ಯಶ್ ಕುಳಿತ ರಾವಣನ ಸಿಂಹಾಸನದ ಬೆಲೆ ಎಷ್ಟು ಕೋಟಿ ಗೊತ್ತೇ! ಸಣ್ಣ ಬಜೆಟ್‌ನ ಒಂದು ಸಿನಿಮಾನೇ ಮಾಡ್ಬಹುದು
Ravana throne price in Ramayana movie: ರಾವಣನ ಸಿಂಹಾಸನ, ಶೂರ್ಪಣಖಿಯ ರಥ ಸೇರಿದಂತೆ ಹಲವು ಪ್ರಮುಖ ವಸ್ತುಗಳ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ ಎಂಬ ಮಾಹಿತಿ ಗಮನ ಸೆಳೆಯುತ್ತಿದೆ.
Ravana throne price in Ramayana movie: ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಈಗಾಗಲೇ ಅದರ ಬೃಹತ್ ಬಜೆಟ್ ಹಾಗೂ ಅದ್ಧೂರಿ ನಿರ್ಮಾಣದಿಂದಾಗಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲಿ ರಾಮಾಯಣದ ಕಥೆಯನ್ನು ತೆರೆಯ ಮೇಲೆ ಕಟ್ಟಿಕೊಡಲು ಅತ್ಯಾಧುನಿಕ ತಂತ್ರಜ್ಞಾನದ ಜೊತೆಗೆ ನೈಜ ಸೆಟ್‌ಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅದರಲ್ಲೂ ರಾವಣನ ಸಿಂಹಾಸನ, ಶೂರ್ಪಣಖಿಯ ರಥ ಸೇರಿದಂತೆ ಹಲವು ಪ್ರಮುಖ ವಸ್ತುಗಳ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ ಎಂಬ ಮಾಹಿತಿ ಗಮನ ಸೆಳೆಯುತ್ತಿದೆ.
ಸಿನಿಮಾದ ದೃಶ್ಯಗಳು ಪ್ರೇಕ್ಷಕರಿಗೆ ನೈಜ ಅನುಭವ ನೀಡಬೇಕು ಎಂಬ ಉದ್ದೇಶದಿಂದ ಚಿತ್ರತಂಡ ಕೇವಲ ಗ್ರೀನ್ ಸ್ಕ್ರೀನ್ ತಂತ್ರಜ್ಞಾನವನ್ನೇ ಅವಲಂಬಿಸಿಲ್ಲ. ಬದಲಾಗಿ ಬೃಹತ್ ಪ್ರಮಾಣದಲ್ಲಿ ಸೆಟ್‌ಗಳನ್ನು ನಿರ್ಮಿಸಿ ಚಿತ್ರೀಕರಣ ನಡೆಸಿದೆ. ಮುಂಬೈನ ಫಿಲ್ಮ್ ಸಿಟಿಯಲ್ಲಿ ಈ ಚಿತ್ರಕ್ಕಾಗಿ ಬರೋಬ್ಬರಿ 150ಕ್ಕೂ ಹೆಚ್ಚು ಸೆಟ್‌ಗಳನ್ನು ಸಿದ್ಧಪಡಿಸಲಾಗಿದೆ. 2024ರ ಏಪ್ರಿಲ್‌ನಿಂದಲೇ ಸೆಟ್ ನಿರ್ಮಾಣದ ಕೆಲಸ ಆರಂಭವಾಗಿತ್ತು. ಪ್ರತಿ ವಿನ್ಯಾಸವನ್ನೂ ಹಲವು ಬಾರಿ ಪರಿಶೀಲಿಸಿ, ಅಂತಿಮಗೊಳಿಸಿದ ಬಳಿಕವೇ ಚಿತ್ರೀಕರಣಕ್ಕೆ ಬಳಸಲಾಗಿದೆ.
ರಾವಣನ ಸಿಂಹಾಸನಕ್ಕೆ 1 ಕೋಟಿ ರೂ. ವೆಚ್ಚ!
