ಪವನ್ ಕಲ್ಯಾಣ್ ಮತ್ತು ಅನ್ನಾ ಲೆಝಿನೋವಾ ಪರಸ್ಪರ ಬೇರೆಯಾಗುವುದಾಗಿ ವಿಚ್ಚೇದನ ಘೋಷಿಸಿದ್ದು, ಚಿತ್ರರಂಗರದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ ಪವನ್ ಕಲ್ಯಾಣ್ ಅವರ ಮೂರನೇ ಪತ್ನಿ ಅನ್ನಾ ಲೆಜಿನೋವಾ ಆಸ್ತಿ ಎಷ್ಟು ಕೋಟಿಗೆ ಇದೆ ಗೊತ್ತಾ. ಪವನ್ ಕಲ್ಯಾಣ್ ಮತ್ತು ಅನ್ನಾ ಲೆಝಿನೋವಾ ನಿನ್ನೆ ರಾತ್ರಿ 11 ಗಂಟೆಯ ನಂತರ ಪರಸ್ಪರ ಬೇರ್ಪಡುವುದಾಗಿ ಘೋಷಿಸುವ ಮೂಲಕ ಸಂಚಲನ ಸೃಷ್ಟಿಸಿದರು.
ಟಾಲಿವುಡ್‌ನ ಪವರ್ ಸ್ಟಾರ್, ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದೆಯಾ? ರಷ್ಯಾದ ಮಾಜಿ ಮಾಡೆಲ್ ಅನ್ನಾ ಲೆಜಿನೋವಾ ಜೊತೆಗಿನ ಸಂಬಂಧಕ್ಕೆ ಅಂತ್ಯ ಹಾಡುವ ನಿರ್ಧಾರಕ್ಕೆ ಬಂದಿದ್ದಾರಾ? ಪರಸ್ಪರ ಒಪ್ಪಿಗೆಯ ವಿಚ್ಛೇದನದ ಸುದ್ದಿ ಈಗ ತೆಲುಗು ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪವನ್‌ಗಾಗಿ ತಮ್ಮ ಜೀವನಶೈಲಿಯನ್ನೇ ಬದಲಿಸಿಕೊಂಡಿದ್ದ ಅನ್ನಾ ಲೆಜಿನೋವಾ ಯಾರು? ಇವರಿಬ್ಬರ ಪ್ರೇಮಕಥೆ ಶುರುವಾಗಿದ್ದು ಹೇಗೆ? ಬರೋಬ್ಬರಿ 1800 ಕೋಟಿ ರೂಪಾಯಿ ಆಸ್ತಿಯ ಒಡತಿ ಎಂಬ ಚರ್ಚೆಯ ಹಿಂದಿನ ಕಥೆಯೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
ಪವನ್ ಕಲ್ಯಾಣ್ ಮತ್ತು ಅನ್ನಾ ಲೆಜಿನೋವಾ.. ಒಂದು ಕಾಲದಲ್ಲಿ ಎಲ್ಲರ ಗಮನ ಸೆಳೆದ ಜೋಡಿ. ಇದೀಗ ಈ ಜೋಡಿ ಬೇರೆಯಾಗುವ ನಿರ್ಧಾರ ತೆಗೆದುಕೊಂಡಿದೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ. ನವೆಂಬರ್ 9ರ ರಾತ್ರಿ 11 ಗಂಟೆಯ ನಂತರ ಪರಸ್ಪರ ಒಪ್ಪಿಗೆಯ ವಿಚ್ಛೇದನದ ಬಗ್ಗೆ ಪ್ರಕಟವಾದ ಸುದ್ದಿ ಅಭಿಮಾನಿಗಳಿಗೆ ಶಾಕ್ ನೀಡಿದೆ. ಆದರೆ ಈ ನಿರ್ಧಾರದ ಹಿಂದಿನ ನಿಜವಾದ ಕಾರಣವೇನು ಎಂಬುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ.
