₹1000 ಕೋಟಿ ಬಾಚಿಕೊಂಡ್ರೆ ಏನು ಫಲ? ₹4000 ಕೋಟಿ ಬಜೆಟ್ ಮಣ್ಣುಪಾಲು: ಮತ್ತೆ ರಾಮಾಯಣ ಟೀಕಿಸಿದ ಮುಖೇಶ್ ಖನ್ನಾ!
ರಣಬೀರ್ ಕಪೂರ್ ಮತ್ತು ಯಶ್ ಅಭಿನಯದ 'ರಾಮಾಯಣ' ಚಿತ್ರದ ಬೃಹತ್ ಬಜೆಟ್ ಹಾಗೂ ಕೆಲವು ದೃಶ್ಯಗಳ ಬಗ್ಗೆ ಹಿರಿಯ ನಟ ಮುಖೇಶ್ ಖನ್ನಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ₹4,000 ಕೋಟಿ ವೆಚ್ಚದ ಸಿನಿಮಾ ನಿರ್ಮಾಣ ಮಾಡುವ ಬದಲು ಕಥೆಯ ಮೂಲ ಆಶಯ ಮತ್ತು ಧಾರ್ಮಿಕ ಭಾವನೆಗಳಿಗೆ ಆದ್ಯತೆ ನೀಡಬೇಕೆಂದು ಅವರು ಹೇಳಿದ್ದಾರೆ. ಅಲ್ಲದೆ ಪೌರಾಣಿಕ ಕಥೆಗಳ ಆಧಾರಿತ ಸಿನಿಮಾಗಳನ್ನ ನಿರ್ಮಿಸುವ ಮೊದಲು ತಜ್ಞರ ಸಮಿತಿಯ ಅನುಮತಿ ಪಡೆಯುವ ವ್ಯವಸ್ಥೆ ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ.
Ramayana Budget: ಬಾಲಿವುಡ್‌ನಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ನಟ ರಣಬೀರ್ ಕಪೂರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ರಾಮಾಯಣ' ಸಿನಿಮಾ ಇದೀಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಚಿತ್ರದ ಬೃಹತ್ ಬಜೆಟ್, ಕಥೆಯ ನಿರೂಪಣೆ ಹಾಗೂ ಕೆಲವು ದೃಶ್ಯಗಳ ಕುರಿತು ಹಿರಿಯ ನಟ ಮುಖೇಶ್ ಖನ್ನಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬರೋಬ್ಬರಿ ₹4,000 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ದೃಶ್ಯ ವೈಭವಕ್ಕೆ ನೀಡಿರುವ ಆದ್ಯತೆಯಿಂದ ಮೂಲ ಕಥೆಯ ಭಾವನೆಗಳಿಗೆ ಧಕ್ಕೆಯಾಗಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲ ಧಾರ್ಮಿಕ ಹಾಗೂ ಪೌರಾಣಿಕ ಕಥೆಗಳ ಆಧಾರದಲ್ಲಿ ಸಿನಿಮಾ ನಿರ್ಮಿಸುವ ಮೊದಲು ತಜ್ಞರ ಸಮಿತಿಯಿಂದ ಅನುಮತಿ ಪಡೆಯುವ ವ್ಯವಸ್ಥೆ ಜಾರಿಗೆ ಬರಬೇಕೆಂದು ಒತ್ತಾಯಿಸಿದ್ದಾರೆ.
₹4,000 ಕೋಟಿ ಬಜೆಟ್ ಬಗ್ಗೆ ಪ್ರಶ್ನೆ
ರಾಮಾಯಣದಂತಹ ಮಹಾಕಾವ್ಯವನ್ನ ಪ್ರೇಕ್ಷಕರಿಗೆ ತಲುಪಿಸಲು ಇಷ್ಟೊಂದು ದೊಡ್ಡ ಮೊತ್ತದ ಬಜೆಟ್ ಅಗತ್ಯವಿದೆಯೇ ಎಂಬ ಪ್ರಶ್ನೆಯನ್ನ ಮುಖೇಶ್ ಖನ್ನಾ ಎತ್ತಿದ್ದಾರೆ. ಚಿತ್ರದ ನಿರ್ಮಾಣಕ್ಕಾಗಿ ಭಾರೀ ಹಣ ಹೂಡಿಕೆ ಮಾಡಿರುವುದಕ್ಕಿಂತ ಕಥೆಯ ಮೂಲ ಆಶಯ, ಭಾವನಾತ್ಮಕ ಅಂಶಗಳು ಮತ್ತು ಅದರ ನೈಜತೆಯನ್ನ ಉಳಿಸಿಕೊಳ್ಳುವುದು ಮುಖ್ಯವೆಂದು ಅವರು ಹೇಳಿದ್ದಾರೆ. ಚಿತ್ರದ ಯಶಸ್ಸನ್ನ ಕೇವಲ ಬಾಕ್ಸ್ ಆಫೀಸ್ ಗಳಿಕೆಯ ಆಧಾರದಲ್ಲಿ ನಿರ್ಧರಿಸಬಾರದು ಎಂಬುದು ಅವರ ಅಭಿಪ್ರಾಯ.
