SOCIAL MEDIA

Newsletter

PARTNER SITES
Select Language Select State

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

ವಿಜಯ್ ಆಂಟನಿ ಮತ್ತು ಫಾತಿಮಾ ದಂಪತಿಯ ಹಿರಿಯ ಮಗಳು ಮೀರಾ ಎಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಮಗಳು ಕಾಲೇಜಿಗೆ ಹೋಗುವ ಕನಸು ಕಂಡಿದ್ದಳು. ಕಾಲೇಜು ಜೀವನ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಆಕೆಗೆ ಬೇಕಾದ ಪ್ರತಿಯೊಂದು ವಸ್ತುವನ್ನೂ ತಂದೆ-ತಾಯಿ ಪ್ರೀತಿಯಿಂದ ಖರೀದಿಸುತ್ತಿದ್ದರು. ಅದರಲ್ಲೂ ಮೀರಾಗೆ ಶೂ ಮತ್ತು ಸ್ಯಾಂಡಲ್‌ಗಳೆಂದರೆ ಬಹಳ ಇಷ್ಟವಾಗಿತ್ತು.

Written By Chetana Devarmani
Published: Nov 18, 2026, 22:20 IST | Updated: Nov 18, 2026, 22:22 IST
Join

ಚಿತ್ರರಂಗದಲ್ಲಿ ಹೆಸರು, ಖ್ಯಾತಿ, ಹಣ ಮತ್ತು ಅಭಿಮಾನಿಗಳ ಪ್ರೀತಿ ಎಲ್ಲವನ್ನೂ ಸಂಪಾದಿಸಿದರೂ ವೈಯಕ್ತಿಕ ಬದುಕಿನಲ್ಲಿ ಎದುರಾಗುವ ಕೆಲವು ನೋವುಗಳನ್ನು ಮರೆಯುವುದು ಅಷ್ಟು ಸುಲಭವಲ್ಲ. ಅದರಲ್ಲೂ ಹೆತ್ತ ಮಗಳನ್ನು ಕಳೆದುಕೊಂಡ ತಂದೆಯ ನೋವು ಹೇಗಿರಬಹುದು ಎಂಬುದನ್ನು ಊಹಿಸುವುದೂ ಕಷ್ಟ. ತಮಿಳು ಚಿತ್ರರಂಗದ ಖ್ಯಾತ ನಟ ಹಾಗೂ ಸಂಗೀತ ನಿರ್ದೇಶಕ ವಿಜಯ್ ಆಂಟನಿ ಅವರ ಬದುಕಿನಲ್ಲೂ ಇಂತಹದ್ದೇ ಒಂದು ಹೃದಯವಿದ್ರಾವಕ ಕಥೆಯಿದೆ. ಮುದ್ದಿನ ಮಗಳ ಸಾವಿನ ನಂತರ ಅವರು ತೆಗೆದುಕೊಂಡಿರುವ ಒಂದು ನಿರ್ಧಾರ ಇದೀಗ ಎಲ್ಲರ ಕಣ್ಣಾಲಿಗಳನ್ನು ತೇವಗೊಳಿಸುತ್ತಿದೆ. ಮಗಳು ಬದುಕಿದ್ದಾಗ ಆಕೆಗೆಂದು ಖರೀದಿಸಿದ್ದ ನೂರಾರು ಜೊತೆ ಶೂಗಳು ಮನೆಯಲ್ಲಿ ಹಾಗೆಯೇ ಉಳಿದಿವೆ. ಅವುಗಳನ್ನು ನೋಡಿದ ತಂದೆ ಅಂದಿನಿಂದ ತಾವು ಕೂಡ ಚಪ್ಪಲಿ ಮತ್ತು ಶೂ ಧರಿಸುವುದಿಲ್ಲ ಎಂದು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲ, ಕೋಟ್ಯಂತರ ರೂಪಾಯಿ ಬೆಲೆಬಾಳುವ ವಾಚ್‌ಗಳ ಸಂಗ್ರಹವಿದ್ದರೂ ಮಗಳು ಕೊನೆಯದಾಗಿ ಧರಿಸಿದ್ದ ಸಾಮಾನ್ಯ ವಾಚ್ ಅನ್ನೇ ಇಂದಿಗೂ ಕಟ್ಟಿಕೊಳ್ಳುತ್ತಿದ್ದಾರೆ.

