SOCIAL MEDIA

Newsletter

PARTNER SITES
Select Language Select State

ನಾಳೆ ದರ್ಶನ್, ಪವಿತ್ರಾಗೌಡಗೆ ಎದುರಾಗಲಿದೆ ಕಂಟಕ : ಮಾಫಿ ಸಾಕ್ಷಿ ಪ್ರದೋಷ್‌ ಹೇಳಿಕೆ ದಾಖಲು

Approver Pradosh Statement : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ 16 ಆರೋಪಿಗಳಿಗೆ ಕಾನೂನಿನ ಸಂಕಷ್ಟ ಹೆಚ್ಚಾಗಿದ್ದು, ನಾಳೆ ಪ್ರಕರಣದಲ್ಲಿ ಮಹತ್ತರವಾದ ಕಾನೂನು ಪ್ರಕ್ರಿಯೆಯೊಂದು ನಡೆಯಲಿದೆ. ಈ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು (ಪ್ರಾಸಿಕ್ಯೂಷನ್ ವಿಟ್ನೆಸ್/ಅಪ್ರೂವರ್) ಒಪ್ಪಿಕೊಂಡಿರುವ ಪ್ರದೋಷ್‌ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಿಕೊಳ್ಳುವ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ.

Reported By Krishna NK Written By Krishna NK
Published: Sep 27, 2026, 03:15 PM IST | Updated: Sep 27, 2026, 03:24 PM IST
Image Credit: Actor Darshan
Join

Renukaswamy murder case : ಈ ಬೆಳವಣಿಗೆಯಿಂದಾಗಿ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಇನ್ಮುಂದೆ ಒಟ್ಟು 16 ಆರೋಪಿಗಳು ಮಾತ್ರ ಇರಲಿದ್ದು, ಪ್ರದೋಷ್‌ನನ್ನು ಕೋರ್ಟ್ ಪ್ರಾಸಿಕ್ಯೂಷನ್ ವಿಟ್ನೆಸ್ ಆಗಿ ಪರಿಗಣಿಸಿದೆ. ಹೀಗಾಗಿ, ಪ್ರಮುಖ ಆರೋಪಿಗಳಾದ ಎ1 ಪವಿತ್ರಾಗೌಡ ಹಾಗೂ ಎ2 ದರ್ಶನ್ ಸೇರಿದಂತೆ ಉಳಿದ ಎಲ್ಲಾ ಆರೋಪಿಗಳ ಪಾಲಿಗೆ ನಾಳೆ ಅತ್ಯಂತ ನಿರ್ಣಾಯಕ ದಿನವಾಗಲಿದೆ.

59ನೇ ಸಿಸಿಹೆಚ್ ಕೋರ್ಟ್‌ನಲ್ಲಿ ವಿಚಾರಣೆ
ನಾಳೆ ನಗರದ 59ನೇ ಸಿಸಿಹೆಚ್ (CCH) ನ್ಯಾಯಾಲಯದಲ್ಲಿ ಈ ಮಹತ್ವದ ವಿಚಾರಣೆ ನಡೆಯಲಿದೆ. ಪ್ರಕರಣದ ಪ್ರಮುಖ ಮಾಫಿ ಸಾಕ್ಷಿಯಾದ ಪ್ರದೂಷ್‌ನ ಮುಖ್ಯ ವಿಚಾರಣೆಯನ್ನು (Chief Examination) ನ್ಯಾಯಾಧೀಶರ ಸಮ್ಮುಖದಲ್ಲಿ ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕ (SPP) ಪ್ರಸನ್ನ ಕುಮಾರ್ ನಡೆಸಲಿದ್ದಾರೆ. ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಲಿಖಿತ ರೂಪದಲ್ಲಿ ನೀಡಿರುವ ಪ್ರದೂಷ್, ಕೋರ್ಟ್‌ನಲ್ಲಿ ರೇಣುಕಾಸ್ವಾಮಿ ಕೊಲೆಯ ಸಂಪೂರ್ಣ ಸತ್ಯಾಸತ್ಯತೆಯನ್ನು ಬಿಚ್ಚಿಡಲಿದ್ದಾನೆ.

