ರಿಷಬ್ ಶೆಟ್ಟಿ ಹೊಸ ಸಿನಿಮಾಗೆ 'ಕಾಸ್ಟಿಂಗ್ ಕಾಲ್': ಉ.ಕ ಪ್ರತಿಭೆಗಳಿಗೆ ಸುವರ್ಣ ಅವಕಾಶ
ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಮುಂದಿನ ಹೊಸ ಚಿತ್ರಕ್ಕಾಗಿ ಹೊಸ ಪ್ರತಿಭೆಗಳ ಹುಡುಕಾಟದಲ್ಲಿದ್ದಾರೆ. ತಮ್ಮ 'ರಿಷಬ್ ಶೆಟ್ಟಿ ಫಿಲ್ಮ್ಸ್' ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿರುವ ಈ ಚಿತ್ರಕ್ಕಾಗಿ ಅಧಿಕೃತ ಆಡಿಷನ್ ಕರೆ ನೀಡಿದ್ದು, ನಟನೆಯಲ್ಲಿ ಆಸಕ್ತಿಯಿರುವ ನವ ಕಲಾವಿದರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಹೆಚ್ಚಿನ ವಿವರ ಇಲ್ಲಿದೆ..
Rishab Shetty casting call : ಕಾಂತಾರ ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ಸ್ಯಾಂಡಲ್‌ವುಡ್ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಮುಂದಿನ ಹೊಸ ಯೋಜನೆಯತ್ತ ಗಮನ ಹರಿಸಿದ್ದಾರೆ. ತಮ್ಮ ಪ್ರೊಡಕ್ಷನ್ ಹೌಸ್ ಆದ 'ರಿಷಬ್ ಶೆಟ್ಟಿ ಫಿಲ್ಮ್ಸ್' ಬ್ಯಾನರ್ ಅಡಿಯಲ್ಲಿ ಸಿದ್ಧವಾಗಲಿರುವ ನೂತನ ಸಿನಿಮಾಗಾಗಿ ಹೊಸ ಪ್ರತಿಭೆಗಳನ್ನು ಅರಸುವ ಕಾರ್ಯಕ್ಕೆ ಅವರು ಅಧಿಕೃತವಾಗಿ ಚಾಲನೆ ನೀಡಿದ್ದಾರೆ.
ಹೌದು.. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುಂದರ ಪೋಸ್ಟರ್ ಒಂದನ್ನು ಹಂಚಿಕೊಳ್ಳುವ ಮೂಲಕ ಆಸಕ್ತ ಕಲಾವಿದರಿಗೆ ಮುಕ್ತ ಆಹ್ವಾನ ನೀಡಿದ್ದಾರೆ. ಸಿನಿಮಾದ ಶೀರ್ಷಿಕೆ ಏನೆಂಬುದನ್ನು ಇನ್ನು ಬಿಟ್ಟುಕೊಡದಿದ್ದರೂ, ಹೊಸಬರಿಗೆ ಆದ್ಯತೆ ನೀಡಲು ನಿರ್ಧರಿಸಿರುವುದು ಸ್ಯಾಂಡಲ್‌ವುಡ್ ಅಂಗಳದಲ್ಲಿ ಭಾರಿ ಕುತೂಹಲ ಮೂಡಿಸಿದೆ.
ರಿಷಬ್ ಶೆಟ್ಟಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಕೆಲವು ಪ್ರಮುಖ ಷರತ್ತುಗಳು ಹಾಗೂ ಅರ್ಹತೆಗಳ ಕುರಿತು ಮಾಹಿತಿ ಒದಗಿಸಲಾಗಿದೆ. ಈ ಆಡಿಷನ್‌ನಲ್ಲಿ ಪುರುಷರು 20 ರಿಂದ 65 ವರ್ಷ ಹಾಗೂ ಮಹಿಳೆಯರು 20 ರಿಂದ 60 ವರ್ಷ ವಯೋಮಿತಿಯ ಒಳಗಿರಬೇಕೆಂದು ತಿಳಿಸಲಾಗಿದೆ. ಪ್ರಮುಖವಾಗಿ, ಸ್ಪಷ್ಟ ಹಾಗೂ ಸರಾಗವಾಗಿ ಕನ್ನಡ ಮಾತನಾಡಲು ಬರುವ ನಟ-ನಟಿಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಇದರ ಜೊತೆಗೆ, ಉತ್ತರ ಕರ್ನಾಟಕದ ವಿಶಿಷ್ಟ ಭಾಷಾ ಶೈಲಿ ಮತ್ತು ಸೊಗಡು ತಿಳಿದಿರುವ ಅಭ್ಯರ್ಥಿಗಳಿಗೆ ಈ ಆಡಿಷನ್‌ನಲ್ಲಿ ವಿಶೇಷ ಆದ್ಯತೆ ನೀಡಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ. ಹೀಗಾಗಿ ಉತ್ತರ ಕರ್ನಾಟಕ ಭಾಗದ ಉದಯೋನ್ಮುಖ ಕಲಾವಿದರಿಗೆ ತಮ್ಮ ಅಭಿನಯ ಕೌಶಲ ಪ್ರದರ್ಶಿಸಲು ಇದೊಂದು ಅದ್ಭುತ ವೇದಿಕೆಯಾಗಲಿದೆ.