ಈ ಸಿನಿಮಾದಲ್ಲಿ ನಿರ್ಮಿಸಲಾದ ವಸ್ತುಗಳ ಪೈಕಿ ರಾವಣನ ಸಿಂಹಾಸನ ಅತ್ಯಂತ ದುಬಾರಿ ಕಲಾಕೃತಿಗಳಲ್ಲಿ ಒಂದಾಗಿದೆ. ಈ ಸಿಂಹಾಸನವನ್ನು ಸಿದ್ಧಪಡಿಸಲು ಸುಮಾರು ನಾಲ್ಕು ತಿಂಗಳ ಕಾಲ ಸಮಯ ತೆಗೆದುಕೊಳ್ಳಲಾಗಿದೆ. ಇದರ ನಿರ್ಮಾಣಕ್ಕೆ ಅಂದಾಜು 1 ಕೋಟಿ ರೂಪಾಯಿ ವೆಚ್ಚವಾಗಿದೆ ಎನ್ನಲಾಗಿದೆ. ಫೈಬರ್ ಬಳಸಿ ಸಿದ್ಧಪಡಿಸಿರುವ ಈ ಸಿಂಹಾಸನಕ್ಕೆ 24 ಕ್ಯಾರಟ್ ಚಿನ್ನದ ಲೇಪನ ಮಾಡಲಾಗಿದೆ. ರಾವಣನ ಸಾಮ್ರಾಜ್ಯದ ವೈಭವ ಮತ್ತು ಆತನ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.
ಶೂರ್ಪಣಖಿಯ ರಥಕ್ಕೆ 1.5 ಕೋಟಿ ರೂ.
ಇನ್ನು ಶೂರ್ಪಣಖಿಯ ಪಾತ್ರಕ್ಕಾಗಿ ನಿರ್ಮಿಸಿರುವ ರಥವೂ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ಈ ರಥದ ನಿರ್ಮಾಣಕ್ಕೆ ಬರೋಬ್ಬರಿ 1.5 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎನ್ನಲಾಗಿದೆ. ವಿಶೇಷವೆಂದರೆ, ಇದು ಕೇವಲ ಅಲಂಕಾರಕ್ಕಾಗಿ ನಿರ್ಮಿಸಿದ ವಸ್ತುವಲ್ಲ. ಚಿತ್ರೀಕರಣದ ವೇಳೆ ಚಲಿಸುವಂತೆ ವಿಶೇಷ ವಿನ್ಯಾಸದಲ್ಲಿ ಸಿದ್ಧಪಡಿಸಲಾಗಿದೆ. ಇದರಿಂದ ದೃಶ್ಯಗಳಿಗೆ ಮತ್ತಷ್ಟು ನೈಜತೆ ನೀಡಲು ಚಿತ್ರತಂಡ ಯೋಜಿಸಿದೆ.
24 ಅಡಿ ಎತ್ತರದ ಜಟಾಯುವಿನ ಮಾದರಿ
ಚಿತ್ರದ ಮತ್ತೊಂದು ವಿಶೇಷವೆಂದರೆ 24 ಅಡಿ ಎತ್ತರದ ಜಟಾಯುವಿನ ಅಸ್ಥಿಪಂಜರದ ಮಾದರಿ. ಬೃಹತ್ ಗಾತ್ರದಲ್ಲಿ ನಿರ್ಮಿಸಲಾದ ಈ ಮಾದರಿಯು ಚಿತ್ರೀಕರಣದ ವೇಳೆ ಕಲಾವಿದರಿಗೆ ದೃಶ್ಯದ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗಿದೆ. ನಟರು ನಿರ್ದಿಷ್ಟ ದಿಕ್ಕಿನಲ್ಲಿ ನೋಡಿ ಸಂಭಾಷಣೆ ಹೇಳಲು ಅನುಕೂಲವಾಗುವಂತೆ ಇದನ್ನು ರೂಪಿಸಲಾಗಿದೆ.
