Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್‌ಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಪ್ರಕರಣದ ಸಾಕ್ಷ್ಯ ವಿಚಾರಣೆ ಮತ್ತು ಪ್ರಮುಖ ಸಾಕ್ಷಿಗಳ ಕ್ರಾಸ್ ಎಕ್ಸಾಮಿನೇಷನ್ ನಡೆಯುವ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಖುದ್ದು ಹಾಜರಾಗಲು ದರ್ಶನ್ ಸಲ್ಲಿಸಿದ್ದ ಅರ್ಜಿಗೆ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ.
ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಹೈಕೋರ್ಟ್ ಪೀಠದ ಮುಂದೆ ಅರ್ಜಿಯ ವಿಚಾರಣೆ ನಡೆದಿದ್ದು, ಎರಡೂ ಕಡೆಯ ವಾದಗಳನ್ನ ಆಲಿಸಿದ ಬಳಿಕ ದರ್ಶನ್ ಅವರನ್ನ ನಿಗದಿತ ದಿನಾಂಕಗಳಲ್ಲಿ ನ್ಯಾಯಾಲಯಕ್ಕೆ ಖುದ್ದು ಹಾಜರುಪಡಿಸುವಂತೆ ಸೂಚಿಸಲಾಗಿದೆ. ಇದೇ ವೇಳೆ ವಿಚಾರಣೆಯನ್ನ ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಪ್ರಾಸಿಕ್ಯೂಷನ್‌ಗೂ ಕೆಲವು ನಿರ್ದೇಶನಗಳನ್ನ ನ್ಯಾಯಾಲಯ ನೀಡಿದೆ.
ಸಾಕ್ಷಿಗಳ ವಿಚಾರಣೆ ವೇಳೆ ಖುದ್ದು ಹಾಜರಿಗೆ ಮನವಿ
ಸಾಕ್ಷಿಗಳ ವಿಚಾರಣೆ ನಡೆಯುವ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಖುದ್ದು ಹಾಜರಾಗಲು ಅವಕಾಶ ನೀಡಬೇಕೆಂದು ದರ್ಶನ್ ಪರ ವಕೀಲರು ಹೈಕೋರ್ಟ್‌ಗೆ ಮನವಿ ಮಾಡಿದ್ದರು. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯುವಾಗ ಕಕ್ಷಿದಾರನೊಂದಿಗೆ ಅಗತ್ಯ ಚರ್ಚೆ ನಡೆಸಲು ಕೆಲವು ಪ್ರಾಯೋಗಿಕ ಸಮಸ್ಯೆಗಳು ಎದುರಾಗುತ್ತವೆ ಎಂದು ವಕೀಲರು ವಾದಿಸಿದ್ದರು. ವಿಶೇಷವಾಗಿ ಪ್ರಮುಖ ಸಾಕ್ಷಿಗಳ ವಿಚಾರಣೆ ಹಾಗೂ ಕ್ರಾಸ್ ಎಕ್ಸಾಮಿನೇಷನ್ ಸಂದರ್ಭದಲ್ಲಿ ದರ್ಶನ್ ಖುದ್ದು ಹಾಜರಿದ್ದರೆ, ವಕೀಲರಿಗೆ ತಮ್ಮ ಕಕ್ಷಿದಾರರೊಂದಿಗೆ ಅಗತ್ಯ ವಿಚಾರಗಳನ್ನ ಚರ್ಚಿಸಲು ಅನುಕೂಲವಾಗುತ್ತದೆ ಎಂದು ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು. ವಿಡಿಯೋ ಕಾನ್ಫರೆನ್ಸ್ ಸಂದರ್ಭದಲ್ಲಿ ಎಲ್ಲರ ಸಮ್ಮುಖದಲ್ಲೇ ಚರ್ಚೆ ನಡೆಸಬೇಕಾಗುವ ಕಾರಣ ಗೌಪ್ಯತೆಯ ಸಮಸ್ಯೆಯೂ ಎದುರಾಗಬಹುದು ಎಂದು ದರ್ಶನ್ ಪರ ವಕೀಲರು ವಾದಿಸಿದ್ದರು.
ಪ್ರಾಸಿಕ್ಯೂಷನ್‌ನಿಂದ ವಿರೋಧ
ನಟ ದರ್ಶನ್ ಅವರ ಖುದ್ದು ಹಾಜರಿಗೆ ಪ್ರಾಸಿಕ್ಯೂಷನ್ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ಇತರ ಪ್ರಕರಣಗಳಲ್ಲಿರುವ ಆರೋಪಿಗಳೂ ಇದೇ ರೀತಿಯ ಬೇಡಿಕೆ ಮುಂದಿಟ್ಟರೆ ವಿಚಾರಣಾ ಪ್ರಕ್ರಿಯೆಯಲ್ಲಿ ಸಮಸ್ಯೆ ಉಂಟಾಗಬಹುದು ಅಂತಾ ಅವರು ವಾದಿಸಿದರು. ಅಲ್ಲದೆ ಆರೋಪಿಗಳಿಗೆ ಜೈಲಿನಿಂದಲೇ ಇರುವ ಮುಲಾಕತ್ ಸೌಲಭ್ಯದ ಮೂಲಕ ತಮ್ಮ ವಕೀಲರೊಂದಿಗೆ ಸಂಭಾಷಣೆ ನಡೆಸುವ ಅವಕಾಶವಿದೆ ಎಂದು ಪ್ರಾಸಿಕ್ಯೂಷನ್ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಹೀಗಾಗಿ ಪ್ರತಿಯೊಂದು ವಿಚಾರಣೆಯಲ್ಲೂ ಆರೋಪಿಯನ್ನ ಖುದ್ದಾಗಿ ನ್ಯಾಯಾಲಯಕ್ಕೆ ಕರೆತರುವ ಅಗತ್ಯವಿಲ್ಲವೆಂಬ ವಾದವನ್ನ ಮಂಡಿಸಲಾಯಿತು.
ಪ್ರಮುಖ ಸಾಕ್ಷಿಗಳ ಕ್ರಾಸ್ ಎಕ್ಸಾಮಿನೇಷನ್‌ಗೆ ಖುದ್ದು ಹಾಜರಿ
ಎರಡೂ ಕಡೆಯ ವಾದಗಳನ್ನು ಆಲಿಸಿದ ಹೈಕೋರ್ಟ್, ಪ್ರಾಸಿಕ್ಯೂಷನ್‌ನ ಎಕ್ಸಾಮಿನೇಷನ್ ಇನ್ ಚೀಫ್ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಬಹುದು ಎಂದು ಸೂಚಿಸಿದೆ. ಆದರೆ ಪ್ರಮುಖ ಸಾಕ್ಷಿಗಳ ಕ್ರಾಸ್ ಎಕ್ಸಾಮಿನೇಷನ್‌ಗೆ ನಿಗದಿಪಡಿಸುವ ದಿನಾಂಕಗಳಲ್ಲಿ ದರ್ಶನ್ ಅವರನ್ನ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದು ಆದೇಶಿಸಿದೆ. ಕ್ರಾಸ್ ಎಕ್ಸಾಮಿನೇಷನ್‌ಗೆ ಸಂಬಂಧಿಸಿದ ದಿನಾಂಕಗಳನ್ನ ಎರಡೂ ಕಡೆಯವರ ಸಮ್ಮತಿಯೊಂದಿಗೆ ನಿಗದಿಪಡಿಸಬೇಕು. ಆ ದಿನಾಂಕಗಳಲ್ಲಿ ದರ್ಶನ್ ಅವರನ್ನ ಸೂಕ್ತ ಭದ್ರತೆಯೊಂದಿಗೆ ನ್ಯಾಯಾಲಯಕ್ಕೆ ಕರೆತರಬೇಕೆಂದು ಪೀಠ ನಿರ್ದೇಶನ ನೀಡಿದೆ. ಅದೇ ವೇಳೆ ದರ್ಶನ್ ಅವರನ್ನ ಖುದ್ದಾಗಿ ಹಾಜರುಪಡಿಸಿದ ಬಳಿಕ ವಿಚಾರಣೆಯನ್ನ ಮುಂದೂಡುವಂತೆ ಮನವಿ ಮಾಡಬಾರದು ಎಂಬ ಷರತ್ತನ್ನೂ ನ್ಯಾಯಾಲಯ ವಿಧಿಸಿದೆ. ಇದರಿಂದ ವಿಚಾರಣಾ ಪ್ರಕ್ರಿಯೆ ನಿಗದಿತ ವೇಳಾಪಟ್ಟಿಯಂತೆ ಮುಂದುವರಿಯುವಂತೆ ನೋಡಿಕೊಳ್ಳಲಾಗಿದೆ.