ಆಡಿಷನ್ ನಡೆಯುವ ದಿನಾಂಕ ಮತ್ತು ಸ್ಥಳದ ವಿವರ
ಈ ಅವಕಾಶವನ್ನು ಬಳಸಿಕೊಳ್ಳಲು ಬಯಸುವ ಆಸಕ್ತ ನಟ-ನಟಿಯರಿಗಾಗಿ ಆಡಿಷನ್ ದಿನಾಂಕ ಹಾಗೂ ಸ್ಥಳದ ವಿವರಗಳನ್ನು ಪೋಸ್ಟರ್‌ನಲ್ಲಿ ಬಹಿರಂಗಪಡಿಸಲಾಗಿದೆ. ಬರುವ ಅಕ್ಟೋಬರ್ 2 ರಂದು ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ಆಡಿಷನ್ ಪ್ರಕ್ರಿಯೆ ನಡೆಯಲಿದೆ. ಈ ಆಯ್ಕೆ ಪ್ರಕ್ರಿಯೆಯು ಬೆಂಗಳೂರಿನ ಜಯನಗರದ 4ನೇ ಬ್ಲಾಕ್‌ನಲ್ಲಿರುವ ಪ್ರಸಿದ್ಧ ವಿಜಯಾ ಕಾಲೇಜಿನಲ್ಲಿ ಆಯೋಜನೆಗೊಂಡಿದೆ. ಸಿನಿಮಾ ರಂಗಕ್ಕೆ ಕಾಲಿಡಬೇಕು ಎಂಬ ಬಲವಾದ ಕನಸು ಮತ್ತು ಉತ್ಸಾಹ ಹೊತ್ತಿರುವ ಪ್ರತಿಯೊಬ್ಬರಿಗೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇದು ಸೂಕ್ತ ಸಮಯವಾಗಿದೆ.
ಪ್ರತಿಭಾವಂತರಿಗೆ ರಿಷಬ್ ಶೆಟ್ಟಿ ನೀಡಿದ ಭಾವನಾತ್ಮಕ ಕರೆ
ತಮ್ಮ ಪೋಸ್ಟ್‌ನಲ್ಲಿ ಬರಿ ನಿಯಮಗಳನ್ನು ಮಾತ್ರ ನೀಡದೆ, ಅತ್ಯಂತ ಆತ್ಮೀಯ ಹಾಗೂ ಭಾವನಾತ್ಮಕ ಸಾಲುಗಳನ್ನು ಹಂಚಿಕೊಂಡಿದ್ದಾರೆ ಶೆಟ್ರು. "ಜೀವನ ಒಂದು ಪಯಣ, ಸಂತೋಷ ಅನ್ನೋದು ಪಯಣಿಸುವ ಮಾರ್ಗವೇ ಹೊರತು ತಲುಪುವ ಕೊನೆಯ ತಾಣವಲ್ಲ" ಎನ್ನುವ ಅರ್ಥಗರ್ಭಿತ ಮಾತನ್ನು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಇದರೊಂದಿಗೆ "ನಮ್ಮನ್ ನೋಡ್ಲಿಕ್ಕೆ ನೀವ್ ಬಂದಿದಿರಿ, ನಿಮ್ಮನ್ ನೋಡ್ಲಿಕ್ಕೆ ನಾವ್ ಬರ್ತಿದ್ದೇವೆ" ಎಂಬ ಸಾಲುಗಳು ಹೊಸ ಪ್ರತಿಭೆಗಳಲ್ಲಿ ಹೊಸ ಭರವಸೆ ಮೂಡಿಸಿವೆ. ಸಿನಿಮಾ ರಂಗದಲ್ಲಿ ಬೆಳೆಯಲು ಬಯಸುವ ನವ ಜೋಶ್‌ನ ಯುವಕ-ಯುವತಿಯರಿಗೆ ರಿಷಬ್ ಶೆಟ್ಟಿ ಫಿಲಂಸ್ ಕಡೆಯಿಂದ ಸುವರ್ಣ ಅವಕಾಶ ಲಭಿಸಿದ್ದು, ಅಕ್ಟೋಬರ್ 2 ರಂದು ನಡೆಯುವ ಆಡಿಷನ್‌ಗೆ ಭಾರಿ ಜನಸಂದಣಿ ಸೇರುವ ನಿರೀಕ್ಷೆಯಿದೆ.