SOCIAL MEDIA

Newsletter

PARTNER SITES
Select Language Select State

ರಾಮಾಯಣ ಸಿನಿಮಾದ ದೃಶ್ಯಗಳನ್ನ ಶೇರ್‌ ಮಾಡುವ ಮುನನ್ನ ಎಚ್ಚರ..!! ಸಿವಿಲ್, ಕ್ರಿಮಿನಲ್ ಕೇಸ್ ಪಕ್ಕಾ

ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡುತ್ತಿರುವ ಬಹುನಿರೀಕ್ಷಿತ 'ರಾಮಾಯಣ: ಪಾರ್ಟ್ 1' ಚಿತ್ರಕ್ಕೆ ಪೈರಸಿ ಹಾವಳಿಯ ಬಿಸಿ ತಟ್ಟಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾದ ದೃಶ್ಯಗಳನ್ನು ಹಂಚಿಕೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಚಿತ್ರತಂಡ ಎಚ್ಚರಿಕೆ ನೀಡಿದೆ.

Written By Krishna NK
Published: Nov 08, 2026, 20:53 IST | Updated: Nov 08, 2026, 20:54 IST
Image Credit: Ramayana movie
Join

Yash Ramayana Movie : ಸಿನಿಮಾ ಲೋಕದಲ್ಲಿ ಬಹುನಿರೀಕ್ಷಿತ ಹಾಗೂ ಕೋಟ್ಯಂತರ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ‘ರಾಮಾಯಣ: ಪಾರ್ಟ್ 1’ ಚಿತ್ರದ ಬಗ್ಗೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಕಲೆಕ್ಷನ್ ಕೂಡ ಧೂಳೆಬ್ಬಿಸುತ್ತಿದೆ. ಆದರೆ, ಇದರ ಬೆನ್ನಲ್ಲೇ ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿರುವುದು ಪೈರಸಿ ಹಾವಳಿ. ಥಿಯೇಟರ್‌ಗಳಲ್ಲಿ ಸಿನಿಮಾ ನೋಡುವಾಗ ಕೆಲವರು ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಗಂಭೀರ ಸಮಸ್ಯೆಯ ವಿರುದ್ಧ ‘ರಾಮಾಯಣ’ ಚಿತ್ರತಂಡ ಈಗ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದೆ.

ಚಿತ್ರಮಂದಿರಗಳಲ್ಲಿ ಅನಧಿಕೃತವಾಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಎಕ್ಸ್ (ಟ್ವಿಟರ್) ಹಾಗೂ ವಿವಿಧ ಮೆಸೇಜಿಂಗ್ ಆ್ಯಪ್‌ಗಳಲ್ಲಿ ಅಪ್‌ಲೋಡ್ ಮಾಡುತ್ತಿರುವವರ ವಿರುದ್ಧ ಚಿತ್ರತಂಡ ಗರಂ ಆಗಿದೆ. ಈಗಾಗಲೇ ಜಾಲತಾಣಗಳಲ್ಲಿ ಸಿನಿಮಾದ ದೃಶ್ಯಗಳನ್ನು ಹಂಚಿಕೊಂಡಿರುವವರು ತಕ್ಷಣವೇ ಅವುಗಳನ್ನು ಡಿಲೀಟ್ ಮಾಡುವಂತೆ ಎಚ್ಚರಿಕೆ ನೀಡಲಾಗಿದೆ. ಒಂದು ವೇಳೆ ಎಚ್ಚರಿಕೆಯನ್ನು ಕಡೆಗಣಿಸಿ ಪೈರಸಿ ಕ್ಲಿಪ್‌ಗಳನ್ನು ಮುಂದುವರಿಸಿದರೆ, ಯಾವುದೇ ಮುನ್ಸೂಚನೆ ನೀಡದೆ ನೇರವಾಗಿ ಸಿವಿಲ್, ಕ್ರಿಮಿನಲ್ ಮತ್ತು ನ್ಯಾಯಾಂಗ ನಿಂದನೆ ಪ್ರಕರಣಗಳನ್ನು ದಾಖಲಿಸುವುದಾಗಿ ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ.

ನವೆಂಬರ್ 5ರಂದು ತೆರೆಕಂಡ ಈ ಚಿತ್ರದ ಪ್ರಮುಖ ದೃಶ್ಯಗಳು ಮತ್ತು ಹಾಡುಗಳು ಜಾಲತಾಣಗಳಲ್ಲಿ ಲೀಕ್ ಆಗುತ್ತಿರುವುದು ಚಿತ್ರತಂಡದ ಕಳವಳಕ್ಕೆ ಕಾರಣವಾಗಿದೆ. ಅದರಲ್ಲೂ ವಿಶೇಷವಾಗಿ, ಹಿಂದಿ ಆವೃತ್ತಿಯಲ್ಲಿ ಕಟ್ ಮಾಡಲಾಗಿದ್ದ ಇಂಟರ್‌ನ್ಯಾಷನಲ್ ವರ್ಷನ್‌ನ ಒಂದು ದೃಶ್ಯ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಇದು ಚಿತ್ರತಂಡಕ್ಕೆ ನಡುಕ ಹುಟ್ಟಿಸಿದೆ. ನಿರ್ದೇಶಕ ನಿತೇಶ್ ತಿವಾರಿ ಸಾರಥ್ಯದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡು ಸಿನಿಪ್ರೇಮಿಗಳನ್ನು ರಂಜಿಸುತ್ತಿದ್ದಾರೆ.

ಈ ಪೈರಸಿ ಹಾವಳಿಗೆ ಕಡಿವಾಣ ಹಾಕಲು ಮುಂಬೈ ಹೈಕೋರ್ಟ್ ನೀಡಿರುವ ಇತ್ತೀಚಿನ ಎರಡು ಆದೇಶಗಳನ್ನು (ನವೆಂಬರ್ 2 ಮತ್ತು ನವೆಂಬರ್ 6) ಚಿತ್ರತಂಡ ಉಲ್ಲೇಖಿಸಿದೆ. ಸಿನಿಮಾದ ಯಾವುದೇ ಭಾಗವನ್ನು ಅನುಮತಿಯಿಲ್ಲದೆ ರೆಕಾರ್ಡ್ ಮಾಡುವುದು, ಅಪ್‌ಲೋಡ್ ಮಾಡುವುದು ಅಥವಾ ಶೇರ್ ಮಾಡುವುದನ್ನು ಹೈಕೋರ್ಟ್ ಕಟ್ಟುನಿಟ್ಟಾಗಿ ನಿಷೇಧಿಸಿದೆ. ಇದು ಕೇವಲ ಕಾಪಿರೈಟ್ ಉಲ್ಲಂಘನೆ ಮಾತ್ರವಲ್ಲ, ಗಂಭೀರವಾದ ಕ್ರಿಮಿನಲ್ ಅಪರಾಧ ಹಾಗೂ ನ್ಯಾಯಾಲಯದ ನಿಂದನೆಯೂ ಹೌದು ಎಂದು ನೆನಪಿಸಲಾಗಿದೆ.

ಕಾಪಿರೈಟ್ ಕಾಯ್ದೆ 1957, ಸಿನಿಮಟೋಗ್ರಾಫ್ ಕಾಯ್ದೆ 1952, ಬಿಎನ್‌ಎಸ್ 2023 ಮತ್ತು ಐಟಿ ಕಾಯ್ದೆ 2000ರ ಅಡಿಯಲ್ಲಿ ಇದು ದಂಡ ಹಾಗೂ ಜೈಲು ಶಿಕ್ಷೆಗೆ ಗುರಿಯಾಗುವಂಥ ಅಪರಾಧವಾಗಿದೆ. ಚಿತ್ರ ಬಿಡುಗಡೆಯಾದ ದಿನದಂದು ಸನ್ನಿ ಡಿಯೋಲ್ ಅವರ ಹನುಮಾನ್ ಪಾತ್ರದ ಪೋಸ್ಟ್-ಕ್ರೆಡಿಟ್ ದೃಶ್ಯ ಹಾಗೂ ಹನುಮಾನ್ ಚಾಲೀಸಾ ಹಾಡನ್ನು ಚಿತ್ರತಂಡವೇ ಅಧಿಕೃತವಾಗಿ ಬಿಡುಗಡೆ ಮಾಡಿತ್ತು. ಆದರೂ ದುಷ್ಕರ್ಮಿಗಳು ಚಿತ್ರದ ಇತರ ಪ್ರಮುಖ ದೃಶ್ಯಗಳನ್ನು ಲೀಕ್ ಮಾಡಿರುವುದು ಆತಂಕ ತಂದಿದೆ. ಒಟ್ಟಿನಲ್ಲಿ, ಸಿನಿಮಾದ ಹಿತಾಸಕ್ತಿ ಕಾಪಾಡಲು ಚಿತ್ರತಂಡ ಬಿಗಿಪಟ್ಟು ಹಿಡಿದಿದ್ದು, ಪೈರಸಿ ಮಾಡುವವರ ವಿರುದ್ಧ ಕಾನೂನಿನ ಕೈಗೆ ಕೆಲಸ ಕೊಡಲು ಸಜ್ಜಾಗಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES