SOCIAL MEDIA

Newsletter

PARTNER SITES
Select Language Select State

ಬೇಲ್‌ ಸಿನಿಮಾದ ಶಿವಣ್ಣ ಆಂಥೆಮ್ ಸಾಂಗ್‌ ರಿಲೀಸ್‌.. ಆಸ್ಪತ್ರೆಯಲ್ಲಿ ಶಿವರಾಜ್‌ಕುಮಾರ್‌, ಗೀತಾ ದಂಪತಿ ಕಣ್ಣೀರು

ಪವನ್ ಒಡೆಯರ್ ಅವರ ನಿರ್ದೇಶನದ ಬಹುನಿರೀಕ್ಷಿತ ಬೇಲ್ ಸಿನಿಮಾದ ಶಿವಣ್ಣ ಆಂಥೆಮ್ ಲಿರಿಕಲ್ ಸಾಂಗ್ ಅನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ.

Written By Bhimappa
Published: Sep 29, 2026, 02:24 PM IST | Updated: Sep 29, 2026, 02:31 PM IST
Image Credit: Shivarajkumar_starr_Bail_Movie
Join

Bail Movie Shivanna Anthem Song Released: ಕೆವಿಎನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ವೆಂಕಟ್ ಕೆ. ನಾರಾಯಣ ನಿರ್ಮಾಣದ, ಪವನ್ ಒಡೆಯರ್ ಅವರ ನಿರ್ದೇಶನದ ಬಹುನಿರೀಕ್ಷಿತ ಬೇಲ್ ಸಿನಿಮಾದ ಶಿವಣ್ಣ ಆಂಥೆಮ್ ಲಿರಿಕಲ್ ಸಾಂಗ್ ಅನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ಸಾಂಗ್ ರಿಲೀಸ್ ಸಮಾರಂಭದಲ್ಲಿ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್, ನಿರ್ದೇಶಕ ಪವನ್ ಒಡೆಯರ್ ತಮ್ಮ ವೈಯಕ್ತಿಕ ಬದುಕಿನ ನೋವು ಮತ್ತು ಕೆಲವೊಂದು ಚಾಲೆಂಜ್‌ಗಳು ಮತ್ತು ಚಿತ್ರೀಕರಣದ ದಿನಗಳ ಭಾವನಾತ್ಮಕ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಶಿವಣ್ಣ ಆಂಥೆಮ್ ಲಿರಿಕಲ್ ಸಾಂಗ್ ಬಿಡುಗಡೆಯ ಬಳಿಕ ವೇದಿಕೆ ಮೇಲೆ ಮಾತನಾಡಿದ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್‌ ಅವರು, ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದ ಕಠಿಣ ದಿನಗಳನ್ನು ಮೆಲುಕು ಹಾಕಿದರು. ನಾನು ಕೊನೆಯ ಹಂತದ ಕೀಮೋಥೆರಪಿಗೆ ಒಳಗಾಗುತ್ತಿದ್ದ ಸಂದರ್ಭದಲ್ಲಿ ನಿರ್ದೇಶಕ ಪವನ್ ಒಡೆಯರ್ ಹಾಗೂ ಅವರ ಪತ್ನಿ ಅಪೇಕ್ಷಾ ಭೇಟಿ ನೀಡಿ ಕಥೆ ಹೇಳಿದ್ದರು. ಕೀಮೋಥೆರಪಿ ವೇಳೆ ಸಾಮಾನ್ಯವಾಗಿ ಕೂದಲು ಉದುರುತ್ತದೆ, ಅಷ್ಟು ಪ್ರಬಲ ಡೋಸ್ ನೀಡಿದ್ದರೂ ದೇವರ ದಯೆಯಿಂದ ನನಗೆ ಒಂದೇ ಒಂದು ಕೂದಲು ಕೂಡ ಉದುರಲಿಲ್ಲ. 64 ವರ್ಷದವರೆಗೆ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದ ಕೂದಲನ್ನು ನೋಡಿ ಬೇರೆಯವರು ಮರುಗಬಾರದು ಎಂಬ ಆತಂಕವಿತ್ತು. ಚಿಕಿತ್ಸೆಯ ಆ ಕಷ್ಟದ ವೇಳೆಯಲ್ಲೂ ಪವನ್ ದಂಪತಿ ಬಂದು ಪ್ರೀತಿಯಿಂದ ಅಡ್ವಾನ್ಸ್ ನೀಡಿ ಸಿನಿಮಾ ಒಪ್ಪಿಸಿದರು. ಅವರ ನಂಬಿಕೆ ಕಂಡು ನಾನು ಹಾಗೂ ಪತ್ನಿ ಗೀತಾ ಭಾವುಕರಾಗಿ ಕಣ್ಣೀರಿಟ್ಟಿದ್ದೆವು ಎಂದು ಶಿವಣ್ಣ ಹೇಳಿದರು.

ಸಿನಿಮಾದ ಪಾತ್ರವರ್ಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಿವಣ್ಣ, ಇದು ಕೇವಲ ಒಬ್ಬ ವ್ಯಕ್ತಿಯ ಶೋ ಅಲ್ಲ. ಎಲ್ಲ ಪಾತ್ರಗಳು ಚಿತ್ರಕಥೆಗೆ ಜೀವ ತುಂಬಿವೆ. ದೀಕ್ಷಿತ್ ಅತ್ಯುತ್ತಮ ಡ್ಯಾನ್ಸರ್ ಮತ್ತು ಹ್ಯಾಂಡ್‌ಸಮ್ ನಟ. ಸಂಜನಾ ಉತ್ತಮ ಅಭಿನಯ ನೀಡಿದ್ದಾರೆ. ಇನ್ನು ದುನಿಯಾ ಚಿತ್ರದಿಂದಲೂ ನಾನು ಲೂಸ್ ಮಾದ ಯೋಗಿಗೆ ದೊಡ್ಡ ಅಭಿಮಾನಿಯಾಗಿದ್ದು, ಅವರೊಂದಿಗೆ ತೆರೆ ಹಂಚಿಕೊಂಡಿದ್ದು ಖುಷಿ ನೀಡಿದೆ. ವಯಸ್ಸಾಗುವುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು, 64 ವರ್ಷವಾದರೂ ಕೆಲಸ ಮಾಡುವ ಸಕಾರಾತ್ಮಕ ಮನೋಭಾವ ನಮ್ಮಲ್ಲಿರಬೇಕು.‌ ಇದೊಂದು ಉತ್ತಮ ಸಿನಿಮಾವಾಗಲಿದೆ ಎಂದು ಹೇಳಿದರು.

ನಿರ್ದೇಶಕ ಪವನ್ ಒಡೆಯರ್ ಅವರು ಮಾತನಾಡಿ, ಕ್ರಿಕೆಟ್ ಟೂರ್ನಮೆಂಟ್ ಆಕ್ಷನ್ ವೇಳೆ ಶಿವಣ್ಣನಿಗೆ ಕ್ಯಾನ್ಸರ್ ಆಗಿದೆ ಎಂಬ ಸುದ್ದಿ ಕೇಳಿ ದಿಗ್ಭ್ರಮೆಗೊಂಡಿದ್ದೆ. ಆದರೆ ಚಿತ್ರರಂಗದ ಕಾರ್ಮಿಕರ ಬದುಕಿಗೆ ನಿರಂತರವಾಗಿ ಆಸರೆಯಾಗಿರುವ, ಹಿಟ್-ಫ್ಲಾಪ್ ಮೀರಿ ನಿಂತಿರುವ ಶಿವಣ್ಣನಿಗೆ ಏನೂ ಆಗಲ್ಲ ಎಂಬ ನಂಬಿಕೆಯಿತ್ತು. ಚಿಕಿತ್ಸೆ ಮುಗಿಸಿ ಗುಣಮುಖರಾಗಿ ಬಂದ ತಕ್ಷಣವೇ ಅವರು ನಮಗೆ ಕರೆ ಮಾಡಿ ಚಿತ್ರೀಕರಣಕ್ಕೆ ಡೇಟ್ಸ್ ನೀಡಿದರು. ಇದಕ್ಕೆ ಬೆನ್ನೆಲುಬಾಗಿ ನಿಂತ ಗೀತಕ್ಕ ಹಾಗೂ ನಿವೇದಿತಾ ಶಿವರಾಜ್‌ಕುಮಾರ್ ಅವರಿಗೆ ಧನ್ಯವಾದಗಳು. ಈ ಚಿತ್ರವನ್ನು ನಾವೇ ನಿರ್ಮಿಸಲು ಹೊರಟಿದ್ದಾಗ, ಕಥೆ ಮೆಚ್ಚಿದ ಕೆವಿಎನ್ ಪ್ರೊಡಕ್ಷನ್ಸ್‌ನ ವೆಂಕಟ್ ಕೆ. ನಾರಾಯಣ ಅವರು ಬೆಂಬಲವಾಗಿ ನಿಂತರು ಎಂದು ಹೇಳಿದರು.