50 ಅಡಿ ಅಗಲದ ಪುಷ್ಪಕ ವಿಮಾನ
ರಾಮಾಯಣದ ಕಥೆಯಲ್ಲಿ ಪ್ರಮುಖ ಸ್ಥಾನ ಹೊಂದಿರುವ ಪುಷ್ಪಕ ವಿಮಾನವನ್ನೂ ಅದ್ಧೂರಿಯಾಗಿ ನಿರ್ಮಿಸಲಾಗಿದೆ. ಬರೋಬ್ಬರಿ 50 ಅಡಿ ಅಗಲವಿರುವ ಈ ಬೃಹತ್ ವಿಮಾನವನ್ನು ಸ್ಟುಡಿಯೋದ ಒಳಗೆ ಒಂದೇ ಭಾಗವಾಗಿ ತರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅದನ್ನು ನಾಲ್ಕು ಪ್ರತ್ಯೇಕ ಭಾಗಗಳಾಗಿ ವಿಂಗಡಿಸಿ ನಿರ್ಮಿಸಲಾಗಿದೆ. ನಂತರ ಚಿತ್ರೀಕರಣದ ಅಗತ್ಯಕ್ಕೆ ಅನುಗುಣವಾಗಿ ಜೋಡಿಸುವ ವ್ಯವಸ್ಥೆ ಮಾಡಲಾಗಿದೆ.
ಲಂಕೆಯ ಸೆಟ್ ನಿರ್ಮಾಣಕ್ಕೆ ನೂರಾರು ಕಾರ್ಮಿಕರು
ಚಿತ್ರದಲ್ಲಿ ರಾವಣನ ಸಾಮ್ರಾಜ್ಯವಾದ ಲಂಕೆಯನ್ನು ಅದ್ಧೂರಿಯಾಗಿ ತೋರಿಸಲು ವಿಶೇಷ ಸೆಟ್ ನಿರ್ಮಿಸಲಾಗಿದೆ. ಈ ಬೃಹತ್ ಸೆಟ್ ಸಿದ್ಧಪಡಿಸುವ ಕಾರ್ಯದಲ್ಲಿ ಪ್ರತಿದಿನ ಸುಮಾರು 500ರಿಂದ 600 ಕಾರ್ಮಿಕರು ತೊಡಗಿಸಿಕೊಂಡಿದ್ದರು ಎನ್ನಲಾಗಿದೆ. ಹಲವು ತಿಂಗಳ ಪರಿಶ್ರಮದ ಬಳಿಕ ಲಂಕೆಯ ಭವ್ಯ ವಾತಾವರಣವನ್ನು ಸೃಷ್ಟಿಸಲಾಗಿದೆ.
ಪ್ರತಿ ಸೆಟ್ ಮತ್ತು ಕಲಾಕೃತಿಯ ಗುಣಮಟ್ಟದ ಬಗ್ಗೆ ನಿರ್ದೇಶಕ ನಿತೇಶ್ ತಿವಾರಿ ವಿಶೇಷ ಗಮನಹರಿಸಿದ್ದಾರೆ. ಚಿತ್ರೀಕರಣ ಆರಂಭಿಸುವ ಮುನ್ನ ಪ್ರತಿಯೊಂದು ಸೆಟ್‌ನ್ನೂ ಅವರು ಖುದ್ದಾಗಿ ಪರಿಶೀಲಿಸುತ್ತಿದ್ದರು. ಕಲಾವಿದರು ಕೃತಕ ವಾತಾವರಣದಲ್ಲಿ ನಟಿಸುತ್ತಿದ್ದಾರೆ ಎಂಬ ಭಾವನೆ ಬರಬಾರದು, ಬದಲಾಗಿ ನೈಜ ಜಗತ್ತಿನಲ್ಲಿರುವಂತೆ ಅನುಭವವಾಗಬೇಕು ಎಂಬುದು ಚಿತ್ರತಂಡದ ಉದ್ದೇಶವಾಗಿದೆ.