ಕೋರ್ಟ್ ಆದೇಶದಂತೆ ಪವಿತ್ರಾ ಗೌಡ ಆಸೆ ಈಡೇಸಿದ ಜೈಲು ಅಧಿಕಾರಿಗಳು! ನಟಿಗೆ ಕೊಂಚ ನೆಮ್ಮದಿ
ರೇಣುಕಾಸ್ವಾಮಿ ಪ್ರಕರಣದ ಆರೋಪಿ, ನಟಿ ಪವಿತ್ರಾ ಗೌಡ ಮನವಿಯನ್ನು ಸೆಷನ್ಸ್ ಕೋರ್ಟ್ ಪುರಸ್ಕರಿಸಿದೆ. ಪ್ರಸ್ತುತ ನ್ಯಾಯಾಲಯದ ಆದೇಶದಂತೆ ಜೈಲು ಅಧಿಕಾರಿಗಳು ಅವರನ್ನು ಕಡಿಮೆ ಖೈದಿಗಳಿರುವ ಹೊಸ ಬ್ಯಾರಕ್‌ಗೆ ಅಧಿಕೃತವಾಗಿ ವರ್ಗಾಯಿಸಿದ್ದಾರೆ. ಈ ಕುರಿತು ಹೆಚ್ಚಿನ ವಿವರಗಳು ಇಲ್ಲಿವೆ..
Pavithra Gowda case updates : ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೊದಲ ಆರೋಪಿಯಾಗಿರುವ (A1) ನಟಿ ಪವಿತ್ರಾ ಗೌಡ ಅವರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೊನೆಗೂ ಕೊಂಚ ನಿರಾಳತೆ ಸಿಕ್ಕಿದೆ. ಸೆಷನ್ಸ್ ಕೋರ್ಟ್ ನೀಡಿರುವ ನಿರ್ದಿಷ್ಟ ನಿರ್ದೇಶನದ ಮೇರೆಗೆ ಜೈಲು ಅಧಿಕಾರಿಗಳು ಪವಿತ್ರಾ ಗೌಡ ಅವರನ್ನು ಕಡಿಮೆ ಖೈದಿಗಳಿರುವ ಹೊಸ ಬ್ಯಾರಕ್‌ಗೆ ಅಧಿಕೃತವಾಗಿ ವರ್ಗಾಯಿಸಿದ್ದಾರೆ.
ಹೌದು.. ಈ ಹಿಂದೆ ಪವಿತ್ರಾ ಗೌಡ ಅವರನ್ನು ಸುಮಾರು 30ಕ್ಕೂ ಹೆಚ್ಚು ಮಹಿಳಾ ಖೈದಿಗಳಿದ್ದ ಬ್ಯಾರಕ್‌ನಲ್ಲಿ ಇರಿಸಲಾಗಿತ್ತು. ಈ ಬ್ಯಾರಕ್‌ನಲ್ಲಿ ವಯಸ್ಸಾದ ಹಿರಿಯ ಖೈದಿಗಳು ಹಾಗೂ ನೈಜೀರಿಯಾ ಮೂಲದ ವಿದೇಶಿ ಆರೋಪಿಗಳೂ ಸೇರಿದ್ದರು. ಜೈಲಿನ ಈ ಬ್ಯಾರಕ್‌ನಲ್ಲಿ ನೈರ್ಮಲ್ಯದ ಕೊರತೆ, ಶೌಚಾಲಯದ ಸಮಸ್ಯೆ ಮತ್ತು ಅತಿಯಾದ ಜನಸಂದಣಿಯಿಂದಾಗಿ ತೀವ್ರ ಮಾನಸಿಕ ಒತ್ತಡ ಹಾಗೂ ಚರ್ಮದ ಸೋಂಕಿನಂತಹ ಆರೋಗ್ಯ ಸಮಸ್ಯೆಗಳಿಂದ ಪವಿತ್ರಾ ಗೌಡ ಬಳಲುತ್ತಿದ್ದರು ಎನ್ನಲಾಗಿದೆ. ಇದನ್ನು ಅವರು ತಮ್ಮ ಲಾಯರ್ ಮೂಲಕ ನ್ಯಾಯಾಲಯದ ಮುಂದೆ ಇಟ್ಟಿದ್ದರು.
ಈ ಹಿನ್ನೆಲೆಯಲ್ಲಿ, ತಮ್ಮ ಕಕ್ಷಿದಾರರಿಗೆ ಆರೋಗ್ಯದ ದೃಷ್ಟಿಯಿಂದ ಬೇರೆ ಬ್ಯಾರಕ್ ಒದಗಿಸುವಂತೆ ಕೋರಿ ಪವಿತ್ರಾ ಗೌಡ ಅವರ ಪರ ವಕೀಲರು 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಜೈಲು ನಿಯಮಾವಳಿಗಳಂತೆ ಕ್ರಮ ಕೈಗೊಂಡು, ಅವರನ್ನು ಬೇರೆ ಬ್ಯಾರಕ್‌ಗೆ ವರ್ಗಾಯಿಸಲು ಆದೇಶಿಸಿತ್ತು. ಕೋರ್ಟ್ ಆದೇಶವನ್ನು ಪುರಸ್ಕರಿಸಿದ ಜೈಲು ಅಧಿಕಾರಿಗಳು, ಪ್ರಸ್ತುತ ಕೇವಲ ನಾಲ್ಕರಿಂದ ಐದು ಮಂದಿ ಖೈದಿಗಳು ಮಾತ್ರ ಇರುವ ಪ್ರತ್ಯೇಕ ಬ್ಯಾರಕ್‌ಗೆ ಪವಿತ್ರಾ ಗೌಡ ಅವರನ್ನು ಶಿಫ್ಟ್ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ
2024ರ ಜೂನ್ ತಿಂಗಳಲ್ಲಿ ನಡೆದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣವು ಇಡೀ ಕರ್ನಾಟಕವನ್ನೇ ಬೆಚ್ಚಿಬೀಳಿಸಿತ್ತು. ಚಿತ್ರದುರ್ಗದ ಫಾರ್ಮಸಿ ಉದ್ಯೋಗಿಯಾಗಿದ್ದ 33 ವರ್ಷದ ರೇಣುಕಾಸ್ವಾಮಿ, ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಅವರ ತೀವ್ರ ಅಭಿಮಾನಿಯಾಗಿದ್ದರು ಎನ್ನಲಾಗಿದೆ.
ವರದಿಗಳ ಪ್ರಕಾರ, ನಟಿ ಪವಿತ್ರಾ ಗೌಡ ಅವರಿಂದಾಗಿಯೇ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ನಡುವೆ ಬಿರುಕು ಉಂಟಾಗಿದೆ ಎಂದು ಭಾವಿಸಿದ ರೇಣುಕಾಸ್ವಾಮಿ, ಸಾಮಾಜಿಕ ಜಾಲತಾಣಗಳಲ್ಲಿ ಪವಿತ್ರಾ ಗೌಡ ಅವರಿಗೆ ಅತ್ಯಂತ ಅಶ್ಲೀಲ ಹಾಗೂ ನಿಂದನಾತ್ಮಕ ಸಂದೇಶಗಳನ್ನು ಕಳುಹಿಸುತ್ತಿದ್ದರು. ಇದರಿಂದ ಆಕ್ರೋಶಗೊಂಡ ಪವಿತ್ರಾ ಗೌಡ ಮತ್ತು ದರ್ಶನ್, ರೇಣುಕಾಸ್ವಾಮಿಗೆ ಪಾಠ ಕಲಿಸಲು ಸಂಚು ರೂಪಿಸಿದರು ಎನ್ನಲಾಗಿದೆ.
ದರ್ಶನ್ ಅವರ ಅಭಿಮಾನಿಗಳ ಸಂಘದ ಸದಸ್ಯರು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಶೆಡ್‌ಗೆ ಕರೆತಂದಿದ್ದರು. ಅಲ್ಲಿ ರೇಣುಕಾಸ್ವಾಮಿಯ ಮೇಲೆ ದೊಣ್ಣೆ, ಲೇಥರ್ ಬೆಲ್ಟ್ ಹಾಗೂ ಎಲೆಕ್ಟ್ರಿಕ್ ಶಾಕ್ ಕೊಟ್ಟು ಅತ್ಯಂತ ಭೀಕರವಾಗಿ ಹಲ್ಲೆ ನಡೆಸಲಾಗಿತ್ತು. ತೀವ್ರ ರಕ್ತಸ್ರಾವ ಹಾಗೂ ಆಂತರಿಕ ಗಾಯಗಳಿಂದ ರೇಣುಕಾಸ್ವಾಮಿ ಶೆಡ್‌ನಲ್ಲೇ ಮೃತಪಟ್ಟಿದ್ದರು. ಕೊಲೆಯ ನಂತರ ಮೃತದೇಹವನ್ನು ಸುಮನಹಳ್ಳಿಯ ರಾಜಕಾಲುವೆಯ ಬಳಿ ಎಸೆಯಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಪ್ರಕರಣದ ಬೆನ್ನುಬಿದ್ದು, ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದರು.
ಇದರ ನಡುವೆ 14ನೇ ಆರೋಪಿ ಪ್ರದೋಷ್‌ಗೆ ಮಾಫಿ ಸಾಕ್ಷಿಯಾಗಲು ಕೋರ್ಟ್ ಮೊರೆ ಹೋಗಿದ್ದು, ಪವಿತ್ರಾ ಗೌಡ ಮತ್ತು ದರ್ಶನ್ ಗ್ಯಾಂಗ್‌ಗೆ ಸಂಕಷ್ಟ ತಂದಿದೆ. ಈ ಪ್ರಕರಣದ ಕುರಿತು ಸಂಪೂರ್ಣ ಸತ್ಯವಾದ ಮಾಹಿತಿಯನ್ನು ನ್ಯಾಯಾಲಯದ ಮುಂದೆ ತೆರೆದಿಡಲು ಪ್ರದೋಷ್ ಸಜ್ಜಾಗಿದ್ದಾನೆ. ಒಟ್ಟಾರೆಯಾಗಿ ರೇಣುಕಾಸ್ವಾಮಿ ಕೇಸ್ ಪ್ರಸ್ತುತ ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಮುಂದಿನ ದಿನ ಈ ಕೇಸ್ ಯಾವ ತಿರುವು ಪಡೆಯುತ್ತೆ ಅಂತ ಕಾಯ್ದು ನೋಡಬೇಕಿದೆ..