ವಿಜಯ್ ಆಂಟನಿ ಮತ್ತು ಫಾತಿಮಾ ದಂಪತಿಯ ಹಿರಿಯ ಮಗಳು ಮೀರಾ ಎಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಮಗಳು ಕಾಲೇಜಿಗೆ ಹೋಗುವ ಕನಸು ಕಂಡಿದ್ದಳು. ಕಾಲೇಜು ಜೀವನ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಆಕೆಗೆ ಬೇಕಾದ ಪ್ರತಿಯೊಂದು ವಸ್ತುವನ್ನೂ ತಂದೆ-ತಾಯಿ ಪ್ರೀತಿಯಿಂದ ಖರೀದಿಸುತ್ತಿದ್ದರು. ಅದರಲ್ಲೂ ಮೀರಾಗೆ ಶೂ ಮತ್ತು ಸ್ಯಾಂಡಲ್‌ಗಳೆಂದರೆ ಬಹಳ ಇಷ್ಟವಾಗಿತ್ತು.

ಹೀಗಾಗಿ ಅಮೆರಿಕ, ಲಂಡನ್ ಸೇರಿದಂತೆ ವಿದೇಶಗಳಿಗೆ ಹೋದಾಗಲೆಲ್ಲ ಮಗಳಿಗಾಗಿ ವಿವಿಧ ವಿನ್ಯಾಸದ ಶೂ ಮತ್ತು ಸ್ಯಾಂಡಲ್‌ಗಳನ್ನು ಖರೀದಿಸಿ ತರುತ್ತಿದ್ದರು. ಹೀಗೆ ಮಗಳಿಗಾಗಿ ಸುಮಾರು 50ರಿಂದ 100 ಜೋಡಿ ಪಾದರಕ್ಷೆಗಳನ್ನು ಸಂಗ್ರಹಿಸಿದ್ದರು ಎಂದು ವರದಿಯಾಗಿದೆ.

ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಕಾಲೇಜಿಗೆ ಹೋಗಿ ಹೊಸ ಜೀವನ ಆರಂಭಿಸಬೇಕಿದ್ದ ಮೀರಾ, ಆ ಪಾದರಕ್ಷೆಗಳಲ್ಲಿ ಒಂದನ್ನೂ ಧರಿಸುವ ಮೊದಲೇ ಇಹಲೋಕ ತ್ಯಜಿಸಿದ್ದಳು. ಮನೆಯಲ್ಲಿ ಮಗಳಿಗಾಗಿ ಖರೀದಿಸಿದ್ದ ಶೂಗಳು ಹಾಗೆಯೇ ಉಳಿದುಕೊಂಡಿದ್ದವು. ಮಗಳು ಧರಿಸಬೇಕಿದ್ದ ಪಾದರಕ್ಷೆಗಳ ರಾಶಿಯನ್ನು ನೋಡಿದಾಗಲೆಲ್ಲ ತಂದೆ ವಿಜಯ್ ಆಂಟನಿ ಅವರಿಗೆ ಮಗಳ ನೆನಪು ಕಾಡುತ್ತಿತ್ತು.

ಅಂದಿನಿಂದ ಶೂ, ಚಪ್ಪಲಿ ಧರಿಸುವುದನ್ನೇ ಬಿಟ್ಟ ನಟ!

ಮಗಳಿಗಾಗಿ ಇಷ್ಟೆಲ್ಲ ಪ್ರೀತಿಯಿಂದ ಖರೀದಿಸಿದ್ದ ಪಾದರಕ್ಷೆಗಳನ್ನು ಆಕೆ ಬಳಸಲೇ ಇಲ್ಲ ಎಂಬ ನೋವು ವಿಜಯ್ ಆಂಟನಿ ಅವರನ್ನು ಕಾಡುತ್ತಿತ್ತು. ಮನೆಯಲ್ಲಿ ಹಾಗೆಯೇ ಉಳಿದಿದ್ದ ಮಗಳ ಶೂಗಳನ್ನು ನೋಡಿದ ಅವರು, ಇನ್ನು ಮುಂದೆ ತಮ್ಮ ಜೀವನದಲ್ಲಿ ಪಾದರಕ್ಷೆಗಳನ್ನು ಧರಿಸುವುದಿಲ್ಲ ಎಂದು ನಿರ್ಧರಿಸಿದ್ದಾರೆ.

