಹಂಚಿಕೊಂಡರು. ಹೀಗೆ ಟಾಲಿವುಡ್‌ನ ಬಹುತೇಕ ಹಿರಿಯ ಸ್ಟಾರ್ ನಾಯಕರ ಜೊತೆ ನಟಿಸಿರುವ ಅನುಷ್ಕಾ, ತಮ್ಮ ನಟನೆಯಿಂದಲೇ ಕೋಟ್ಯಂತರ ಅಭಿಮಾನಿಗಳ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.
ವಿಭಿನ್ನ ಪಾತ್ರಗಳು ಮತ್ತು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮನ್ನಣೆ
ಕೇವಲ ಗ್ಲಾಮರಸ್ ಪಾತ್ರಗಳಿಗಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ, ಕಥೆಗೆ ಮತ್ತು ನಟನೆಗೆ ಹೆಚ್ಚಿನ ಪ್ರಾಮುಖ್ಯತೆ ಇರುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಅನುಷ್ಕಾ ವಿಭಿನ್ನತೆ ಮೆರೆದಿದ್ದಾರೆ. 'ಅರುಂಧತಿ' ಚಿತ್ರದಲ್ಲಿ ಅವರು ನಿರ್ವಹಿಸಿದ ಜೇಜಮ್ಮ ಪಾತ್ರವು ಅವರ ವೃತ್ತಿಜೀವನದಲ್ಲೇ ಒಂದು ದೊಡ್ಡ ತಿರುವು ನೀಡಿತು. ಈ ಚಿತ್ರದ ಯಶಸ್ಸಿನ ಬಳಿಕ ಅವರು ಪ್ರಮುಖ ನಾಯಕಿಯಾಗಿ ಮತ್ತಷ್ಟು ಎತ್ತರಕ್ಕೆ ಬೆಳೆದರು. ನಂತರ ಬಂದ 'ವೇದಂ', 'ರುದ್ರಮದೇವಿ' ಮುಂತಾದ ಐತಿಹಾಸಿಕ ಹಾಗೂ ಕಥಾ ಆಧಾರಿತ ಚಿತ್ರಗಳಲ್ಲೂ ತಮ್ಮ ಅದ್ಭುತ ಅಭಿನಯದಿಂದ ವಿಮರ್ಶಕರ ಪ್ರಶಂಸೆಯನ್ನು ಪಡೆದರು. ಇನ್ನು ರಾಜಮೌಳಿ ನಿರ್ದೇಶನದ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ 'ಬಾಹುಬಲಿ' ಚಿತ್ರದ ಮೂಲಕ ಅನುಷ್ಕಾ ಅವರ ಜನಪ್ರಿಯತೆ ರಾಷ್ಟ್ರವ್ಯಾಪಿ ಹರಡಿತು. ಈ ಮೂಲಕ ಅವರು ನಿಜವಾದ ಅರ್ಥದಲ್ಲಿ ಪ್ಯಾನ್ ಇಂಡಿಯಾ ನಾಯಕಿಯಾಗಿ ಮಿಂಚಿದರು.
ಕನಸಾಗಿಯೇ ಉಳಿತು ಮೆಗಾಸ್ಟಾರ್ ಚಿರಂಜೀವಿ- ಅನುಷ್ಕಾ ಕಾಂಬಿನೇಷನ್ ಸಿನಿಮಾ
ಹೀಗೆ ಟಾಲಿವುಡ್‌ನ ಬಹುತೇಕ ಎಲ್ಲಾ ದಿಗ್ಗಜ ಹಾಗೂ ಯುವ ನಾಯಕರೊಂದಿಗೆ ತೆರೆ ಹಂಚಿಕೊಂಡಿರುವ ಅನುಷ್ಕಾ ಶೆಟ್ಟಿ, ಮೆಗಾಸ್ಟಾರ್ ಚಿರಂಜೀವಿ ಅವರ ಎದುರು ಮಾತ್ರ ಇದುವರೆಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿಲ್ಲ ಎಂಬುದು ಗಮನಾರ್ಹ ಸಂಗತಿ. ಚಿರಂಜೀವಿ ನಟನೆಯ 'ಸ್ಟಾಲಿನ್' ಚಿತ್ರದಲ್ಲಿ ಅನುಷ್ಕಾ ಒಂದು ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಹಾಗೆಯೇ 'ಸೈ ರಾ ನರಸಿಂಹ ರೆಡ್ಡಿ' ಚಿತ್ರದಲ್ಲೂ ಅವರು ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿ ಗಮನ ಸೆಳೆದಿದ್ದರು.
ಆದರೆ ಈ ಯಾವುದೇ ಸಿನಿಮಾದಲ್ಲಿಯೂ ಅವರು ಚಿರಂಜೀವಿ ಅವರಿಗೆ ಜೋಡಿಯಾಗಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸುವ ಅವಕಾಶವನ್ನು ಪಡೆದಿರಲಿಲ್ಲ. ಟಾಲಿವುಡ್‌ನ ಅಗ್ರಗಣ್ಯ ನಟರ ಪಟ್ಟಿಯಲ್ಲಿರುವ ಚಿರಂಜೀವಿ ಹಾಗೂ ಅನುಷ್ಕಾ ಕಾಂಬಿನೇಷನ್ ತೆರೆಮೇಲೆ ಇದುವರೆಗೆ ಪೂರ್ಣ ಪ್ರಮಾಣದಲ್ಲಿ ಮೂಡಿಬಂದಿಲ್ಲ ಎಂಬುದು ಅನೇಕ ಅಭಿಮಾನಿಗಳಿಗೆ ಅಚ್ಚರಿಯ ವಿಷಯವಾಗಿದೆ. ಭವಿಷ್ಯದಲ್ಲಿ ಈ ಕ್ರೇಜಿ ಕಾಂಬಿನೇಷನ್ ಸೆಟ್ಟೇರಬೇಕೆಂಬುದು ಮೆಗಾ ಅಭಿಮಾನಿಗಳ ಬಲವಾದ ಆಸೆಯಾಗಿದೆ.