ಅನ್ನಾ ಲೆಜಿನೋವಾ ರಷ್ಯಾದ ಮಾಜಿ ಮಾಡೆಲ್. ಪವನ್ ಕಲ್ಯಾಣ್‌ಗಿಂತ ಸುಮಾರು 9 ವರ್ಷ ಹಿರಿಯರು ಎನ್ನಲಾಗಿದೆ. 2011ರಲ್ಲಿ ತೆರೆಕಂಡ 'ತೀನ್ಮಾರ್' ಸಿನಿಮಾ ಚಿತ್ರೀಕರಣದ ವೇಳೆ ಇಬ್ಬರ ಪರಿಚಯವಾಗಿತ್ತು. ಆರಂಭದಲ್ಲಿ ಸ್ನೇಹವಾಗಿದ್ದ ಇವರಿಬ್ಬರ ಸಂಬಂಧ ಬಳಿಕ ಪ್ರೀತಿಗೆ ತಿರುಗಿತ್ತು. ಕೊನೆಗೆ 2013ರ ಸೆಪ್ಟೆಂಬರ್ 30ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಅನ್ನಾ ಲೆಜಿನೋವಾಗೆ ಪವನ್ ಕಲ್ಯಾಣ್ ಜೊತೆ ಮದುವೆಯಾಗುವುದಕ್ಕೂ ಮೊದಲು ಮತ್ತೊಂದು ಮದುವೆಯಾಗಿತ್ತು ಎನ್ನಲಾಗಿದೆ. ಮೊದಲ ಮದುವೆಯಿಂದ ಅವರಿಗೆ ಪೋಲೆನಾ ಅಂಜನಾ ಪವನೋವಾ ಎಂಬ ಮಗಳಿದ್ದಾರೆ. ಪವನ್ ಕಲ್ಯಾಣ್ ಆಕೆಯನ್ನು ದತ್ತು ಪಡೆದಿದ್ದರು. ಇನ್ನು 2017ರಲ್ಲಿ ಈ ದಂಪತಿಗೆ ಮಾರ್ಕ್ ಶಂಕರ್ ಪವನೋವಿಚ್ ಎಂಬ ಗಂಡು ಮಗು ಜನಿಸಿತ್ತು. ಹೀಗೆ ಇಬ್ಬರು ಮಕ್ಕಳೊಂದಿಗೆ ಸುಂದರ ಕುಟುಂಬ ಹೊಂದಿದ್ದ ಜೋಡಿ ಈಗ ದೂರವಾಗುತ್ತಿರುವ ಸುದ್ದಿ ಚರ್ಚೆಗೆ ಕಾರಣವಾಗಿದೆ.
ಅನ್ನಾ ಲೆಜಿನೋವಾ ಕೇವಲ ಮಾಜಿ ಮಾಡೆಲ್ ಮಾತ್ರವಲ್ಲ, ದೊಡ್ಡ ಉದ್ಯಮ ಹಿನ್ನೆಲೆಯ ಕುಟುಂಬದಿಂದ ಬಂದವರು ಎನ್ನಲಾಗಿದೆ. ಸಿಂಗಾಪುರದಲ್ಲಿ ಹೋಟೆಲ್ ಉದ್ಯಮ ಸೇರಿದಂತೆ ಹಲವು ವ್ಯವಹಾರಗಳಲ್ಲಿ ಅವರಿಗೆ ಪಾಲಿದೆ ಎಂಬ ವರದಿಗಳಿವೆ. ರಷ್ಯಾ ಮತ್ತು ಸಿಂಗಾಪುರದಲ್ಲಿ ಆಸ್ತಿಗಳನ್ನೂ ಹೊಂದಿದ್ದಾರೆ ಎನ್ನಲಾಗಿದ್ದು, ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 1800 ಕೋಟಿ ರೂಪಾಯಿ ಎಂಬ ಅಂದಾಜು ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಮತ್ತೊಂದೆಡೆ ಪವನ್ ಕಲ್ಯಾಣ್ ಅವರ ಆಸ್ತಿ ಮೌಲ್ಯ ಸುಮಾರು 164 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಆದರೆ ಈ ಆಸ್ತಿ ಅಂಕಿಅಂಶಗಳಿಗೆ ಅಧಿಕೃತ ದೃಢೀಕರಣವಿಲ್ಲ.
ಪವನ್‌ಗಾಗಿ ಬದಲಾದ ಜೀವನ!
ಪವನ್ ಕಲ್ಯಾಣ್ ಅವರ ಸಿನಿಮಾ ಮತ್ತು ರಾಜಕೀಯ ಜೀವನದಲ್ಲಿ ಏಳುಬೀಳುಗಳು ಎದುರಾದಾಗಲೂ ಅನ್ನಾ ಜೊತೆಗಿದ್ದರು ಎನ್ನಲಾಗಿದೆ. ಹಿಂದೂ ಸಂಪ್ರದಾಯಗಳ ಬಗ್ಗೆ ಆಸಕ್ತಿ ಹೊಂದಿದ್ದ ಅನ್ನಾ, ತಿರುಮಲ ತಿರುಪತಿ ದೇವಸ್ಥಾನಕ್ಕೂ ಭೇಟಿ ನೀಡಿ ಹರಕೆ ಸಲ್ಲಿಸಿದ್ದರು. ಇನ್ನು ಜುಲೈ 2024ರಲ್ಲಿ ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಎಂಬ ಮಾಹಿತಿಯೂ ವರದಿಯಾಗಿದೆ. ಕುಟುಂಬ ಮತ್ತು ಮಕ್ಕಳ ಶಿಕ್ಷಣದ ವಿಚಾರದಲ್ಲಿ ಹೆಚ್ಚು ಗಮನಹರಿಸುತ್ತಿದ್ದರು ಎನ್ನಲಾಗಿದೆ.
ಪವನ್‌ಗೆ ಇದು ಮೂರನೇ ವಿಚ್ಛೇದನವೇ?
ಪವನ್ ಕಲ್ಯಾಣ್ ಅವರ ವೈವಾಹಿಕ ಜೀವನದಲ್ಲಿ ಇದು ಮೊದಲ ಬಿರುಗಾಳಿಯಲ್ಲ. 1997ರಲ್ಲಿ ನಂದಿನಿ ಅವರನ್ನು ಮೊದಲ ಬಾರಿಗೆ ವಿವಾಹವಾಗಿದ್ದರು. ಸುಮಾರು 11 ವರ್ಷಗಳ ಬಳಿಕ 2008ರಲ್ಲಿ ಇಬ್ಬರೂ ವಿಚ್ಛೇದನ ಪಡೆದಿದ್ದರು. ನಂತರ 2009ರಲ್ಲಿ ನಟಿ ರೇಣು ದೇಸಾಯಿ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಅಕಿರಾ ನಂದನ್ ಮತ್ತು ಆದ್ಯ ಎಂಬ ಇಬ್ಬರು ಮಕ್ಕಳಿದ್ದಾರೆ. 2012ರಲ್ಲಿ ಇಬ್ಬರೂ ಬೇರೆಯಾಗಿದ್ದರು. ಇದೀಗ ಅನ್ನಾ ಲೆಜಿನೋವಾ ಜೊತೆಗಿನ ಸಂಬಂಧವೂ ಮುಕ್ತಾಯದ ಹಂತಕ್ಕೆ ಬಂದಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಒಂದು ಕಡೆ ಸಿನಿಮಾ, ಮತ್ತೊಂದು ಕಡೆ ರಾಜಕೀಯ.. ಸದಾ ಸುದ್ದಿಯಲ್ಲಿರುವ ಪವನ್ ಕಲ್ಯಾಣ್ ಅವರ ವೈಯಕ್ತಿಕ ಜೀವನ ಈಗ ಮತ್ತೊಮ್ಮೆ ಚರ್ಚೆಯ ಕೇಂದ್ರವಾಗಿದೆ. ಪವನ್‌ಗಾಗಿ ತಮ್ಮ ಬದುಕಿನಲ್ಲಿ ಹಲವು ಬದಲಾವಣೆ ಮಾಡಿಕೊಂಡಿದ್ದರು ಎನ್ನಲಾಗುವ ಅನ್ನಾ ಲೆಜಿನೋವಾ ಈಗ ದೂರವಾಗಲು ನಿರ್ಧರಿಸಿದ್ದು ಏಕೆ? ಈ ವಿಚ್ಛೇದನದ ಹಿಂದೆ ನಿಜವಾಗಿಯೂ ಏನಿದೆ? ಸದ್ಯಕ್ಕೆ ಕಾರಣದ ಬಗ್ಗೆ ಅಧಿಕೃತ ಸ್ಪಷ್ಟನೆ ಇಲ್ಲ. ಹೀಗಾಗಿ ವದಂತಿಗಳಿಗಿಂತ ಇಬ್ಬರ ಅಧಿಕೃತ ಹೇಳಿಕೆಗಾಗಿ ಕಾಯಬೇಕಿದೆ.