'ಜೊತೆಯಲ್ಲೇ ಉಂಡವರೇ ದ್ರೋಹಿಗಳು'! ದರ್ಶನ್-ಪವಿತ್ರಾ ಆಡಿಯೋ ವೈರಲ್ ಬೆನ್ನಲ್ಲೇ ವಿಜಯಲಕ್ಷ್ಮಿ ಅಚ್ಚರಿ ಪೋಸ್ಟ್
ದರ್ಶನ್ ಹಾಗೂ ಪವಿತ್ರಾ ಗೌಡ, ವಿಡಿಯೋ ಆಫ್ ಆಗಿದೆ ಎಂದುಕೊಂಡು ಪರಸ್ಪರ ಮಾತನಾಡಿಕೊಂಡ ಖಾಸಗಿ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಭಾರೀ ಸಂಚಲನ ಮೂಡಿಸಿದೆ. ಊಟ, ಬೆನ್ನುನೋವು ಹಾಗೂ ಜಾಮೀನು ಕುರಿತಾಗಿ ಇಬ್ಬರೂ ನಡೆಸಿದ ಈ ಅನಧಿಕೃತ ಚರ್ಚೆ ಈಗ ಪ್ರಾಸಿಕ್ಯೂಷನ್‌ಗೆ ಪ್ರಮುಖ ಅಸ್ತ್ರವಾಗುವ ಸಾಧ್ಯತೆಯಿದ್ದು, ಇದರ ಬೆನ್ನಲ್ಲೇ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಹಂಚಿಕೊಂಡಿರುವ ಮಾರ್ಮಿಕ ಇನ್ಸ್ಟಾಗ್ರಾಮ್ ಸ್ಟೋರಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
Vijayalakshmi Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಹಾಗೂ ವಿಚಾರಣೆ ದಿನಕ್ಕೊಂದು ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಜೈಲಿನಿಂದಲೇ ಭಾಗವಹಿಸಿದ್ದ ನಟ ದರ್ಶನ್ ಹಾಗೂ ಆರೋಪಿ ಪವಿತ್ರಾ ಗೌಡ ನಡುವಿನ ರಹಸ್ಯ ಮಾತುಕತೆಯ ಆಡಿಯೋ ಈಗ ಹೊರಬಂದು ಭಾರೀ ಸಂಚಲನ ಸೃಷ್ಟಿಸಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಹಂಚಿಕೊಂಡಿರುವ ಇನ್ಸ್ಟಾಗ್ರಾಮ್ ಸ್ಟೋರಿಯೊಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
ವಿಡಿಯೋ ಕಾನ್ಫರೆನ್ಸ್ ವೇಳೆ ನಡೆದ ಅಚಾತುರ್ಯವೇನು?
ಇತ್ತೀಚೆಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯ ಭಾಗವಾಗಿ ಸಾಕ್ಷಿಗಳ ಕ್ರಾಸ್ ಎಕ್ಸಾಮಿನೇಷನ್ ನಡೆಯುತ್ತಿತ್ತು. ಈ ವೇಳೆ ಕೆಲಕಾಲ ತಾಂತ್ರಿಕ ಕಾರಣದಿಂದ ಅಥವಾ ಉದ್ದೇಶಪೂರ್ವಕವಾಗಿ ವಿಡಿಯೋ ಕಾನ್ಫರೆನ್ಸ್‌ನ ವಿಡಿಯೋ ಸಂಪರ್ಕ ಕಡಿತಗೊಂಡಿತ್ತು. ವಿಡಿಯೋ ಮಾತ್ರ ಆಫ್ ಆಗಿ, ಆಡಿಯೋ ಲೈವ್ ಇದ್ದ ಕಾರಣ ಕಾಲ್‌ನಲ್ಲಿದ್ದ ಇತರರಿಗೆ ದರ್ಶನ್ ಹಾಗೂ ಪವಿತ್ರಾ ಗೌಡ ಪರಸ್ಪರ ಮಾತನಾಡಿಕೊಂಡ ಮಾತುಗಳು ಸ್ಪಷ್ಟವಾಗಿ ಕೇಳಿಸಿವೆ ಎನ್ನಲಾಗಿದೆ. ವಿಡಿಯೋ ಆಫ್ ಆಗಿದೆ ಎಂದುಕೊಂಡು ಇಬ್ಬರೂ ಮುಕ್ತವಾಗಿ ಮಾತನಾಡಿಕೊಂಡ ಈ ಆಡಿಯೋ ತುಣುಕು ತಕ್ಷಣವೇ ವೈರಲ್ ಆಗಿದ್ದು, ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ.
ವೈರಲ್ ಆಗಿರುವ ಈ ಆಡಿಯೋ ಕ್ಲಿಪ್‌ನಲ್ಲಿ ಪವಿತ್ರಾ ಗೌಡ ಅವರು ದರ್ಶನ್ ಬಳಿ "ಊಟ ಆಯ್ತಾ?" ಎಂದು ವಿಚಾರಿಸಿದ್ದಾರೆ. ಅದಕ್ಕೆ ದರ್ಶನ್ "ಆಯ್ತು" ಎಂದು ಉತ್ತರಿಸಿದ್ದಾರೆ. ಬಳಿಕ ದರ್ಶನ್ ಅವರ ಬೆನ್ನುನೋವಿನ ಸಮಸ್ಯೆ ಬಗ್ಗೆ ಪವಿತ್ರಾ ವಿಚಾರಿಸಿದ್ದು, "ಒಂದು ಸೆಷನ್ ಫಿಜಿಯೋಥೆರಫಿ ಆಗಿದೆ" ಎಂದು ದರ್ಶನ್ ತಿಳಿಸಿದ್ದಾರೆ. ಇದರ ಜೊತೆಗೆ ಜಾಮೀನು ಅರ್ಜಿ ಹಾಕುವ ವಿಚಾರವಾಗಿಯೂ ಇಬ್ಬರು ಚರ್ಚೆ ನಡೆಸಿದ್ದು, "ಇಷ್ಟು ದಿನಗಳೇ ಕಳೆದಿವೆ, ಇನ್ನು ಸ್ವಲ್ಪ ದಿನ ವೇಟ್ ಮಾಡು. ನಾಲ್ಕು ತಿಂಗಳಲ್ಲಿ ಜಡ್ಜ್ ಚೇಂಜ್ ಆಗ್ತಾರೆ, ಆಮೇಲೆ ಬೇಲ್‍ಗೆ ಅರ್ಜಿ ಹಾಕೋಣ" ಎಂದು ದರ್ಶನ್ ಹೇಳಿರುವುದು ಕೇಳಿಬಂದಿದೆ. ಅಷ್ಟೇ ಅಲ್ಲದೆ, "ಹೃದಯ ಹಾಗೂ ಮನಸ್ಸನ್ನು ಗಟ್ಟಿ ಮಾಡಿಕೋ, ತನಗೂ ತುಂಬಾ ಸಮಸ್ಯೆ ಆಗಿದೆ" ಎಂದು ದರ್ಶನ್ ಸನ್ನೆ ಮೂಲಕ ಹಾಗೂ ಮಾತುಗಳ ಮೂಲಕ ಧೈರ್ಯ ತುಂಬಲು ಯತ್ನಿಸಿದ್ದಾರೆ. ಬಳಿಕ ವಿಸಿ ಕನೆಕ್ಷನ್ ಮರುಪ್ರಾರಂಭವಾಗುತ್ತಿದ್ದಂತೆ ಇಬ್ಬರೂ ತಮ್ಮ ಮಾತುಕತೆಯನ್ನು ನಿಲ್ಲಿಸಿದ್ದಾರೆ.
ಪ್ರಾಸಿಕ್ಯೂಷನ್‌ಗೆ ಸಿಕ್ಕಿತಾ ಪ್ರಮುಖ ಅಸ್ತ್ರ?
ಜೈಲಿನಲ್ಲಿದ್ದುಕೊಂಡೇ ಆರೋಪಿಗಳು ಈ ರೀತಿಯ ಅನಧಿಕೃತ ಮಾತುಕತೆ ನಡೆಸಿರುವುದು ಮತ್ತು ಜಾಮೀನು ಪ್ರಕ್ರಿಯೆ ಹಾಗೂ ನ್ಯಾಯಾಧೀಶರ ಬದಲಾವಣೆಯ ಬಗ್ಗೆ ಚರ್ಚೆ ನಡೆಸಿರುವುದು ಈಗ ಕಾನೂನು ವಲಯದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ. ದರ್ಶನ್ ಅವರ ಈ ಮಾತಿನ ಚರ್ಚೆಯೇ ಈಗ ಪ್ರಾಸಿಕ್ಯೂಷನ್‌ಗೆ ಪ್ರಮುಖ ಅಸ್ತ್ರವಾಗುವ ಸಾಧ್ಯತೆಯಿದೆ. ವಿಶೇಷ ಸರ್ಕಾರಿ ಅಭಿಯೋಜಕರು (SPP) ಈ ಸಂಪೂರ್ಣ ವಿಚಾರವನ್ನು ಕೂಡಲೇ ನ್ಯಾಯಾಧೀಶರ ಗಮನಕ್ಕೆ ತರಲು ಮುಂದಾಗಿದ್ದಾರೆ ಎನ್ನಲಾಗಿದ್ದು, ಇಬ್ಬರ ಮಾತಿನ ಆಡಿಯೋ ಕ್ಲಿಪ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ವಿಜಯಲಕ್ಷ್ಮಿ ಅವರ ಮಾರ್ಮಿಕ ಇನ್ಸ್ಟಾಗ್ರಾಮ್ ಸ್ಟೋರಿ
ವಿಜಯಲಕ್ಷ್ಮಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲೇ ಈ ರೀತಿಯ ಅನಿರೀಕ್ಷಿತ ಘಟನೆಗಳು ನಡೆದಿರುವುದು ಮತ್ತಷ್ಟು ಆಘಾತ ತಂದಿತ್ತು. ಈ ಎಲ್ಲ ಬಿರುಗಾಳಿಯಂಥ ಬೆಳವಣಿಗೆಗಳ ಮಧ್ಯೆ ಎಲ್ಲರ ಚಿತ್ತ ವಿಜಯಲಕ್ಷ್ಮಿ ಅವರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದರ ಮೇಲಿತ್ತು. ಘಟನೆ ನಡೆದ ಬಳಿಕ ಮೊದಲ ಬಾರಿಗೆ ಇನ್ಸ್ಟಾಗ್ರಾಮ್ ಸ್ಟೋರಿ ಹಂಚಿಕೊಂಡಿರುವ ವಿಜಯಲಕ್ಷ್ಮಿ, ಬಹಳ ಆಳವಾದ ಅರ್ಥವಿರುವ ಮಾತೊಂದನ್ನು ಬರೆದುಕೊಂಡಿದ್ದಾರೆ.
"ನಿಮಗೆ ದ್ರೋಹ ಬಗೆಯೋದು ನಿಮ್ಮ ಶತ್ರುಗಳಲ್ಲ, ಬದಲಾಗಿ ನಿಮ್ಮ ಜೊತೆಯಲ್ಲೇ ಉಂಡವರು" ಎಂಬ ಅರ್ಥವಿರುವ ರೀಲ್ಸ್ ವೀಡಿಯೊವನ್ನು ವಿಬೋದ್ & ವಿನೀಶ್ ದರ್ಶನ್ ಎನ್ನುವ ಇನ್ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಅದೇ ವೀಡಿಯೊವನ್ನು ವಿಜಯಲಕ್ಷ್ಮಿ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ. ಈ ಪೋಸ್ಟ್ ಯಾರನ್ನು ಉದ್ದೇಶಿಸಿ ಮಾಡಲಾಗಿದೆ ಅಥವಾ ಇದು ದರ್ಶನ್ ಅವರನ್ನುದ್ದೇಶಿಸಿ ಬರೆದದ್ದಾ ಎನ್ನುವ ಹತ್ತು ಹಲವು ಸಂದೇಹಗಳು ಮತ್ತು ಅನುಮಾನಗಳು ಈಗ ಸಾರ್ವಜನಿಕ ವಲಯದಲ್ಲಿ ಹಾಗೂ ಅಭಿಮಾನಿಗಳ ಮಹಮಲಿನಲ್ಲಿ ಮೂಡಲು ಕಾರಣವಾಗಿದೆ. ಒಟ್ಟಾರೆಯಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯ ಹಾದಿಯಲ್ಲಿ ಈ ಹೊಸ ಆಡಿಯೋ ಮತ್ತು ವಿಜಯಲಕ್ಷ್ಮಿ ಅವರ ಪೋಸ್ಟ್ ಪ್ರಕರಣಕ್ಕೆ ಮತ್ತಷ್ಟು ಕುತೂಹಲ ಹಾಗೂ ಗಂಭೀರತೆಯ ಬಣ್ಣ ಬಳಿದಿದೆ.