ಒಂದು ವರ್ಷದಲ್ಲಿ 60 ಸಾಕ್ಷಿಗಳ ವಿಚಾರಣೆ
ಪ್ರಕರಣದ ವಿಚಾರಣೆಯನ್ನ ತ್ವರಿತವಾಗಿ ಮುಂದುವರಿಸುವ ನಿಟ್ಟಿನಲ್ಲಿ ಪ್ರಾಸಿಕ್ಯೂಷನ್ ಒಂದು ವರ್ಷದ ಅವಧಿಯಲ್ಲಿ 60 ಸಾಕ್ಷಿಗಳನ್ನ ವಿಚಾರಣೆಗೊಳಪಡಿಸಬೇಕೆಂದು ಹೈಕೋರ್ಟ್ ನಿರ್ದೇಶನ ನೀಡಿದೆ. ಈ 60 ಸಾಕ್ಷಿಗಳಲ್ಲಿ ಪ್ರಕರಣದ 7 ಪ್ರಮುಖ ಸಾಕ್ಷಿಗಳ ವಿಚಾರಣೆಯೂ ಒಳಗೊಂಡಿರಬೇಕೆಂದು ಪೀಠ ತಿಳಿಸಿದೆ. ಮುಖ್ಯ ವಿಚಾರಣೆ ಪೂರ್ಣಗೊಂಡ ಬಳಿಕ ಕ್ರಾಸ್ ಎಕ್ಸಾಮಿನೇಷನ್‌ಗೆ ಪ್ರತ್ಯೇಕ ದಿನಾಂಕಗಳನ್ನ ನಿಗದಿಪಡಿಸಬೇಕು. ನಿಗದಿಪಡಿಸಿದ ದಿನಾಂಕಗಳಂದು ಕ್ರಾಸ್ ಎಕ್ಸಾಮಿನೇಷನ್ ನಡೆಸುವ ಮೂಲಕ ಪ್ರಕರಣದ ವಿಚಾರಣೆಯನ್ನ ಮುಂದುವರಿಸಬೇಕೆಂದು ನ್ಯಾಯಾಲಯ ಸೂಚಿಸಿದೆ.
ಸರ್ಕಾರಕ್ಕೆ ಭದ್ರತೆ ಒದಗಿಸುವ ಜವಾಬ್ದಾರಿ
ನಟ ದರ್ಶನ್ ಅವರನ್ನ ವಿಚಾರಣೆಯ ದಿನಗಳಲ್ಲಿ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರುಪಡಿಸುವ ಸಂದರ್ಭದಲ್ಲಿ ಸರ್ಕಾರ ಸೂಕ್ತ ಭದ್ರತಾ ವ್ಯವಸ್ಥೆ ಮಾಡಬೇಕೆಂದು ಹೈಕೋರ್ಟ್ ನಿರ್ದೇಶನ ನೀಡಿದೆ. ಪ್ರಕರಣದ ಸ್ವರೂಪ ಮತ್ತು ಭದ್ರತಾ ವಿಚಾರಗಳನ್ನ ಗಮನದಲ್ಲಿಟ್ಟುಕೊಂಡು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಇದಲ್ಲದೆ ಅಗತ್ಯವಿದ್ದಲ್ಲಿ ವಿಚಾರಣೆಯನ್ನ ಇನ್-ಕ್ಯಾಮೆರಾ ನಡೆಸುವ ಕುರಿತು ನ್ಯಾಯಾಲಯ ಆದೇಶ ನೀಡಬಹುದು ಎಂದು ಪೀಠ ತಿಳಿಸಿದೆ. ಆದರೆ ಈ ಪ್ರಕರಣದಲ್ಲಿ ನೀಡಿರುವ ಆದೇಶವನ್ನ ಇತರ ಪ್ರಕರಣಗಳಿಗೆ ಮಾದರಿಯಾಗಿ ಪರಿಗಣಿಸಬಾರದು ಎಂಬುದನ್ನೂ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪ್ರದೋಶ್ ಅರ್ಜಿಗೂ ಸಂಬಂಧಿಸಿದ ವಿಚಾರಣೆ
ಇದೇ ಪ್ರಕರಣದಲ್ಲಿ ಆರೋಪಿ ಪ್ರದೋಶ್ ಅವರು ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿರುವ ವಿಚಾರವೂ ವಿಚಾರಣೆಗೆ ಬಂದಿತ್ತು. ಈ ಅರ್ಜಿಗೆ ದರ್ಶನ್ ಪರವಾಗಿ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಆದರೆ ದರ್ಶನ್ ಸಲ್ಲಿಸಿದ್ದ ಈ ಆಕ್ಷೇಪ ಅರ್ಜಿಯನ್ನ ನ್ಯಾಯಾಲಯ ತಳ್ಳಿ ಹಾಕಿದೆ. ಒಂದೆಡೆ ಮಾಫಿ ಸಾಕ್ಷಿಗೆ ಸಂಬಂಧಿಸಿದ ಅರ್ಜಿಯಲ್ಲಿ ದರ್ಶನ್ ಅವರ ಮನವಿಗೆ ಹಿನ್ನಡೆಯಾಗಿದ್ದರೆ, ಮತ್ತೊಂದೆಡೆ ಸಾಕ್ಷ್ಯ ವಿಚಾರಣೆ ಸಂದರ್ಭದಲ್ಲಿ ಖುದ್ದು ಹಾಜರಾಗುವ ಅವಕಾಶ ನೀಡಿರುವುದು ಅವರ ಪರವಾಗಿ ಪ್ರಮುಖ ಬೆಳವಣಿಗೆಯಾಗಿದೆ.
ಒಟ್ನಲ್ಲಿ ರೇಣುಕಾಸ್ವಾಮಿ ಕೊ*ಲೆ ಪ್ರಕರಣದ ವಿಚಾರಣೆಯನ್ನ ನಿಗದಿತ ಅವಧಿಯಲ್ಲಿ ಮುಂದುವರಿಸುವುದಕ್ಕೆ ಹೈಕೋರ್ಟ್ ಹಲವು ನಿರ್ದೇಶನಗಳನ್ನ ನೀಡಿದೆ. ಪ್ರಮುಖ ಸಾಕ್ಷಿಗಳ ಕ್ರಾಸ್ ಎಕ್ಸಾಮಿನೇಷನ್ ಸಂದರ್ಭದಲ್ಲಿ ದರ್ಶನ್ ಅವರನ್ನ ಖುದ್ದಾಗಿ ಹಾಜರುಪಡಿಸುವ ಅವಕಾಶ ನೀಡಲಾಗಿದ್ದು, ಅದಕ್ಕಾಗಿ ದಿನಾಂಕಗಳನ್ನ ಮುಂಚಿತವಾಗಿ ನಿಗದಿಪಡಿಸಬೇಕಾಗಿದೆ. ಮುಂದಿನ ಹಂತದಲ್ಲಿ ಪ್ರಮುಖ ಸಾಕ್ಷಿಗಳ ವಿಚಾರಣೆ ಮತ್ತು ಕ್ರಾಸ್ ಎಕ್ಸಾಮಿನೇಷನ್ ಪ್ರಕರಣದ ವಿಚಾರಣೆಯಲ್ಲಿ ಗಮನ ಸೆಳೆಯುವ ಅಂಶಗಳಾಗಿವೆ.