16 ಆರೋಪಿಗಳ ವಕೀಲರಿಂದ ಕ್ರಾಸ್ ಎಕ್ಸಾಮಿನೇಷನ್
ಪ್ರಾಸಿಕ್ಯೂಷನ್ ಕಡೆಯಿಂದ ಚೀಫ್ ಎಕ್ಸಾಮಿನೇಷನ್ ಪೂರ್ಣಗೊಂಡ ತಕ್ಷಣ, ದರ್ಶನ್ ಹಾಗೂ ಪವಿತ್ರಾಗೌಡ ಸೇರಿದಂತೆ ಉಳಿದ 16 ಆರೋಪಿಗಳ ಪರ ವಕೀಲರು ಪ್ರದೂಷ್‌ನನ್ನು ಕ್ರಾಸ್ ಎಕ್ಸಾಮಿನೇಷನ್ (Cross-Examination) ಮಾಡಲಿದ್ದಾರೆ. 16 ಮಂದಿ ಅನುಭವಿ ವಕೀಲರ ಜಟಿಲ ಹಾಗೂ ಕಠಿಣ ಪ್ರಶ್ನೆಗಳನ್ನು ಎದುರಿಸುವುದು ಈಗ ಪ್ರದೂಷ್‌ಗೆ ದೊಡ್ಡ ಸವಾಲಾಗಿದೆ.

ಸಾಮಾನ್ಯವಾಗಿ ಅಪ್ರೂವರ್ ಆಗುವ ವ್ಯಕ್ತಿ ತನಗೆ ಶಿಕ್ಷೆಯಿಂದ ವಿನಾಯಿತಿ ಅಥವಾ ವಿನಾಯಿತಿ ಪ್ರಮಾಣ ಕಡಿಮೆ ಸಿಗಲಿ ಎಂಬ ಕಾರಣಕ್ಕಾಗಿ ಸುಳ್ಳು ಸಾಕ್ಷಿ ಹೇಳಿರಬಹುದು ಎಂಬ ಸಂಶಯವಿರುತ್ತದೆ. ಈ ಹಿನ್ನೆಲೆಯಲ್ಲಿ, ಆರೋಪಿಗಳ ಪರ ವಕೀಲರು ಜಂಟಿಯಾಗಿ ಕ್ರಾಸ್ ಎಕ್ಸಾಮಿನೇಷನ್ ನಡೆಸುವ ಮೂಲಕ ಪ್ರದೂಷ್ ನೀಡುವ ಸಾಕ್ಷ್ಯದ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚಲಿದ್ದಾರೆ.

ಪ್ರಕರಣಕ್ಕೊಂದು ಬಲವಾದ ತಿರುವು
ಕೊಲೆ ನಡೆದ ಸಮಯದಲ್ಲಿ ಪ್ರತಿಯೊಬ್ಬ ಆರೋಪಿಯ ಪಾತ್ರ ಏನಿತ್ತು, ಘಟನೆ ಹೇಗೆ ನಡೆಯಿತು ಎಂಬುದರ ಬಗ್ಗೆ ಪ್ರದೂಷ್ ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯಲಿದ್ದು, ಇದು ಇಡೀ ಪ್ರಕರಣಕ್ಕೆ ಅತ್ಯಂತ ಬಲವಾದ ತಿರುವು ನೀಡುವ ಸಾಧ್ಯತೆಯಿದೆ. ಇದು ದರ್ಶನ್ ಮತ್ತು ಪವಿತ್ರಾಗೌಡಗೆ ಕಾನೂನಾತ್ಮಕವಾಗಿ ಬಹುದೊಡ್ಡ ಆತಂಕವನ್ನು ತಂದೊಡ್ಡಿದೆ.

ಇನ್ನೊಂದೆಡೆ, ಪ್ರದೋಷ್ ಮಾಫಿ ಸಾಕ್ಷಿಯಾಗುವುದನ್ನು ತಡೆಯಲು ನಟ ದರ್ಶನ್ ಕಡೆಯಿಂದ ಹಲವು ಪ್ರಯತ್ನಗಳು ನಡೆದಿದ್ದವು. ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಲು ಸಮಯಾವಕಾಶ ಬೇಕು, ಆದ್ದರಿಂದ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವುದನ್ನು ಮುಂದೂಡಬೇಕು ಎಂದು ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಈಗಾಗಲೇ ವಜಾಗೊಳಿಸಿದೆ. ಇದರಿಂದ ದರ್ಶನ್‌ಗೆ ಹಿನ್ನಡೆಯಾಗಿದ್ದು, ನಾಳೆ ಪ್ರದೋಷ್ ನೀಡಲಿರುವ ಹೇಳಿಕೆಯು ಆರೋಪಿಗಳಿಗೆ ಇನ್ನಷ್ಟು ಕಠಿಣ ಪರಿಸ್ಥಿತಿಯನ್ನು ತಂದೊಡ್ಡುವ ಸಾಧ್ಯತೆಯಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES