Rise and Fall Season 2 : ಒಟಿಟಿ ದೈತ್ಯ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗುತ್ತಿರುವ, ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ನಿರೂಪಣೆಯ 'ರೈಸ್ ಅಂಡ್ ಫಾಲ್ ಸೀಸನ್ 2' ರಿಯಾಲಿಟಿ ಶೋ ಇದೀಗ ಭಾರಿ ಹೈಡ್ರಾಮಾಗೆ ಸಾಕ್ಷಿಯಾಗಿದೆ. ಮೂರನೇ ಸಂಚಿಕೆಯಲ್ಲೇ ಸ್ಪರ್ಧಿಗಳ ನಡುವಿನ ವಾಗ್ವಾದ ಮಿತಿಮೀರಿ ಭೌತಿಕ ಹಲ್ಲೆಯ ಮಟ್ಟಕ್ಕೆ ತಲುಪಿದ್ದು, ಶೋನ ನಿಯಮ ಉಲ್ಲಂಘಿಸಿದ ಸಿವೆಟ್ ತೋಮರ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಉಚ್ಚಾಟಿಸಲಾಗಿದೆ. ಈ ಕಠಿಣ ನಿರ್ಧಾರವನ್ನು ವಿರೋಧಿಸಿದ ನಟಿ ಸ್ವರಾ ಭಾಸ್ಕರ್ ಹಾಗೂ ಕಿರುತೆರೆ ನಟ ಕರಣ್ ಪಟೇಲ್ ಕೂಡ ಶೋನಿಂದ ಹೊರನಡೆದಿದ್ದು, ವೀಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಜಗಳಕ್ಕೆ ಕಾರಣವಾದ 'ಅಲ್ಟಿಮೇಟ್ ರೂಲರ್' ರೇಸ್
ಸಂಚಿಕೆಯ ಆರಂಭದಲ್ಲಿ ಬೇಸ್‌ಮೆಂಟ್ ಹಾಗೂ ಪೆಂಟ್‌ಹೌಸ್ ಸ್ಪರ್ಧಿಗಳ ನಡುವೆ ತಂತ್ರ-ಪ್ರತಿತಂತ್ರಗಳ ಚರ್ಚೆ ಜೋರಾಗಿತ್ತು. ಮುಖ್ಯವಾಗಿ ಈ ವಾರದ ಎಲಿಮಿನೇಷನ್‌ನಿಂದ ಸಂಪೂರ್ಣ ರಕ್ಷಣೆ ನೀಡುವ 'ಅಲ್ಟಿಮೇಟ್ ರೂಲರ್' ರೇಸ್ ಆರಂಭವಾಗುತ್ತಿದ್ದಂತೆ ಆಟದ ಸ್ವರೂಪವೇ ಬದಲಾಯಿತು. ರೇಸ್‌ಗೂ ಮುನ್ನ 'ದುರ್ಬಲ ನಿರ್ಧಾರ ತೆಗೆದುಕೊಳ್ಳುವ ಸ್ಪರ್ಧಿ'ಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಸಿವೆಟ್ ತೋಮರ್ ಹೆಸರನ್ನು ಹಲವರು ಸೂಚಿಸಿದರು. ಇದರಿಂದ ಕೆರಳಿದ ಸಿವೆಟ್, ಸ್ಪರ್ಧಿ ಶಹಜಾದ್ ಪೂನಾವಾಲಾ ವಿರುದ್ಧ ಏಕವಚನದಲ್ಲೇ ಕಿಡಿಕಾರಿದರು. ಶಹಜಾದ್ ಒಬ್ಬ ಹೆದರುಪುಕ್ಕ ಹಾಗೂ ಮಾತಿಗೆ ಬೆಲೆ ನೀಡದ ವ್ಯಕ್ತಿ ಎಂದು ಬಹಿರಂಗವಾಗಿ ವಾಗ್ದಾಳಿ ನಡೆಸಿದರು. ಅಂತಿಮವಾಗಿ ಸಿವೆಟ್ ದುರ್ಬಲ ಸ್ಪರ್ಧಿ ಎಂದು ಘೋಷಿತರಾಗಿ ರೇಸ್‌ನಿಂದ ಹೊರಬಿದ್ದರು.
ಕೈಕೈ ಮಿಲಾಯಿಸಿದ ಸಿವೆಟ್-ಶಹಜಾದ್
ಆಟದ ನಂತರವೂ ಇಬ್ಬರ ನಡುವಿನ ಕೋಪ ಶಮನವಾಗಲಿಲ್ಲ. ಈ ಮುಂಚೆ ಸ್ವರಾ ಭಾಸ್ಕರ್ ಜೊತೆ ಮಾತನಾಡುವುದಿಲ್ಲ ಎಂದಿದ್ದ ಸಿವೆಟ್, ಆನಂತರ ಆಕೆಯ ಬಳಿ ಸಂಭಾಷಣೆ ನಡೆಸುತ್ತಿದ್ದುದನ್ನು ಶಹಜಾದ್ ಪ್ರಶ್ನಿಸಿದರು. ಇದು ಕ್ಷಣಾರ್ಧದಲ್ಲೇ ದೊಡ್ಡ ಜಗಳವಾಗಿ ಮಾರ್ಪಟ್ಟಿತು. ಮಾತಿಗೆ ಮಾತು ಬೆಳೆದು ನಿಯಂತ್ರಣ ಕಳೆದುಕೊಂಡ ಸಿವೆಟ್, ಶಹಜಾದ್ ಅವರ ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದು ನೆಲಕ್ಕೆ ತಳ್ಳಿದರು. ಈ ಭೌತಿಕ ಗಲಾಟೆಯಲ್ಲಿ ಶಹಜಾದ್ ಅವರ ಬಟ್ಟೆ ಹರಿದುಹೋಗಿದ್ದಲ್ಲದೆ ಗಾಯಗಳಾದವು. 'ಟವರ್' ಒಳಗಡೆ ಭೌತಿಕ ಹಲ್ಲೆಯನ್ನು ಸಂಪೂರ್ಣವಾಗಿ ನಿಷೇಧಿಸಿರುವುದರಿಂದ, ನಿರ್ಮಾಣ ಸಂಸ್ಥೆ ಬನಿಜಯ್ ಏಷ್ಯಾ ಹಾಗೂ ನಿರೂಪಕರು ಸಿವೆಟ್ ಅವರನ್ನು ತಕ್ಷಣವೇ ಶೋನಿಂದ ರದ್ದುಗೊಳಿಸಿದರು.
WTF 😭 Ye Bigg Loss se bhi bada tatti show kisne bnaya ?
Siwet seriously crossed the line with that attack on Shehzad.#RiseAndFall pic.twitter.com/RixOcQ0Z2Z— 𝐀𝐦𝐛𝐡𝐫𝐧𝐢 (@Ambhrni) September 28, 2026
ಪ್ರತಿಭಟಿಸಿ ಹೊರನಡೆದ ಸ್ವರಾ ಹಾಗೂ ಕರಣ್
ಸಿವೆಟ್ ಅವರನ್ನು ಉಚ್ಚಾಟಿಸಿದ ಶೋ ಆಯೋಜಕರ ನಿರ್ಧಾರವನ್ನು ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಹಾಗೂ ನಟ ಕರಣ್ ಪಟೇಲ್ ತೀವ್ರವಾಗಿ ಖಂಡಿಸಿದರು. "ಶಹಜಾದ್ ನೀಡಿದ ತೀವ್ರ ಪ್ರಚೋದನೆಯೇ ಸಿವೆಟ್ ಕೋಪಗೊಳ್ಳಲು ಕಾರಣ" ಎಂದು ವಾದಿಸಿದ ಇಬ್ಬರೂ, ಸಿವೆಟ್ ಬೆಂಬಲಕ್ಕೆ ನಿಂತು ಶೋನಿಂದ ವಾಕ್ ಔಟ್ ಮಾಡಿದರು.
ಪ್ರಸ್ತುತ ಪೆಂಟ್‌ಹೌಸ್‌ನಲ್ಲಿ ಪ್ರಿಯಾಂಕಾ ಚಹರ್ ಚೌಧರಿ, ತೇಜ್ ಪ್ರತಾಪ್ ಯಾದವ್ ಸೇರಿದಂತೆ ಪ್ರಮುಖರಿದ್ದರೆ, ಬೇಸ್‌ಮೆಂಟ್‌ನಲ್ಲಿ ಗೌತಮ್ ಗುಲಾಟಿ, ಮನೀಶ್ ಕಶ್ಯಪ್ ಮುಂತಾದವರಿದ್ದಾರೆ. ವಾಕ್ ಔಟ್ ಮಾಡಿದ ಸ್ವರಾ ಭಾಸ್ಕರ್ ಮತ್ತು ಕರಣ್ ಪಟೇಲ್ ಸಂಪೂರ್ಣವಾಗಿ ಎಲಿಮಿನೇಟ್ ಆಗಿದ್ದಾರೆಯೇ ಅಥವಾ ಶೋಗೆ ಮರಳುತ್ತಾರೆಯೇ ಎಂಬುದು ಮುಂದಿನ ಸಂಚಿಕೆಯಲ್ಲಿ ಸ್ಪಷ್ಟವಾಗಲಿದೆ.