ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಬದಲಾಗಿರುವ 14ನೇ ಆರೋಪಿ ಪ್ರದೋಷ್ ಅವರ ಹೇಳಿಕೆ ದಾಖಲಿಸಿಕೊಳ್ಳುವ ಪ್ರಕ್ರಿಯೆಯನ್ನು ನ್ಯಾಯಾಲಯ ನಾಳೆಗೆ (ಮಂಗಳವಾರ) ಮುಂದೂಡಿದೆ. ಇದರ ಬೆನ್ನಲ್ಲೇ ಡಿಗ್ಯಾಂಗ್ ಎದೆಯಲ್ಲಿ ಢವ ಢವ ಶುರುವಾಗಿದೆ..
ಇಂದು (ಸೋಮವಾರ) ನ್ಯಾಯಾಲಯದಲ್ಲಿ ಪ್ರದೋಷ್ ಅವರ ಅರ್ಧದಷ್ಟು ಹೇಳಿಕೆಗಳನ್ನು ವಿಶೇಷ ಸರ್ಕಾರಿ ಅಭಿಯೋಜಕರು (SPP) ಮುಖ್ಯ ವಿಚಾರಣೆ (Main Examination) ಮೂಲಕ ದಾಖಲಿಸಿಕೊಂಡಿದ್ದಾರೆ. ಉಳಿದ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಪ್ರದೋಷ್ರನ್ನು ನಾಳೆ ಬೆಳಿಗ್ಗೆ 11 ಗಂಟೆಗೆ ಭದ್ರತೆಯೊಂದಿಗೆ ಖುದ್ದು ಹಾಜರುಪಡಿಸುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ.
ಮೌನಕ್ಕೆ ಶರಣಾದ ದರ್ಶನ್, ಕಣ್ಣೀರಿಟ್ಟ ಪವಿತ್ರಾ ಗೌಡ
ವಿಚಾರಣೆ ವೇಳೆ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಅವರನ್ನು ವಿಡಿಯೋ ಕಾನ್ಫರೆನ್ಸ್ (VC) ಮೂಲಕ ಹಾಜರುಪಡಿಸಲಾಗಿತ್ತು. ಈ ವೇಳೆ ಪ್ರದೋಷ್ ನೀಡುತ್ತಿದ್ದ ಹೇಳಿಕೆಗಳನ್ನು ಕೇಳಿ ಪವಿತ್ರಾ ಗೌಡ ವಿಡಿಯೋ ಕಾನ್ಫರೆನ್ಸ್ನಲ್ಲೇ ಕಣ್ಣೀರು ಹಾಕುತ್ತಾ ಕುಳಿತಿದ್ದರೆ, ಆಘಾತಕ್ಕೊಳಗಾಗಿದ್ದ ದರ್ಶನ್ ತೀವ್ರ ಮೌನಕ್ಕೆ ಶರಣಾಗಿದ್ದರು.
ಸುಪ್ರೀಂ ಕೋರ್ಟ್ಗೆ ದರ್ಶನ್ ಅರ್ಜಿ (SLP)
ಮತ್ತೊಂದೆಡೆ, ಪ್ರದೋಷ್ ಅವರ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವುದನ್ನು ತಡೆಹಿಡಿಯಬೇಕೆಂದು ಕೋರಿ ನಟ ದರ್ಶನ್ ಪರ ವಕೀಲರು ಸುಪ್ರೀಂ ಕೋರ್ಟ್ನಲ್ಲಿ ವಿಶೇಷ ರಜಾ ಅರ್ಜಿ (SLP) ಸಲ್ಲಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ದರ್ಶನ್ ಪರ ಹಿರಿಯ ವಕೀಲ ಹಶ್ಮತ್ ಪಾಷಾ, "ನಾವು ಈ ಪ್ರಕ್ರಿಯೆಗೆ ತಡೆ ಕೋರಿ ಟ್ರಯಲ್ ಕೋರ್ಟ್ ಹಾಗೂ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದೆವು. ಆದರೆ ನ್ಯಾಯಾಲಯಗಳು ನಮ್ಮ ಅರ್ಜಿಯನ್ನು ಪುರಸ್ಕರಿಸಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದ್ದು, ಇನ್ನು ಲಿಸ್ಟ್ ಆಗದ ಕಾರಣ ವಿಚಾರಣೆಗೆ ಬಂದಿಲ್ಲ. ಸುಪ್ರೀಂ ಕೋರ್ಟ್ನಲ್ಲಿ ನಮ್ಮ ಪರವಾಗಿ ತೀರ್ಪು ಬಂದರೆ ಈ ಹೇಳಿಕೆಗೆ ಯಾವುದೇ ಪ್ರಭಾವ ಇರುವುದಿಲ್ಲ," ಎಂದು ತಿಳಿಸಿದ್ದಾರೆ.
ಅಲ್ಲದೆ, "ನಮ್ಮ ಕಕ್ಷಿದಾರರ ಹಿತರಕ್ಷಣೆಗೆ ನಾವು ಎಲ್ಲಾ ಕಾನೂನು ಹೋರಾಟ ನಡೆಸುತ್ತಿದ್ದೇವೆ. ಪ್ರದೋಷ್ ಹೇಳಿಕೆ ಮುಗಿದ ಬಳಿಕ ಆತನನ್ನು ಕ್ರಾಸ್ ಎಕ್ಸಾಮಿನ್ (ಪಟಸವಾಲು) ಮಾಡಲು ದರ್ಶನ್ ಅವರಿಗೆ ಖುದ್ದು ಹಾಜರಾಗಲು ಹೈಕೋರ್ಟ್ ಅವಕಾಶ ನೀಡಿದೆ," ಎಂದು ಹಶ್ಮತ್ ಪಾಷಾ ಸ್ಪಷ್ಟಪಡಿಸಿದ್ದಾರೆ.