ಈ ನಿರ್ಧಾರದ ಹಿಂದಿರುವ ಭಾವನೆಯನ್ನು ಪತ್ನಿ ಫಾತಿಮಾ ಇತ್ತೀಚೆಗೆ ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ. ವಿಜಯ್ ಆಂಟನಿ ಅವರು ತಮ್ಮ ಜೀವನಪೂರ್ತಿ ಶೂ ಮತ್ತು ಚಪ್ಪಲಿಗಳನ್ನು ಧರಿಸದಿರಲು ತೀರ್ಮಾನಿಸಿದ್ದಾರೆ. ಈ ವಿಚಾರವನ್ನು ಹೊರಗಿನವರಿಗೆ ಹೇಳಿರಲಿಲ್ಲ. ಆದರೆ ಇದೀಗ ಅದರ ಹಿಂದಿರುವ ಕಾರಣವನ್ನು ಬಹಿರಂಗಪಡಿಸುತ್ತಿದ್ದೇನೆ ಎಂದು ಫಾತಿಮಾ ಭಾವುಕರಾಗಿ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವಿಜಯ್ ಆಂಟನಿ ವಿಮಾನ ನಿಲ್ದಾಣಗಳಲ್ಲಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮತ್ತು ಹಲವು ಸಂದರ್ಭಗಳಲ್ಲಿ ಬರಿಗಾಲಿನಲ್ಲಿ ಕಾಣಿಸಿಕೊಳ್ಳುತ್ತಿರುವುದನ್ನು ಅಭಿಮಾನಿಗಳು ಗಮನಿಸಿದ್ದರು. ಆದರೆ ಅವರು ಯಾಕೆ ಶೂ ಧರಿಸುವುದಿಲ್ಲ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

ವಿದೇಶಗಳಲ್ಲಿ ಮಾತ್ರ ಶೂ ಧರಿಸುತ್ತಾರೆ!

ವಿಜಯ್ ಆಂಟನಿ ಸಂಗೀತ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ದೇಶ-ವಿದೇಶಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿರುತ್ತಾರೆ. ಆದರೆ ವಿದೇಶಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಕೆಲವು ಸಂದರ್ಭಗಳಲ್ಲಿ ಶೂ ಧರಿಸುವುದು ಅನಿವಾರ್ಯವಾಗುತ್ತದೆ.

ಲಂಡನ್, ಪ್ಯಾರಿಸ್, ಸಿಂಗಾಪುರ ಮತ್ತು ಮಲೇಷ್ಯಾದಂತಹ ದೇಶಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡುವಾಗ ಮಾತ್ರ ಅವರು ಶೂ ಧರಿಸುತ್ತಾರೆ. ಕಾರ್ಯಕ್ರಮ ಮುಗಿದ ತಕ್ಷಣವೇ ಶೂಗಳನ್ನು ತೆಗೆದುಹಾಕುತ್ತಾರೆ ಎಂದು ಫಾತಿಮಾ ವಿವರಿಸಿದ್ದಾರೆ.

ಅಂದರೆ, ಮಗಳ ನೆನಪಿಗಾಗಿ ತೆಗೆದುಕೊಂಡಿರುವ ನಿರ್ಧಾರವನ್ನು ಸಾಧ್ಯವಾದಷ್ಟು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗಲೂ ಬರಿಗಾಲಿನಲ್ಲೇ ಇರಲು ಅವರು ಇಷ್ಟಪಡುತ್ತಾರೆ.

ರೋಲೆಕ್ಸ್, ರಾಡೋ ವಾಚ್‌ಗಳನ್ನೂ ಬಿಟ್ಟ ತಂದೆ!

ವಿಜಯ್ ಆಂಟನಿ ಅವರ ಮಗಳ ಮೇಲಿನ ಪ್ರೀತಿ ಕೇವಲ ಪಾದರಕ್ಷೆಗಳನ್ನು ತ್ಯಜಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರ ಬಳಿ ರೋಲೆಕ್ಸ್ ಮತ್ತು ರಾಡೋ ಸೇರಿದಂತೆ ದುಬಾರಿ ಬ್ರ್ಯಾಂಡ್‌ಗಳ ಹಲವು ವಾಚ್‌ಗಳಿದ್ದವು. ಆದರೆ ಮಗಳ ಸಾವಿನ ನಂತರ ಆ ವಾಚ್‌ಗಳನ್ನೆಲ್ಲ ಬದಿಗಿಟ್ಟಿದ್ದಾರೆ.

ಈಗ ಅವರು ಪ್ರತಿದಿನ ಧರಿಸುವುದು ಮಗಳು ಮೀರಾ ಕೊನೆಯದಾಗಿ ಧರಿಸಿದ್ದ ವಾಚ್ ಅನ್ನು ಮಾತ್ರ. ಈ ವಿಷಯವನ್ನು ಕೂಡ ಫಾತಿಮಾ ಬಹಿರಂಗಪಡಿಸಿದ್ದಾರೆ.

ಮೀರಾ ತನಗೆ ಒಂದು ವಾಚ್ ಬೇಕೆಂದು ಕೇಳಿದ್ದಳು. ಆಗ ತಾಯಿ ಫಾತಿಮಾ ಸುಮಾರು 4 ಸಾವಿರ ರೂಪಾಯಿ ಬೆಲೆಯ ವಾಚ್‌ವೊಂದನ್ನು ಕೊಡಿಸಿದ್ದರು. ಮಗಳು ಕೊನೆಯದಾಗಿ ಧರಿಸಿದ್ದ ಆ ವಾಚ್ ಈಗ ವಿಜಯ್ ಆಂಟನಿ ಅವರ ಕೈಯಲ್ಲಿದೆ.

ರೋಲೆಕ್ಸ್, ರಾಡೋ ಅಂತಹ ದುಬಾರಿ ವಾಚ್‌ಗಳಿದ್ದರೂ ಅವುಗಳನ್ನು ಬಳಸದೆ ಮಗಳ ನೆನಪನ್ನು ಉಳಿಸಿಕೊಂಡಿರುವ ಆ ಒಂದು ವಾಚ್ ಅನ್ನೇ ಅವರು ಧರಿಸುತ್ತಿದ್ದಾರೆ. ಪತ್ನಿ ಹಲವು ಬಾರಿ ಸ್ಮಾರ್ಟ್ ವಾಚ್ ಬಳಸುವಂತೆ ಸಲಹೆ ನೀಡಿದರೂ ಅವರು ಒಪ್ಪಿಲ್ಲ ಎನ್ನಲಾಗಿದೆ.

16ನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಮೀರಾ!

ವಿಜಯ್ ಆಂಟನಿ ಕುಟುಂಬಕ್ಕೆ 2023ರ ಸೆಪ್ಟೆಂಬರ್ ತಿಂಗಳು ಎಂದಿಗೂ ಮರೆಯಲಾಗದ ಕರಾಳ ದಿನಗಳನ್ನು ತಂದಿತ್ತು. ಕೇವಲ 16 ವರ್ಷದ ಹಿರಿಯ ಮಗಳು ಮೀರಾ ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದರು.

ಮೀರಾ ಮಾನಸಿಕ ಒತ್ತಡ ಮತ್ತು ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂಬ ವರದಿಗಳು ಪ್ರಕಟವಾಗಿದ್ದವು. ಮಗಳ ಅಕಾಲಿಕ ಸಾವಿನಿಂದ ವಿಜಯ್ ಆಂಟನಿ ಮತ್ತು ಫಾತಿಮಾ ಸಂಪೂರ್ಣವಾಗಿ ಕುಗ್ಗಿಹೋಗಿದ್ದರು.

ಮಗಳ ಸಾವಿನ ನಂತರ ವಿಜಯ್ ಆಂಟನಿ ತಮ್ಮ ನೋವನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಹಂಚಿಕೊಂಡಿದ್ದರು. ಮಗಳ ಅಗಲಿಕೆಯಿಂದ ತಾವು ಅನುಭವಿಸಿದ ನೋವು ಮತ್ತು ಆಕೆಯ ನೆನಪುಗಳು ತಮ್ಮ ಬದುಕಿನ ಭಾಗವಾಗಿವೆ ಎಂದು ಹೇಳಿಕೊಂಡಿದ್ದರು.

ಒಂದು ಕಡೆ ಸಿನಿಮಾ ಕೆಲಸಗಳು, ಮತ್ತೊಂದು ಕಡೆ ಕುಟುಂಬದ ಜವಾಬ್ದಾರಿಗಳು ಇದ್ದರೂ ಮಗಳ ನೆನಪು ಮಾತ್ರ ಅವರನ್ನು ಸದಾ ಕಾಡುತ್ತಿದೆ. ಮಗಳು ತಮ್ಮಿಂದ ದೂರವಾಗಿದ್ದಾಳೆ ಎಂದು ತಾವು ಭಾವಿಸುವುದಿಲ್ಲ. ಆಕೆಯ ಇರುವಿಕೆಯನ್ನು ಪ್ರತಿದಿನ ಅನುಭವಿಸುತ್ತೇನೆ ಮತ್ತು ಆಕೆಯೊಂದಿಗೆ ಮಾತನಾಡುತ್ತೇನೆ ಎಂದು ಈ ಹಿಂದೆ ಹೇಳಿಕೊಂಡಿದ್ದರು.

ಐದು ವರ್ಷಗಳ ಬಳಿಕ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಫಾತಿಮಾ!

ಮೀರಾ ಸಾವಿನ ನಂತರ ಫಾತಿಮಾ ಕೂಡ ಚಿತ್ರರಂಗದ ಕಾರ್ಯಕ್ರಮಗಳಿಂದ ದೂರ ಉಳಿದಿದ್ದರು. ಮಗಳ ಅಗಲಿಕೆಯ ನೋವಿನಿಂದ ಹೊರಬರಲು ಅವರಿಗೆ ಸಾಕಷ್ಟು ಸಮಯ ಬೇಕಾಗಿತ್ತು. ಇದೀಗ ಸುಮಾರು ಐದು ವರ್ಷಗಳ ಬಳಿಕ ವಿಜಯ್ ಆಂಟನಿ ಅವರ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.

‘ಅಪ್ಪಾ ಕುಟ್ಟಿ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಫಾತಿಮಾ, ಪತಿಯ ಜೀವನದ ಹಿಂದಿರುವ ನೋವಿನ ಕಥೆಯನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ವಿಜಯ್ ಆಂಟನಿ ಅವರ ಕಷ್ಟದ ಸಮಯದಲ್ಲಿ ಅಭಿಮಾನಿಗಳು ಮತ್ತು ಆತ್ಮೀಯರು ನೀಡಿದ ಬೆಂಬಲವನ್ನು ಸ್ಮರಿಸಿದ್ದಾರೆ.

ಅದೇ ಕಾರ್ಯಕ್ರಮದಲ್ಲಿ ದಂಪತಿಯ ಕಿರಿಯ ಮಗಳು ಲಾರಾ ಕೂಡ ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡಿದ್ದಾರೆ. ಮೀರಾ ಬದುಕಿದ್ದರೆ ಆಕೆಯೂ ಇಂತಹ ಕಾರ್ಯಕ್ರಮದಲ್ಲಿ ಮಾತನಾಡುವುದನ್ನು ನೋಡಬಹುದಿತ್ತು ಎಂಬ ನೋವು ವಿಜಯ್ ಆಂಟನಿ ಅವರನ್ನು ಕಾಡಿದೆ. ಕಿರಿಯ ಮಗಳು ವೇದಿಕೆಯಲ್ಲಿ ಮಾತನಾಡುವುದನ್ನು ಕಂಡು ಸಂತೋಷಪಟ್ಟರೂ ಹಿರಿಯ ಮಗಳ ನೆನಪಿನಿಂದ ಅವರು ಭಾವುಕರಾಗಿದ್ದಾರೆ.

ತಂದೆ-ಮಗಳ ಬಾಂಧವ್ಯದ ಕಥೆ ಹೇಳುವ ‘ಅಪ್ಪಾ ಕುಟ್ಟಿ’!

ವೈಯಕ್ತಿಕ ಬದುಕಿನಲ್ಲಿ ಇಷ್ಟೊಂದು ನೋವನ್ನು ಅನುಭವಿಸಿರುವ ವಿಜಯ್ ಆಂಟನಿ ಇದೀಗ ‘ಅಪ್ಪಾ ಕುಟ್ಟಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರವು ತಂದೆ ಮತ್ತು ಮಗಳ ನಡುವಿನ ಭಾವನಾತ್ಮಕ ಸಂಬಂಧವನ್ನು ಆಧರಿಸಿದೆ. ಮು ಮಾರನ್ ನಿರ್ದೇಶನದ ಈ ಚಿತ್ರದಲ್ಲಿ ಪ್ರೀತಿ ಅಸ್ರಾನಿ ನಾಯಕಿಯಾಗಿ ನಟಿಸಿದ್ದಾರೆ.

ನವೆಂಬರ್ 20ರಂದು ಸಿನಿಮಾ ತೆರೆಕಾಣಲು ಸಿದ್ಧವಾಗಿದೆ. ವಿಶೇಷವೆಂದರೆ, ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ವಿಜಯ್ ಆಂಟನಿ ತಮ್ಮ ಮಗಳ ನೆನಪನ್ನು ಮೆಲುಕು ಹಾಕಿದ್ದಾರೆ. ತಂದೆ-ಮಗಳ ಸಂಬಂಧದ ಕಥೆ ಹೊಂದಿರುವ ಸಿನಿಮಾದಲ್ಲಿ ನಟಿಸುವುದು ಅವರಿಗೆ ವೈಯಕ್ತಿಕವಾಗಿಯೂ ಭಾವನಾತ್ಮಕ ಅನುಭವವಾಗಿದೆ.

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

ZEENEWS TRENDING STORIES