ಸಿನಿಮಾ ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸಿದರೂ, ಮೂಲ ಕಥೆಯಲ್ಲಿರುವ ಪ್ರಮುಖ ವಿಚಾರಗಳನ್ನ ಕೈಬಿಟ್ಟಿದ್ದರೆ ಅಥವಾ ತಪ್ಪಾಗಿ ನಿರೂಪಿಸಿದ್ದರೆ ಆ ಗಳಿಕೆಗೆ ಅರ್ಥವಿಲ್ಲವೆಂದು ಅವರು ಹೇಳಿದ್ದಾರೆ. ₹4,000 ಕೋಟಿ ವೆಚ್ಚವು ಕಥೆಯನ್ನೇ ಮೀರಿಸುವಂತಾದರೆ ಅದನ್ನ ಹಣದ ವ್ಯರ್ಥವೆಂದು ಪರಿಗಣಿಸಬೇಕಾಗುತ್ತದೆ ಎಂದು ಮುಖೇಶ್ ಖನ್ನಾ ಅಭಿಪ್ರಾಯಪಟ್ಟಿದ್ದಾರೆ. ಭವ್ಯತೆಯನ್ನ ತೋರಿಸುವ ಪ್ರಯತ್ನದಲ್ಲಿ ಕಥೆಯ ಮೂಲ ಚೈತನ್ಯ ಮತ್ತು ಭಾವನೆಗಳನ್ನ ಬದಿಗಿಡಬಾರದು ಎಂಬುದು ಅವರ ಪ್ರಮುಖ ಆಕ್ಷೇಪವಾಗಿದೆ.
ಸೀತೆಯ ಸಾಹಸ ದೃಶ್ಯದ ಬಗ್ಗೆಯೂ ಆಕ್ಷೇಪ
ಚಿತ್ರದಲ್ಲಿನ ಕೆಲವು ದೃಶ್ಯಗಳ ಬಗ್ಗೆಯೂ ಮುಖೇಶ್ ಖನ್ನಾ ಟೀಕೆ ಮಾಡಿದ್ದಾರೆ. ವಿಶೇಷವಾಗಿ ಸೀತೆಯ ಸಾಹಸ ದೃಶ್ಯವನ್ನ ಅವರು ಪ್ರಶ್ನಿಸಿದ್ದಾರೆ. ಧಾರ್ಮಿಕ ಮಹಾಕಾವ್ಯಗಳಲ್ಲಿನ ಪಾತ್ರಗಳನ್ನ ಚಿತ್ರಿಸುವಾಗ ಅವುಗಳ ಮೂಲ ಸ್ವರೂಪ ಮತ್ತು ನಂಬಿಕೆಗಳಿಗೆ ಗೌರವ ನೀಡಬೇಕೆಂದು ಹೇಳಿದ್ದಾರೆ. ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳು ಸಾಮಾನ್ಯ ಕಾಲ್ಪನಿಕ ಕಥೆಗಳಲ್ಲ. ಅವುಗಳಿಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವಿದೆ. ಹೀಗಾಗಿ ಇಂತಹ ಕಥೆಗಳನ್ನ ಸಿನಿಮಾ ರೂಪಕ್ಕೆ ತರುವ ನಿರ್ಮಾಪಕರು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಬೇಕೆಂಬುದು ಅವರ ನಿಲುವಾಗಿದೆ.
ಧಾರ್ಮಿಕ ಸಿನಿಮಾಗಳಿಗೆ ತಜ್ಞರ ಸಮಿತಿ ರಚನೆಗೆ ಒತ್ತಾಯ
ಧಾರ್ಮಿಕ ಮತ್ತು ಪೌರಾಣಿಕ ಕಥೆಗಳ ಆಧಾರದಲ್ಲಿ ಸಿನಿಮಾ ನಿರ್ಮಿಸುವ ವಿಚಾರದಲ್ಲಿ ಸೆನ್ಸಾರ್ ಮಂಡಳಿಯ ಜವಾಬ್ದಾರಿಯ ಬಗ್ಗೆ ಮುಖೇಶ್ ಖನ್ನಾ ಪ್ರಶ್ನೆ ಎತ್ತಿದ್ದಾರೆ. ಇಂತಹ ಚಿತ್ರಗಳಲ್ಲಿನ ದೃಶ್ಯಗಳು ಮತ್ತು ಕಥೆಯ ನಿರೂಪಣೆಯನ್ನ ಪರಿಶೀಲಿಸಲು ಪ್ರತ್ಯೇಕ ಆಯೋಗ ಅಥವಾ ಸಮಿತಿಯನ್ನ ರಚಿಸಬೇಕೆಂದು ಅವರು ಸಲಹೆ ನೀಡಿದ್ದಾರೆ. ರಾಮಾಯಣ, ಮಹಾಭಾರತ ಅಥವಾ ಗಣೇಶನಂತಹ ಧಾರ್ಮಿಕ ವ್ಯಕ್ತಿತ್ವಗಳನ್ನ ಆಧರಿಸಿ ಸಿನಿಮಾ ಮಾಡಲು ಬಯಸುವವರು ಮೊದಲು ವಿದ್ವಾಂಸರ ಸಮಿತಿಯ ಪರಿಶೀಲನೆ ಹಾಗೂ ಅನುಮತಿ ಪಡೆಯಬೇಕೆಂದು ಅವರು ಹೇಳಿದ್ದಾರೆ. ಸಮಿತಿಯ ಒಪ್ಪಿಗೆ ದೊರೆಯುವವರೆಗೆ ಇಂತಹ ಚಿತ್ರಗಳ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂಬುದು ಅವರ ಆಗ್ರಹವಾಗಿದೆ. ಇಂತಹ ವ್ಯವಸ್ಥೆ ಜಾರಿಯಾದರೆ ಧಾರ್ಮಿಕ ಕಥೆಗಳ ಮೂಲ ಆಶಯಕ್ಕೆ ವಿರುದ್ಧವಾದ ದೃಶ್ಯಗಳು ಸಿನಿಮಾಗಳಲ್ಲಿ ಸೇರುವುದನ್ನ ತಡೆಯಬಹುದು ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಒಂದು ವಾರದಲ್ಲೇ ₹1,000 ಕೋಟಿ ಗಳಿಸಿದ ರಾಮಾಯಣ
ಇನ್ನೊಂದೆಡೆ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರವು ಬಿಡುಗಡೆಯಾದ ಮೊದಲ ವಾರದಲ್ಲೇ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ₹1,000 ಕೋಟಿ ಗಳಿಕೆಯ ಗಡಿ ದಾಟಿದೆ ಎಂದು ವರದಿಯಾಗಿದೆ. ರಣಬೀರ್ ಕಪೂರ್ ಮತ್ತು ಯಶ್ ಅಭಿನಯದ ಈ ಸಿನಿಮಾ ಆರಂಭಿಕ ದಿನಗಳಲ್ಲಿ ಉತ್ತಮ ಗಳಿಕೆ ದಾಖಲಿಸಿದೆ. ಮೊದಲ ವಾರದೊಳಗೆ ಈ ಮೈಲಿಗಲ್ಲು ತಲುಪಿದ ಮೂರನೇ ಭಾರತೀಯ ಚಿತ್ರ ಎಂಬ ಸಾಧನೆಯನ್ನೂ ಮಾಡಿದೆ ಎಂದು ವರದಿ ತಿಳಿಸಿದೆ. ಆದರೆ ಚಿತ್ರದ ಗಳಿಕೆ ಮತ್ತು ನಿರ್ಮಾಣದ ಭವ್ಯತೆಯ ನಡುವೆಯೂ ಅದರ ಕಥಾ ನಿರೂಪಣೆ ಹಾಗೂ ಧಾರ್ಮಿಕ ಅಂಶಗಳ ಪ್ರಸ್ತುತಿಯ ಕುರಿತು ಮುಖೇಶ್ ಖನ್ನಾ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಮೂಲಕ 'ರಾಮಾಯಣ' ಚಿತ್ರದ ಬಜೆಟ್, ದೃಶ್ಯಗಳು ಮತ್ತು ಮೂಲ ಮಹಾಕಾವ್ಯದ ನಿಷ್ಠೆಯ ವಿಚಾರ ಮತ್ತೆ ಚರ್ಚೆಗೆ ಬಂದಿದೆ.