ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದ "ರಾಮಾಯಣ" : ಮೊದಲ ದಿನ ಗಳಿಸಿದ್ದೇಷ್ಟು ಗೊತ್ತೆ?
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯನ್ ಚಿತ್ರ 'ರಾಮಾಯಣ' (Ramayana Part 1) ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿದ್ದು, ಮೊದಲ ದಿನವೇ ವಿಶ್ವಾದ್ಯಂತ ಬರೋಬ್ಬರಿ 155 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
Ramayana first day collection : ಬಹುನಿರೀಕ್ಷಿತ ಪೌರಾಣಿಕ ಚಿತ್ರ 'ರಾಮಾಯಣ' (Ramayana Part 1) ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.. ಬಾಲಿವುಡ್‌ನ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಕನಸಿನ ಕೂಸಾಗಿ ಮೂಡಿಬಂದಿರುವ ಈ ಪ್ಯಾನ್ ಇಂಡಿಯನ್ ಸಿನಿಮಾ, ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಚಿತ್ರತಂಡದ ಅಧಿಕೃತ ಮಾಹಿತಿಯ ಪ್ರಕಾರ, ವಿಶ್ವದಾದ್ಯಂತ ಈ ಸಿನಿಮಾ ಮೊದಲ ದಿನದ ಅಂತ್ಯಕ್ಕೆ ಬರೋಬ್ಬರಿ 155 ಕೋಟಿಗೂ ಹೆಚ್ಚಿನ ಕಲೆಕ್ಷನ್ ಮಾಡುವ ಮೂಲಕ ಭರ್ಜರಿ ಆರಂಭ ಪಡೆದುಕೊಂಡಿದೆ..
ಮಹಾಕಾವ್ಯ ರಾಮಾಯಣದ ಭವ್ಯ ಕಥಾಹಂದರವನ್ನು ಆಧರಿಸಿರುವ ಈ ಚಿತ್ರವು ನಿನ್ನೆ (ನವೆಂಬರ್ 05, 2026) ವಿಶ್ವದಾದ್ಯಂತ ಹಲವು ಭಾಷೆಗಳಲ್ಲಿ ಅದ್ದೂರಿಯಾಗಿ ತೆರೆಕಂಡಿತು. ಚಿತ್ರದ ತಾರಾಗಣವೇ ಇದರ ದೊಡ್ಡ ಪ್ಲಸ್ ಪಾಯಿಂಟ್ ಎನಿಸಿಕೊಂಡಿದೆ. ಬಾಲಿವುಡ್‌ನ ಸ್ಟಾರ್ ನಟ ರಣಬೀರ್ ಕಪೂರ್ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಪಾತ್ರದಲ್ಲಿ ಪ್ರೇಕ್ಷಕರ ಮನಸೂರೆಗೊಂಡಿದ್ದರೆ, ದಕ್ಷಿಣ ಭಾರತದ ಹೆಮ್ಮೆಯ ನಟಿ ಸಾಯಿ ಪಲ್ಲವಿ ಸೀತಾ ಮಾತೆಯಾಗಿ ಅದ್ಭುತವಾಗಿ ಅಭಿನಯಿಸಿದ್ದಾರೆ. ಇನ್ನು ಕನ್ನಡದ ಸ್ಟಾರ್ ನಟ ಯಶ್ ರಾವಣನ ಪಾತ್ರದಲ್ಲಿ ಜೀವಿಸಿದ್ದಾರೆ. ಉಳಿದಂತೆ ರಾಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್ ಮತ್ತು ಹಿರಿಯ ನಟಿ ಶೋಭನಾ ಸೇರಿದಂತೆ ಘಟಾನುಘಟಿ ನಟರು ವಿವಿಧ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ರಾವಣನ ಪಾತ್ರಕ್ಕೆ ಹೊಸ ಆಯಾಮ ಮತ್ತು ಸೀತೆಯ ಸಾಹಸ ಪ್ರದರ್ಶನ
ಈ ಚಿತ್ರದಲ್ಲಿ ಕೇವಲ ಕಥೆಯನ್ನು ಪುನರಾವರ್ತನೆ ಮಾಡದೆ, ಪಾತ್ರವರ್ಗದ ವಿನ್ಯಾಸದಲ್ಲಿ ನಿರ್ದೇಶಕರು ಹೊಸತನವನ್ನು ತಂದಿದ್ದಾರೆ. ವಿಶೇಷವಾಗಿ ರಾವಣನ ಪಾತ್ರವನ್ನು ರಾಮನಿಗಿಂತಲೂ ಹೆಚ್ಚು ಶಕ್ತಿಶಾಲಿ ಹಾಗೂ ಪ್ರಭಾವಶಾಲಿಯಾಗಿ ತೋರಿಸಲಾಗಿದೆ. ಹಾಗೆಯೇ, ಪುರಾಣಗಳಲ್ಲಿ ಉಲ್ಲೇಖಿಸಲಾದ ಸೀತಾ ಮಾತೆಯ ಪಾತ್ರವನ್ನು ಕೇವಲ ಸರಳ ಹಾಗೂ ಶಾಂತಿಯುತ ಮಹಿಳೆಯಾಗಿ ಮಾತ್ರವಲ್ಲದೆ, ಸಮರ ಕಲೆಗಳು ಮತ್ತು ಅಸ್ತ್ರವಿದ್ಯೆಗಳಲ್ಲಿಯೂ ಪರಿಣತಿ ಹೊಂದಿರುವ ಸಾಮ್ರಾಜ್ಯದ ಬಲಶಾಲಿ ರಾಣಿಯಾಗಿ ಚಿತ್ರಿಸಲಾಗಿದೆ. ಈ ಹೊಸ ಪ್ರಯೋಗ ಹಾಗೂ ಸಾಹಸ ದೃಶ್ಯಗಳು ಪ್ರೇಕ್ಷಕರಿಗೆ ರೋಮಾಂಚನವನ್ನುಂಟು ಮಾಡಿವೆ.
ದೀಪಾವಳಿ ಹಬ್ಬದ ಉಡುಗೊರೆಯಾಗಿ ಬಂದಿರುವ 'ರಾಮಾಯಣ' ಮೊದಲ ಭಾಗಕ್ಕೆ ಪ್ರೇಕ್ಷಕರಿಂದ ಸಕತ್ ರೆಸ್ಪಾನ್ಸ್ ಸಿಗುತ್ತಿದೆಯಾದರೂ, ಸಣ್ಣಪುಟ್ಟ ಟೀಕೆಗಳೂ ಕೇಳಿಬಂದಿವೆ. ಚಿತ್ರದ ಮೊದಲಾರ್ಧ (First Half) ಸ್ವಲ್ಪ ನಿಧಾನವಾಗಿದೆ ಮತ್ತು ಕೆಲವು ಕಡೆ ನಿಧಾನಗತಿಯ ದೃಶ್ಯಗಳಿವೆ ಎಂಬ ಮಾತುಗಳು ಕೇಳಿಬಂದಿವೆ. ಒಟ್ಟು ಎರಡು ಭಾಗಗಳಲ್ಲಿ ನಿರ್ಮಾಣವಾಗುತ್ತಿರುವ ಈ ಬೃಹತ್ ಪ್ರಾಜೆಕ್ಟ್‌ನ ಮೊದಲ ಭಾಗ ಇದೀಗ ಪ್ರೇಕ್ಷಕರ ಮುಂದೆ ಬಂದಿದ್ದು, ಎರಡನೇ ಭಾಗವು ಮುಂದಿನ ವರ್ಷದ (2027) ದೀಪಾವಳಿಗೆ ಬಿಡುಗಡೆಯಾಗಲಿದೆ.
ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ಸೀತಾ ದೇವಿ ಪಾತ್ರದಲ್ಲಿ ಸಾಯಿ ಪಲ್ಲವಿ, ರಾವಣ ಯಶ್, ಲಕ್ಷ್ಮಣ ರವಿ ದುಬೆ, ಸೇರಿದಂತೆ ರಾಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್, ಶೋಭನಾ ಮುಂತಾದ ಘಟಾನುಘಟಿ ನಟರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶನ ಮಾಡಿದ್ದು, ನಮಿತ್ ಮಲ್ಹೋತ್ರಾ ಮತ್ತು ನಿತೇಶ್ ತಿವಾರಿ ಸುಮಾರು 4000 ಕೋಟಿಯಲ್ಲಿ ನಿರ್ಮಾಣ ಮಾಡಿದ್ದಾರೆ ಎನ್ನಲಾಗಿದೆ. ಹಾಲಿವುಡ್ ಮಟ್ಟದ ವಿಎಫ್‌ಎಕ್ಸ್ (VFX) ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಈ ಚಿತ್ರಕ್ಕಾಗಿ ಬಳಸಿಕೊಳ್ಳಲಾಗಿದೆ.
ಒಟ್ಟಾರೆಯಾಗಿ, ಪ್ಯಾನ್-ಇಂಡಿಯನ್ ಮಟ್ಟದಲ್ಲಿ ದೊಡ್ಡ ತಾರಾಗಣವನ್ನು ಹೊಂದಿರುವ ಈ ಚಿತ್ರವು ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ಸಾರ್ವಕಾಲಿಕ ದಾಖಲೆಗಳನ್ನು ಮುರಿಯುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಮುಂದಿನ ದಿನ ಗಳಿಕೆ ಮಟ್ಟದಲ್ಲಿ ಯಾವ ರೀತಿ ಏರಿಕೆ ಆಗುತ್ತೆ ಅಂತ ಕಾಯ್ದು ನೋಡಬೇಕಿದೆ..