ತಮ್ಮ ತಾಯಿಯ ನೆನಪಿನಲ್ಲಿ ಭಾವುಕರಾದ ಪವನ್ ಒಡೆಯರ್ ಅವರು, ಎರಡನೇ ಶೆಡ್ಯೂಲ್ ಚಿತ್ರೀಕರಣದ ವೇಳೆ ನನ್ನ ತಾಯಿಗೂ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಅವರು ಶಿವಣ್ಣ ಅವರ ಅಪ್ಪಟ ಅಭಿಮಾನಿ. ತಮಗೆ ನೋವಿದ್ದರೂ, ಸಿನಿಮಾ ಚೆನ್ನಾಗಿ ಮೂಡಿಬರಬೇಕು, ಸದಾ ಕೆಲಸ ಮಾಡು' ಎಂದೇ ಹುರಿದುಂಬಿಸುತ್ತಿದ್ದರು. ತಾಯಿ ತೀರಿಕೊಂಡ ಸೂತಕದ ದಿನದಲ್ಲೂ ನಾನು ಈ ಸಿನಿಮಾಗಾಗಿ ಶ್ರಮಿಸಿದ್ದೇನೆ ಎಂದು ನಿರ್ದೇಶಕ ಪವನ್‌ ಒಡೆಯರ್‌ ಅವರು ಕಣ್ಣೀರು ಹಾಕಿದರು.

ಇನ್ನು ಬೇಲ್‌ ಸಿನಿಮಾಗೆ ಅಜನೀಶ್ ಲೋಕನಾಥ್ ಅವರ ಸುಂದರವಾದ ಸಂಗೀತ, ವೈದಿ ಎಸ್ ಅವರ ಛಾಯಾಗ್ರಹಣ ಹಾಗೂ ಮುರಳಿ ಮಾಸ್ಟರ್ ಅವರ ನೃತ್ಯ ಸಂಯೋಜನೆ ಇದೆ. ಬೇಲ್ ಸಿನಿಮಾವೂ ಅಕ್ಟೋಬರ್ 2 ರಂದು ಅಂದರೆ ಮಹಾತ್ಮ ಗಾಂಧಿ ಜಯಂತಿಯಂದು ರಾಜ್ಯಾದ್ಯಂತ ತೆರೆಕಾಣಲಿದೆ. ಶಿವರಾಜ್‌ ಕುಮಾರ್‌ ಸಿನಿಮಾ ಎಂದರೆ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಏಕೆಂದರೆ ಶಿವಣ್ಣನ ಎನರ್ಜಿ ಏನು ಎನ್ನುವುದು ಅಂತ ಪರದೆ ಮೇಲೆಯೇ ನೋಡಿದರೆ ಗೊತ್ತಾಗುತ್ತದೆ. ಶಿವಣ್ಣನಿಗೆ ಹಳೆ ಅಭಿಮಾನಿಗಳ ಜೊತೆಗೆ ಈಗಿನ ಜೆಂಜಿ ಫ್ಯಾನ್ಸ್‌ ಕೂಡ ಇದ್ದಾರೆ. ಹೀಗಾಗಿಯೇ ಶಿವಣ್ಣ ಯಾವಾಗಲೂ ಸೆಂಚುರಿ ಸ್ಟಾರ್.‌ 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES