Ranbir Kapoor Daughter Raha Kapoor Ramayana Debut: ಬಾಲಿವುಡ್‌ನಲ್ಲಿ ಸದ್ಯ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾಗಳಲ್ಲಿ ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಅಭಿನಯದ ‘ರಾಮಾಯಣ’ ಕೂಡ ಒಂದು. ಚಿತ್ರದ ತಾರಾಗಣ, ಪಾತ್ರವರ್ಗ ಮತ್ತು ಚಿತ್ರೀಕರಣದ ವಿಚಾರಗಳು ಈಗಾಗಲೇ ಅಭಿಮಾನಿಗಳ ಗಮನ ಸೆಳೆದಿವೆ. ಈ ನಡುವೆ ನಟ ರಣಬೀರ್ ಕಪೂರ್ ಹಂಚಿಕೊಂಡಿರುವ ಒಂದು ವಿಶೇಷ ಸಂಗತಿ ಸಿನಿಮಾದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಅದೇನೆಂದರೆ, ಅವರ ಮುದ್ದಿನ ಪುತ್ರಿ ರಾಹಾ ಕಪೂರ್ ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಂದ್ದಾಳಂತೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರಣಬೀರ್ ಕಪೂರ್, ತಮ್ಮ ಪುತ್ರಿ ರಾಹಾ ಕೂಡ ‘ರಾಮಾಯಣ’ ಸಿನಿಮಾದ ಭಾಗವಾಗಿದ್ದಾಳೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ರಾಹಾಗೆ ರಾಮಾಯಣದ ಕಥೆಯ ಬಗ್ಗೆ ಸಾಕಷ್ಟು ಆಸಕ್ತಿ ಇದೆಯಂತೆ. ಹೀಗಾಗಿ ತಾವು ಮತ್ತು ಪತ್ನಿ ಆಲಿಯಾ ಭಟ್ ಆಗಾಗ ಅವಳಿಗೆ ರಾಮಾಯಣದ ಕಥೆಯನ್ನು ಹೇಳುತ್ತಿರುತ್ತೇವೆ ಎಂದು ನಟ ತಿಳಿಸಿದ್ದಾರೆ. ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ರಾಹಾ ಹಲವು ಬಾರಿ ಸೆಟ್‌ಗೆ ಭೇಟಿ ನೀಡಿದ್ದಳಂತೆ. ಅಷ್ಟೇ ಅಲ್ಲ, ನಟಿ ಸಾಯಿ ಪಲ್ಲವಿ ಮತ್ತು ರವಿ ದುಬೆ ಅವರೊಂದಿಗೆ ಕೆಲವು ದೃಶ್ಯಗಳಲ್ಲಿಯೂ ಕಾಣಿಸಿಕೊಂಡಿದ್ದಾಳೆ ಎಂದು ರಣಬೀರ್ ಹೇಳಿದ್ದಾರೆ.
ರಾಹಾ ಈ ಸಿನಿಮಾದ ಸಂಪೂರ್ಣ ಪ್ರಯಾಣದ ಭಾಗವಾಗಿರುವುದು ತಮಗೆ ವಿಶೇಷ ಸಂತೋಷ ನೀಡಿದೆ ಎಂದು ರಣಬೀರ್ ತಿಳಿಸಿದ್ದಾರೆ. ಈಗ ಅವಳು ಈ ಕಥೆಯನ್ನು ದೊಡ್ಡ ಪರದೆಯ ಮೇಲೆ ನೋಡಬಹುದು ಎಂಬುದು ನಟನಿಗೆ ಖುಷಿಯ ವಿಚಾರವಂತೆ. ಆದರೆ ಸಿನಿಮಾದಲ್ಲಿ ರಾಹಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆಕೆಯ ಕೆಲವೇ ಕೆಲವು ದೃಶ್ಯಗಳು ಚಿತ್ರದಲ್ಲಿರಲಿವೆ ಎಂದು ತಿಳಿದುಬಂದಿದೆ. ಆದರೂ ಮೊದಲ ಬಾರಿಗೆ ತಮ್ಮ ನೆಚ್ಚಿನ ನಟನ ಪುತ್ರಿಯನ್ನು ತೆರೆಯ ಮೇಲೆ ನೋಡುವ ಅವಕಾಶ ಸಿಗಲಿದೆ ಎಂಬ ವಿಚಾರ ಅಭಿಮಾನಿಗಳಲ್ಲಿ ಆಸಕ್ತಿ ಮೂಡಿಸಿದೆ.
ಇದೇ ಸಂದರ್ಶನದಲ್ಲಿ ತಂದೆಯಾದ ಬಳಿಕ ತಮ್ಮ ಜೀವನದಲ್ಲಿ ಉಂಟಾದ ಬದಲಾವಣೆಗಳ ಬಗ್ಗೆಯೂ ರಣಬೀರ್ ಮಾತನಾಡಿದ್ದಾರೆ. ‘ರಾಮಾಯಣ’ ಸಿನಿಮಾದ ಅವಕಾಶ ಬಂದ ಸಮಯದಲ್ಲಿ ತಾವು ಹೊಸದಾಗಿ ತಂದೆಯಾಗಿದ್ದೆ ಎಂದು ಅವರು ನೆನಪಿಸಿಕೊಂಡಿದ್ದಾರೆ. ರಾಹಾ ತಮ್ಮ ಜೀವನಕ್ಕೆ ಬಂದ ನಂತರ ಬದುಕಿನ ದೃಷ್ಟಿಕೋನವೇ ಬದಲಾಗಿದೆ. ಹೆಚ್ಚು ಜವಾಬ್ದಾರಿಯುತ ವ್ಯಕ್ತಿಯಾಗಿದ್ದೇನೆ ಎಂದು ರಣಬೀರ್ ಹೇಳಿದ್ದಾರೆ. ತಂದೆಯಾದ ಬಳಿಕ ವೈಯಕ್ತಿಕ ಜೀವನದಲ್ಲಿ ಮಾತ್ರವಲ್ಲದೆ ವೃತ್ತಿಜೀವನದಲ್ಲಿಯೂ ಹೊಸ ರೀತಿಯ ಜವಾಬ್ದಾರಿಯನ್ನು ಅರಿತುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು, ಯಶ್ ರಾವಣನ ಪಾತ್ರ ನಿರ್ವಹಿಸುತ್ತಿರುವುದು ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಅಭಿನಯಿಸುತ್ತಿರುವುದು ಚಿತ್ರದ ಪ್ರಮುಖ ಆಕರ್ಷಣೆಗಳಾಗಿವೆ. ಇದರ ನಡುವೆ ರಾಹಾ ಕೂಡ ಕೆಲವು ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾಳೆ ಎಂಬ ಮಾಹಿತಿ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದೆ. ತಂದೆ ರಣಬೀರ್ ಜೊತೆ ರಾಹಾ ಪರದೆಯ ಮೇಲೆ ಹೇಗೆ ಕಾಣಿಸಿಕೊಳ್ಳಲಿದ್ದಾಳೆ ಎಂಬುದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಪುಟ್ಟ ಅತಿಥಿ ಪಾತ್ರವೇ ಸಿನಿಮಾದ ಮತ್ತೊಂದು ವಿಶೇಷ ಆಕರ್ಷಣೆಯಾಗುವ ಸಾಧ್ಯತೆಯಿದೆ.